ಅಂಬೇಡ್ಕರ್ ಅವರು ಯುದ್ಧದ ಮೂಲಕ ಶಾಂತಿಯನ್ನು ಹುಡುಕಿದ ತತ್ವಜ್ಞಾನಿಯಾಗಿದ್ದರು. ಅವರ ಪ್ರಕಾರ ಶಾಂತಿ ಎಂಬುದು ಒಂದು ಜಡ ಸ್ಥಿತಿಯಲ್ಲ, ಅದು ಸದಾ ಕ್ರಿಯಾತ್ಮಕವಾಗಿರುವ ನ್ಯಾಯದ ಸ್ಥಿತಿ. ಯುದ್ಧವು ಅನಿವಾರ್ಯವಾದಾಗ ಅದರಿಂದ ಪಲಾಯನ ಮಾಡುವುದು ಹೇಡಿತನವಾದರೆ, ಯುದ್ಧದ ನಂತರವೂ ಹಳೆಯ ಅನ್ಯಾಯಗಳನ್ನು ಮುಂದುವರಿಸುವುದು ಅಪರಾಧವೆನಿಸುತ್ತದೆ. ನಮ್ಮ ಹೋರಾಟವು ಕೇವಲ ಯುದ್ಧವನ್ನು ಗೆಲ್ಲುವುದಕ್ಕಾಗಿರಬಾರದು, ಬದಲಿಗೆ ಯುದ್ಧೋತ್ತರ ಜಗತ್ತನ್ನು ಮನುಷ್ಯ ಘನತೆಯ ತಳಹದಿಯ ಮೇಲೆ ಪುನರ್ನಿರ್ಮಿಸುವುದಕ್ಕಾಗಿರಬೇಕು ಎಂಬ ಅವರ ಸಾರವು ಇಂದಿನ ಜಾಗತಿಕ ಅಸ್ಥಿರತೆಗೆ ಶಾಶ್ವತ ಪರಿಹಾರವನ್ನು ಸೂಚಿಸುತ್ತದೆ.
ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಬರೆಹ ಮತ್ತು ಭಾಷಣಗಳಲ್ಲಿ ‘ಯುದ್ಧ’ ಎಂಬುದು ಕೇವಲ ಒಂದು ಚಾರಿತ್ರಿಕ ದಾಖಲೆಯಲ್ಲ, ಬದಲಿಗೆ ಅದು ಮನುಕುಲದ ಆತ್ಮಸಾಕ್ಷಿಯನ್ನು ಪರೀಕ್ಷಿಸುವ ಒಂದು ಜಾಗತಿಕ ಅಗ್ನಿಪರೀಕ್ಷೆಯಾಗಿ ವಿಶ್ಲೇಷಿಸಲ್ಪಟ್ಟಿದೆ. ವಿಶೇಷವಾಗಿ ಎರಡನೇ ಮಹಾಯುದ್ಧದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಮಂಡಿಸಿದ ವಿಚಾರಧಾರೆಗಳಲ್ಲಿ ಒಬ್ಬ ಮುತ್ಸದ್ದಿ ರಾಜಕಾರಣಿಯ ತರ್ಕಬದ್ಧ ನಿಲುವುಗಳಿಗಿಂತ ಮಿಗಿಲಾಗಿ, ಮಾನವ ಅಸ್ತಿತ್ವವನ್ನೇ ಒಳಗೊಳ್ಳುವ ಒಬ್ಬ ಕ್ರಾಂತಿಕಾರಿ ಮಾನವತಾವಾದಿಯ ಸಾರ್ವತ್ರಿಕ ದರ್ಶನ ನಮಗೆ ದಕ್ಕುತ್ತದೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಯುದ್ಧವು ಕೇವಲ ಸೇನಾಪಡೆಗಳ ಶಸ್ತ್ರಾಸ್ತ್ರ ಸಂಘರ್ಷವಾಗಿರದೆ, ಅದು ಪರಸ್ಪರ ವಿರುದ್ಧವಾಗಿರುವ ಎರಡು ‘ಜೀವನ ವಿಧಾನ’ಗಳ ನಡುವಿನ ಸೈದ್ಧಾಂತಿಕ ಸಮರವಾಗಿತ್ತು. ಮನುಷ್ಯನನ್ನು ಕೇವಲ ಶೋಷಣೆಯ ಉಪಕರಣವನ್ನಾಗಿ ಕಂಡು ಅಸಮಾನತೆಯನ್ನು ದೈವೀಕರಿಸುವ ಫ್ಯಾಸಿಸಂ ಒಂದು ಧ್ರುವದಲ್ಲಿದ್ದರೆ, ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯವನ್ನು ಆಶಿಸುವ ಪ್ರಜಾಪ್ರಭುತ್ವ ಇನ್ನೊಂದು ಧ್ರುವದಲ್ಲಿತ್ತು. ಈ ಸೈದ್ಧಾಂತಿಕ ಸಂಘರ್ಷದಲ್ಲಿ ಅಂಬೇಡ್ಕರ್ ಅವರು ಅತ್ಯಂತ ಜವಾಬ್ದಾರಿಯುತವಾಗಿ ಪ್ರಜಾಪ್ರಭುತ್ವದ ಪರವಾಗಿ ನಿಲ್ಲುವ ಮೂಲಕ ಯುದ್ಧವನ್ನು ಒಂದು ‘ವಿಮೋಚನಾ ಪ್ರಕ್ರಿಯೆ’ಯಾಗಿ ವ್ಯಾಖ್ಯಾನಿಸಿದರು.
ಅಂಬೇಡ್ಕರ್ ಅವರ ಯುದ್ಧ ವಿಶ್ಲೇಷಣೆಯು ಮೂಲಭೂತವಾಗಿ ಶ್ರಮಿಕ ವರ್ಗದ ಹಿತಾಸಕ್ತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಜಗತ್ತಿನ ಬಹುತೇಕ ರಾಷ್ಟ್ರೀಯತಾವಾದಿ ನಾಯಕರು ಯುದ್ಧವನ್ನು ಕೇವಲ ಗಡಿ ಮತ್ತು ಸಾರ್ವಭೌಮತ್ವದ ಭ್ರಮೆಯಲ್ಲಿ ನೋಡುತ್ತಿದ್ದಾಗ, ಅಂಬೇಡ್ಕರ್ ಅವರು ಅದನ್ನು ವರ್ಗ ಸಂಘರ್ಷ ಮತ್ತು ಸೈದ್ಧಾಂತಿಕ ಶ್ರೇಷ್ಠತೆಯ ಆಯಾಮಗಳಲ್ಲಿ ವಿಶ್ಲೇಷಿಸಿದರು. ಅವರ ಪ್ರಕಾರ, ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಭೌತಿಕ ಫಲಿತಾಂಶಕ್ಕಿಂತ ‘ಯಾವ ಸಿದ್ಧಾಂತ ಗೆಲ್ಲುತ್ತದೆ’ ಎಂಬುದು ಸಾಂಸ್ಕೃತಿಕವಾಗಿ ಅತಿ ಮುಖ್ಯವಾದುದು. ನಾಜ಼ಿಸಂನಂತಹ ಸರ್ವಾಧಿಕಾರಿ ಧೋರಣೆಗಳು ಗೆದ್ದರೆ, ಅದು ಕಾರ್ಮಿಕ ವರ್ಗವು ಶತಮಾನಗಳಿಂದ ನಡೆಸಿದ ಹಕ್ಕುಗಳ ಹೋರಾಟವನ್ನು ಸರ್ವನಾಶ ಮಾಡುತ್ತದೆಂದು ಅವರು ಎಚ್ಚರಿಸಿದ್ದರು. ಆದ್ದರಿಂದಲೇ ಅವರು ಭಾರತೀಯ ಕಾರ್ಮಿಕ ವರ್ಗಕ್ಕೆ ಈ ಯುದ್ಧವನ್ನು ತಮ್ಮ ಸ್ವಂತ ಹೋರಾಟವೆಂದು ಪರಿಗಣಿಸಲು ಕರೆ ನೀಡಿದ್ದರು. ಇದು ಕೇವಲ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ನೀಡಿದ ಬೇಷರತ್ ಬೆಂಬಲವಾಗಿರದೆ, ಜಾಗತಿಕ ನಿರಂಕುಶಾಧಿಕಾರದ ವಿರುದ್ಧ ಶೋಷಿತ ವರ್ಗವು ನಡೆಸಬಹುದಾದ ಒಂದು ವ್ಯೂಹಾತ್ಮಕ ಸೈದ್ಧಾಂತಿಕ ದಾಳಿಯಾಗಿತ್ತು. ಈ ನಿಲುವು ‘ಯುದ್ಧದ ರಾಜಕೀಯ ಅರ್ಥಶಾಸ್ತ್ರ’ವನ್ನು ಮರುನಿರ್ವಚಿಸುವ ಅಂಬೇಡ್ಕರ್ ಅವರ ದಾರ್ಶನಿಕತೆಗೆ ಸಾಕ್ಷಿಯಾಗಿದೆ.
ಶಾಂತಿ ಮತ್ತು ಹಿಂಸೆಯ ಕುರಿತಾದ ಅಂಬೇಡ್ಕರ್ ಅವರ ತಾತ್ವಿಕತೆಯು ಅತ್ಯಂತ ಪ್ರಬುದ್ಧವಾದುದಾಗಿದೆ. ಅಹಿಂಸೆ ಮತ್ತು ಶಾಂತಿ ಎಂಬುವು ಉದಾತ್ತ ಮೌಲ್ಯಗಳಾದರೂ, ಅವು ಅನ್ಯಾಯ ಮತ್ತು ಕ್ರೌರ್ಯದ ಮುಂದೆ ಅಸಹಾಯಕವಾಗಿ ನಿಲ್ಲಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಭಾರತದ ಒಳಗಿನ ಸಾಮಾಜಿಕ ಅಸ್ಪೃಶ್ಯತೆಯ ವಿರುದ್ಧದ ಯುದ್ಧ ಮತ್ತು ಜಾಗತಿಕ ಮಹಾಯುದ್ಧದ ನಡುವೆ ಅವರು ಒಂದು ತಾರ್ಕಿಕ ಸಂಬಂಧವನ್ನು ಕಲ್ಪಿಸಿದರು. “ವೈರಿಯು ಆಕ್ರಮಣ ಮಾಡಿದಾಗ ಯುದ್ಧಮಾಡಲು ನಿರಾಕರಿಸುವುದರಿಂದ ಯುದ್ಧಗಳನ್ನು ಇಲ್ಲದಂತೆ ಮಾಡುವುದು ಸಾಧ್ಯವಿಲ್ಲ. ಹಿಂಸಾ ಶಕ್ತಿಗಳಿಗೆ ಶರಣಾಗತರಾಗುವುದರ ಮೂಲಕ ಗಳಿಸುವ ಶಾಂತಿಯು ಶಾಂತಿಯೇ ಅಲ್ಲ. ಅದು ಆತ್ಮಹತ್ಯೆ, ಅದಕ್ಕೆ ಯಾವುದೇ ಸಮರ್ಥನೆಯನ್ನು ಕಂಡು ಹಿಡಿಯುವುದು ಸಾಧ್ಯವಿಲ್ಲ. ಅದು ಉದಾತ್ತವಾದ ಸಮಸ್ತವನ್ನೂ, ಅರ್ಹ ಮಾನವ ಜೀವನವನ್ನು ಬಾಳಲು ಅಗತ್ಯವಾದ ಸಮಸ್ತವನ್ನೂ ಕ್ರೌರ‍್ಯ ಮತ್ತು ಅನಾಗರಿಕತೆಯ ಶಕ್ತಿಗಳಿಗೆ ಬಲಿಕೊಟ್ಟು ಹಾಳಾಗುತ್ತದೆ(ಸಂ-8,ಪುಟ-32)”. ಈ ಹಿನ್ನೆಲೆಯಲ್ಲಿಯೇ ಅವರು ಗಾಂಧೀಜಿಯವರ ಅಥವಾ ಕಾಂಗ್ರೆಸ್‌ನ ಅಸಹಕಾರ ನೀತಿಯನ್ನು ವಿಮರ್ಶಾತ್ಮಕವಾಗಿ ನೋಡಿದರು. ಯುದ್ಧದ ಭೀತಿಯು ಬಾಗಿಲಿಗೆ ಬಂದಾಗ ತಟಸ್ಥರಾಗಿರುವುದು ಎಂದರೆ ಪರೋಕ್ಷವಾಗಿ ಶೋಷಕನಿಗೆ ಸಹಾಯ ಮಾಡುವುದು ಎಂದೇ ಅರ್ಥವಾಗುತ್ತದೆ. ಅಂಬೇಡ್ಕರ್ ಅವರ ಈ ಸೈದ್ಧಾಂತಿಕ ಬದ್ಧತೆಯು ಕೇವಲ ಭಾರತದ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿರಲಿಲ್ಲ, ಬದಲಿಗೆ ಆ ಸ್ವಾತಂತ್ರ್ಯವು ತರಬೇಕಾದ ‘ನೂತನ ವ್ಯವಸ್ಥೆ’ಯ ಬಗ್ಗೆ ಹೆಚ್ಚು ಒತ್ತು ನೀಡಿತ್ತು.
ಅಂಬೇಡ್ಕರ್ ಅವರು ಪ್ರತಿಪಾದಿಸಿದ ‘ನೂತನ ವ್ಯವಸ್ಥೆ’(New Order) ಎಂಬುದು ಯುದ್ಧೋತ್ತರ ಜಗತ್ತಿಗೆ ಅವರು ನೀಡಿದ ಮಹತ್ವದ ಕೊಡುಗೆಯಾಗಿದೆ. ಯುದ್ಧವು ಕೇವಲ ವಿನಾಶಕಾರಿಯಾಗದೆ, ಹಳೆಯ ಕೊಳೆತ ಮತ್ತು ಅಸಮಾನ ವ್ಯವಸ್ಥೆಯನ್ನು ಸಮಾಧಿ ಮಾಡುವ ಒಂದು ‘ಶುದ್ಧೀಕರಣ ಪ್ರಕ್ರಿಯೆ’ಯಾಗಬೇಕು ಎಂಬುದು ಅವರ ಆಶಯವಾಗಿತ್ತು. ಸಾಮ್ರಾಜ್ಯಶಾಹಿ ಮುಕ್ತವಾದ, ಜಾತಿ ಪದ್ಧತಿಯಂತಹ ಅಮಾನವೀಯ ಆಚರಣೆಗಳಿಲ್ಲದ ಮತ್ತು ಸಂಪತ್ತಿನ ಸಮಾನ ಹಂಚಿಕೆಯಿರುವ ಜಗತ್ತನ್ನು ಅವರು ಕನಸು ಕಂಡಿದ್ದರು. ಯುದ್ಧದ ಕಾಲದ ತುರ್ತು ಪರಿಸ್ಥಿತಿಯು ಹೇಗೆ ಹೊಸ ತಾಂತ್ರಿಕ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆಯೋ, ಹಾಗೆಯೇ ಅದು ಆಮೂಲಾಗ್ರ ಸಾಮಾಜಿಕ ಕ್ರಾಂತಿಗೂ ಭೂಮಿಕೆಯನ್ನು ಸಿದ್ಧಪಡಿಸಬೇಕು ಎಂದು ಅವರು ವಾದಿಸಿದರು. ಅವರ ಈ ದೂರದೃಷ್ಟಿಯು ಯುದ್ಧದ ಅನುಭವಗಳನ್ನು ದೇಶದ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಗೆ ಬಳಸಿಕೊಳ್ಳುವ ಮೂಲಕ ಹೊಸ ರಾಷ್ಟ್ರದ ಪುನರ್ನಿರ್ಮಾಣಕ್ಕೆ ನಾಂದಿ ಹಾಡಲು ಬಯಸಿತ್ತು.
ಸಂವಿಧಾನ ಮತ್ತು ನಾಗರಿಕ ಹಕ್ಕುಗಳ ಹೋರಾಟದ ಭಾಗವಾಗಿ ಯುದ್ಧವನ್ನು ನೋಡಿದ ಅಂಬೇಡ್ಕರ್ ಅವರು, ಸೈನ್ಯಕ್ಕೆ ಸೇರುವ ಹಕ್ಕನ್ನು ಕೇವಲ ಉದ್ಯೋಗದ ದೃಷ್ಟಿಯಿಂದ ನೋಡದೆ ‘ಅಧಿಕಾರದ ಹಂಚಿಕೆ’ಯಾಗಿ ವಿಶ್ಲೇಷಿಸಿದರು. ಶಸ್ತ್ರಾಸ್ತ್ರಗಳನ್ನು ಹಿಡಿಯುವ ಹಕ್ಕು ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಬಾರದು; ಅದು ಪ್ರಜಾಪ್ರಭುತ್ವದ ಎಲ್ಲ ನಾಗರಿಕರ ಸಮಾನ ಹಕ್ಕಾಗಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು. ಯುದ್ಧದ ಭೂಮಿಯಲ್ಲಿ ರಕ್ತ ಹರಿಸುವ ಕಾರ್ಮಿಕರು ಮತ್ತು ಸೈನಿಕರು, ಯುದ್ಧದ ನಂತರದ ಆಡಳಿತದಲ್ಲಿಯೂ ಸಮಾನ ಪಾಲು ಪಡೆಯಬೇಕು ಎಂಬ ತರ್ಕವನ್ನು ಅವರು ಮಂಡಿಸಿದರು. ಇದು ಯುದ್ಧದಂತಹ ಸಂಕಷ್ಟದ ಸಮಯವನ್ನು ಸಾಮಾಜಿಕ ಸಮಾನತೆಯ ಸಾಧನವನ್ನಾಗಿ ಬಳಸಿಕೊಳ್ಳುವ ಅವರ ರಾಜತಾಂತ್ರಿಕ ತಂತ್ರಗಾರಿಕೆಯಾಗಿತ್ತು. ಇಂದಿನ ಜಾಗತಿಕ ಸನ್ನಿವೇಶದಲ್ಲಿ ಸೈನ್ಯದ ಪ್ರಜಾಪ್ರಭುತ್ವೀಕರಣದ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಅವರ ಈ ವಿಚಾರಗಳು ಅತ್ಯಂತ ಪ್ರಸ್ತುತವೆನಿಸುತ್ತವೆ.
ಅಂಬೇಡ್ಕರ್ ಅವರ ಮಾನವೀಯ ಕಾಳಜಿಗಳು ಯುದ್ಧದ ಭೀಕರತೆಯ ನಡುವೆಯೂ ಕುಂದಿರಲಿಲ್ಲ. ‘ಯುದ್ಧದಲ್ಲುಂಟಾದ ಗಾಯಗಳ(ಪರಿಹಾರ ವಿಮಾ) ಮಸೂದೆ’ಯಂತಹ ಶಾಸನಗಳ ಮೂಲಕ ಅವರು ಯುದ್ಧದ ನೇರ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಶ್ರಮಿಸಿದರು. ಯುದ್ಧವನ್ನು ಆಳುವವರು ಘೋಷಿಸಬಹುದು, ಆದರೆ ಅದರ ಭಾರವನ್ನು ಹೊರುವವರು ಸೈನಿಕರು ಮತ್ತು ಸಾಮಾನ್ಯ ಶ್ರಮಿಕರು. ಇವರ ಹಿತರಕ್ಷಣೆ ಮಾಡದ ಯಾವುದೇ ವಿಜಯವು ಅಂತಿಮವಾಗಿ ಸೋಲಿಗೆ ಸಮಾನ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಇಂದಿನ ಜಾಗತಿಕ ಸಂಘರ್ಷಗಳಲ್ಲಿ ನಿರಾಶ್ರಿತರ ಸಮಸ್ಯೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಗಮನಿಸಿದಾಗ, ಯುದ್ಧದ ಸಂದರ್ಭದಲ್ಲೂ ಕಾನೂನುಬದ್ಧ ರಕ್ಷಣೆ ಮತ್ತು ಕರುಣೆಯನ್ನು ಒತ್ತಾಯಿಸಿದ ಅಂಬೇಡ್ಕರ್ ಅವರ ಚಿಂತನೆಗಳು ಜಾಗತಿಕ ಸಮುದಾಯಕ್ಕೆ ದಾರಿದೀಪವಾಗಿವೆ.
ಇಂದಿನ ಸಂಕೀರ್ಣ ಜಗತ್ತಿನಲ್ಲಿ ಯುದ್ಧಗಳು ಕೇವಲ ಶಸ್ತ್ರಾಸ್ತ್ರಗಳ ಗರ್ಜನೆಗೆ ಸೀಮಿತವಾಗಿಲ್ಲ; ಅವು ಆರ್ಥಿಕ ದಿಗ್ಬಂಧನ, ವ್ಯಾಪಾರ ಸಮರ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹತೋಟಿ ಮತ್ತು ಡಿಜಿಟಲ್ ದಾಳಿಗಳಂತಹ ರೂಪಾಂತರಗಳನ್ನು ಪಡೆದುಕೊಂಡಿವೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರ್ ಅವರ ‘ಆದರ್ಶ’ ಮತ್ತು ‘ನ್ಯಾಯಯುತ ಯುದ್ಧ’ದ (Just War) ಪರಿಕಲ್ಪನೆಗಳು ಅತ್ಯಂತ ಅಗತ್ಯವಾಗಿವೆ. ಕೇವಲ ಲಾಭಕೋರತನ ಅಥವಾ ಉಗ್ರ ರಾಷ್ಟ್ರೀಯತೆಯ ಅಡಿಪಾಯದ ಮೇಲೆ ನಡೆಯುವ ಯುದ್ಧಗಳು ವಿನಾಶವನ್ನಷ್ಟೇ ತರುತ್ತವೆ. ಆದರೆ, ನ್ಯಾಯ ಮತ್ತು ಸಮಾನತೆಯ ಉನ್ನತ ಮೌಲ್ಯಗಳಿಗಾಗಿ ನಡೆಯುವ ಸಂಘರ್ಷಗಳು ಮನುಕುಲವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಬಲ್ಲವು. ಅಂಬೇಡ್ಕರ್ ಅಂದು ಮಿತ್ರರಾಷ್ಟ್ರಗಳನ್ನು ಬೆಂಬಲಿಸಿದ್ದು ಅಲ್ಲಿ ಕನಿಷ್ಠ ಪಕ್ಷ ಪ್ರಜಾಪ್ರಭುತ್ವದ ಭರವಸೆಯಾದರೂ ಇತ್ತು ಎಂಬ ಕಾರಣಕ್ಕಾಗಿ. ಆದರೆ, ಇಂದು ಪ್ರಜಾಪ್ರಭುತ್ವದ ಮುಖವಾಡ ಹೊತ್ತ ರಾಷ್ಟ್ರಗಳೇ ಫ್ಯಾಸಿಸಂನ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವುದು ಒಂದು ಕಟು ವಿಪರ್ಯಾಸವಾಗಿದೆ.
ಇದನ್ನೂ ಓದಿದ್ದೀರಾ? ಯುದ್ಧ ಕುಂಡದಲ್ಲಿ ಮಧ್ಯಪ್ರಾಚ್ಯ: ಟ್ರಂಪ್ ಹುಚ್ಚಾಟದಿಂದ ಸಂಧಾನಕ್ಕೂ ಅಗ್ನಿಪರೀಕ್ಷೆ!
ಹೀಗೆ ಅಂಬೇಡ್ಕರ್ ಅವರ ಯುದ್ಧ ಸಿದ್ಧಾಂತವು ‘ಅಂತಾರಾಷ್ಟ್ರೀಯತೆ’ಯ (Internationalism) ಸಾರ್ವತ್ರಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ಅವರು ಭಾರತದ ಅಸ್ಪೃಶ್ಯತೆಯ ಸಮಸ್ಯೆಯನ್ನು ಜಾಗತಿಕ ಮಾನವ ಹಕ್ಕುಗಳ ಬಿಕ್ಕಟ್ಟಿನ ಭಾಗವಾಗಿ ನೋಡಿದರು. ನಾಜ಼ಿಸಂನ ಶ್ರೇಷ್ಠತೆಯ ವ್ಯಸನವು ಜಗತ್ತಿನ ಯಾವುದೇ ಮೂಲೆಯಲ್ಲಿ ಗೆದ್ದರೂ, ಅದು ಭಾರತದ ಜಾತಿ ವ್ಯವಸ್ಥೆಗೆ ಮತ್ತು ಅಸಮಾನತೆಗೆ ಬಲ ನೀಡುತ್ತದೆಂದು ಅವರು ಸರಿಯಾಗಿಯೇ ಗ್ರಹಿಸಿದ್ದರು. ಅಂಬೇಡ್ಕರ್ ಅವರು ಯುದ್ಧದ ಮೂಲಕ ಶಾಂತಿಯನ್ನು ಹುಡುಕಿದ ತತ್ವಜ್ಞಾನಿಯಾಗಿದ್ದರು. ಅವರ ಪ್ರಕಾರ ಶಾಂತಿ ಎಂಬುದು ಒಂದು ಜಡ ಸ್ಥಿತಿಯಲ್ಲ, ಅದು ಸದಾ ಕ್ರಿಯಾತ್ಮಕವಾಗಿರುವ ನ್ಯಾಯದ ಸ್ಥಿತಿ. ಯುದ್ಧವು ಅನಿವಾರ್ಯವಾದಾಗ ಅದರಿಂದ ಪಲಾಯನ ಮಾಡುವುದು ಹೇಡಿತನವಾದರೆ, ಯುದ್ಧದ ನಂತರವೂ ಹಳೆಯ ಅನ್ಯಾಯಗಳನ್ನು ಮುಂದುವರಿಸುವುದು ಅಪರಾಧವೆನಿಸುತ್ತದೆ. ನಮ್ಮ ಹೋರಾಟವು ಕೇವಲ ಯುದ್ಧವನ್ನು ಗೆಲ್ಲುವುದಕ್ಕಾಗಿರಬಾರದು, ಬದಲಿಗೆ ಯುದ್ಧೋತ್ತರ ಜಗತ್ತನ್ನು ಮನುಷ್ಯ ಘನತೆಯ ತಳಹದಿಯ ಮೇಲೆ ಪುನರ್ನಿರ್ಮಿಸುವುದಕ್ಕಾಗಿರಬೇಕು ಎಂಬ ಅವರ ಸಾರವು ಇಂದಿನ ಜಾಗತಿಕ ಅಸ್ಥಿರತೆಗೆ ಶಾಶ್ವತ ಪರಿಹಾರವನ್ನು ಸೂಚಿಸುತ್ತದೆ.

ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.



