ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ರಾಮಲೀಲಾ ಮೈದಾನವನ್ನು ಗೋಮೂತ್ರ ಹಾಕಿ ಶುದ್ಧೀಕರಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಎನ್. ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ತೆರಳಿ ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರದಿಂದ ಶುದ್ಧೀಕರಿಸಿರುವುದು ಜಾತೀಯತೆ ಹಾಗೂ ಮನುವಾದದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಈ ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಒತ್ತಾಯಿಸಿದರು.
ಅಖಂಡ ಭಾರತವಿದ್ದ ಕಾಲದಿಂದಲೂ ಶೋಷಣೆ ಮುಂದುವರಿದಿದ್ದು, ಸ್ವಾತಂತ್ರ್ಯಾನಂತರವೂ ಮನುವಾದದ ಮನಸ್ಥಿತಿ ಸಂಪೂರ್ಣವಾಗಿ ತೊಲಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೂರು ವರ್ಷಗಳ ಹಿಂದೆ ಮನುಸ್ಮೃತಿಯನ್ನು ಸುಟ್ಟಿದ್ದಕ್ಕೆ ಕಾರಣವೇನು ಎಂಬುದು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರಂತಹ ಅಗ್ರಗಣ್ಯ ದಲಿತ ನಾಯಕನಿಗೆ ಈ ರೀತಿಯ ಅವಮಾನವಾದರೆ, ಬಿಜೆಪಿಯಲ್ಲಿರುವ ದಲಿತ ನಾಯಕರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂದು ಹೇಳುವವರು ಈ ಘಟನೆಯನ್ನು ಖಂಡಿಸಲು ಮುಂದಾಗದಿರುವುದು ಪ್ರಶ್ನಾರ್ಹ ಎಂದು ಟೀಕಿಸಿದರು.
ಗ್ರಾಮೀಣ ಭಾಗಗಳಲ್ಲಿ ಜಾತೀಯತೆ ಇನ್ನೂ ಜೀವಂತವಾಗಿದ್ದು, ಉತ್ತರ ಭಾರತದಲ್ಲಿ ಅದರ ತೀವ್ರತೆ ಹೆಚ್ಚಾಗಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಮುಖವಾಡ ಈ ಘಟನೆಯಿಂದ ಬಯಲಾಗಿದೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಭರವಸೆ
ಕೋಲಾರ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ವತಿಯಿಂದ ಬೃಹತ್ ಹೋರಾಟ ನಡೆಸಿ, ಜಾತೀಯತೆ ಮತ್ತು ಮನುವಾದದ ವಿರುದ್ಧ ಜನರಲ್ಲಿ ಅರಿವು ಮೂಡಿಸಲಾಗುವುದು. ದಲಿತ ಸಮಾಜ ಜಾಗೃತರಾಗಿ ಯಾರು ದಲಿತರ ಪರ, ಯಾರು ದಲಿತರ ವಿರುದ್ಧ ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಂಬರೀಷ್ ಕರೆ ನೀಡಿದರು.




