ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ‘ಜನ್ ಸುರಾಜ್ ಪಾರ್ಟಿ’ಯ (ಜೆಎಸ್‌ಪಿ) ಡಿಜಿಟಲ್ ಕಮ್ಯುನಿಕೇಷನ್ಸ್ ಮ್ಯಾನೇಜರ್ ದೇವ್‌ಪಾಲಿಕ್ ಗುಪ್ತಾ (31) ಅವರು ರೈಲು ಪ್ರಯಾಣದ ವೇಳೆ ನಾಪತ್ತೆಯಾಗಿ, ನಿಗೂಢವಾಗಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ರಾಂಚಿ-ಪಾಟ್ನಾ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಸಹೋದ್ಯೋಗಿಗಳೊಂದಿಗೆ ಪ್ರಯಾಣಿಸುತ್ತಿದ್ದ ದೇವ್‌ಪಾಲಿಕ್ ದಿಢೀರ್ ನಾಪತ್ತೆಯಾಗಿದ್ದರು. ನಾಪತ್ತೆಯಾದ 24 ಗಂಟೆಗಳ ಬಳಿಕ ಮಂಗಳವಾರ ಮಧ್ಯಾಹ್ನ ರಾಂಚಿಯ ಅಂಗಾರ ಪೊಲೀಸ್ ಠಾಣಾ ವ್ಯಾಪ್ತಿಯ ಜರ್ವಾಡಿಹ್ ಬಳಿಯ ರೈಲ್ವೆ ಹಳಿಗಳ ಪಕ್ಕದ ಪೊದೆಯಲ್ಲಿ ಅವರ ಮೃತದೇಹ ಹಾಗೂ ವಸ್ತುಗಳು ಪತ್ತೆಯಾಗಿವೆ.
“ಮಧ್ಯಾಹ್ನ 2.25ರ ಸುಮಾರಿಗೆ ರೈಲು ರಾಂಚಿಯಿಂದ ಪಾಟ್ನಾಗೆ ಹೊರಟಿತ್ತು. ಕೇವಲ 10 ನಿಮಿಷಗಳ ನಂತರ ಊಟ ತರಲು ಪ್ಯಾಂಟ್ರಿ ಕಾರ್ ಕಡೆಗೆ ಹೋದ ದೇವ್‌ಪಾಲಿಕ್ ಮರಳಿ ಬರಲಿಲ್ಲ. ಎರಡು ಗಂಟೆಗಳಾದರೂ ಅವರು ಬಾರದಿದ್ದಾಗ ನಮಗೆ ಅನುಮಾನ ಶುರುವಾಯಿತು. ಪಕ್ಕದ ಬೋಗಿ, ಪ್ಯಾಂಟ್ರಿ ಸೇರಿದಂತೆ ಇಡೀ ರೈಲಿನಲ್ಲಿ ಹುಡುಕಾಡಿದರೂ ಅವರು ಸಿಗಲಿಲ್ಲ. ರೈಲು ಮುರಿ ಜಂಕ್ಷನ್ ತಲುಪಿದಾಗ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ದೂರು ನೀಡಿದೆವು,” ಎಂದು ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಹೋದ್ಯೋಗಿಗಳಾದ ಗೌತಮ್ ಕುಮಾರ್ ಮತ್ತು ನಿಶಾಂತ್ ವಿವರಿಸಿದ್ದಾರೆ. ರಾಂಚಿಯಿಂದ ಹೊರಟ ಬಳಿಕ ರೈಲು ನಿಲ್ಲುವ ಮೊದಲ ನಿಲ್ದಾಣವೇ ಮುರಿ ಜಂಕ್ಷನ್ ಆಗಿದ್ದರಿಂದ, ಅವರು ಬೇರೆಲ್ಲೂ ಇಳಿಯುವ ಸಾಧ್ಯತೆಯಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಗೋಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, “ಪ್ರಾಥಮಿಕ ತನಿಖೆಯ ಪ್ರಕಾರ ದೇವ್‌ಪಾಲಿಕ್ ಅವರ ತಲೆಗೆ ಪೆಟ್ಟಾಗಿರುವುದು ಕಂಡುಬಂದಿದೆ. ಚಲಿಸುತ್ತಿದ್ದ ರೈಲಿನಿಂದ ಅವರು ಆಯತಪ್ಪಿ ಬಿದ್ದಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಂಚಿಯ ರಿಮ್ಸ್ (RIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ,” ಎಂದು ಹೇಳಿದ್ದಾರೆ.
ಜನ್ ಸುರಾಜ್ ಪಕ್ಷದ ರಾಷ್ಟ್ರೀಯ ವಕ್ತಾರ ಕುಮಾರ್ ಸೌರಭ್ ಸಿಂಗ್ ಅವರು ಸೋಮವಾರ ರಾತ್ರಿ 9 ಗಂಟೆಗೆ ಎಫ್‌ಐಆರ್ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಈ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಪಕ್ಷ ಆಗ್ರಹಿಸಿದೆ. “ದೇವ್‌ಪಾಲಿಕ್ ಯಾವ ಪರಿಸ್ಥಿತಿಯಲ್ಲಿ ಮೃತಪಟ್ಟರು ಎಂಬುದು ನಮಗೆ ತಿಳಿದಿಲ್ಲ. ಹೀಗಾಗಿ ಇದು ರಾಜಕೀಯ ಅಥವಾ ಇತರ ಯಾವುದೇ ಪಿತೂರಿ ಎಂದು ಅಧಿಕೃತವಾಗಿ ಹೇಳಲಾಗದು. ಒಂದು ವೇಳೆ ಇದರ ಹಿಂದೆ ಯಾವುದೇ ಪಿತೂರಿ ಇದ್ದರೆ, ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು” ಎಂದು ಪಕ್ಷದ ವಕ್ತಾರರು ಒತ್ತಾಯಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ನೇಹಾ ಸಿಂಗ್ ರಾಥೋಡ್ ಹಾಗೂ ಐಐಎಂಸಿ (IIMC) ಹಳೆಯ ವಿದ್ಯಾರ್ಥಿಗಳ ಸಂಘ ಕೂಡ ಈ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿವೆ.





