ತಾಲೂಕಿನ ನರಸಾಪುರ ಹೋಬಳಿಯ ಜೋಡಿ ಕೃಷ್ಣಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ್ ಕಂಪನಿ ಸಹಯೋಗದಲ್ಲಿ ‘ನನ್ನ ಕಣ್ಣು’ ಯೋಜನೆಯಡಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಣ್ಣುಗಳನ್ನು ತಜ್ಞ ವೈದ್ಯರು ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಎನ್.ಎ. ಭಾಗ್ಯಲಕ್ಷ್ಮಿ, ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಪ್ರಮುಖವಾದ ಅಂಗವಾಗಿದೆ. ಜಗತ್ತನ್ನು ಅರಿಯಲು ದೃಷ್ಟಿ ಬಹುಮುಖ್ಯವಾಗಿದ್ದು, ಅಮೂಲ್ಯವಾದ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕಣ್ಣಿನ ಸಮಸ್ಯೆಗಳ ಬಗ್ಗೆ ಜಾಗೃತರಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಸಣ್ಣ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿದೋಷ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ್ ಕಂಪನಿ ಉಚಿತ ತಪಾಸಣೆಗೆ ಮುಂದಾಗಿರುವುದು ಶ್ಲಾಘನೀಯ. ದೃಷ್ಟಿದೋಷ ಹೊಂದಿರುವ ಮಕ್ಕಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಪೂಜಿತಾ, ರಾಹುಲ್, ಜಯಶ್ರೀ ಹಾಗೂ ಜಷನ್ ಪ್ರೀತ್ ಅವರು ಮಕ್ಕಳ ಕಣ್ಣಿನ ತಪಾಸಣೆ ನಡೆಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡುವಂತೆ ಸಲಹೆ ನೀಡಿದರು. ಆಸ್ಪತ್ರೆಯಲ್ಲಿ ಮುಂದಿನ ತಪಾಸಣೆಯನ್ನೂ ಉಚಿತವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಎನ್.ಎ. ಭಾಗ್ಯಲಕ್ಷ್ಮಿ, ಆಸ್ಪತ್ರೆಯ ಉಮೇಶ್, ಸಹ ಶಿಕ್ಷಕರಾದ ಎನ್. ಮುನಿರತ್ನಮ್ಮ, ಎಂ. ವೆಂಕಟೇಶ್, ವಾಹನ ಚಾಲಕ ಶ್ರೀನಿವಾಸ್, ಪತ್ರಕರ್ತ ಅವಿನಾಶ್, ಶಾಲಾ ಸಿಬ್ಬಂದಿ, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



