ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಡಿಸೆಂಬರ್ 7 ರಿಂದ 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ. ಈ ಕುರಿತು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಅಧಿಕೃತವಾಗಿ ಸೂಚಿಸಿದ್ದಾರೆ.
ಅ.15 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲಾಗಿತ್ತು. ಸಭೆಯಲ್ಲಿ ತೀರ್ಮಾನಿಸಿದಂತೆ, ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಸಮಾವೇಶಗೊಳಿಸಲು ಸಂಭಾವನೀಯವಾಗಿ ದಿನಾಂಕ ಗೊತ್ತುಪಡಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳ ಪತ್ರದಲ್ಲಿ ವಿವರಿಸಲಾಗಿದೆ.
ಅಕ್ಟೋಬರ್ 27 ರಂದು ಹೊರಡಿಸಲಾದ ಈ ಅಧಿಕೃತ ಪತ್ರವನ್ನು ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯದ ಕಾರ್ಯದರ್ಶಿ (ಪ್ರಭಾರಿ) ಶ್ರೀಮತಿ ಜ್ಯೋತಿ ಅವರಿಗೆ ನಿರ್ದೇಶಿಸಿ ಬರೆದ ರುಜು ಹಾಗೂ ದಿನಾಂಕದೊಂದಿಗೆ ಕಳುಹಿಸಲಾಗಿದೆ. ಡಿಸೆಂಬರ್ 7ರಿಂದ ಪ್ರಾರಂಭವಾಗುವ 10 ದಿನಗಳ ಅಧಿವೇಶನಕ್ಕೆ ಬೇಕಾದ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೂಡಲೇ ಮಾಡಿಕೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದಾರೆ.
ಸರ್ಕಾರದ ಈ ಅಧಿಕೃತ ಸೂಚನೆಯಿಂದಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದು ಖಚಿತವಾಗಿದೆ. ಮುಖ್ಯ ಕಾರ್ಯದರ್ಶಿಗಳ ಪತ್ರ ಪ್ರಾಪ್ತಿಯಾಗಿದ್ದರಿಂದ, ವಿಧಾನಸೌಧದ ಆಡಳಿತ ವರ್ಗ ಹಾಗೂ ಸಚಿವಾಲಯದ ಅಧಿಕಾರಿ ವರ್ಗದವರು ಈಗ ಅಧಿವೇಶನದ ಯಶಸ್ವಿ ನಿರ್ವಹಣೆಗೆ ಬೇಕಾದ ಸಕಲ ತಯಾರಿಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಂತಾಗಿದೆ.





