ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಶಿವಳ್ಳಿಯೆಂಬೋ ಶಿವಳ್ಳಿಯೆಲ್ಲಾ ಕೌದಿ ಮುಸಕಿನ್ಯಾಗ ಕೈ ಕಾಲು ಮುದರಿಕೊಂಡು ಬೆಚ್ಚಗ ಮಕ್ಕೊಂಡಿತ್ತು. ಊರ ಮುಂದಿನ ಹೊಳಿ ದಂಡ್ಯಾಗಿನ ಕಳ್ಳಿ ಸಾಲಿಗಿ, ಗಿಡಗಂಟಿಗಿ, ಕಂಟಿ ಕಮರಿಗಿ, ಬಸಂದೇವರ ಗುಡ್ಡಕ್ಕೆಲ್ಲಾ ತೋಳು ಚಾಚಿ ಬಿಕ್ಕೊಂಡು ನಿಂತಿದ್ದ ಬಿಕೋ ಅನ್ನುವ ಮೌನ ಮಿಸುಕಾಡಿರಲಿಲ್ಲ. ಗಾಳಿಯೂ ಕುಂಡಿಬಾಯಿ ಮುಚ್ಚಿಕೊಂಡು ಗಪಚಿಪ್ಪಾಗಿತ್ತು. ತೊರೆಯ ನೀರೂ ಬಾಯಿ ಬಿಗಿದುಕೊಂಡು ಮೂಕವಾಗಿತ್ತು. ಶಿವಗಂಗಾಗೆ ಯಾಕೋ ತಟ್ಟನೆ ನಿದ್ದೆ ಹರಿದು ಎಚ್ಚರಾಯಿತು. ಮಾರಿಯ ಮ್ಯಾಲಿನ ಕೌದಿಯ ಮುಸುಕು ಸರಿಸಿ ಪಿಳಿ ಪಿಳಿ ಅಂತ ಕಣ್ಣು ತೆರೆದಳು. ಗುಡಿಸಲಲ್ಲಿ ದಟ್ಟೈಸಿದ್ದ ಕಾಡಿಗೆಗಪ್ಪಿನ ಕತ್ತಲೆ ಧುತ್ತೆಂದು ಅವಳ ಕಣ್ಣಿಗೆ ನುಗ್ಗಿತು. ”ಯಾರೂ ಇನ್ನಾ ಎದ್ದು ಬೀಸಾಕಲ್ಲಿನ ಮುಂದೆ ಕುಂತಂಗಿಲ್ಲ….. ಇದೆಂತಾ ರಾತರಿನೇ ಯವ್ವಾ…. ಒಂದೇಟೊತ್ತಯ್ತು ಬೆಳಗೇ ಆಗಂಗಿಲ್ಲಾಗ್ಯಾದ ಕೋಡಿ……..” ಅಂತ ಮನದಾಗೇ ಅಂದುಕೊಂಡು ಮಗ್ಗಲು ತಿರುವಿ ಕಣ್ಣು ರೆಪ್ಪೆ ಕೂಡಿಸಿದಳು.

- Advertisement -

ಕಣ್ಣಿವೆಗಳು ಒಂದಕ್ಕೊಂದು ಬಿಗಿದುಕೊಂಡು ನಿದ್ದೆಗಾಗಿ ತಡಕಾಡಿದರೂ ಮನಸ್ಸು ಮಾತ್ರ ನಿದ್ದೆಯೊಂದಿಗೆ ರಾಜಿ ಮಾಡಿಕೊಳ್ಳದೆ ತನ್ನದೇ ವಿಚಾರದಲ್ಲಿ ತೊಯ್ದಾಡಿತು. ಹೊಯಿಂದೂ….. ನಾ ಇವರಿಗೇನು ಅರಕಿ ಮಾಡಿದ್ದನಂತ ಇವರಿಬ್ಬರೂ ನನಗ ಬಿಟ್ಟು ಬ್ಯಾರೆ ಹ್ವಾದರು? ಅಕಿಯರೆ ಹೊರಗನಿಂದ ಬಂದಕ್ಕಿ. ನನ್ ಮ್ಯಾಲ ಮಾಯಾ ಮಮತಾ ಇಲ್ಲಕ್ಕಿ ಖರೇ, ಅದರ ಈ ನನ್ ಹೊಟ್ಟಿಲಿಂದ ಹುಟ್ಟಿದ ಮಗಾನೂ ಹೆಣ್ತಿಸೆರಗ ಹಿಡ್ಕೊಂಡು ಹ್ವಾದನಲ್ಲ…… ಹುಟ್ಟಿದಾಗಲಿಂದ ನನ್ ಜೋಡಿಯಿದ್ದ ಅಂವಗ ಈ ತಾಯಿಗಿಂತಾ ನಿನ್ನಿ ಮನ್ನಿ ಬಂದ ಆ ಹೆಣ್ತಿನೇ ಹೆಚ್ಚಾದಳಲ್ಲ ಶಿವನೇ….. ಅಂತ ಶಿವಗಂಗವ್ವ ಮತ್ತ ನಿಟ್ಟುಸಿರಿಟ್ಟು ಕಣ್ಣಿವೆ ತೊಯ್ದಿಸಿಕೊಂಡಳು. ಈ ಎಂಟು ದಿನದಿಂದ ಆಕಿ ಹಿಂಗ್ ಉಸರ್‍ಹಾಕಿದ್ದಕ್ಕೆ ಕಣ್ಣೀರ ತಂದಿದ್ದಕ್ಕ ಲೆಕ್ಕಾನೇ ಇಲ್ಲ. ಈ ಎಂಟು ದಿನದಲಿಂದ ಗೌಡ್ರ ಹೊಲದಾಗ ಸದಿತೆಗ್ಯಾಮುಂದ ಕಸಾ ಹಂಗೇ ಬಿಟ್ಟಿದ್ದೆಂತ ಗೌಡ್ತಿ ಕೈಲಿ ಬೈಸಿಕೊಂಡಿದ್ದಳು. ಸಾವ್ಕಾರನ ತ್ವಾಟದಾಗ ಹುಲ್ಲಕೊಯ್ಯಾದು ಬಿಟ್ಟು ಬೆಳಿ ಬೇರಿಗೇ ಕುರುಪಿ ಆಡಿಸಿ ಅವನ ಕೆಂಗಣ್ಣಿಗೂ ಗುರಿಯಾಗಿದ್ದಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

“ಯಾಕೇ ಚಿಗವ್ವಾ…. ಇವತ್ಯಾಕ ಯೆಲ್ಲಾ ಕೆಲ್ಸಾ ಅವುಡಾಸವಡಾ ಮಾಡ್ಲಕತ್ತೀದೇ ಕೋಡಿ? ಏನ್ಯಾಗ್ಯಾದ ನಿನಗ? ಸಾವ್ಕಾರ ಬೈಲಕತ್ತಾನ್ನೋಡು……” ಬಾಜು ಸಾಲಿನಲ್ಲಿ ಸದಿ ತಗೀತಿದ್ದ ಬ್ಯಾಡರ ಚಂದ್ರಿ ಸಣ್ಣದನ್ಯಾಗ ಎಚ್ಚರಿಸಿದಾಗ ಶಿವಗಂಗವ್ವ ನಿಟ್ಟುಸಿರಿಟ್ಟು ಕೆಲಸದಾಗ ನಿಗಾ ಹರಿಸಿದ್ದಳಾದರೂ ಆಕಿನ ಮನಸ್ಸು ಒಂದೇ ಕಡಿ ಥಿರ ಆಗಿ ನಿಂದರಲೇಯಿಲ್ಲ.

ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಈ ಗಂಡಸರಂದ್ರ ಎಲ್ಲೋರೂ ಒಂದೇ ರೀತಿಯಿರ್‍ತಾರ. ತಾಳಿ ಕಟ್ಟಿದ ಗಂಡಾದ್ರೇನು, ಹೊಟ್ಟಿಲಿ ಹುಟ್ಟಿದ ಮಗಾ ಆದ್ರೇನು? ಎಲ್ಲಾ ಗಂಡುಬೀಜಾನೇ ಅಲ್ಲ! ಅದು ತನ್ನ ಸುಕಾನೇ ನೋಡ್ಕೊತಾದ ಬಡೀಲೀ….. ಬ್ಯಾರೆಯವರ ಬಾರೇದಾಗ ಅದು ಇಚಾರ ಮಾಡಾದೇ ಇಲ್ಲಂತನ್ನಿಸಿ ಶಿವಗಂಗಾ ಒಳಗೊಳಗೇ ಚಡಪಡಿಸಿದಳು. ಕಣ್ಣು ಮುಚ್ಚಿ ಒಂದೀಟು ಜಂಪತ್ತಿತ್ತೇನೋ ಅನ್ನುವಾಗ ಯವ್ವಾ….. ಅಂತ ಮಗ ಕರ್‍ದಂಗಾಗಿ ತಟ್ಟನೆ ಎಚ್ಚತ್ತು “ಕರ್‍ದೇನೋ ತಮ್ಮಾ…… ಮಾನಿಂಗಾ?” ಅಂತದ್ದು ಕತ್ತಲಲ್ಲಿ ಧಡ ಬಡಿಸಿ ಹೋಗಿ ಬಾಗಿಲು ತೆರೆದಳು! ಅಲ್ಲಿ ಯಾರೂ ನಿಂತಿರಲಿಲ್ಲ. ಯಾರ ದನಿಯೂ ಕೇಳಿ ಬಂದಿರಲಿಲ್ಲ. ಗುಡಸಿಯ ಬದಿಗೆ ಕೇರಿಗೆ ಅನಿಸಿಟ್ಟಿದ್ದ ಗೂಡಿನೊಳಗಿಂದಲೇ ಅವಳ ಹುಂಜ ಕೊರ್‍ರಂತ ಕೊರಂತ ದನಿ ಹಾಕಿತು. ನಿರಾಸೆಯಿಂದ ಅವಳು ಅಲ್ಲೇ ಕುಸಿದುಕುಂತಳು. ಇನ್ನೆಲ್ಲಿ ಕರೀತಾನ ಮಗಾ…… ಈ ಅವ್ವ ಸಾಕಂತೇಳಿ ಹೆಣ್ತೀದು ನೆಕ್ಕೋತ ನಾಯಿಹಂಗ ಬಾಲಾ ಅಳ್ಳಾಡಸ್ಗೋತ ಹೋಗಿಬಿಟ್ಟಾದ ಹೊಂಬ….. ಅಂವಾ ಯಾಕನನ್ ಬಲ್ಲಿ ಹೊಳ್ಳಿ ಬಂದು ‘ಯವ್ವಾ’ ಅಂತ ಕರೀತಾನೀಗ…. ಅಂತಂದುಕೊಂಡು ಬಿಸಿಯುಸಿರೆಳೆದಳು. ಹೊರಗೆ ನೋಡಿದಳು. ದೂರದ ಆಕಾಶದಲ್ಲಿ ಬೆಳ್ಳಿ ಚಿಕ್ಕಿ ಮೂಡಿ ನಿಂತಿತ್ತು. ಅವಳ ಲೆಕ್ಕದಲ್ಲಿ ಮೂಡಲು ಹರಿಯಲು ಬಂದಿತ್ತು. ಆಟರಲ್ಲಿ ಮೂಲಿಮನಿ ಸಂಗವ್ವತ್ತಿಯ ಗುಡಿಸಲಿನಿಂದ ಗರ್‍ರೆನ್ನುವ ಬೀಸುಕಲ್ಲಿನ ಸಪ್ಪಳ ಕೇಳಿಬಂದಿತು. ಜೊತೆಗೆ ಅವಳ ದನಿಯೂ ಹರಿದು ಬಂದಿತು. ಹೊಯಿಂದೂ ಈ ಸಂಗವತ್ತಿ ತನಕ್ಕಿಂತಾ ಭಾಳ ಸುಕದಾಗಾಳ…… ಹಾಂಗ ನೋಡದರ ಅಕಿಗಿ ಮಕ್ಕಳಿಲ್ಲ ಮರಗಳಿಲ್ಲ. ಹುಟ್ಟಿಬಂಜಿ ಅಕಿ, ಹಾಂಗ ಅಕಿ ಗೊಡ್ಡಿ ಆಗಿದ್ದರಲಿಂದೇ ಅಕಿ ಸುಕದಲಿಂದ್ಹಾಳ…… ಅನಿಸಿತು ಶಿವಗಂಗಾಗೆ, ಹೂಂ…… ಈ ಪರಪಂಚಾನೇ ಈಟು. ‘ಮಕ್ಕಳಿಲ್ಲಂತೇಳಿ ನೆಮ್ಮದಿಲಿಂದ್ಹಾಳಕಿ ಅಂತ’ ನಾನು… ‘ಮಗಾ ಸೊಸಿ ಹಾರಂತೇಳಿ ಸುಕವಾಗಾಳಂತ’ ಅಕಿ ತಿಳ್ಕೊಂಡು ನಮ್ ನಮ್ ನಸೀಬಕ್ಕ ಬೈಯ್ಕೋತ ಬದಕಲತ್ತಿದೇವಲ್ಲ, ಹೆಂತಾ ಭರಮಿಯಿದೂ ಅಂತಂದುಕೊಂಡಳು……..

ಎದ್ದು ಬಂದು ಚಾಪಿಯ ಮ್ಯಾಲೆ ಕಾಲು ಮುದುಡಿಕೊಂಡು ಮಕ್ಕೊಂಡಳು. ನಿದ್ದೆ ಕೆಟ್ಟಿತ್ತು. ಮೈಯೆಲ್ಲ ಹಣ್ಣ ಹಣ್ಣಾಗಿ ಕಾಲಲ್ಲಿಯ ನರಗಳು ಜಗ್ಗಿದಂಗಾಗಿ ಕಪಗಂಡು ಒಂದೇ ಸವನೆ ಸಾಯವರಿಗಿ ಹರ್‍ದಂಗ ಹರೀಲಕತ್ತಿದ್ದುವು. ಈಗೀಗ ತನ್ ಮೈಯಾಗಿನ ತಾಕತ್ತು ಕರಗಲಕತ್ತಾದಂತ ಅಕೀಗಿ ಭಾಳ ಸರ್‍ತಿ ಅನಿಸಿತ್ತು. ಆಯ್ತಲ್ಲ ನನಗನೂ ಸಾಟಿ ವರ್ಸ! ಮುದುಕ್ಕಾಗಲಕತ್ತೀನಿ. ತೆಲಿ ಕೂದಲೆಲ್ಲಾ ಬೆಳ್ಳಗಾಗಿ ಮೈಮ್ಯಾಲಿನ ತೊಗಲನೂ ಮುದ್ದಿ ಮುದ್ದಿ ಅಗಲಕತ್ತಾದ. ಮೈಯಾಗಿನ ಸಗತಿ ಸೋರಿ ಹೋಗಲಾರ್‍ದೆ ಇನ್ನೇನು? ನಾ ಮುದುಕ್ಕಾಗಟಗೆ ಮಗಾ ಕೈಗಿ ಬರ್‍ತಾನ, ಸೊಸಿ ಬಂದು ನನಗ ಕುಂದರ್‍ಸಿ ರೊಟ್ಟಿ ಪಲ್ಲ್ಯಾ ಮಾಡಿ ಕುಡ್ತಾಳ, ಇನ್ನೇನು ನನ್ನ ‘ಮುಪ್ಪು’ ಹಸೂನಾಗ್ತಾದಂತ ಅದೇಟು ಆಸಿ ಇಟ್ಗೊಂಡಿದ್ದ ನಾನು! ಗಂಡಂಬಾಂವ ರಂಡಿಮಗಾ ನನ್ ‘ಹರ್‍ಯಾ’ ಹಾಳು ಮಾಡಿದ್ದ. ಮಗಾ ಅರೆ ಹುಟ್ಟಿದಾಗಿಂದ ನನ್ನ ತಕಲೀಫ ತರಾಸ ನೋಡ್ಕೋತೇ ಬೆಳ್ದು ದೊಡ್ಡಾಂವಾಗ್ಯಾನ, ಕೂಸಿಗಿ ಹೊಟ್ಟೀಗಿ ಕಟ್ಕೊಂಡು ದವುಳ್ಳವರ ಹೊಲಾ, ತ್ವಾಟಾದಾಗೆಲ್ಲಾ ಕೂಲಿನಾಲಿ ಮಾಡಿ ಇಂವಗ ಸಲವೀನಿ…… ಅಂವಗ ಉಣಸಿ ನಾ ಉಪಾಸಿದ್ದು ದಿನಗಳದೀನಿ…. ಇದ್ದೊಬ್ಬ ಮಗಾ ಅಂತ ಮಾನಿಂಗಗ ಅದೇಟು ಕಾಳಜಿ ಕಕಲಾತಿಲಿಂದ ಬೆಳಸಿಲ್ಲ ನಾನು? ದೊಡ್ಡಾಂವಾಗಿ ಸಾವ್ಕಾರ ಮನ್ಯಾಗ ದುಡೀಲಕ್ಕ ನಿಂತರನೂ ಯವ್ವಾ ಯವ್ವಾ, ಅಂತ ನನ್ ಸುತ್ತಾ ಮುತ್ತಾನೇ ಹಸುಗೂಸಿನಂಗ ಸುತ್ತತ್ತಿದ್ದ ಮಗಾ, ಮಗ್ಗಲಿಗಿ ಹೆಣ್ತಿ ಬಂದಳಂತ ನನಗೆ ದೂರೇ ಮಾಡಿ ಬಿಟ್ಟನಲ್ಲ! ಅಂತಂದುಕೊಳ್ಳುತ್ತ ಮತ್ತೆ ಉದ್ದುದ್ದ ಉಸಿರೆಳೆದು ಬಿಡುತ್ತ ನೋಯುತ್ತಿರುವ ಕಾಲನ್ನು ಮುತ್ತೀಟು ಮುದುಡಿಕೊಂಡು ಹೊಟ್ಟಿಗೊತ್ತಿಕೊಳ್ಳುತ್ತ ಸಣ್ಣಗೆ ನರಳಿದಳು.

ಇದನ್ನು ಓದಿದ್ದೀರಾ?: ವಿವೇಕ ಶಾನಭಾಗ ಅವರ ಕತೆ | ಲಂಗರು

ಮೂಡಲು ಹರಿಯುವ ಚುಮು ಚುಮು ಬೆಳಗಾಯಿತು, ಅಂಗಳದ ಬೇಯಿನ ಮರದಾಗ ರಾತ್ರಿ ಮಸ್ತಿಹಾಕಿದ್ದ ಹಕ್ಕಿ ಪಕ್ಕಿಗಳೆಲ್ಲ ಬೆಳಗೆದ್ದು ಕಬ ಕಬ ಮಾಡುತ್ತ ಆಕಾಸದೆದೆಗೆ ಹಾರಿದುವು. ಕೋಳಿ, ಹುಂಜಗಳು ಕೂಗುತ್ತ ಗೂಡಿನಿಂದ ಹೊರಬರಲು ಧಡಬಡಿಸಿದುವು. ನಾಯಿ ಬೊಗಳಿತು. ಗುಡಿಸಿಲ ಬೆನ್ನು ಗ್ವಾಡಿಗೆ ಹತ್ತಿದ್ದ ಹಾದಿಮ್ಯಾಲಿಂದ ಹೊಲಗಳಿಗೆ ನಡೆದಿದ್ದ ಗಂಡಸರ ಮಾತುಗಳು ಕೇಳಿಬಂದುವು. ಶಿವಗಂಗಾ ಎದ್ದು ಕುಂತಳು. ಕೆದರಿದ್ದ ನೆತ್ತಿಯನ್ನು ಸವರಿ, ಬಟ್ಟುಗಳಿಂದಲೇ ಕೂದಲು ಕೆರ್‍ಕೊಂಡು ಝಾಡಿಸಿ ತುರುಬುಕಟ್ಟಿಕೊಂಡಳು. ಗಂಟು ಬಿಚ್ಚಿದ ಕುಪ್ಪಸದಿಂದ ಹೊರ ಬಂದಿದ್ದ ಜೋಲು ಮೊಲೆಯನ್ನು ಗಸಕ್ಕನೆ ಒಳಗೆ ನೂಕಿ ಗಂಟು ಹಾಕಿಕೊಳ್ಳುವಾಗ ಹಂಗೇ ಅಕಿನ ಕೈ ತಡಿಯಿತು…… ಗಂಡುಗಲ್ಲಿನಂಗಿದ್ದ ತುಂಬಿದ ಮಲಿಗೋಳು ಈಗ ಪೂರಾ ಕರಗಿ ಬರೇ ತೊಗಲಿನ ಚೀಲದಂಗಾಗಿದ್ದು ಕಂಡು ಎದೆಯ ಮೂಲೆಯಲ್ಲೆಲ್ಲೋ ಮುಳ್ಳು ಚುಚ್ಚಿದಂಗಾಯಿತು, ಶಿವಗಂಗಾಗೆ, ಕೊಳ್ಳಾಗಿನ ಕರಮಣಿಯ ತಾಳಿ ಕುಪ್ಪಸದ ಮೇಲಿನ ಗುಂಡಿಗೆ ಸಿಕ್ಕು ಬಿದ್ದಿತ್ತು. ಅವಳ ಕೈ ಅದನ್ನು ಬಿಡಿಸಿತು. ಅಂಚುನೆಗ್ಗಿ ಸೀಳಿದ್ದ ಗುಳದಾಳಿಯನ್ನೇ ದಿಟ್ಟಿಸಿದಳೊಂದು ಗಳಿಗೆ ತಟ್ಟನೆ ಗಂಡ ಮಲ್ಲೇಶಿಯ ನೆನಪಾಯಿತು. ನಲವತ್ತು ವರ್ಸಿನಿಂದ ಸತ್ತು ಗೋರಿ ಸೇರಿದ್ದು ದಿನಗಳೆಲ್ಲ ಮತ್ತೆ ಜೀವತುಂಬಿಕೊಂಡು ಬುದುಂಗನೆ ಎದ್ದು ಬಂದು ಅಕಿನ ಸುತ್ತ ಘರಾಯಿಸಿದುವು. ಶಿವಗಂಗಾ ನೆನಪಿನ ಹೊಳೆಯಲ್ಲಿ ಈಜುತ್ತ ಈಜುತ್ತ ತನ್ನ ಹರೆಯದ ದಿನಗಳ ಕಡೆಗೆ ಭರದಿಂದ ಸಾಗಿದರು….

ಸಾವಳಗಿ ಹಳ್ಳಿಯ ಕೆಳಗೇರಿಯ ನಾಟೀಕಾರ ಮಲ್ಲೇಶಿಯ ಹೆಂಡತಿಯಾಗಿ ಅವನ ಮನೆಗೆ ಸಂಸಾರ ಮಾಡಲು ಬಂದಾಗ ಶಿವಗಂಗಾಗಿನ್ನೂ ಹದಿನಾರು ವರ್ಷ. ಮೈನರ್‍ದು ಮೂರೊರ್ಸಾಗಿತ್ತು ಅಟೇ. ಅತ್ತಿಮಾಂವಿಲ್ಲ. ಅಣ್ಣ ತಮ್ಮದೇರಿಲ್ಲ. ಒಂಟಿ ಒಗತಾನ, ದುಡದುಂಬಾ ಪಾರಂತೇಳಿ ಅವಳಪ್ಪ ಈ ಮದವಿಗಿ ಒಪ್ಪಿದ್ದ. ಶಿವಗಂಗಾನೂ ಮಲ್ಲೇಶಿಗಿ ಪಸಂದಾದಳು. ಇನ್ನ ಮಲ್ಲೇಶಿ ಅಂತೂ ಚೆಂದದ ಚೆಲುವಿನ ಹೋಳು ಹರೆಯದ ಪಾರ, ವಾರಿಮೀಸಿ, ಗಾರಗಣ್ಣು, ತುಂಬಿದ ಮಾರಿಯ ಮಲ್ಲೇಶಿ ನೋಡ್ದವರ ಕಣ್ಣು ಸಿಡೆಂಗಿದ್ದ. “ಪಾರಗ ಅವ್ವಾ ಅಪ್ಪಾಯಿಲ್ಲ, ನಂಬಲ್ಲೇ ಬೆಳ್ದು ದೊಡ್ಡಾಂವ ಅಗ್ಯಾನ, ಊರ ಸಾವ್ಕಾರನ, ಮನ್ಯಾಗ ದುಡೀಲಕ್ಕ ನಿಂತು ಎಡ್ಡೊರ್ಸಾಯ್ತು. ವರ್ಸಿಗಿ ದೋನ ಹಜಾರ ರುಪೈ ಕೊಟ್ಟು ಹೊಟ್ಟಿ ಬಟ್ಟಿಯೆಲ್ಲ ಸಾವ್ಕಾರ್‍ತಿ ನೋಡೋತಾಳ. ಸಾವ್ಕಾರ್‍ತಿ ಚಂದಮ್ಮವ್ವ ಗಂಡಸು ರಂಡಮುಂಡಿ. ಆಕಿಗಿ ಈ ಅಳಮಗಾ ಅಂದ್ರ ಪಂಚಪರಾಣ. ಇವನ ಮ್ಯಾಲ ಭಾಳಂದ್ರ ಭಾಳ ಇಸ್ಟಾಸ ಅಕೀಗಿ….. ಈ ನಂಪಾರನೂ ಆಟೇ. ಸಾವ್ಕಾರ ಮನಿ ಆಂದ್ರ ತನ್ನ ಮನಿಕ್ಕಿಂತಾ, ಜಿಂವದಕ್ಕಿಂತಾ ಜಾಸ್ತಿ ಜತನಲಿಂದ ನೋಡ್ಕೊತಾನ…… ಒಬ್ಬರ ಆಸರಾ ಒಬ್ಬರಿಗಿ ನೋಡ್ರಿ. ಈಗ ಸಾವ್ಕಾರ್‍ತಿನೇ ನಿಂತು ಮಲ್ಲೇಶಿ ಮದಿ ಮಾಡ್ಲಕತ್ತಾಳ. ರೊಕ್ಕಾ ರುಪೈಗಿ ಶಾಣೇತನ ಮಾಡಾ ಹೆಣಮಗಳಲ್ಲರೀ ನಮ್ ಸಾವ್ಕಾರ್‍ತೀ…… ಒಟ್ಟಿನ್ಯಾಗ ನಿಮ್ಮ ಮಗಳು ಸುಕದಾಗಿರ್‍ತಾಳ ನೋಡ್ರಿ. ಮನ್ಯಾಗಿನ ಕಾಲ ಹೊರಗಿಡಗುಡಂಗಿಲ್ಲ ಮಲ್ಲೇಶಿ…… ಅಂತೇಳಿದ್ದ ಮಲ್ಲೇಶಿಯ ದೊಡಪ್ಪ ಹೆಣ್ಣಿನ ಕಡಿಯವರೂ ಗುಣು ಗುಣು ಮಾತಾಡಿಕೊಂಡರು. ಅಂತೂ ಚಾರಸೆ ರುಪೈ ತೆರುಕೊಟ್ಟು ಒಂತೊಲಿ ಬಂಗಾರದ ತಾಳಿಸಾಮಾನಿಟ್ಟು ಹೆಣ್ಣು ಗಟ್ಟಿಮಾಡ್ಕೊಂಡು, ಗಟ್ಟಿಕಡಬು ಉಂಡೇ ಹ್ವಾದರು ಬೀಗರು.

ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ

ಸಿದ್ದಪ್ಪ ವಾಲೀಕಾರನ ಮನ್ಯಾಗಂತೂ ಖುಸಿನೇ ಖುಸಿ. ನನ್ ಮಗಳಿಗಿ ಒಂಟ ಒಗತನ ಸಿಕ್ಕತು. ಅತ್ತಿಮಾವನ ಕಿರಿ ಕಿರಿಯಿಲ್ಲ. ನಾದನಿ ಮೈದನರ ಕಾಟಯಿಲ್ಲ ಗಂಡಾ ಹೆಣ್ತಿ ಇಬ್ಬರೇ ಇಬ್ಬರು. ರಾಜಾರಾಣಿಹಂಗ ಆರಾಮಿರ್‍ತಾರ ಅಂತಂದುಕೊಂಡು ಆ ಅವ್ವ ಅಪ್ಪ ನಿರುಮ್ಮಳಾದರು. ಶಿವಗಂಗಾನೂ ಹಿಗ್ಗಿ ಹೀರೇಕಾಯಿ ಆದಳು. “ನಿನ್ ಗಂಡ ಚೆಲು ಚಂದ್ರಾಮಾಗ್ಯಾನಲ್ಲೇ ಶಿವಗಂಗಾ….. ಖರೇ ಆಂದ್ರ ನೀನೇ ಏನೂ ಅಲ್ಲ ನೋಡು ಅವನ ಮುಂದ…… ನಿನ್ ದೈವ ಛಲೋ ಅದಾನೇ ಗೆಳತೀ….. ಹಿಂತಾ ಗಂಡ ಸಿಕ್ಕಾನ…..” ಅಂತ ಅಕಿನ ಗೆಳತೇರು ಮೆಚ್ಚಿಕೊಂಡಾಗ ಶಿವಗಂಗೆಗೆ ಕೈಲಾಸಂಬಾದು ಅಂಗೈಯೊಳಗೇ ಬಿದ್ದಂಗಾಯ್ತು. ಕುಂತಲ್ಲಿ ನಿಂತಲ್ಲಿ ಉಲ್ಲಾಸ ಅಕಿನ ಮೈತುಂಬ ಓಡ್ಯಾಡಿತು. ಕಾರಣವಿಲ್ಲದ ನಗುವಿನೆಸಳು ಅಕಿನ ಮಾರಿ ಮ್ಯಾಲ ಹಾಯ್ದು ಬರುತ್ತಿತ್ತು. ಮಲ್ಲೇಶಿಯ ಗುಂಗಿನಲ್ಲೇ ಅಕಿ ಗಿರಕಿ ಹೊಡೆಯುತ್ತಿರುವಾಗ ಅಗಸರ ಅಂಬವ್ವತ್ತಿ ನಖರಿ ಆಡುವುದಿತ್ತು. “ಹಿಂಗ್ ಕುಂತಲ್ಲಿ ನಿಂತಲ್ಲೆಲ್ಲಾ ಆ ಮಲ್ಲೇಶಿ ಕನಸಗೋಳಿಗಿ ನಿನ್ ಕಣ್ಣಾಗ ಕಟ್ಗೊಂಡು ಬಣ್ಣಾ ತುಂಬಬ್ಯಾಡೇ ಹುಚಗೊಟ್ಟಿ ಪೋರೀ…… ಹಿನಾ ಏನು ನೀ ಅವನ ಗುಣಾ ಕಂಡಿದ್ದೀ……. ಬರೇ ಮಾರಿ ನೋಡಿ ಮಣಿ ಹಾಕಬ್ಯಾಡಗ ಶಿವೀ” “ಏ ಹೋಗೇ ಅತ್ತೀ….. ನೀವೊಂದು. ಏನರೆ ಅಪಸಕಣಾ ನುಡೀಬ್ಯಾಡೆವ್ವ….. ಅವರೇನೂ ಹಂತವರಲ್ಲ” ಅಂದಳು ಶಿವಗಂಗಾ ಲಜ್ಜೆಯಿಂದ. “ಇದೇನೇ ಪೋರೀ……. ಹಾರ್‍ರು ಕ್ವಾಮಟೇರಂಗ ಗಂಡಗ ಅವರು, ಇವರು ಅನ್ನಕತ್ತೆಲ್ಲೇ ಹೊಯಿಮಲ್ಲೀ……. ಸುಮ್ಮನ ಅಂವಾ, ಇಂವಾ ಅನ್ನು…. ದಿವಾನೀ ದಿವಾನೀ…..” ಅಂತ ಅಂಬವ್ವತ್ತಿ ಗೊಳ್ಳಂತ ನಕ್ಕಾಗ ಶಿವಗಂಗೆಯ ಮಾರಿ ಮೇಲೆ ಜಾಜ ಚೆಲ್ಲ್ಯಾಡಿತು.

“ಹೋಗೇ ಅತ್ತೀ……” ಶಿವಗಂಗಾ ಅಲ್ಲಿಂದೆದ್ದು ಓಡಿ ಹೋದಳು.

ಹಿಂಗೇ ಕನಸಿನ ಕೌದಿ ಹೊಲೆಯುತ್ತ ಅದರ ಮ್ಯಾಲೆ ಬಣ್ಣದ ಚಿಂದಿ ಕತ್ತರಿಸಿ ಪಗಡಿ ಬಾಜಾರ, ಬಾರಂಭಾಂಯಿ, ಶಾಣಬಸಪ್ಪನ ಗುಡಿಯ ಚಿತ್ತಾರ ಬಿಡಿಸುತ್ತ ಶಿವಗಂಗಾ ದಿನಗಳೆಯುತ್ತ ವೈಶಾಖದ ದಾರಿ ಕಾಯುತ್ತಿದ್ದಳು.

ಇದನ್ನು ಓದಿದ್ದೀರಾ?: ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ

ಮದವಿ ಮುಗದು ಶಿವಗಂಗಾ ಮನಿ ತುಂಬಿಸಿಕೊಂಡ ಎಡ್ಡೇ ಎಡ್ಡು ದಿನಕ್ಕ ಮಲ್ಲೇಶಿಯ ದೊಡ್ಡವ್ವ ದೊಡಪ್ಪ ತಮ್ಮ ಮನೀಗಿ ಹ್ವಾದರು. ಮಲ್ಲೇಶಿಯ ಗುಡಿಸಲು ಕೇರಿಯ ಕೊನೆಗೆ ಗಿಡಮರಗಳ ನಡಬರಕ ಇತ್ತು. ಕೇರಿಯ ಉಳಿದ ಗುಡಿಸಲುಗಳು ಸೊಲುಪ ದೂರದಲ್ಲಿ ಹಿಂಡುಗಟ್ಟಿಕೊಂಡಿದ್ದುವು.

ಸೋಬಾನಾಗಿ ನಾಕು ದಿನ ಆಗಿತ್ತು. ಮನ್ಯಾಗಿನ ಬೀಗರೆಲ್ಲ ಹೋಗಿ ಮನಿಯೆಲ್ಲಾ ಖಾಲಿಯಾಗಿತ್ತು. ಅವ್ವ ಊರಿಗೆ ಹೋಗಾಮುಂದ ಮಗಳ ಮಾರಿ ಎದಿಗೊತಗೊಂಡು ಅಕಿನ ಗದ್ದಾ ತುಟಿ ಸವರಿದ್ದಳು. “ಹಿರೇರಿಲ್ಲದ ಮನಿ ಅದಾ ಮಗಾ ನಿಂದೂ… ಗಂಡನ ಮರ್ಜಿ ಕಾಯ್ಕೊಂಡಿರು. ಅವನ ಮನಸ ತಿಳ್ಕೊಂಡು ಅಂವಗ ಮೆಚ್ಚಗಿ ಅಗಂಗ ಮಾತಾಡು. ಇನ್ನ ಮ್ಯಾಲ ಇದೇ ಮನಿ ನಿನಗ ಥಿರಾ ಅಂತ ತಿಳ್ಕೋ ಮಗಳೇ….” ಅಂತ ಬುದ್ದಿಮಾತು ಹೇಳಿದಾಗ ಶಿವಗಂಗಾ ತಲೆ ಆಡಿಸಿದ್ದಳು.

ಅಂದೇ ಸಂಜಿ ಮುಂದ ಮಲ್ಲೇಶಿ ಹೆಣ್ತೀಗಿ ಹೇಳಿದ. “ನೋಡು ಶಿವೀ…… ನಾ ಊರ ಸಾವ್ಕಾರ ಮನ್ಯಾಗಿನ ಜೀತದಾಳು. ಹಗಲಾ ರಾತರಿ ಅಲ್ಲಿ ದುಡೀಬೇಕು, ನನ್ನ ಊಟಾ ಗೀಟಾ ಯೆಲ್ಲಾ ಅಲ್ಲೇ ಆಗ್ತದ. ನನ್ ಸಲ್ಯಾಕಂತ ನೀಏನೂ ಅಡಗಿ ಅಂಬಲಿ ಮಾಡಾದು ಬ್ಯಾಡ.. ನಿನ್ ಪುರತ್ಯಾಕೇ ಮಾಡ್ಕೋ…. ನಾ ದಿನಕ್ಕೊಮ್ಮಿ ಟೀಮ ಸಿಕ್ಕಾಗ ಮನೀಗಿ ಬಂದೊಗ್ತೀನಿ. ನಿನಗ ಈ ಮನ್ಯಾಗ ಯದಕ್ಕನೂ ಅರಕಿ ಮಾಡಂಗಿಲ್ಲ…..” ಅಂತ ಗಂಡ ಹೇಳಿದಾಗ ಶಿವಗಂಗಾ ಗಾಬರ್‍ಯಾದಳು. “ಅಂದ್ರ….. ನಿನಗಲ್ಲಿ ಹಗಲಾರಾತರಿ ದಗದಾಯಿರ್‍ತಾದೇನು? ದುಡ್ಯಾ ಆಳೀಗಿ ಹಗಲತ್ತ ಕೆಲಸಾ ಇರ್‍ತಾದಂಬಾದು ಖರೇ. ರಾತ್ರಿನೂ ಏನು ಕೆಲ್ಸಾ ಮಾಡ್ತಿ ಅಲ್ಲಿ? ನಾ ಒಲ್ಲೆವ್ವ…… ಹಿಂತಾ ಮನ್ಯಾಗ ನನಗೊಬ್ಬಕೀಗೇ ಇರ್‍ಲಕ್ಕ ಅಂಜಿಕಿ ಬರ್‍ತದ…… ನಾ ಇಲ್ಲಿ ಬಿಲಕುಲ್ ಇರಂಗಿಲ್ಲ…… ನಿನಗ ಬಿಟ್ಟು ಒಬ್ಬಕ್ಕಿನೇ ನಾ ಹ್ಯಾಂಗಿರ್‍ಲಿ?” ಶಿವಗಂಗಾನ ಕಣ್ಣುಗಳು ನೀರು ತುಳುಕಿಸಿದುವು. ಇನ್ನೇನು ಅಕಿ ಬಿಕ್ಕಿ ಬಕ್ಕಿ ಅತ್ತೇ ಬಿಡ್ತಾಳಂತ ಖಾತರಿಯಾದಾಗ ಮಲ್ಲೇಶಿ ಅವಳಿಗಿ ತೋಳನ್ಯಾಗ ತಗೊಂಡು ರಂಬಿಸಿ, ಸಮಾಧಾನ ಮಾಡ್ಬೇಕಾದ್ರ ಅಂವಗ ಒಂದೀಟು ತಿಪ್ಪಲೇ ಆಯ್ತು. “ಏ ಪೋರೀ. ಪಾಗಲ್ ಯಿದ್ದಿಯೇನು? ರಾತ್ರಿ ನಿನ್ ಬಲ್ಲೆ ಬರ್‍ತೀನೇ… ಒಂದೀಟು ತಡಾ ಆಗ್ತದ ಆಟೀ…….. ರಾತ್ರಿ ನಾ ಹ್ಯಾಂಗ ಅಲ್ಲಿರ್‍ತೀನಿ ನಿನಗೆ ಬಿಟ್ಟು ಆಂ? ಹಗಲತ್ತಿನ ಮಾತು ನಾ ಹೇಳಿದ್ದೂ……ಎಲ್ಲಿ ಅಳಬ್ಯಾಡ ಸುಮ್ಕಿರು…” ಅಂತಂದಾಗ ಶಿವಗಂಗಾ ಗಪ್ಪಾದಳು, “ಹಾಂಗಾ….. ಹಂಗಾರ ಸರಿಬಿಡು…… ಹಗಲತ್ತೇನು ಹ್ಯಾಂಗರ ಇರ್‍ತೀನಿ. ರಾತ್ರಿ ಮಾತರ ಭಾಳ ತಡಾ ಮಾಡಬಾರ್‍ದು…… ರಾತ್ರಿ ಇಲ್ಲೇ ಬಂದು ಉಣಬೇಕು ನನಗೂಡ. ಹಗಲತ್ತಿನೂಟಾ ಅಲ್ಲಿ ಉಣು……” “ಆಗ್ಲಿ ಮಾರಾಯ್ತಿ…. ಮುಗೀತಾ ಹಿನಾ ಏನೆರೆ ಹೇಳಾದದಾನಾ?” ಅವನು ನಕ್ಕು ಅವಳ ಗಲ್ಲ ಸವರಿ ಸಾವ್ಕಾರರ ಮನೆಗೆ ನಡೆದನು.

ಇದನ್ನು ಓದಿದ್ದಿರಾ?: ಜಯಶ್ರೀ ದಿವಾಕರ್ ಅವರ ಕತೆ | ನೆಲೆ ಕಾಣದ ನೆರಳು

ಗಂಡ ಹ್ವಾದ ಮ್ಯಾಲ ಮನಿ ಕೆಲಸಾಯೆಲ್ಲಾ ಮುಗಿಸಿ ಶಿವಗಂಗಾ ಹೊರಗ ಅಂಗಳದಾಗ ಬಂದು ನಿಂತಳು. ಮೈ ತುಂಬ ಎಲೆ ಹೊಚ್ಚಿಕೊಂಡು ನಿಂತ ಗಿಡಮರಗಳ ನಡುವೆ ಅಂಕುದೊಂಕಾದ ಅಂಗಳ ಕಾಲು ಚಾಚಿಕೊಂಡು ಮಲಗಿತ್ತು. ಬಾಜು ಗುಡಿಸಲ ಕಾಳವ್ವ ಒಗ್ಯಾಕಲ್ಲಿನ ಬಾಜು ಎಳೆ ಬಿಸಿಲಿಗೆ ಮೈ ಕೊಟ್ಟು ಕುಂತಿದ್ದಕ್ಕಿ ಕರೆದಳು.

“ಬಾರಗs ಶಿವಗಂಗಾ…… ಅಡಗಿ ಆಯ್ಕೆನಗ ಪೋರೀ……..” ಕೇಳಿದಳು.

“ನಂದೇಟು ಅಡಗೀನೇ ಅತ್ತೀ….. ನಿನ್ ಮಗಾ ಇವತ್ತ ಸಾವ್ಕಾರ ಮನೀಗಿ ಕೆಲಸಕ್ಕ ಹೋಗ್ಯಾನವ್ವ… ಅಂವಗ ಅಲ್ಲೇ ಉಣ್ಣಾಕ ಕುಡ್ತಾರಂತ, ನನ್ನೊಬ್ಬಕ್ಕಿನ ಸಲ್ಯಾಕ ಏನಡಗಿ ಮಾಡ್ಕೋಬೇಕೋ ಏನೋ. ಎಡ್ಡು ರೊಟ್ಟಿ ಸುಟಗೊಂಡು ಅದೇ ಹಂಚಿನ್ಯಾಗ ಒಂದೀಸು ನುಚಬ್ಯಾಳಿ ಕುದಸಿ ಕಾರಾ ಉಪ್ಪ ಹಾಕಿ ಉದರ ಪಲ್ಯಾ ಮಾಡ್ಕೊಂಡೀನಿ.. ಸಂಜಿ ಮುಂದ ಅಡಗಿ ಮಾಡ್ತಿನತ್ತೀ….. ರಾತರಿ ಉಣ್ಣಾಕ ಮನೀಗೇ ಬರ್‍ತೀನಂದಾನ ನಿನ್ ಮಗಾ…….” ಮಾತಾಡುತ್ತ ಕಾಳವ್ವನ ಹತ್ತಿರ ಬಂದು ಕುಂತಳು ಶಿವಗಂಗಾ. ಅಕಾಡಿ ಗುಡಿಸಲ ಶಾಣವ್ವ, ನಾಗವ್ವ, ಪುತಳಾರೂ ಇವಳ ದನಿ ಕೇಳಿ ಹೋರಬಂದರು.

“ಏನೇ ಶಿವಗಂಗಾ……ಇವತ್ತ ಬಿಟ್ಟನೇನೇ ನಿನ್ ಗಂಡಾ? ಸೋಬಾನಾಗಿ ನಾಕು ದಿನಾ ಆಯ್ತು, ಇವತ್ತ ಹೊರಗೆ ಹೊಂಟಿದ್ದೆಲ್ಲೆ ಪೋರೀ…..” ನಾಗವ್ವ ನಗುತ್ತ ಕೇಳಿದಳು.

“ಅಣ್ಣ ಸಾವ್ಕಾರ ಮನೀಗಿ ಹ್ವಾದನೇನೇ?'” “ಊಟಾ ಸಾವ್ಕಾರ ಮನ್ಯಾಗಿದ್ದಾದಂತೇಳಿ ಹ್ವಾದನವ್ವ ನಿಮ್ಮಣ್ಣ…” ಅಂದಳು ಶಿವಗಂಗಾ, “ಸರಿಬಿಡು ಹಂಗಾರ, ಅಲ್ಲಿ ಸಾವ್ಕಾರ್‍ತಿ ಚಂದಮ್ಮ ಬಿಸಿ ಬಿಸಿ ಬಾನಾ ಕೆನಿ ಮಸರಾ ನ್ಯಾರಿ ಮಾಡಸ್ತಾಳ ಬಿಡು. ಇಲ್ಲಿ ನಿನ್ ತೊಂಗಳ ರೊಟ್ಟಿ ಯಾಕ ತಿಂತಾನೇ ನಮ್ಮಣ್ಣ…….” ಅಂತಂದು ಕಿಸಕ್ಕನೆ ನಕ್ಕಳು. ಶಿವಗಂಗಾ ಏನೂ ತಿಳಿಯದೆ ಮಿಟಿ ಮಿಟಿ ಅವಳ ಮಾರಿ ನೋಡಿದಳು. “ಸುಮಕ್ಕಿರ್‍ರೇ ಭೋಸಡೇರೇ…… ಇಲ್ಲದ್ದು ಸಲ್ಲದ್ದು ಹೇಳಿ ಪೋರೀಗಿ ಗಾಬರಿ ಹುಗಸಿಬ್ಯಾಡ್ರಿ….. ಮಲ್ಲೇಶಿ ಅಲ್ಲಿ ಸಾವ್ಕಾರ ಮನ್ಯಾಗ ಉಂಡೇ ದುಡೀಲಕ್ಕೆ ಅದಾನಲ್ಲ, ಉಣಸ್ತಾರ, ಅವರೇನು ಬಿಟ್ಟಿಕೊಳಾ ಹಾಕ್ತಾರೇನು ಇವನಿಗಿ? ಹಗಲಾರಾತರಿ ಮೈ ಮುರ್‍ದು ದುಡಸ್ಗೋತಾಳಕಿ ಚಂದಮ್ಮ ಸಾವ್ಕಾರ್‍ತಿ ಸುಮ್ಮನೇ ಯಾರೂ ಆಳಮಕ್ಕಳಗಿ ಉಣಸಾದೂ ತಿನಸಾದೂ ಮಾಡಂಗಿಲ್ಲಂತ ತಿಳ್ಕೋರಿ….” ಕಾಳವ್ವ ಜಬರಿಸಿದಳು. “ನೀ ಅನ್ನಾದೂ ಖರೇನೇ ಅದಾನೇ ಅತ್ತೀ……. ನಾವೂ ಅದೇ ಅನ್ನಾದೊ…. ಸುಮ್ಮ ಸುಮ್ಮನೇ ಯಾರೂ ಅಳಮಗನಿಗಿ ಉಣಸಂಗಿಲ್ಲಂತೆ….” ಅಂದು ಮುಗಿನ್ಯಾಗೇ ನಕ್ಕಳು ಶಾಣವ್ವ. “ರಾತರಿ ಉಣ್ಣಾಕ ಮನೀಗೇ ಬರ್‍ತಿನಂದಾನವ್ವ ನಿಮ್ಮಣ್ಣ. ಈಸುದಿನ ಒಬ್ಬಾಂವ ಇದ್ದನು. ಅಲ್ಲೇ ಉಣತಿದ್ದನಂತ ಕಾಣಸ್ತದ. ಈಗ ನಾ ಬಂದೀನೆಲ್ಲ. ಅವನ ಹೊಟ್ಟಿ ಬೆನ್ನಾ ನೋಡಾದು ನನ್ ಧರ್‍ಮಾ ಅಲ್ಲೇನು? ರಾತ್ರಿ ನಾ ಬಿಸಿ ಅಡಗಿ ಮಾಡ್ತೀನೆವ್ವ ಅವನಿಗೆ.” ಶಿವಗಂಗಾ ಕಕ್ಕುಲತೆಯಿಂದ ಹೇಳಿದಳು “ಹೊಯಿಂದೇ ಅತ್ತಿಗೀ… ಆಟು ಮಾಡು ಮತ್ತ,” “ಇಕಿಯೆಲ್ಲಾ ಮಾಡ್ತಾಳೇ ಶಾಣವ್ವ….. ಆದರೆ ಅಲ್ಲಿ ಸಾವ್ಕಾರ ಮನ್ಯಾಗ ರುಚಿ ರುಚಿ ಮೆತ್ತ ಮೆತ್ತಗೆ ತಿಂದ ಬಾಯೀಗಿ ಇಕಿನ ರೊಟ್ಟಿ ಪಲ್ಯ ರುಚಿ ಹತ್ತ ಬೇಕಲ್ಲವ್ವ……ಚಂದಮ್ಮ ಸಾವ್ಕಾರ್‍ತಿ ಕೈ ಅಡಗಿ ಅಂದ್ರೆ ಆಮರುತ್ತಿದ್ದಂಗಿರ್‍ತದ! ಅದಕ್ಕಂತೀನೀ…..” ನಾಗವ್ವ ದನಿಯೆಳೆದಳು. “ಸಾವ್ಕಾರ್‍ತಿ ತನ್ನ ಅಡಗ್ಯಾಗ ಬೆಲ್ಲಾ ಕೊಬ್ಬರಿ ಹಾಕದರ ಮನಿ ಹೆಣ್ತಿ ತನ್ನ ಅಡಗ್ಯಾನ ಪಿರೀತಿ ಪಿರೇಮ ಹಾಕಿ ಮಾಡ್ತಾಳಗ ನಾಗೀ…. ಹೆಣ್ತಿ ಕೈ ಅಡಗಿ ರುಚಿ ಮುಂದ ಬ್ಯಾರೆ ಯಾ ಹೆಂಗಸರೆ ಕೈ ಅಡಗಿನೂ ರುಚಿ ಹತ್ತಂಗಿಲ್ಲ ಗಂಡದೇರಿಗೀ…… ಸುಮ್ಕಿರು.” ಕಾಳವ್ವ ಮಾತು ಮುಗಿಸಿದಳು. “ಆಟು ಮಾಡು ಶಿವಗಂಗಾ….. ಸಾವ್ಕಾರ ಮನ್ಯಾಗ ಏನಿದ್ದರನೂ ಸೈ ರುಚಿ ಅಂತ ಬೆಲ್ಲದಡಗೀನೇ ಸಿಗ್ತದ ನಿನ್‌ ಗಂಡಗ, ನೀ ಇಲ್ಲಿ ಕೋಳಿ, ತತ್ತಿ, ಖಂಡಾ, ಮೀನಾ ಅಂತ ಮಸಾಲಿ ಹಾಕಿ ನಮ್ಮಂದೀ ಅಡಗಿ ಮಾಡು, ಅಣ್ಣ ನಿನ್ ಕಡಿನೇ ಉಣ್ಣಾಕ ಬರ್‍ತಾನ ನೋಡು.” “ಹೊಯಿಂದೇ ಮಗಾ…… ಏಟಾದರನೂ ನಮ್ಮನ್ಯಾಗಿನ ರೊಟ್ಟಿ, ಬ್ಯಾಳೀನೇ ಕಡೀಗಿ ಹತ್ತತಾದ್ರೆ…… ಬ್ಯಾರೆ ಮಂದಿ ಮನೀ ಹೋಳಗಿ ಹುಗ್ಗಿ ಏಸು ದಿನದ್ದು?” ನಾಗವ್ವ ತನ್ನ ಕೂಸು ಅಳಕತ್ತಾದಂತೇಳಿ ತನ್ನ ಗುಡಿಸಲಿಗಿ ಓಡಿದಳು. “ಒಲಿಮ್ಯಾಲ ಬ್ಯಾಳಿಗಿಟ್ಟು ಬಂದೀನೇ ಅತ್ತಿಗೀ….. ಹೊತ್ತತೋ ಏನ್ ಮಣ್ಣೂ ಯವ್ವಾ…..” ಅಂತನ್ನುತ್ತ ಎದ್ದು ಎಡ್ಡೇ ಜಿಗಿತಕ್ಕೆ ಶಾಣವ್ವ ತನ್ನ ಗುಡಿಸಲು ಹೊಕ್ಕಳು. “ಯಾಕೋ ತೆಲಿ ಕಡ್ಲಿಕತ್ತಾದ. ಹೇನಾಗ್ಯಾವೇನೋ ಒಂದೀಟು ನೋಡೇ ಮಗಾ……” ಕಾಳವ್ವ ಕೇಳಿದಾಗ ಶಿವಗಂಗಾ ಅವಳ ಹಿಂದೆ ಬಂಡೆಗಲ್ಲಿನ ಮ್ಯಾಲೆ ಕುಂತು ಕೂದಲು ಬಿಚ್ಚಿ ಪಟ ಪಟನೆ ಝಾಡಿಸಿ ಹೇನು ನೋಡತೊಡಗಿದಳು.

ಇದನ್ನು ಓದಿದ್ದೀರಾ?: ನೇಮಿಚಂದ್ರ ಅವರ ಕತೆ | ಹೊಸ ಹುಟ್ಟು

ಸೂರ್ಯ ತಾಯಿ ಹೊಟ್ಟ್ಯಾಗ ಹೋಗೋ ಮುಂದ ಶಿವಗಂಗಾ ಮನೆ, ಅಂಗಳ ಕಸ ಉಡುಗಿದಳು. ಭಾಂವಿಯಿಂದ ನೀರು ಸೇದಿ ತಂದು ಅಂಗಳದಲ್ಲಿಯ ಒಗ್ಯಾ ಕಲ್ಲಿನ ಬಾಜು ಕುಂತು ಗುಲಾಬಿ ಬಣ್ಣದ ಘಮ್ಮೆನ್ನುವ ಸಾಬೂನು ಹಚ್ಚಿ ಕೈಕಾಲು ಮಾರಿ ತೊಳ್ಕೊಂಡು ಬಂದು ಕನ್ನಡಿಯ ಮುಂದೆ ಕುಂತಳು, ಮನ್ನಿ ಮದಿವ್ಯಾಗಂತ ತವರವರು ಕೊಟ್ಟಿದ್ದ ಅಂಗೈ ಅಗಲದ ಕನ್ನಡಿ, ಹಣಗಿ ಮುಂದಿಟ್ಟುಕೊಂಡಳು. ಗಮನದೆಣ್ಣೆ ಸವರಿಕೊಂಡು ಕೂದಲನ್ನು ಥಳಥಳ ಹೊಳೆಯುವಂತೆ ತಲೆ ಕೆರ್‍ಕೊಂಡು ತುರುಬು ಕಟ್ಟಿಕೊಂಡಳು. ಮಾರಿಗೆ ಪೋಡರು ಹಚ್ಚಿಕೊಂಡು ಹಣೆಯ ನಡುವೆ ಗುಂಡು ಕುಂಕುಮ ಇಟ್ಟುಕೊಂಡು ಕನ್ನಡಿಯಲ್ಲಿ ಮಾರಿ ನೋಡಿಕೊಂಡು ತೃಪ್ತಿಯಿಂದ ನಕ್ಕಳು. ಅಷ್ಟರಲ್ಲಿ ಹೊತ್ತು ಮುಳುಗಿತು. ಕೆಂಪಂಚಿನ ಗಿಣಿ ಹಸುರಿನ ಸೀರೆಯುಟ್ಟು ಕೆಂಪು ಚುಕ್ಕೆಯ ಕುಪ್ಪಸ ತೊಟ್ಟುಕೊಂಡಳು. ಅಷ್ಟರಲ್ಲಿ ಹೊತ್ತು ಮುಳುಗಿತು. ಎದ್ದು ಬಂದು ಒಲೆ ಪುಟು ಮಾಡಿ ಅಡಿಗೆಗಿಟ್ಟಳು. ಸಣ್ಣಕ್ಕಿಬಾನ, ತತ್ತಿಪಲ್ಯ ಮಾಡಿದಳು, ನುಣ್ಣಗೆ ಹಿಟ್ಟು ನಾದಿಕೊಂಡು ನಾಕು ರೊಟ್ಟಿಮಾಡಿ ಬುಟ್ಟಿಯಲ್ಲಿ ಮುಚ್ಚಿಟ್ಟಳು. ಎದ್ದು ಹೊರಗೆ ಬಂದಾಗ ಆಗಲೇ ಅಂಗಳದ ನಡುವೆ ಕತ್ತಲೆ ದಟ್ಟೈಸುತ್ತಿತ್ತು. ಒಳನಡೆದು ಹಚ್ಚಿಟ್ಟಿದ್ದ ಕಂದೀಲು ತಂದು, ಬತ್ತಿ ಏರಿಸಿ ಗುಡಿಸಲ ಬಾಗಿಲ ಮೊಳೆಗೆ ಸಿಕ್ಕಿಸಿದಳು. ಬತ್ತಿ ಸೊಲುಪು ಸಣ್ಣ ಮಾಡಿ ಅಲ್ಲೇ ಕುಂತು ಗಂಡನ ದಾರಿ ಕಾಯ ತೊಡಗಿದಳು.

ಹೊಯಿಂದೂ….. ಆ ಶಾಣಮ್ಮ ಹಂಗ್ಯಾಕ ಹೇಳದಳು ಅಂತೀನೀ…… ಚಂದಮ್ಮ ಸಾವ್ಕಾರ್‍ತಿ ಬಿಸಿ ಬಿಸಿ ಅಡಗಿ ಮಾಡಿ ಉಣ್ಣಾಕ ಕುಡ್ತಾಳಂತ ನನ್ ಗಂಡಗ! ನನ್ ಗಂಡೇನೋ ಅವರ ಮನಿ ಜೀತದಾಳು ಖರೇ. ಹೊಟ್ಟಿಬಟ್ಟಿಯೆಲ್ಲಾ ಮಾತಾಡೇ ದುಡೀಲಕ್ಕ ನಿಂತಾನಂದ ಮ್ಯಾಲ ನ್ಯಾರಿ, ಮಧ್ಯಾಣದ ಊಟಾ, ಸಂಜೆ ಊಟಾಯೆಲ್ಲಾ ಅವರೇ ಕುಡ್ತಾರಂಬಾದನೂ ವಾಜಮಿ ಅದಾ.. ಅದರ ಯಾರರೆ ಸಾವ್ಕಾರು ಬಿಸಿ ಬಿಸಿ ಆಡಗಿ ಮಾಡಿ ಆಳ ಮಕ್ಕಳಿಗ ಉಣ್ಣಾಕ್ಕಿಕ್ಕತಾರೇನು? ಪಾಪ……… ಆ ಚಂದಮ್ಮ ಸಾವ್ಕಾರ್‍ತಿ ಭಾಳ ಛಲೋ ಮನಶ್ಯಾಳಿದ್ದಿರ್‍ಬೇಕು ದೊಡ್ಡ ಮನದಕ್ಕಿ ಹಾಳ ಕಾಣಸ್ತದ. ಸತ್ತ ರಂಡ ಮುಂಡೆಂತ. ಮನ್ಯಾಗೆಲ್ಲಾ ಅಕಿಂದೇ ದೇಕರೇಖಿ ಕಾರಬಾರ ಎಲ್ಲಾ……. ಗಂಡ ಸತ್ತರ ಹೆಂಡ್ರು ಹುಷಾರಾಗ್ತಾರಂತ…… ಆಗೇ ಬೇಕಲ್ಲ. ಹೊಲಾ ತ್ವಾಟಾ, ಆಳು ಕಾಳು ಮನಿಮಟಾ ಅಂತ ದೊಡ್ಡ ಬಾರದನಿ ಇರಾಮನಿ, ಸಾವ್ಕಾರರ ಮನಿ ಅಂದ್ರೇನು ಸುಮ್ಮನಾಗ್ತಾದಾ? ಯಲ್ಲಾ ಅಕಿನೇ ನಿಂತು ನೋಡ್ಕೋತಾಳಂದ್ರ ಒಳೇ ಭಾದ್ದೂರ ಹೆಂಗಸೇ ಸರಿ. ಮಕ್ಕಳು ಮರಗಳು ಅವಾನೋ ಇಲ್ಲೋ ಅಂತೀನಿ…… ಹ್ಯಾಂಗಿರ್‍ಲಿಕ್ಕಿಲ್ಲ?… ಹಿಂಗೆ ಯೋಚನೆ ಮಾಡುತ್ತ ಕುಂತಿದ್ದಾಗ ಕಾಳವತ್ತಿಯ ದನಿ ಕೇಳಿಬಂತು. “ಕಂದೀಲಿಟಗೊಂಡು ಕುಂತು ಗಂಡನ ದಾರಿ ನೋಡ್ಲಕತ್ತಿದ್ದೇನಗ ಪೋರಿ? ಅಂವಾ ಈಟು ಜಲ್ದಿ ಬರಂಗಿಲ್ಲೇ ಶಿವೀ…… ಕಂದೀಲಿನ ಎಣ್ಣೆ ದಂಡ, ನಿ ಉಂಡು ದೀಪಾ ಆರ್‍ಸಿ ಮಕ್ಕೊ ಹೋಗು, ಅಂವಾ ಬಂದಾಗೇಳಾಕೆಂತೀ….. ಒಬ್ಬಕ್ಕಿನೇ ಅಂಗಳದಾಗ ಯಾಕ ಕೂಡ್ತಿ……” ತನ್ನ ಗುಡಿಸಲು ಹೊರಗೆ ಬಂದು ಕಾಲುಮಡಿದು ವಾಪಸ್ಸು ಹೊಂಟಕ್ಕಿ ದನಿಯೆತ್ತರಿಸಿ ಕೇಳಿದಳು.

ಇದನ್ನು ಓದಿದ್ದೀರಾ?: ಜಯಂತ ಕಾಯ್ಕಿಣಿ ಅವರ ಕತೆ | ಅಮೃತಬಳ್ಳಿ ಕಷಾಯ

“ಜಲ್ದಿ ಬರ್‍ತಿನಂದಾನತ್ತೀ…. ಅಂವಾ ಬರಾಣಾನೇ ಉಂಡರಾಯ್ತಂತ ಕುಂತೀನೀ……. ನಿಂದು ಉಣಾದಾಯ್ತೇನು?” ಕೇಳಿದಳು ಶಿವಗಂಗಾ. “ಆಯ್ತು ಮಗಾ…… ನಂದೊಬ್ಬಕ್ಕಿಂದೇನು. ಈ ಕೇರ್‍ಯಾಗಿನ ಎಲ್ಲಾ ಮಂದಿ ಉಂಡು ಮಕ್ಕೋಲಕತ್ತಾರ ರಾತ್ರ್ಯಾಗ್ಯಾದವ್ವ….. ನೀ ಒಳಗ ಹೋಗು…..” ಅಂತ್ಹೇಳುತ್ತ ಕಾಳವ್ವ ತನ್ನ ಮನೆ ಸೇರಿ ಗುಡಿಸಲ ಬಾಗಿಲು ಮುಚ್ಚಿಕೊಂಡಳು.

ಹೊಯಿಂದೂ.. ರಾತ್ರೀನೂ ಬೆಳೀಲಕತ್ತಿತ್ತು. ಕೇರಿ ಮಂದೆಲ್ಲಾ ಉಂಡು ಮಕ್ಕೊಂಡಿರ್‍ಬೇಕು……. ಯೆಲ್ಲಾ ಸಬ್ಬಾಗಿತ್ತು. ಎಲ್ಲಿ ಏನೂ ಆವಾಜು ಇರಲಿಲ್ಲ. ದೂರದ ತಿಪ್ಪೆಯಲ್ಲಿ ನಾಯಿಯೊಂದು ತನ್ನ ಮರಿಗಳನ್ನು ಮೊಲೆಗೆ ಹಾಕಿಕೊಂಡು ಕುಂಯಿಗುಡುತ್ತ ತಾಯ್ತನದ ಸುಖ ಅನುಭವಿಸುತ್ತಿತ್ತು. ಅಂಗಳದ ಮರಗಳ ಸಂದಿಗೊಂದಿಗಳಲ್ಲಿ ಹಕ್ಕಿ ಪಕ್ಕಿಗಳು ರೆಕ್ಕೆ ಬಡಿದು ಸುಮ್ಮನಾಗಿದುವು. ಗಾಳಿಯೂ ತೂಕಡಿಸುತ್ತಿತ್ತು. ಅಂಗಳದ ಆ ಕೊನೆಯ ದಾರಿಗೆ ಕಣ್ಣು ಕೊಟ್ಟು ಶಿವಗಂಗಾ ಹಂಗೇ ಕುಂತಿದ್ದಳು. ಕಂದೀಲಿನ ಬತ್ತಿ ಹೊಯ್ದಾಡಿ ಹೊಯ್ದಾಡಿ ಆರಿಹೋಗಿತ್ತು….. ಅಲ್ಲ… ಈಟು ರಾತರೀತನಕಾ ಆ ಸಾವ್ಕಾರ ಮನ್ಯಾಗರೆ ಏನು ದಗದಾಯಿರ್‍ತಾದಂತೀನೀ……. ಊರಾಕೇರ್‍ಯಾಗಿನ ಮಂದೆಲ್ಲಾ ಉಂಡೂತಿಂದೂ ಹಾಸಗ್ಯಾಗ ಮಕ್ಕೊಂಡು ಗೊರಕಿ ಹೊಡೀಲಕತ್ತಾರ, ಊರಂಬೋ ಊರೆಲ್ಲಾ ನಿದ್ದ್ಯಾಗ ಗಪಚಿಪ್ಪಾಗ್ಯಾದ ಇಂವಾ ಯಾಕ ಹಿನಾ ಬರವೊಲ್ಲನೂ……ಅಂತ ಶಿವಗಂಗೆಯ ತೆಲ್ಯಾಗ ಹುಳುಗೋಳು ಓಡ್ಯಾಡ್ಲಕತ್ತಿದ್ದುವು. ಹೊಟ್ಟ್ಯಾಗ ಬ್ಯಾರೆ ಹಸು ಆಗಿ ಗೊರ್‍ರ ಗೊರ್‍ರಂತ ಅವಾಜಾಗಲಕತ್ತಾದ ಕೋಡಿ…..ಮಲ್ಲೇಶಿ ಜತೀನೇ ಉಣ್ಬೇಕಂತ ಕುಂತೀನೀ….. ಮಾಡಿಟ್ಟ ಅಡಗಿಯೆಲ್ಲಾ ಆರಿ ಅರಗಲ್ಲಾಯ್ತು…. ಅಂತನ್ನೋತಿರುವಾಗಲೇ ಅವಳಿಗೆ ಜಂಪು ಹತ್ತಿದಂಗಾಗಿ ಕಣ್ಣಿವೆ ಕೂಡಿಕೊಂಡುವು…..

ಯಾರೋ ಹಿಡ್ಕೊಂಡು ಎಳದಾಡಿದಂಗಾಗಿ ಅವಳಿಗೆ ತಟ್ಟನೆ ಎಚ್ಚರಾಯಿತು. ಕಣ್ಣು ತೆರೆದರೆ ಹತ್ತಿರವೇ ನಿಂತಿದ್ದ ಗಂಡಾಕೃತಿ! ಹೆದರಿ ಯಪ್ಪೋ….. ಅಂತ ಇನ್ನೇನು ಚೀರುವುದರಲ್ಲಿದ್ದಳು. ಆಟರಲ್ಲಿ ಆಕೃತಿ “ಏss ನಾಯಿದ್ದೀನೇ ಶಿವೀ…… ಹಿಂಗ್ಯಾಕ ಕುಂತ ನಿದ್ದಿ ಮಾಡ್ಲಕತ್ತೀದಿ? ನಡಿ ಒಳಗ…..” ಅಂತ ಹೇಳಿತು. ಶಿವಗಂಗಾ ಕುಂತೇಯಿದ್ದಳು. “ಇಟ್ಯಾಕ ತಡಾ ಮಾಡ್ದಿ ನೀನೂ? ಊರೆಲ್ಲಾ ಉಂಡು ಮಕ್ಕೊಂಡಾಯ್ತು. ಈಗ ಮುಗೀತೇನು ನಿನ್ ಕೆಲಸಾ?” ಅಂತ ಅವಳು ಸಿಟ್ಟಿನ ಮಿಲಾವಟಿನ ದನಿ ಹಾಕಿದಳು. “ಹೂಂ…… ಅಲ್ಲಿ ಕೆಲ್ಸಾ ಬಾಳಿರ್‍ತಾದಂತ ಹೇಳೀನೆಲ್ಲ ನಿನಗದೆಲ್ಲಾ ತಿಳೆಂಗಿಲ್ಲ…… ಬಾ ಒಳಗ…” ಅಂತ ತಾನು ಒಳ ನಡೆದನು. ಒಳಬಂದವನೇ ಮೂಲೆಯಲ್ಲಿ ಸುಳ್ಳಿಸುತ್ತಿಟ್ಟಿದ್ದ ಸಿಂದಿಚಾಪೆ ಎಳೆದು, ಝಾಡಿಸಿ ಹಾಸಿಕೊಂಡನು. ಕೌದಿ ಹೊಚ್ಚಿಕೊಂಡು ಮಲಗೇ ಬಿಟ್ಟನು. “ಯಾಕ ರೊಟ್ಟಿ ಉಣಂಗಿಲ್ಲೇನು? ಹಂಗೇ ಮಕ್ಕೊಂಡಿ?” ಕೇಳಿದಳು. “ನಂದು ಸಾವ್ಕಾರ ಮನ್ಯಾಗ ಊಟಾ ಆಗ್ಯಾದೇ…..” ಮತ್ತರಾತರಿ ಇಲ್ಲೇ ಬಂದು ನನಗೂಡ ಉಣ್ತಿನೆಂದಿದ್ದಿ? ನಿನ್ ಸಲ್ಯಾಕ ರೊಟ್ಟಿ ತತ್ತಿಪಲ್ಲಾ, ಸಣ್ಣಕ್ಕಿ ಬಾನಾ ಮಾಡಿಟ್ಟು ಕಾಯ್ಕೋತ ಕುಂತೀನಿ…… ನಾನೂ ಉಂಡಿಲ್ಲ…… ಬಾ ಏಳು. ಇಬ್ಬರೂ ಕೂಡಿ ಉಣಾಮಂತ” ಕರೆದಳು. “ನೀ ಉಣ್ಣೆ……ನನಗ ಹಸಿವಿಲ್ಲ……” ಅಂತೇಳಿದವನೇ ಕೌದಿಯ ಮುಸುಕಿನಲ್ಲಿ ನಿದ್ದೆಗಿಳಿದನು. ಶಿವಗಂಗಾನ ಹಸಿವು ಇಂಗಿತು! ರೊಟ್ಟಿ ಬುಟ್ಟಿಪಲ್ಯಾದ ಗಡಿಗೆಯನ್ನು ಇಕ್ಕರಸಿದಳು. ತೆಂಬಗೆಯೆತ್ತಿ ಗಟಗಟನೆ ನೀರು ಕುಡಿದು ಬಂದು ಚಾಪೆಯ ಮೇಲೆ ಅಡ್ಡಾದಳು. ಮಲ್ಲೇಶಿ ಸಣ್ಣಗೆ ಗೊರಕೆ ಹೊಡೆಯುತ್ತಿದ್ದ, ಅವಳ ಕಣ್ಣುಗಳು ನೀರು ತುಂಬಿದುವು.

ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ

ಗಂಡ ಮೂರು ಸಂಜಿ ಹೊತ್ತಿನ್ಯಾಗೇ ಮನೀಗಿ ಬರ್‍ತಾನ. ಭಾಳಂದ್ರ ಕತ್ತಲಾದಮ್ಯಾಲಂತೂ ಬಂದೇ ಬರ್‍ತಾನ. ಇಬ್ಬರೂ ಕೂಡಿ ಒಂದೇ ಗಂಗಾಳದಾಗ ಉಣಬೇಕು. ಒಂದೇ ಹಾಸಾಗ್ಯಾಗ ಮೈಗಿ ಮೈ ಬೆಸ್ಗೊಂಡು ಮಕ್ಕೋಬೇಕು, ನನ್ ಮಲ್ಲೇಶಿ ಭಾಳೆ ಖಂಬೀರ ಗಂಡಸ ಹನಾ, ನನಗ ಮುರ್‍ದು ಮುಟಗಿ ಮಾಡ್ತಾನ, ಮೈಯಾಗಿನ ನರಗೋಳದಾಗೆಲ್ಲಾ ನಶಾ ಬರಸ್ತಾನ, ಬೆನ್ನ ಹುರ್‍ಯಾಗ ಚುರು ಚುರು ಅಂತ ಬೆಂಕಿ ಹೊತ್ತಸಿ, ಅನಾಮತಾಗಿ ನನಗೆ ಎತಗೊಂಡು ಆಕಾಸಕ್ಕ ಹಾರ್‍ತಾನ….. ಚಂದ್ರಾಮನೂರಿಗಿ ಒಯ್ದು ಬೆಳದಿಂಗಳದಾಗ ಈಸಲಾಡಸ್ತಾನ, ಚಿಕ್ಕ್ಯಾಗ ಓಡ್ಯಾಡಸ್ತಾನ. ಆಕಾಸದ ನೀಲದಹಣ್ಣಿನ ಬಣ್ಣದ ಗಾದಿಮ್ಯಾಲ ಮಲಗಿಸಿ ನನ್ ಮೈತುಂಬಾಯೆಲ್ಲಾ ಮುತ್ತಿನ ಜಾಳಗಿ ನೇಯ್ತಾನ……. ಅಂತ ಏನೇನೆಲ್ಲಾ ಕನಸು ಕಟ್ಟಿದ್ದ ಶಿವಗಂಗಾ ಗಂಡನ ಗೊರಕೆಗೆ ಕಣ್ಣೀರಿಟ್ಟಳು. ದುಕ್ಕಸಿ ಅತ್ತಳು. ಅತ್ತು ಅತ್ತೂ ಕಣ್ಣೀರು ಇಂಗಿದ ಎಟೊತ್ತಿನ ನಂತರ ನಿದ್ದೆ ಅವಳ ಕಣ್ಣುಗಳ ನಡುವೆ ತೂಗಾಡಿತು.

ಮುಂಜಾನೆದ್ದಾಗ ಮಲ್ಲೇಶಿ ಮಾಮೂಲಾಗೇ ಇದ್ದ. ಮೈತೊಳ್ಕೊಂಡು, ಹೆಣ್ತಿ ಕಾಸಿಕೊಟ್ಟ, ಚಾದ ಗಂಗಾಳೆತ್ತಿ ಕುಡಿಯುವಾಗ ಅವನ ನೋಟ ಅವಳ ಮಾರಿಯ ಮೇಲೆ ಸರಿಯಿತು. ಉಬ್ಬಿ ಕೆಂಪಗಾಗಿದ್ದ ಕಣ್ಣುರೆಪ್ಪೆ, ಸಿಟ್ಟಿನಿಂದ ದುಮುಗುಟ್ಟುವ ಮಾರಿ, ಅಳುತಡೆಯುತ್ತಿರುವ ತುಟಿಗಳನ್ನು ಕಂಡು ಅವನ ಮನಸು ಕರಗಿತು. ಚಾ ಕುಡಿದು ಗಂಗಾಳ ಕೆಳಗಿಟ್ಟನು. ಅವಳನ್ನು ತೆಕ್ಕೆಗೆಳೆದುಕೊಂಡು ರಂಬಿಸಿದನು. ಒಡ್ಡು ಒಡೆದಂತೆ ಅವಳ ಅಳು ನುಗ್ಗಿತು. ಅವನೆದೆಗೆ ಮಾರಿಯಿಟ್ಟು ಬಿಕ್ಕಿ ಬಿಕ್ಕಿ ಅತ್ತಳು. ಅವಳನ್ನು ಸಮಾಧಾನ ಮಾಡಬೇಕಾದರೆ ಅವನಿಗೆ ಸಾಕಾಗಿ ಹೋಯಿತು.

“ಶಿವೀ……. ಇವತ್ತ ನಮ್ಮ ಸಾವ್ಕಾರ್‍ತಿ ನಿನಗ ಕರ್‍ಕೊಂಡು ಬಾ ಅಂದಾಳ, ನೋಡ್ತಾಳಂತಕಿ ನಿನಗ, ಸಂಜಿಮುಂದ ತಯಾರಾಗಿರು. ನಾ ಬಂದು ಕರ್‍ಕೊಂಡೋಗ್ತಿನಿ…” ಅಂದನು ಎಲ್ಲ ಮುಗಿದ ಮ್ಯಾಲೆ ಮಲ್ಲೇಶಿ, ಶಿವಿ ಸಿಡುಕಿದಳು. “ನನಗೇನು ನೋಡ್ತಾಳಂತ ನಿನ್ ಸಾವ್ಕಾರ್‍ತಿ? ನಾನೂ ಆಕಿನಂಗೆ ಒಬ್ಬ ಹೆಣ್ಣ ಹೆಂಗಸಿದ್ದೀನಿ…..” ಅಂದಳು. “ಹಾಂಗಲ್ಲೇ ಏಟಾದರನೂ ಆಕಿ ನಮಗ ಅನ್ನಾ ಕುಡಾ ಧಣಿ ಹಳಾ…… ಆಳ ಮಕ್ಕಳ ಮದಿವ್ಯಾದ ಮ್ಯಾಲ ಅವರೆಲ್ಲಾ ತಮ್ಮೆಂಡ್ರಿಗಿ ಕರ್‍ಕೊಂಡು ಬಂದು ತೋರಸ್ತಾರ, ನೀನೂ ನಡಿ. ನಮ್ಮ ಮದಿ ಖರ್ಚಾಯೆಲ್ಲಾ ಸಾವ್ಕಾರ್‍ತಿನೇ ಕೊಟ್ಟಾಳ, ನಿನಗ್ಗೊತ್ತಿಲ್ಲ ಶಿವೀ….. ಚಂದಮ್ಮ ಸಾವ್ಕಾರ್‍ತೀದೂ ಭಾಳ ದೊಡ್ಡ ಮನಸ್ಸದಾ……” ಅಂದನು. “ಇದ್ದಿರ್‍ಬೇಕು ಮತ್ತ, ಗಂಡಸತ್ತ ರಂಡ ಮುಂಡೆಂದು ಪಾಪ…… ಅದ್ದಾವಯಾ ದಾಟಿರ್‍ಬೇಕಲ್ಲ ಅಕಿಗಿ?” “ನೀನೇ ನೋಡಾಕೆಂತ ಸಂಜೀಕಿ…. ತಯಾರಾಗಿರು, ನಾ ಬರ್‍ತೀನಿ…” ಅಂತೇಳಿ ಮಲ್ಲೇಶಿ ಹೊಂಟು ಹ್ವಾದನು.

ಕೆಂಪು ಬಣ್ಣದ ಜರದಂಚಿನ ಸೇರೆಯುಟ್ಟು ಹಸಿರು ಬಣ್ಣದ ಕುಪ್ಪಸ ತೊಟ್ಟು ಶಿವಗಂಗಾ ತಯಾರಾದಳು, ಬಣ್ಣ ತುಸು ಕಪ್ಪು ಆಟೀ, ಹಾಂಗ ನೋಡಿದ್ರ ಶಿವಗಂಗಾ ಚಲುವಿಯೇ, ಬಿಸಿಲು ಬಾಡುತ್ತ ಸೂರ್ಯ ಮುಪ್ಪಿಗೆ ತಿರುಗುತ್ತಿರುವಾಗ ಮಲ್ಲೇಶಿ ಬಂದನು, ಹೆಂಡತಿಯನ್ನು ಕರ್‍ಕೊಂಡು ಸಾವ್ಕಾರರ ಮನೆಗೆ ನಡೆದನು.

ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್‌ ಕುಂಞಿ ಅವರ ಕತೆ | ಒಂದು ತುಂಡು ಗೋಡೆ

ಪಡಸಾಲೆಯ ಜಮಖಾನೆಯ ಮೇಲೆ ನಡುಗಂಬಕ್ಕೆ ಬೆನ್ನುಕೊಟ್ಟು ಸಾವ್ಕಾಕಾರ್‍ತಿ ಚಂದಮ್ಮ ಕುಂತಿದ್ದಳು, ತಲೆಬಾಗಿಲು ದಾಟಿ, ಝೇಳಜಿ ನಡುವಿನಿಂದ ಇವರು ಒಳಗಿನ ಅಂಗಳಕ್ಕೆ ಬಂದು ಪಡಸಾಲೆಯ ಸಿಡಿಗಟ್ಟಿಯ ಬಾಜು ನಿಂತರು. “ಸಾವ್ಕಾರ್‍ತೀ……” ಮಲ್ಲೇಶಿ ಕರೆದನು ಮೆಲ್ಲಗೆ, ಚಂದಮ್ಮ ಗೋಣು ತಿರುಗಿಸಿದಳು. “ಯಾರು ಮಲ್ಲೇಶಿಯೇನು? ಹೆಣ್ತೀಗಿ ಕರ್‍ಕೊಂಡು ಬಂದ್ಯಾ… ಬರ್‍ರಿ….. ಕಕಾಡಿ ಬರ್‍ರಿ ಪಡಸಾಲ್ಯಾಗ” ಚಂದಮ್ಮ ಗತ್ತಿನಿಂದ ಕರೆದಳು. ಇಬ್ಬರೂ ಪಡಸಾಲೆಯಲ್ಲಿ ನೆಲದ ಮ್ಯಾಲೆ ಕುಂತರು. ”ಇಕ್ಕಿನಾ ನಿನ್ನೇಣ್ತಿ? ಹೂಂ…… ಅಡ್ಡಿಲ್ಲ ಬಿಡು. ಬಣ್ಣಾ ಕರಿಸವಳಿದ್ದರನೂ ಕಣ್ಣಾಮೂಗಾ ನೆಟ್ಟಗಾವ… ಏನೂ ನಿನ್ನೆಸ್ರು?” ಕೇಳಿದಳು. ಶಿವಗಂಗಾಗೆ ತುಸು ಗಾಬರ್‍ಯಾದಂಗಾಯ್ತು. ಹೊಸ ಊರು, ಹೊಸ ಜಾಗ, ದವುಳ್ಳವರು. ಅರಮನೆಯಂಥ ಮನೆ. ಠೀವಿಯಿಂದ ಕುಂತಿದ್ದ ಸಾವ್ಕಾರ್‍ತಿ…..” ನನ್ನೆಸ್ರು ಶಿವಗಂಗಾ ಅದಾರೀ…” ಅಂದಳು ಮೆಲ್ಲಗೆ, ಹಾಗೆ ಅನ್ನುತ್ತಲೇ ಮಾರಿಯೆತ್ತಿ ಸಾವ್ಕಾರ್‍ತಿಯ ಮ್ಯಾಲೆ ನಿಗಾಹರಿಸದಳು, ಎಣ್ಣೆಗಂಪಿನ ಜರದಂಚಿನ ರೇಸಿಮೆಯ ಇಲಕಲ್ ಸೀರಿ ಉಟ್ಗೊಂಡು ಗೇಣಂಚಿನ ಕೆಂಪು ಚಿತ್ರಮಲ್ಲಿಗಿ ಕುಪ್ಪಸ ತೊಟ್ಟು ಮೈತುಂಬ ಒಡವೆ ವಸ್ತ್ರ ಇಟ್ಟುಕೊಂಡು ಕುಂತಿದ್ದ ಸಾವ್ಕಾರ್‍ತಿ ಚಂದಮ್ಮ ಫಳಾ ಥಳಾ ಹೊಳೀತಿದ್ದಳು. ಕರ್‍ರಗ ಗುಂಗಿ ಹುಳದಂತಾ ಕಣ್ಣೇನು, ನೆಟ್ಟಗಿನ ಮೂಗೇನು, ತೀಡಿದ ಹುಬ್ಬ, ತುಂಬಿದ ಗಲ್ಲಾ, ಹಾಲಿನ ಮ್ಯಾಲಿನ ಕೆನಿಯಂತಾ ಮೈಬಣ್ಣದ ಸಾವ್ಕಾರ್‍ತಿ ತುಟಿ ಒಂಕ ಮಾಡಿ ನಕ್ಕಳು ಶಿವಗಂಗಾ ಗಲಿಬಿಲಿಗೊಂಡಳು. ಇನ್ನಾ ಹರೇದಕ್ಕೇನೇ ಇದ್ದ ಸಾವ್ಕಾರ್‍ತಿ ಮಾರಿಮ್ಯಾಲ ಯಾವ ಮೂಲ್ಯಾಗನೂ ರಂಡಮುಂಡಿ ಕಳ್ಯಾನೇ ಇರಲಿಲ್ಲ! ಖಾಲಿ ಹಣಿ-ಮೊಂದು ಬಿಟ್ಟರ ಇಕಿಗ್ಯಾರು ಗಂಡಸತ್ತಕ್ಕಿ ಅನ್ವೇಕು? ಹರ್‍ಯಾ ಮಾಸುತ್ತ ನಿಂತ ಚೆಂದನ ಚೆಲುವಿನ ಗೋಧಿನಾಗರದಂಗ್ಹಾಳ ಸಾವ್ಕಾರ್‍ತೀ…… ಅಂತನ್ನಿಸಿತು ಶಿವಗಂಗಾಗೆ. “ನಮ್ಮೂರು, ನಮ್ ಮಲ್ಲೇಶಿ ಹ್ಯಾಂಗನಸ್ತು ನಿನಗಾ ಶಿವಗಂಗಾ?” ಕೇಳಿದಳು ಸಾವ್ಕಾರ್‍ತಿ. “ಯೆಲ್ಲಾ ಛೆಂದಾದವ್ವ ಸಾವ್ಕಾರ್‍ತಿ…. ನೀನೂ ಭಾಳ ಛೆಂದಿದ್ದೀ….” ಅಂದಳು. ಏನು ಹೇಳ್ಬೇಕಂತ ತಿಳಿಲಾರ್‍ದೆ. ಚಂದಮ್ಮ ಮಲ್ಲೇಶಿಯರು ಗೊಳ್ಳನೆ ನಕ್ಕುಬಿಟ್ಟರು. ಶಿವಗಂಗಾಗೆ ಹ್ಯಾಂಗ್ಯಾಂಗೋ ಆಯಿತು. ಕುಂತಲ್ಲೇ ಮಿಸುಕಾಡಿದಳು. “ಸವ್ಕಾರ್‍ತಿ….. ಇಕಿಗಿ ಮನೀಗಿ ಬಿಟ್ಟು ಬರ್ತೀನಿ…..” ಮಲ್ಲೇಶಿ ಸಾವ್ಕಾರ್‍ತಿಯ ಮಾರಿನೋಡುತ್ತ ಕೇಳಿದನು. “ನಿಂದ್ರು ಒಂದೀಟು…..” ಅಂತಂದು ಚಂದಮ್ಮ ಎದ್ದು ಒಳನಡೆದು. ತುಂಬಿದ ಮೊರತಂದು ಶಿವಗಂಗೆಯ ಮುಂದಿಟ್ಟು ಕುಂತಳು. ಮೊರದಲ್ಲಿ ಸಾಸವಿಕಣ್ಣಿನ ಇಲಕಲಸೀರಿ, ಖಣದ ಕುಪ್ಪಸ, ಉಡೆಕ್ಕಿ ಕೊಬ್ಬರಿ ಬಟ್ಟಲು, ಅಡಕಿ ಇದ್ದುವು. “ಇದು ನಮ್ಮ ಮನಿತನದ ಚಾಜಾ…… ಆಳುಮಕ್ಕಳ ಹೆಂಡ್ರಿಗಿ ಹೊಸದಾಗಿ ಮದಿಮಾಡ್ಕೊಂಡು ಬಂದಾಗ ಕುಡ್ತೀವಿ. ತಗೊ” ಅಂದಳು. ಶಿವಗಂಗಾ ಗಂಡನ ಮಾರಿ ನೋಡಿದಳು. “ತಗೊ……” ಅಂತೇಳಿ ಹೆಗಲ ಮೇಲಿನ ಶಲ್ಯ ಕೊಟ್ಟನು. ಅದರಲ್ಲಿ ಮೊರ ಬಗ್ಗಿಸಿ ಎಲ್ಲ ಕಟ್ಟಿಕೊಂಡಳು. ಮಲ್ಲೇಶಿ ಇಶಾರಾ ಮಾಡಿದನು. ಶಿವಿ ಸಾವ್ಕಾರ್‍ತಿಯ ಕಾಲಿಗೆ ಸೆಣಮಾಡಿದಳು. ‘ಹೋಗಿ ಬರ್ತೀನಿ’ ಅಂತೇಳಿ ಇಬ್ಬರೂ ಹೊಂಟರು. “ಮಲ್ಲೇಶೀ ಜಲ್ದಿ ಬಾರೋ…… ಸಂಜೀಗಿ ಕೆಲ್ಸಾ ಮುಗಸ್ಕೊಂಡು ಇಲ್ಲೇ ಉಣಾಕೆಂತೀ…………” ಚಂದವ್ವ ಅಪ್ಪಣೆ ಕೊಡುವ ಧಾಟಿಯಲ್ಲಿ ಹೇಳಿದಾಗ ಮಲ್ಲೇಶಿ ಆಗಲೆಂಬಂಗ ತೆಲಿಹಾಕಿದನು. ಶಿವಗಂಗಾನ ಹೊಟ್ಟಿಯಲ್ಲಿ ಬೆಂಕಿ ಕಡ್ಡಿ ಗೀರಿದಂಗಾಯ್ತು.

ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ

“ಹ್ಯಾಂಗಾಳ ನಮ್ ಸಾವ್ಕಾರ್‍ತಿ?” ದಾರಿಯಲ್ಲಿ ಮಲ್ಲೇಶಿ ಕೇಳಿದನು. ಶಿವಿಗೆ, “ಬೇಶ್ಯಾಳ ಬಿಡು. ಅದ್ಧಾವಯಾ ಆಗಿರ್‍ಬೇಕು ಅಕೀಗಿ ಅಂತನ್ಕೊಂಡಿದ್ದ ನಾನು. ಹಿನಾ ಆಕಿನ ಮೈಯಾಗಿನ ಹರ್‍ಯಾ ಹೊಳ್ಳಿಲ್ಲ ಬಿಡು. ಕೆಂಪಗ ಬಲ್ತ ಗಜ್ಜರಿಯಿದ್ದಂಗಾಳ ನಿನ್ ಸಾವ್ಕಾರ್‍ತಿ…..” ಶಿವಗಂಗಾ ಹೇಳಿದಳು. “ಹೂಂ….. ಸಾವ್ಕಾರನ ಸಣ್ಣ ಹೆಣ್ತಿ ಇಕಿ. ಮದಲನ ಹೆಣ್ತಿಗಿ ಮಕ್ಕಳಾಗಲಿಲ್ಲಂತೇಳಿ ಇಕಿಗಿ ಮಾಡ್ಕೊಂಡನು ಸಾವ್ಕಾರ, ಮದಿವ್ಯಾಗಿ ನಾಕೂರ್ಸಾದರನೂ ಇಕಿಗಿನೂ ಮಕ್ಕಳಾಗಲಿಲ್ಲ. ಅದೇ ಚಿಂತ್ಯಾಗೇ ಒಂದಿನಾ ಹಾಟ್‌ಫೇಲಾಗಿ ಶಿವನಪಾದಾ ಸೇರದನು ಪಾಪ…..” ಅಂತೆಲ್ಲ ಹೇಳುವಾಗಲೇ ಮನೆಯಂಗಳದಾಗ ಕಾಲಿಟ್ಟರು. “ಶಿವೀ….. ನಾ ಹೋಗಿ ಬರ್ತೀನಿ……… ನನಗೆ ಬರ್‍ಲಕ್ಕ ತಡಾ ಆಗ್ತದ, ನೀ ಉಂಡು ಮಕ್ಕೊ…. ನನ್ ದಾರಿ ನೋಡಬ್ಯಾಡ…..” ಅನ್ಕೋತೇ ಮಲ್ಲೇಶಿ ದಾವುಗಾಲು ಹಾಕುತ್ತ ತಿರುಗಿ ನಡೆದನು. ಶಿವ ಏನೋ ಹೇಳ್ಬೇಕಂತ ತಿರುಗಿ ಬಾಯಿ ತೆರೆದಾಗ ಅವನು ಮರಗಳನ್ನು ದಾಟಿ ದೂರ ಹೋಗಿದ್ದ, ಅವಳು ತೆರೆದ ಬಾಯಿ ಮುಚ್ಚುವುದನ್ನು ಮರೆತು ಹಂಗೇ ನಿಂತಿಬಿಟ್ಟಳು.

ಇದು ಹಿಂಗೇ ನಡೆಯಿತು. ದಿನಾ ಮಲ್ಲೇಶಿ ನಡುರಾತ್ರಿ ಕಳೆದ ಮ್ಯಾಲೇ ಮನೆಗೆ ಬರ್‍ತಿದ್ದ! ಒಂದೊಂದು ಸರ್‍ತಿಯಂತೂ ಬೆಳಗಿನ ಬೆಳ್ಳಿ ಚಿಕ್ಕಿ ಮೂಡಿ, ಮೂಲಿಮನಿ ಸಂಗವ್ವ ಬೀಸಲಕ್ಕೆ ಸುರುಮಾಡಿದಾಗೇ ಮಲ್ಲೇಶಿಯ ಸವಾರಿ ಮನಿಕಡಿಗಿ ಬರಿತ್ತಿತ್ತು. ದಿನಗಳು ಒಂದೊಂದಾಗಿ ಸಾಯ ತೊಡಗಿದಂಗೆಲ್ಲ ಶಿವಗಂಗೆಯ ತಲೆಯಲ್ಲಿ ಸಂಶಯದ ಹುಳುಗಳು ಒಂದಕ್ಕಡ್ಡು ಎಡ್ಡಕ್ಕೆಂಟು, ಎಂಟಕ್ಕಕ ಎಂಬತ್ತಾಗುತ್ತ ಬೆಳೆದು ಮಿದುಳು ಕೆದಕತೊಡಗಿದುವು. ಗಂಡಹೆಂಡಿರ ನಡುವೆ ಜಗಳ, ಕಿರಿಕಿರಿ ಶುರುವಾಯಿತು. ಅಳು, ಬೈಗುಳು, ಸಂಕಟಗಳು ಹೆಚ್ಚಾದುವು. ಶಿವಗಂಗಾಗೇ ದಿನವೂ ಅಳುವುದೊಂದೇ ಕೆಲಸವಾಯಿತು. ಆದರೆ ಮಲ್ಲೇಶಿ ಮಾತ್ರ ಹೆಂಡತಿಯ ಕಣ್ಣೀರು, ಸಿಟ್ಟು ಸೆಡವು, ಜಗಳಗಳ್ಯಾವುದಕ್ಕೂ ಕ್ಯಾರೆ ಅನ್ನಲಿಲ್ಲ.

ಅಂದು ಮಧ್ಯಾಣದಾಗ ಅಂಗಳದಾಗಿನ ಮರದ ನೆಳ್ಳಾಗ ಹಣೆಗೆ ಕೈಹಚ್ಚಿಕೊಂಡು ಕುಂತು ಇಚಾರಮಾಡುತ್ತಿದ್ದಾಗ ಕಾಳವ್ವ ಬಂದಳು. “ಯಾಕಗs ಶಿವೀ, ಮಾರಿಮ್ಯಲಿನ ಕಳ್ಳಾನೇ ಸತ್ತಾದಲ್ಲಗs ಪೋರೀ? ಮದಿ ಆಗಿ ಇನ್ನಾ ಛಲೋತನ್ಯಾಗಿ ಪೂರಾ ಒಂದೊರ್ಸಾಗಿಲ್ಲ, ನಿನ್ ಮಾರಿಯಂಬಾದು ಹೆಣದ ಕಳ್ಯಾಯಿಟ್ಟಾದಲ್ಲೇ ಮಗಾ…… ಏನು ಚಿಂತಿ ಮಾಡಕೊಂಡಿದ್ದೀ ಮನಕ್ಕ?” ಕುಂತು ಕೇಳಿದಳು. “ಏನಿಲ್ಲತ್ತಿ….. ನನಗೇನು ಚಿಂತ್ಯಾದ ಬಿಡು….. ಮನ್ಯಾಗಿನ ಕಾಲ ಹೊರಗಿಡಲಾರ್‍ದಂಗ ರಾಣಿ ಹಂಗ ನೋಡ್ಕೊಳ್ಳೋ ಗಂಡ ಸಿಕ್ಕಾನಲ್ಲ! ನನಗೇನೂ ಚಿಂತಿ ಕುದ್ಯಾಯಿಲ್ಲತ್ತಿ…..” ಅನ್ನುತ್ತಿರುವಾಗಲೇ ಕಣ್ಣುಗಳಲ್ಲಿ ನೀರು ದಟ್ಟೈಸಿ ದನಿ ನಡುಗಿತು. ಕಾಳವ್ವ ನಿಟ್ಟುಸಿರೆಳೆದಳು. “ನನಗೆಲ್ಲಾ ಗೊತ್ತದಾಗ ಶಿವೀ….. ಊರಿಗೇ ಗೊತ್ತಾದವ್ವ, ನಿನ್ ಗಂಡನ ಸುದ್ದಿ, ಆದರ ಹೊಸದಾಗಿ ಮದಿಮಾಡ್ಕೊಂಡು ಬಂದಕ್ಕಿ ನೀನು. ಹೊಚ್ಚ ಹೊಸಾ ಮದುಮಗಳ ಮುಂದ ಇದೆಲ್ಲಾ ಹೇಳಬಾರ್‍ದಂತ ಸುಮ್ಮಕಿದ್ದ ನಾನು……” “ಏನು ಸುದ್ದಿ ಅತ್ತಿ?” ಶಿವಗಂಗಾ ಕೇಳಿದಳು. “ಅದೇಗ……. ಮಲ್ಲೇಶಿ ಮತ್ತು ಆ ಚಂದಮ್ಮ ಸಾವ್ಕಾರ್‍ತಿ ದೋಸ್ತಿ ಸುದ್ದಿಯವ್ವ? ಗಂಡಸತ್ತ ಮ್ಯಾಲ ಅಕಿ ಒಳಗಿಂದೊಳಗೇ ಆಳುಮಗ ಮಲ್ಲೇಶಿಗಿ ಸವರಸ್ಗೊಂಡಾಳ ನೋಡು, ಇಂವಾ ಸಣ್ಣಾಂವಿದ್ದ. ಮೈಯಾಗದೇ ಹೊಸ ಹರ್‍ಯಾ ಚಿಗಿಲಕತ್ತಿತ್ತು, ಗಂಟಲ ದನಿ ಒಡ್ಡು ಬಿರಸಾಗಿ ಮಾರಿಮ್ಯಾಲ ಕುಡಿಮೀಸಿ ಚಿಗರಲಕತ್ತಿತ್ತು. ಏನೂ ಅರೀದ ಹಸಿ ಹಸಿ ಹರ್‍ಯಾದ ಪಾರಗ ಆ ಚಂದಮ್ಮ ತನ್ನ ಬಲ್ಯಾಗ ಹಾಯ್ಕೊಂಡಳು ನೋಡು. ಹೇಳವ್ರು ಕೇಳವ್ವರು ಯಾರೂ ಇರಲಿಲ್ಲ ಅಕಿಗೀ…… ಇದು ಹಿಂಗೇ ಬಿಟ್ಟದ ಪಾಡಲ್ಲ, ಈ ಪಾರ ಹಣೀಗಿ ಭಾಸಿಂಗ ಕಟ್ಗೋಲಾರ್‍ದೆ ಸಾಯಂಗದಾ ಕೋಡಿ, ಅಂತೇಳಿ ಅವನ ದೊಡ್ಡಪ್ಪ ಅಂವಗ ಮದಿ ಮಾಡದನು ನೋಡು….. ನೀ ಇನ್ನಾ ಸಣ್ಣಕ್ಕಿದ್ದಿ. ನಿನ್ನ ಕಂಟ್ರೋಲದಾಗ ಬಂದು ನಿನ್ ಗಂಡ ಆ ಸಾವ್ಕಾರ್‍ತಿ ದೋಸ್ತಿ ಬಿಡ್ತಾನಂತ ತಿಳ್ಕೊಂಡಿದ್ದೆವು ನಾವೆಲ್ಲಾ. ಆದರಿದು ಉಲ್ಟಾ ಆಯ್ತಲ್ಲೇ ಮಗಾ……” ಕಾಳವ್ವ ಸಂಕಟದ ದನಿಯಲ್ಲಿ ಹೇಳಿದಳು. ತನ್ನ ಮಿದುಳಿನಲ್ಲಿಯ ಗುಮಾನಿ ಖರೇ ಆದಾಗ ಶಿವಗಂಗಾ ಥರಾಥರಾ ನಡುಗಿದಳು. ಅವಳೊಳಗಿನ ಅಭಿಮಾನ ಹೊಡೆಯೆತ್ತಿತ್ತು. ”ನನಗಿದೆಲ್ಲಾ ಗೊತ್ತಾಗಿ ಭಾಳದಿನ ಆಯ್ತು ಅತ್ತೀ….. ಆದರೇನ್ಮಾಡ್ಲಿ? ಒಂದೂ ತಿಳಂಗಿಲ್ಲಾಗ್ಯಾದ ನನಗ…” “ಏನ್ಮಾಡ್ತಿ ನೋಡು ಶಿವೀ….. ಹ್ಯಾಂಗರೆ ಹಿಕ್ಮತಿ ಮಾಡಿ ನಿನ್ ಬಾಳ್ಯಾ ಹಸೂನ ಮಾಡ್ಕೊಮಾದು ನೋಡು……” ಅಂದಿದ್ದಳು……

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

“ಶಿವಗಂಗವ್ವಾ ನಿನಗಿನ್ನಾ ಬೆಳಗೇ ಆಗಿಲ್ಲೇನೇ ಯಕ್ಕಾ….. ಗೌಡ್ರು ಹೊಲಕ್ಕ ಜ್ವಾಳಾ ಕೊಯ್ಲಕ್ಕ ಹೋಗಾದದಾ ಅಲ್ಲ ಇವತ್ತ…. ಏಳವ್ವ…..” ಅಂತ ಬಾಜು ಗುಡಿಸಲ ಸಾಬವ್ವ ತಂಬಿಗೆ ತಗೊಂಡು ಬಯಲಕಡೀಗಿ ಹೊಂಟಕ್ಕಿ ಶಿವಗಂಗಾನ ಮನಿಮುಂದಿನ ದಾರಿಯಲ್ಲಿ ಹಾದು ಹೋಗುವಾಗ ಕರೆದಳು. ಅವಳ ದನಿಗೆ ಶಿವಗಂಗಾಗೆ ತಟ್ಟನೆ ಎಚ್ಚರಾದಂಗಾಗಿ ನೆನಪಿನ ಹಿಡಿತದಿಂದ ಹೊರ ಬಂದು ಬುದುಂಗನೆ ಎಚ್ಚತ್ತಳು. ಮೂಡಲು ಹರಿದು ಬೆಳಕು ಅವಳ ಗುಡಿಸಲ ಸಂದಿಯಿಂದ ಒಳ ಬರುವ ಕೋಶಿಸು ನಡೆಸಿತ್ತು, “ಈ ನೆನಪಗೋಳ ಮ್ಯಾಲ ಮಣ್ಣಹಾಕಲೀ…… ನನಗೇನು ಧಾಡಿ ಬಡದಾದಿವತ್ತಾ……” ಅಂತನ್ನೋತ ಎದ್ದು ಕೌದಿ ಝಾಡಿಸಿ ಮಡಿಚತೊಡಗಿದಳು…….

ಇವತ್ಯಾಕೋ ಶಿವಗಂಗೆಯ ತೆಲಿಕೆಟ್ಟಂಗಾಗಿತ್ತು. ಗೌಡ್ರ ಹೊಲದಲ್ಲಿ ಜ್ವಾಳ ಕೊಯ್ಯುವಾಗಲೂ ಅವಳಿಗೆ ಹಿಂದಿನ ನೆನಪುಗಳೇ ಮುಂದೆ ಬಂದು ನಿಲ್ಲುತ್ತಿದ್ದುವು. ಗಂಡ ಮಲ್ಲೇಶಿಯ ಜೋಡಿ ಜಗಳ ಕಿರಿಕಿರಿ ನಡೆದಾಗಿನ ದಿನಗಳಲ್ಲೇ ತಾನು ಬಸುರಿ ಅಂತ ತಿಳಿದದ್ದು, ಆ ಸಾವ್ಕಾರ್‍ತಿ ಚಂದಮ್ಮ ಮತ್ತು ತಾನು ತಮ್ಮಿಬ್ಬರಲ್ಲಿ ಒಬ್ಬರನ್ನೇ ಆರಿಸಿಕೊಳ್ಳುವಂತೆ ಸವಾಲೆಸೆದು ನಿಂತದ್ದು. ಹಿಂದು ಮುಂದಿನ ಇಚಾರ ಸುದ್ದಾ ಮಾಡಲಾರ್‍ದೆ ಮಲ್ಲೇಶಿ ತಟ್ಟಂತ ಆ ಸಾವ್ಕಾರ್‍ತಿಗೇ ಆರಿಸಿಕೊಂಡು ಮನೆಬಿಟ್ಟು ಹ್ವಾದದ್ದು; ಆ ಮ್ಯಾಲ ತಾನು ಉಟ್ಟಬಟ್ಟೆಯ ಮೇಲೇ ಗಂಡನ ಮನೆ ಬಿಟ್ಟು ಬಂದು ಶಿವಳ್ಳಿ ಸೇರಿ ಕೂಲಿನಾಲಿ ಕೆಲಸದಿಂದ ಹೊಟ್ಟಿ ತುಂಬಿಕೊಂಡದ್ದು; ತವರವರು ಬಂದು ಕರೆದಾಗ ಹೋಗಿ ಬಾಣಂತನ ಮುಗಿಸಿಕೊಂಡು ಮಗನನ್ನೆತ್ತಿಕೊಂಡು ಶಿವಳ್ಯಾಗೆ ದುಡಿದುಣ್ಣುತ್ತ ಮಗನನ್ನು ಬೆಳಸಿ, ದೊಡ್ಡವನನ್ನಾಗಿ ಮಾಡಿ, ಅಂವಗೊಂದು ಮದುವೆ ಮಾಡಿದ್ದು, ಮದುವ್ಯಾದ ಆರು ತಿಂಗಳಿಗೇ ಮಗಾ ಸೊಸಿ ಬ್ಯಾರೆ ಗುಡಿಸಲು ಕಟ್ಗೊಂಡು ತನ್ನೊಬ್ಬಕ್ಕಿಗೇ ಒಂದು ಮಾಡಿ ಬ್ಯಾರೆ ಹೋದದ್ದು. ಎಲ್ಲ ನೆನಪಾಗಿ ಶಿವಗಂಗೆಯ ಎದೆ ಬೇಯತೊಡಗಿತ್ತು.

ಮೈಯಲ್ಲಿಯ ಹರೆಯ ಕಳೆದು ಹೋಗಿ ಮುಪ್ಪಿಗೆ ತಿರುಗಿ ನಿಂತಿದ್ದ ಶಿವಗಂಗಾ ಈಗ ಮತ್ತೆ ಒಂಟಿಯಾಗಿದ್ದಳು! ಹರೆಯ ಸಿಂಗಾರ ಮಾಡಬೇಕಾಗಿದ್ದ ಗಂಡ ಇದ್ದೂ ಸತ್ತಂಗಾಗಿದ್ದ. ಮುಪ್ಪು ಹಸೂನ ಮಾಡಬೇಕಾಗಿದ್ದ ಮಗ ಈಗ ದೂರಸರಿದಿದ್ದ! ಹೆಂತಾ ಮನಶ್ಯಾರು ಈ ಗಂಡಸರು ಅಂತನ್ನಿಸಿತು ಅವಳಿಗೆ. ಬರೇ ತಮ್ಮ ಸುಕಾ ಒಂದೇ ನೋಡ್ಕೊತಾವಲ್ಲ ಈ ಬಿಕನಾಸಿಗೋಳು ಅಂತ ಸಿಟ್ಟು ಸಂತಾಪ ಒಂದು ಕಡೆ ಆದರೆ ಅಯ್ಯೋ ಪಾಪ… ಅವುದರ ಹೈಸೇತೇ ಈಟದಾ ಅಂತನ್ನಿಸಿ ಅನುಕಂಪ ಮೂಡುತ್ತಿತ್ತು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ರಾತ್ರಿ ಭಾಳೊತ್ತಿನ ತನಕ ನಿದ್ದಿಗಾಗಿ ಚಡಪಡಿಸಿ ಚಡಪಡಿಸಿ ಸರಿರಾತ್ರಿಯಲ್ಲಿ ಅವಳ ಕಣ್ಣುಗಳಲ್ಲಿ ನಿದ್ದೆ ನಿಂತಿತ್ತು. ಒಂದು ಹೊತ್ತಿನಲ್ಲಿ ಶಿವಗಂಗಾಗೆ ಫಕ್ಕನೆ ಎಚ್ಚರಾಯಿತು. ಎದ್ದು ನಿಂತಳು ಕತ್ತಲೆಯಲ್ಲಿ ಏನೂ ಕಾಣಿಸಲಿಲ್ಲ. ಎರಡೂ ದಡಿ ತುಂಬಿ ಸೋಸಿ ಹರೀತಿದ್ದ ಆ ಹೊಳಿ……ಅದರ ಎಡ್ಡೂ ದಂಡಿಗೋಳು! ಬಿದ್ದ ಕನಸಿನ ಬೆನ್ನು ಹತ್ತಿದಳು. ಎಟೊತ್ತು ಕೈ ಆಡಿಸಿದರೂ ಯಾವ ದಂಡೆಯೂ ಸಿಗಲೇಯಿಲ್ಲ, ಈಸಿ ಈಸಿ ದಣಿದಳು. ಎಡ್ಡೂ ದಂಡೆಯ ಕಡೆಗೆ ನಿಂಗಾ ಹರಿಸಿದಳು. ಒಂದು ದಂಡೆಯ ಮ್ಯಾಲೆ ಗಂಡ, ಇನ್ನೊಂದರ ಮ್ಯಾಲೆ ಮಗ ನಿಂತು ನೀರಲ್ಲಿ ಮುಳುಗುತ್ತಿರುವ ತನ್ನನ್ನೇ ನೋಡುತ್ತಿದ್ದಾರೆ! ಅವಳು ಕೈ ಕಾಲು ಬಡಿದಳು. ಕೂಗಿಕೊಂಡಳು…… ನೀರಲ್ಲಿ ಮುಳುಗಿ ಮುಳುಗಿ ಎದ್ದಳು ಖರೇ, ಆದರೆ ಅವರ್‍ಯಾರೂ ಹೊಳೆಗೆ ಹಾರಿ ಇವಳನ್ನು ಉಳಿಸಲು ಬರಲಿಲ್ಲ. ಕಡೆಯ ಸರ್‍ತಿ ಮುಳುಗಿದಳು ಮೇಲೆ ಬರಲೆಯಿಲ್ಲ!

ಹೆದರಿಕೆಯಿಂದ ಮೈಯೆಲ್ಲ ಗಡಗಡನೆ ನಡುಗಿದಾಗಲೇ ಶಿವಗಂಗಾಗೇ ಎಚ್ಚರಾಗಿತ್ತು. ಮನಸಿಗೆ ಸಂಕಟವಾಯಿತು. ಅಳು ಉಕ್ಕಿ ಬಂದಿತು. ಮೊಣಕಾಲಲ್ಲಿ ಮಾರಿಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಭಾಳೊತ್ತಿನ ಮ್ಯಾಲೆ ಅಳು ಥಾಮಣಿಯಾಯಿತು. ಸಂಗವತ್ತಿಯ ಬೀಸುಕಲ್ಲು ಆವಾಜು ಮಾಡುತ್ತಿತ್ತು. ಎದ್ದು ಹೊರಬಂದಳು. ಬೆಳಕು ಹರಿಯುವ ತರಾತುರಿಯಲ್ಲಿತ್ತು. ಅಂಗಳದಾಚೆಯ ಬೇಯಿನ ಗಿಡಿದ ಬಾಜು ನಿಂತಿದ್ದ ನಾಗವ್ವ ಕರೆಯುತ್ತಿದ್ದಳು. “ಕುಕ್ಕಣ್ಣಿ ಗೋಯಿಂದಪ್ಪನ ಹೊಲದಾಗ ಸದಿತೆಗ್ಯಾದಾದಂತ….. ಹತ್ತಾಳು ಗೋಳು ಬೇಕಂತ ಹೇಳ್ಯಾರ…… ನೀನೂ ಬರ್‍ತಿಯೇನೇ ಶಿವಗಂಗವತ್ತೀ…..” ಕೇಳಿದಳು. “ಆಯ್ತು ನಾಗವ್ವ….. ಬರ್‍ತೀನೀ…..” ಅನ್ನುತ್ತ ಶಿವಗಂಗಾ ಒಳನಡೆದಳು.

Geetha Nagabhushana

ಗೀತಾ ನಾಗಭೂಷಣ(1942-2020): ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಲ್ಲಿ 1942ರ ಮಾರ್ಚ್ 25ರಂದು ಜನಿಸಿ ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿದ್ದ ಗೀತಾ ನಾಗಭೂಷಣರು, ಅನಕ್ಷರಸ್ಥ ಬಡ ಕುಟುಂಬದಿಂದ ಬಂದವರು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿದರು. ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1968ರಲ್ಲಿ ‘ತಾವರೆಯ ಹೂವು’, ‘ಬದುಕು’ ಸೇರಿ ಇಪ್ಪತ್ತೇಳು ಕಾದಂಬರಿಗಳನ್ನು ಬರೆದರು. 50ಕ್ಕೂ ಹೆಚ್ಚು ಸಣ್ಣ ಕಥೆಗಳು, 2 ಕಥಾ ಸಂಕಲನಗಳು, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವದ ಜೊತೆಗೆ, ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರ ‘ಹಸಿಮಾಂಸ ಮತ್ತು ಹದ್ದುಗಳು’ ಎನ್ನುವ ಕಾದಂಬರಿಯು ‘ಹೆಣ್ಣಿನ ಕೂಗು’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. 2020ರ ಜೂನ್ 28ರಂದು ಕಲ್ಬುರ್ಗಿಯಲ್ಲಿ ನಿಧನರಾದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಳೇಗೌಡ ನಾಗವಾರ ಅವರ ಕತೆ | ಕೂಡಿಕೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...