ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಮಾಡಿದ್ದ ತಾಯಿಯೊಬ್ಬರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ತಮ್ಮ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಛತ್ರಕೋಡಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.ಮೃತರನ್ನು ಪ್ರಮೀಳಾ ಬಿ.ವಿ (37), ಅವರ ಮಗಳು ಸ್ವಪ್ನಾ (22) ಮತ್ತು ಮಗ ರಾಮ್‌ಚರಣ್ (19) ಎಂದು ಗುರುತಿಸಲಾಗಿದೆ.
ಸ್ವಪ್ನಾ ಇತ್ತೀಚೆಗಷ್ಟೇ ವಾಣಿಜ್ಯ ವಿಷಯದಲ್ಲಿ ಪದವಿ (B.Com) ಮುಗಿಸಿದ್ದರು. ರಾಮ್‌ಚರಣ್ 2ನೇ ಪಿಯುಸಿ ಮುಗಿಸಿ ಮುಂದಿನ ವ್ಯಾಸಂಗಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದರು ಎಂದು ವರದಿಯಾಗಿದೆ
ಆಟೋ ಚಾಲಕರಾಗಿರುವ ಪ್ರಮೀಳಾ ಅವರ ಪತಿ ಸುರೇಶ್ ಸುಮಾರು 10 ಲಕ್ಷ ರೂಪಾಯಿ ಸಾಲ ಮಾಡಿದ್ದರು, ಪ್ರಮೀಳಾ ಅವರು ಸ್ವಸಹಾಯ ಸಂಘಗಳು ಮತ್ತು ಖಾಸಗಿ ಫೈನಾನ್ಷಿಯರ್‌ಗಳಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಒಟ್ಟು 15 ಲಕ್ಷ ರೂಪಾಯಿಗೂ ಹೆಚ್ಚು ಸಾಲದ ಹೊರೆಯಿಂದಾಗಿ ಕುಟುಂಬವು ತೀವ್ರ ಸಂಕಷ್ಟದಲ್ಲಿತ್ತು ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ (SP) ಕನಿಕಾ ಸಿಕ್ರಿವಾಲ್ ತಿಳಿಸಿದ್ದಾರೆ.
ಮಗ ರಾಮ್‌ಚರಣ್ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರವೇಶಾತಿಗೆ ಆಯ್ಕೆಯಾಗಿದ್ದರು. ಆದರೆ, ಆತನ ಪ್ರವೇಶಾತಿಗೆ ಅಗತ್ಯವಿದ್ದ ಹಣವನ್ನು ಹೊಂದಿಸಲು ಪ್ರಮೀಳಾ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಮನನೊಂದ ಪ್ರಮೀಳಾ, ಮಗಳು ಮತ್ತು ಮಗನೊಂದಿಗೆ ಕೃಷಿ ಹೊಂಡಕ್ಕೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




