ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ ಸಮರ್ಪಕ ಅನುದಾನ ನೀಡದೆ, ಪೌಷ್ಟಿಕ ಆಹಾರದ ಘಟಕ ವೆಚ್ಚವನ್ನೂ ಹೆಚ್ಚಿಸದ ಕಾರಣ ಅಂಗನವಾಡಿ ವ್ಯವಸ್ಥೆ ದುರ್ಬಲವಾಗುತ್ತಿದೆ ಆರೋಪಿಸಿ ಅಂಗನವಾಡಿ ಮತ್ತು ಬಿಸಿಯೂಟ ನೌಕರರು ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷೆ ಅಂಜಲಮ್ಮ ಮಾತನಾಡಿ ಜುಲೈ 10ರಂದು ದೇಶಾದ್ಯಂತ ಅಂಗನವಾಡಿ ಮತ್ತು ಬಿಸಿಯೂಟ (ಸ್ಕೀಮ್ )ನೌಕರರು ಕಪ್ಪು ದಿನಾಚರಣೆಯ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಹಮ್ಮಿಕೊಂಡಿದ್ದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-2020) ಜಾರಿಯಿಂದ 3 ರಿಂದ 6 ವರ್ಷದ ಮಕ್ಕಳನ್ನು ಸರ್ಕಾರಿ ಶಾಲೆಗಳ ಎಲ್‌ಕೆಜಿ–ಯುಕೆಜಿ ತರಗತಿಗಳಿಗೆ ವರ್ಗಾಯಿಸಲಾಗುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಮುಂದಿನ ದಿನಗಳಲ್ಲಿ ಇದರಿಂದಾಗಿ ಅಂಗನವಾಡಿ ಕೇಂದ್ರಗಳನ್ನು ಮುಚ್ವುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು
ಅಂಗನವಾಡಿ ಕೇಂದ್ರಗಳಿಗೆ ಸ್ಥಳೀಯವಾಗಿ ತಾಜಾ ಆಹಾರದ ಬದಲಿಗೆ ಸಂಸ್ಕರಿತ ಪ್ಯಾಕೆಟ್ ಆಹಾರ, ನಗದು ವರ್ಗಾವಣೆ ಹಾಗೂ ಕಾರ್ಪೊರೇಟ್ ವ್ಯವಸ್ಥೆಗಳ ಮೂಲಕ ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಫ್‌ಆರ್‌ಎಸ್, ಇ-ಕೆವೈಸಿ, ಪೋಷಣ್ ಟ್ರ್ಯಾಕರ್ ಸೇರಿದಂತೆ ಡಿಜಿಟಲ್ ವ್ಯವಸ್ಥೆಗಳನ್ನು ಅಗತ್ಯ ಸೌಲಭ್ಯಗಳಿಲ್ಲದೆ ಜಾರಿಗೊಳಿಸಿರುವುದರಿಂದ ನೌಕರರು ಮತ್ತು ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ ಬಿಎಲ್‌ಒ, ಎಸ್‌ಐಆರ್ ಹಾಗೂ ಇತರೆ ಸಮೀಕ್ಷೆಗಳ ಹೆಚ್ಚುವರಿ ಕೆಲಸದ ಹೊರೆಯನ್ನೂ ಅಂಗನವಾಡಿ ನೌಕರರ ಮೇಲೆ ಹಾಕಲಾಗಿದೆ ಇದರಿಂದಾಗಿ ಮಕ್ಕಳ ಹಾರೈಕೆಗೂ ಸಮಸ್ಯೆ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎನ್.ಕಲ್ಪನಾ ಮಾತನಾಡಿ 2018ರಿಂದ ಅಂಗನವಾಡಿ ನೌಕರರ ಗೌರವಧನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಕಾರ್ಮಿಕರೆಂದು ಮಾನ್ಯತೆ ನೀಡದೆ ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ, ರಾಜ್ಯ ಸರ್ಕಾರ ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ವೇತನ ಹೆಚ್ಚಳ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಅಕ್ಷರ ದಾಸೋಹ ಯೋಜನೆಗೆ ಅಗತ್ಯ ಅನುದಾನ ಹೆಚ್ಚಿಸದೇ ಅದನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಪ್ರಯತ್ನ ನಡೆಯುತ್ತಿದೆ, ಬಿಸಿಯೂಟ ನೌಕರರಿಗೆ 7 ಸಾವಿರ ವೇತನ ಹೆಚ್ಚಳ ನೀಡಬೇಕು ಹಾಗೂ ಇಸ್ಕಾನ್‌ಗೆ ಬಿಸಿಯೂಟ ಯೋಜನೆ ನೀಡುವ ಪ್ರಸ್ತಾವವನ್ನು ಕೈಬಿಡಬೇಕು ಅಂಗನವಾಡಿ ನೌಕರರ ಖಾಯಂಗೊಳಿಸುವಿಕೆ, ಕನಿಷ್ಠ ವೇತನ ಜಾರಿ, ಪಿಂಚಣಿ, ಆರೋಗ್ಯ ವಿಮೆ, ಗ್ರಾಚ್ಯುಟಿ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭ, ಬಿಎಲ್‌ಒ ಹಾಗೂ ಇಲಾಖೇತರ ಕೆಲಸಗಳಿಂದ ಮುಕ್ತಗೊಳಿಸುವುದು, ಡಿಜಿಟಲ್ ಕೆಲಸಕ್ಕೆ ಅಗತ್ಯ ಟ್ಯಾಬ್ಲೆಟ್ ಮತ್ತು ಡೇಟಾ ಸೌಲಭ್ಯ ಒದಗಿಸುವುದು, ಉತ್ತಮ ಗುಣಮಟ್ಟದ ಸ್ಥಳೀಯ ಪೌಷ್ಟಿಕ ಆಹಾರ ಪೂರೈಕೆ ಹಾಗೂ ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯಡಿಯಲ್ಲಿಯೇ ಮುಂದುವರಿಸುವುದು ಸೇರಿ ಒಟ್ಟು 40 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ಜು.18 ಜಿಲ್ಲೆಗೆ ಸಿಎಂ ಭೇಟಿ, ಮನವಿ ಸಲ್ಲಿಸಲು ಅವಕಾಶ ಕೋರಿ ಎಸ್ಪಿಗೆ ಭೂ ಸಂತ್ರಸ್ತರಿಂದ ಮನವಿ – ಈ ದಿನ.ಕಾಮ್
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್, ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಸೇರಿದಂತೆ ಸ್ಕೀಮ್ ನೌಕರರ ಸಂಘಟನೆಯ ಮುಖಂಡರಾದ ವಿ.ಮಂಜುಳ, ಲಕ್ಷ್ಮಿದೇವಿ, ಮಮತ, ವಸಂತ, ಪುಷ್ಪ, ಇಂದ್ರಾಣಿಯಮ್ಮ, ನಾಗವೇಣಿಮ್ಮ, ಅಮುದ, ಜಯಲಕ್ಷ್ಮಿ, ಸರೋಜಮ್ಮ, ಪವಿತ್ರ, ಲೋಕೇಶ್ವರಿ, ವೆಂಕಟಲಕ್ಷ್ಮಿ, ಅಂಜಲಿ, ರಾಜಮಣಿ, ಮುಂತಾದವರು ವಹಿಸಿದ್ದರು.




