ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಕ್ಕೆ ಕಾರಣ ಯಾರು?

Date:

ಮಲೆನಾಡಿನ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ, ಈಗ ಚರ್ಚೆಯ ಕೇಂದ್ರವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನ ಸೇವೆಗಳು ನಿರಂತರವಾಗಿ ಮುಂದುವರಿಯಬೇಕೆಂಬುದು ಮಲೆನಾಡಿನ ಜನರ ನಿರೀಕ್ಷೆ. ಆದರೆ, ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಆರ್ಥಿಕ ನೆರವಿನ ಸವಾಲುಗಳು ವಿಮಾನ ಸಂಪರ್ಕದ ಭವಿಷ್ಯವನ್ನೇ ಪ್ರಶ್ನಿಸುವಂತಾಗಿದೆ.

ಒಂದೆಡೆ ಉಡಾನ್ ಯೋಜನೆಯಡಿ ವಿಮಾನ ಸೇವೆಗಳನ್ನು ಮುಂದುವರಿಸಲು ಕೇಂದ್ರ ಸರ್ಕಾರ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ತಕ್ಷಣ ಆರ್ಥಿಕ ನೆರವು ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ.

- Advertisement -

ಈಗಾಗಲೇ ಇಂಡಿಗೋ ವಿಮಾನ ಸೇವೆ ಸ್ಥಗಿತಗೊಂಡಿದ್ದು, ಉಡಾನ್ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ಸೇವೆಗಳಿಗೂ ಪ್ರೋತ್ಸಾಹಧನದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 21ರಿಂದ ವಿಮಾನ ಹಾರಾಟ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ...

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ ನಾದದಲ್ಲಿ ಉಳಿದು ಬಂದ ತತ್ವ. ಜನಸಾಮಾನ್ಯರ ಬದುಕು, ಸಾಮಾಜಿಕ ಅಸಮಾನತೆ ಮತ್ತು ಮಾನವ ಘನತೆಯ ಪ್ರಶ್ನೆಗಳನ್ನು ಜನರ ಮುಂದಿಟ್ಟ ಪರಂಜ್ಯೋತಿ...

ಉತ್ತರ ಕನ್ನಡ | ಯುವನಿಧಿ ಫಲಾನುಭವಿಗಳ ಸಂಖ್ಯೆ ಹೆಚ್ಚಳ:...

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ 10,280ಕ್ಕೆ ಏರಿಕೆಯಾಗಿರುವುದು ಕೇವಲ ಒಂದು ಸರ್ಕಾರಿ ಯೋಜನೆಯ ಫಲಾಫಲದ ಅಂಕಿ-ಅಂಶವಲ್ಲ. ಜಿಲ್ಲೆಯಲ್ಲಿನ ಉದ್ಯೋಗಾವಕಾಶಗಳು, ಯುವಜನರ ಸದೃಢ ಭವಿಷ್ಯ, ಸ್ಥಳೀಯ ಆರ್ಥಿಕ...

ಆದರೆ ಇಲ್ಲಿ ಮುಖ್ಯವಾದ ಪ್ರಶ್ನೆ ಒಂದೇ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಗಳು ಹಾರಾಟ ನಡೆಸದಿದ್ದರೆ ನಷ್ಟ ಯಾರಿಗೆ? ಕೇಂದ್ರ ಸರ್ಕಾರಕ್ಕೋ, ರಾಜ್ಯ ಸರ್ಕಾರಕ್ಕೋ ಅಥವಾ ರಾಜಕೀಯ ನಾಯಕರಿಗೋ?

ಖಂಡಿತವಾಗಿಯೂ ಇದರ ನೇರ ಪರಿಣಾಮ ಎದುರಿಸಬೇಕಾಗಿರುವುದು ಮಲೆನಾಡಿನ ಜನತೆ ಮತ್ತು ಇಲ್ಲಿನ ಆರ್ಥಿಕ ವ್ಯವಸ್ಥೆ.

ವಿಮಾನ ನಿಲ್ದಾಣವೇ ಸ್ಥಗಿತವಾಗುತ್ತದೆಯೇ ಅಥವಾ ವಿಮಾನ ಸೇವೆಯೇ? ಜನಸಾಮಾನ್ಯರು ಮೊದಲು ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ಶಿವಮೊಗ್ಗ ವಿಮಾನ ನಿಲ್ದಾಣ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ ಎಂಬುದಲ್ಲ. ಬದಲಾಗಿ, ನಿಗದಿತ ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಈ ಹಿಂದೆ ಇಂಡಿಗೋ ಸಂಸ್ಥೆ ಬೆಂಗಳೂರು ಸಂಪರ್ಕ ಕಲ್ಪಿಸಿತ್ತು. ಬಳಿಕ ಮೇ 1ರಿಂದ ಇಂಡಿಗೋ ಸೇವೆ ಸ್ಥಗಿತಗೊಂಡಿತು. ಜೂನ್ 9ರಿಂದ ಸ್ಪೈಸ್‌ಜೆಟ್ ಕೂಡ ತನ್ನ ಸೇವೆ ನಿಲ್ಲಿಸಿತು. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಕೊನೆಯ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಕೂಡ ನವೆಂಬರ್ 21ರಿಂದ ಸೇವೆ ಸ್ಥಗಿತಗೊಳಿಸುವ ಸಾಧ್ಯತೆ ಎದುರಾಗಿದೆ.

ಅಂದರೆ ವಿಮಾನ ನಿಲ್ದಾಣದ ಕಟ್ಟಡ, ರನ್‌ವೇ ಮತ್ತು ಇತರ ಮೂಲಸೌಕರ್ಯಗಳು ಇದ್ದರೂ ಪ್ರಯಾಣಿಕರನ್ನು ಕರೆದೊಯ್ಯುವ ವಿಮಾನಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು.

IMG 9911 30 8 2023 18 5 2 1 N3BSTKEQ

ಉಡಾನ್ ಯೋಜನೆ ಎಂದರೇನು?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಡಾನ್ (UDAN – Ude Desh Ka Aam Nagrik) ಯೋಜನೆಯ ಮುಖ್ಯ ಉದ್ದೇಶ ಸಾಮಾನ್ಯ ಜನರಿಗೂ ವಿಮಾನ ಪ್ರಯಾಣದ ಅವಕಾಶ ಕಲ್ಪಿಸುವುದು. ದೊಡ್ಡ ನಗರಗಳ ನಡುವೆ ಮಾತ್ರವಲ್ಲದೆ, ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಆಶಯ. ಆದರೆ ಸಣ್ಣ ನಗರಗಳಿಂದ ವಿಮಾನ ಹಾರಾಟ ನಡೆಸುವಾಗ ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ನಿರ್ವಹಣಾ ವೆಚ್ಚವನ್ನು ಟಿಕೆಟ್ ಆದಾಯದಿಂದಲೇ ಭರಿಸುವುದು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಸರ್ಕಾರವು Viability Gap Funding (VGF) ಎಂಬ ಆರ್ಥಿಕ ನೆರವು ನೀಡುತ್ತದೆ. ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳುವುದಾದರೆ, ಒಂದು ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಸಂಸ್ಥೆಗೆ ಆಗುವ ವೆಚ್ಚ ಮತ್ತು ಅದರಿಂದ ಬರುವ ಆದಾಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಸರ್ಕಾರ ನೀಡುವ ಪ್ರೋತ್ಸಾಹಧನವೇ VGF. ಸಾಮಾನ್ಯವಾಗಿ ಉಡಾನ್ ಮಾರ್ಗಗಳಿಗೆ ಮೂರು ವರ್ಷಗಳವರೆಗೆ ಈ ರೀತಿಯ ನೆರವು ನೀಡಲಾಗುತ್ತದೆ. ಆ ಅವಧಿ ಮುಗಿದ ನಂತರವೂ ಅದೇ ಮಾರ್ಗದಲ್ಲಿ ವಿಮಾನ ಸೇವೆ ಮುಂದುವರಿಯಲು ಹೊಸ ಆರ್ಥಿಕ ವ್ಯವಸ್ಥೆ ಅಥವಾ ವಾಣಿಜ್ಯಿಕವಾಗಿ ಲಾಭದಾಯಕ ಪ್ರಯಾಣಿಕರ ಬೇಡಿಕೆ ಅಗತ್ಯವಾಗುತ್ತದೆ.

ಶಿವಮೊಗ್ಗದ ಸಮಸ್ಯೆಯೂ ಇದೇ ಹಂತದಲ್ಲಿ ಎದುರಾಗಿದೆ. ಮೂರು ವರ್ಷಗಳ ಅವಧಿಗೆ ದೊರೆಯುತ್ತಿದ್ದ ಆರ್ಥಿಕ ನೆರವು ಮುಕ್ತಾಯವಾಗುತ್ತಿರುವುದರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುವ ಬಗ್ಗೆ ಮರುಪರಿಶೀಲನೆ ನಡೆಸುತ್ತಿವೆ.

ಕೇಂದ್ರ ಸರ್ಕಾರದ ತಪ್ಪೇನು? ರಾಜ್ಯ ಸರ್ಕಾರದ ಜವಾಬ್ದಾರಿಯೇನು?

ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಮಾಡುವುದಕ್ಕಿಂತ ತಮ್ಮ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ಉಡಾನ್ ಯೋಜನೆಯ ನೀತಿಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು.ವಿಮಾನಯಾನ ಸಂಸ್ಥೆಗಳಿಗೆ ನಿಗದಿತ ನಿಯಮಗಳಡಿ ಆರ್ಥಿಕ ನೆರವು ನೀಡುವುದು. ಪ್ರಾದೇಶಿಕ ವಿಮಾನ ಸಂಪರ್ಕವನ್ನು ಮುಂದುವರಿಸಲು ಹೊಸ ಮಾರ್ಗಗಳ ಅವಕಾಶ ಕಲ್ಪಿಸುವುದು.ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮಾರ್ಗಗಳ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವುದು.

ಶಿವಮೊಗ್ಗದಂತಹ ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ಅಗತ್ಯವಾದ ಆರ್ಥಿಕ ನೆರವು ಮತ್ತು ಪ್ರೋತ್ಸಾಹಧನದ ವ್ಯವಸ್ಥೆ ಪರಿಶೀಲಿಸುವುದು. ವಿಮಾನಯಾನ ಸಂಸ್ಥೆಗಳಿಗೆ ಅಗತ್ಯವಿರುವ ಸ್ಥಳೀಯ ಸೌಲಭ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಬ್ದಾರಿಯಾಗಿದೆ.

ಶಿವಮೊಗ್ಗದಿಂದ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸುವುದು. ಪ್ರವಾಸೋದ್ಯಮ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳ ಮೂಲಕ ವಿಮಾನ ಪ್ರಯಾಣಿಕರ ಬೇಡಿಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದು. ಕೇಂದ್ರದ ಉಡಾನ್ ಯೋಜನೆಯ ಮುಂದಿನ ಹಂತದಲ್ಲಿ ರಾಜ್ಯ ಸರ್ಕಾರಗಳು ತಮ್ಮ ಆದ್ಯತೆಯ ಮಾರ್ಗಗಳನ್ನು ಶಿಫಾರಸು ಮಾಡಬೇಕೆಂಬ ವ್ಯವಸ್ಥೆಯೂ ಇದೆ. ಸೆಪ್ಟೆಂಬರ್ 22, 2026ರಂದು ಮುಂದಿನ ಹಂತದ ಮಾರ್ಗ ಹಂಚಿಕೆ ಪ್ರಕ್ರಿಯೆ ಆರಂಭಿಸಿರುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. Ministry of Civil Aviation ಹೀಗಾಗಿ ಶಿವಮೊಗ್ಗಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಜವಾಬ್ದಾರಿಯನ್ನು ಕೇವಲ ಕೇಂದ್ರ ಸರ್ಕಾರದ ಮೇಲೆ ಅಥವಾ ರಾಜ್ಯ ಸರ್ಕಾರದ ಮೇಲೆ ಹಾಕಿ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಶಿವಮೊಗ್ಗದ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ.

ವಿಮಾನ ಹಾರಾಟ ಸ್ಥಗಿತಗೊಂಡರೆ ಮಲೆನಾಡಿಗೆ ಆಗುವ ನಷ್ಟವೇನು?

ಶಿವಮೊಗ್ಗ ವಿಮಾನ ನಿಲ್ದಾಣ ಕೇವಲ ಶಿವಮೊಗ್ಗ ನಗರದ ಜನರಿಗಾಗಿ ನಿರ್ಮಾಣಗೊಂಡಿರುವುದಲ್ಲ. ಶಿವಮೊಗ್ಗದ ಜೊತೆಗೆ ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಹಾವೇರಿ ಸೇರಿದಂತೆ ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಇದು ಪ್ರಮುಖ ಸಾರಿಗೆ ಸಂಪರ್ಕವಾಗುವ ಸಾಮರ್ಥ್ಯ ಹೊಂದಿದೆ.

ನವೆಂಬರ್ 21ರಿಂದ ವಿಮಾನ ಸೇವೆ ಸ್ಥಗಿತಗೊಂಡರೆ ಉಂಟಾಗಬಹುದಾದ ಪರಿಣಾಮಗಳು.

ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹಿನ್ನಡೆಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ವ್ಯಾಪಾರ ಸಂಸ್ಥೆಗಳು ಹಾಗೂ ಕೃಷಿ ಆಧಾರಿತ ಉದ್ಯಮಗಳಿವೆ.ಹೊರರಾಜ್ಯಗಳಿಂದ ಬರುವ ಉದ್ಯಮಿಗಳು, ಹೂಡಿಕೆದಾರರು, ಕಂಪನಿಗಳ ಪ್ರತಿನಿಧಿಗಳು ಹಾಗೂ ವ್ಯಾಪಾರಸ್ಥರಿಗೆ ವಿಮಾನ ಸಂಪರ್ಕ ಅನುಕೂಲಕರವಾಗಿರುತ್ತದೆ.ವಿಮಾನ ಸಂಪರ್ಕ ಇಲ್ಲದಿದ್ದರೆ ಬೆಂಗಳೂರು ಅಥವಾ ಇತರ ನಗರಗಳಿಂದ ಶಿವಮೊಗ್ಗಕ್ಕೆ ಬರಲು ರಸ್ತೆ ಅಥವಾ ರೈಲು ಪ್ರಯಾಣವನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಪ್ರಯಾಣದ ಸಮಯ ಹೆಚ್ಚಾಗುತ್ತದೆ.ಇದು ಭವಿಷ್ಯದಲ್ಲಿ ಶಿವಮೊಗ್ಗಕ್ಕೆ ಹೊಸ ಉದ್ಯಮಗಳನ್ನು ಆಕರ್ಷಿಸುವ ಪ್ರಯತ್ನಗಳ ಮೇಲೂ ಪರಿಣಾಮ ಬೀರಬಹುದು.

ಮಲೆನಾಡಿನ ಪ್ರವಾಸೋದ್ಯಮಕ್ಕೆ ಹೊಡೆತ :

ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳನ್ನು ಹೊಂದಿದೆ.- ಜೋಗ ಜಲಪಾತ- ಆಗುಂಬೆ- ತೀರ್ಥಹಳ್ಳಿ- ಸಕ್ರೆಬೈಲು ಆನೆ ಬಿಡಾರ- ಕೊಡಚಾದ್ರಿ- ಕವಲೇದುರ್ಗ ಇಂತಹ ಪ್ರವಾಸಿ ತಾಣಗಳನ್ನು ನೋಡಲು ಹೊರರಾಜ್ಯಗಳಿಂದ ಹಾಗೂ ದೂರದ ಪ್ರದೇಶಗಳಿಂದ ಪ್ರವಾಸಿಗರು ಬರುತ್ತಾರೆ.ವಿಮಾನ ಸಂಪರ್ಕ ಇದ್ದರೆ ಪ್ರವಾಸಿಗರು ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗ ತಲುಪುವ ಅವಕಾಶವಿರುತ್ತದೆ.

ಆದರೆ ವಿಮಾನ ಸೇವೆ ಸ್ಥಗಿತಗೊಂಡರೆ ಪ್ರವಾಸಿಗರು ತಮ್ಮ ಪ್ರಯಾಣದ ಯೋಜನೆಯಲ್ಲಿ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.ಇದರಿಂದ ಹೋಟೆಲ್ ಉದ್ಯಮ, ವಾಹನ ಬಾಡಿಗೆ, ಪ್ರವಾಸಿ ಮಾರ್ಗದರ್ಶಕರು, ಸ್ಥಳೀಯ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಕುಟುಂಬಗಳಿಗೂ ಪರೋಕ್ಷ ಪರಿಣಾಮ ಉಂಟಾಗಬಹುದು.

ವೈದ್ಯಕೀಯ ಸೇವೆ ಮತ್ತು ತುರ್ತು ಪ್ರಯಾಣಕ್ಕೆ ತೊಂದರೆ :

ಶಿವಮೊಗ್ಗ ಮಲೆನಾಡಿನ ಪ್ರಮುಖ ವೈದ್ಯಕೀಯ ಕೇಂದ್ರವಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ಜನರು ಕೂಡ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಬರುತ್ತಾರೆ.ಅದೇ ರೀತಿ, ಗಂಭೀರ ವೈದ್ಯಕೀಯ ಸಲಹೆ, ವಿಶೇಷ ಚಿಕಿತ್ಸೆ, ವೈದ್ಯಕೀಯ ಸಮ್ಮೇಳನಗಳು ಅಥವಾ ಇತರ ತುರ್ತು ಅಗತ್ಯಗಳಿಗಾಗಿ ಬೆಂಗಳೂರು ಹಾಗೂ ಇತರ ನಗರಗಳಿಗೆ ಪ್ರಯಾಣಿಸುವವರಿಗೂ ವಿಮಾನ ಸಂಪರ್ಕ ಅನುಕೂಲವಾಗಬಹುದು.ಆದರೆ ಒಂದು ವಿಷಯವನ್ನು ಗಮನಿಸಬೇಕು. ಸಾಮಾನ್ಯ ಪ್ರಯಾಣಿಕರ ವಿಮಾನ ಸೇವೆ ಸ್ಥಗಿತಗೊಂಡರೆ ಆಂಬುಲೆನ್ಸ್ ಅಥವಾ ವೈದ್ಯಕೀಯ ಸಾರಿಗೆಯೂ ಸಂಪೂರ್ಣ ಸ್ಥಗಿತಗೊಳ್ಳುತ್ತದೆ ಎಂದರ್ಥವಲ್ಲ. ಆದರೂ ತ್ವರಿತ ಪ್ರಯಾಣದ ಒಂದು ಪ್ರಮುಖ ಆಯ್ಕೆ ಕಡಿಮೆಯಾಗುತ್ತದೆ.

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದ ಮೇಲೆ ಪರಿಣಾಮ :

ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿವೆ. ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ವಿದ್ಯಾರ್ಥಿಗಳು, ಉಪನ್ಯಾಸಕರು, ತಜ್ಞರು ಮತ್ತು ಉದ್ಯೋಗಿಗಳು ಬರುವ ಸಾಧ್ಯತೆಗಳಿವೆ.ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಉದ್ಯೋಗ ಸಂದರ್ಶನ, ಪರೀಕ್ಷೆ, ತರಬೇತಿ, ಸಭೆ ಹಾಗೂ ವೃತ್ತಿಪರ ಕೆಲಸಗಳಿಗಾಗಿ ಪ್ರಯಾಣಿಸುವವರಿಗೂ ವಿಮಾನ ಸಂಪರ್ಕ ಅನುಕೂಲವಾಗುತ್ತದೆ.ವಿಮಾನ ಸಂಪರ್ಕವಿಲ್ಲದಿರುವುದು ಈ ಪ್ರಯಾಣಗಳ ಸಮಯ ಮತ್ತು ವೆಚ್ಚವನ್ನು ಹೆಚ್ಚಿಸಬಹುದು.

ಶಿವಮೊಗ್ಗದ ಅಭಿವೃದ್ಧಿಯ ಮೇಲಿನ ವಿಶ್ವಾಸಕ್ಕೆ ಧಕ್ಕೆ :

ಒಂದು ಪ್ರದೇಶಕ್ಕೆ ವಿಮಾನ ನಿಲ್ದಾಣ ನಿರ್ಮಿಸುವುದರ ಉದ್ದೇಶ ಕೇವಲ ಕಟ್ಟಡ ನಿರ್ಮಾಣವಲ್ಲ. ಆ ಪ್ರದೇಶಕ್ಕೆ ಸಂಪರ್ಕ, ಉದ್ಯೋಗ, ವ್ಯಾಪಾರ ಮತ್ತು ಅಭಿವೃದ್ಧಿಯ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿದೆ.ಆದರೆ ವಿಮಾನ ನಿಲ್ದಾಣ ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ವಾಣಿಜ್ಯ ವಿಮಾನ ಸೇವೆಗಳು ಸ್ಥಗಿತಗೊಂಡರೆ, ಈ ಭಾಗಕ್ಕೆ ಭವಿಷ್ಯದಲ್ಲಿ ಹೂಡಿಕೆ ಮಾಡಲು ಬರುವ ಉದ್ಯಮಿಗಳು ಹಾಗೂ ಸಂಸ್ಥೆಗಳಿಗೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿದೆ.ಇದು ಶಿವಮೊಗ್ಗದ ದೀರ್ಘಕಾಲೀನ ಅಭಿವೃದ್ಧಿಯ ದೃಷ್ಟಿಯಿಂದ ಆತಂಕಕಾರಿ ಸಂಗತಿ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ವಿಮಾನ ನಿಲ್ದಾಣದ ಪ್ರಯೋಜನವೇನು?

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವು ಮಲೆನಾಡಿನ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯೊಂದಿಗೆ 2023ರಲ್ಲಿ ಉದ್ಘಾಟನೆಗೊಂಡಿತು. ಆದರೆ ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಅದನ್ನು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಸಂಸದ ಬಿ.ವೈ. ರಾಘವೇಂದ್ರ ಅವರು ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಸುಮಾರು 4.2 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಇದು ಈ ಭಾಗದಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಇದೆ ಎಂಬುದನ್ನು ಸೂಚಿಸುತ್ತದೆ.

ಹೀಗಿರುವಾಗ ಇಷ್ಟು ದೊಡ್ಡ ಮೂಲಸೌಕರ್ಯವನ್ನು ನಿರ್ಮಿಸಿ, ಅದರಲ್ಲಿ ವಿಮಾನ ಸೇವೆಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದು ಸಾರ್ವಜನಿಕ ಹಣದ ಸದ್ಬಳಕೆಯ ದೃಷ್ಟಿಯಿಂದಲೂ ಪ್ರಶ್ನಾರ್ಹವಾಗಿದೆ.

ರಾಜಕೀಯ ಆರೋಪ ಪ್ರತ್ಯಾರೋಪಗಳ ನಡುವೆ ಶಿವಮೊಗ್ಗಕ್ಕೆ ಆಗುತ್ತಿರುವ ಅನ್ಯಾಯವೇನು?

ಈ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ನೀತಿಗತ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಮತ್ತೊಂದೆಡೆ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯ ಸರ್ಕಾರವು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಕಲಬುರಗಿ ಮತ್ತು ಬೀದರ್ ವಿಮಾನ ಸೇವೆಗಳಿಗೆ ನೀಡುತ್ತಿರುವ ರೀತಿಯಲ್ಲಿ ಶಿವಮೊಗ್ಗಕ್ಕೂ ನೆರವು ನೀಡಬೇಕು ಎಂಬುದು ಸಂಸದರ ಬೇಡಿಕೆಯಾಗಿದೆ. ಶಿವಮೊಗ್ಗಕ್ಕೆ ಸುಮಾರು ₹15 ಕೋಟಿ ಹೆಚ್ಚುವರಿ ನೆರವು ನೀಡಿದರೆ ವಿಮಾನ ಸೇವೆ ಮುಂದುವರಿಸಲು ಅನುಕೂಲವಾಗಬಹುದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.ಇನ್ನು ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.50ರಷ್ಟು ವೆಚ್ಚ ಭರಿಸುವ ಮಾದರಿಯನ್ನು ಪ್ರಸ್ತಾಪಿಸಿದ್ದಾರೆ.ಈ ಎರಡು ಅಭಿಪ್ರಾಯಗಳ ನಡುವೆ ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ ಮಾತ್ರ ಸರಳವಾಗಿದೆ.

ಶಿವಮೊಗ್ಗದ ಜನಪ್ರತಿನಿಧಿಗಳು ಈಗ ಮಾಡಬೇಕಾದ ಕೆಲಸವೇನು?

ಶಿವಮೊಗ್ಗದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ, ಮೇಲ್ಸೇತುವೆ ಅಥವಾ ಕೈಗಾರಿಕೆಗಳ ನಿರ್ಮಾಣವಲ್ಲ. ಒಂದು ಜಿಲ್ಲೆಯು ಇತರ ನಗರಗಳೊಂದಿಗೆ ಎಷ್ಟು ಸುಲಭವಾಗಿ ಸಂಪರ್ಕ ಹೊಂದಿದೆ ಎಂಬುದೂ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಿದೆ.

ಹೀಗಾಗಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವರೊಂದಿಗೆ ಚರ್ಚಿಸಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಬೇಕು.

ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಿಸಿದ ಮೂಲಸೌಕರ್ಯ ಬಳಕೆಯಾಗದೆ ಉಳಿದರೆ ಅದಕ್ಕಿಂತ ದೊಡ್ಡ ಸಾರ್ವಜನಿಕ ಹಣದ ದುರುಪಯೋಗ ಮತ್ತೊಂದಿಲ್ಲ. ರಾಜಕೀಯ ಆರೋಪ ಪ್ರತ್ಯಾರೋಪಗಳನ್ನು ಬದಿಗಿಟ್ಟು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಿವಮೊಗ್ಗ–ಬೆಂಗಳೂರು ವಿಮಾನ ಸೇವೆಯನ್ನಾದರೂ ನಿರಂತರವಾಗಿ ಮುಂದುವರಿಸಬೇಕು ಎಂಬುದು ಮಲೆನಾಡಿನ ಜನತೆಯ ಒತ್ತಾಯವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ ಕೇವಲ ಒಂದು ಕಟ್ಟಡವಲ್ಲ, ಅದು ಮಲೆನಾಡಿನ ಅಭಿವೃದ್ಧಿಯ ಕನಸು. ಆ ಕನಸು ರಾಜಕೀಯ ನಿರ್ಲಕ್ಷ್ಯಕ್ಕೆ ಬಲಿಯಾಗಬಾರದು ಎಂಬುದು ಜನರ ಆಗ್ರಹ.

ಈದಿನ.ಕಾಮ್‌ ಜೊತೆಗೆ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ, “ಮಲೆನಾಡಿನ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣ ವೆಚ್ಚ ಮಾಡಿ ನಿರ್ಮಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನವೆಂಬರ್ 21ರಿಂದ ವಿಮಾನ ಹಾರಾಟ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುರದೃಷ್ಟಕರ. ಉಡಾನ್ ಯೋಜನೆಯ ಆರ್ಥಿಕ ನೆರವು ಮುಕ್ತಾಯಗೊಳ್ಳುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವೆನ್ನಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗದೆ, ವಿಮಾನ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದರು.

“ವಿಮಾನ ನಿಲ್ದಾಣ ನಿರ್ಮಿಸುವುದಷ್ಟೇ ಅಭಿವೃದ್ಧಿಯಲ್ಲ; ಅದನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದೂ ಸರ್ಕಾರಗಳ ಜವಾಬ್ದಾರಿ.ಮಲೆನಾಡಿನ ಉದ್ಯಮ, ಪ್ರವಾಸೋದ್ಯಮ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗದ ವಿಮಾನ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಸಮನ್ವಯ ಸಾಧಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತೇನೆ” ಎಂದಿದ್ದಾರೆ.

ಈ ಕುರಿತು ಈ ದಿನʼದೊಂದಿಗೆ ಮಾತನಾಡಿದ ಕಾಂಗ್ರೆಸ್‌ ಮುಖಡ ಪಿ.ಎಂ ಮಾಲತೇಶ್, “ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣೆವೇ ಅವೈಜ್ಞಾನಿಕ, ನಗರದಲ್ಲಿ ಕೈಗರಿಕೋದ್ಯಮ ಬೆಳಸದೆ, ಯಾವದೇ ರೀತಿಯ ದೂರದೃಷ್ಟಿ ಇಲ್ಲದೆ ತಮ್ಮ ವೈಯಕ್ತಿಕ ವರ್ಚಸ್ಸುವೃದ್ಧಿಗಾಗಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಮಾಡಿಕೊಂಡು ಇಂದು ವಿಮಾನ ಹಾರಾಟ ಸ್ಥಗಿತ ಆಗುವ ಹಂತಕ್ಕೆ ತಂದಿರುವುದು ಕೇಂದ್ರ ಸರ್ಕಾರ ಹಾಗೂ ಸಂಸದರು ಮಾಡಿರುವುದು ದುರ್ದೈವ ಸಂಗತಿಯಾಗಿದೆ. ವಿಮಾನ ದರ ಕೈಗೆಟಕುವ ದರದಲ್ಲಿ ಇಲ್ಲ ಕನಿಷ್ಠ ಪಕ್ಷ 6,500₹ ಬೇಕಾಗಲಿದೆ ಶಿವಮೊಗ್ಗದಿಂದ ಬೆಂಗಳೂರು ತೆರಳಲು ಒಬ್ಬರಿಗೆ ಅದೇ ಒಂದು ಕುಟುಂಬ ಕಾರ್‌ನಲ್ಲಿಯೇ ಪ್ರಯಾಣಿಸಬಹು” ಎಂದಿದ್ದಾರೆ.

307ab8dd 2de2 4120 92d4 598223f73be1

“ಇದು ಮಧ್ಯಮ ವರ್ಗಕ್ಕೆ ಹಾಗೂ ಬಡವರಿಗೆ ರೈತಾಪಿ ವರ್ಗಕ್ಕೆ ಯಾವದೇ ಅನುಕೂಲವಾಗಲ್ಲ ಹಾಗಾಗಿ. ಉಳ್ಳವರಿಗೆ ಮಾಡಿದ ವಿಮಾನ ನಿಲ್ದಾಣದಂತ ಆಗಿರುವುದು ದುರದೃಷ್ಟ ಸಂಗತಿಯಾಗಿದೆ. ಪ್ರಧಾನ ಮಂತ್ರಿ ಮೋದಿ, ಸಂಸದ ರಾಘವೇಂದ್ರ ಅಂದು ವಿಮಾನ ನಿಲ್ದಾಣ ಲೋಕಾರ್ಪಣೆ ಸಂದರ್ಭದಲ್ಲಿ ಅಡುಗೆ ಕಾಂಟ್ರಾಕ್ಟ್ರ್ 1ಕೋಟಿ 60 ಲಕ್ಷ ಹಣ ಮಾತಾಡಿದ್ದು, ಇಂದಿಗೂ ಅವರಿಗೆ ಹಣ ಸಂದಾಯವಾಗಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ದೂರದೃಷ್ಟಿ ಇಲ್ಲದೆ ಶಿವಮೊಗ್ಗದಂತ ಜಿಲ್ಲೆಗೆ ವಿಮಾನ ನಿಲ್ದಾಣ ಮಾಡುವ ಮೂಲಕ ಶಿವಮೊಗ್ಗಕ್ಕೆ ಕಳಂಕ ತರುವಂತೆ ಬಿಜೆಪಿ ಕೇಂದ್ರ ಸರ್ಕಾರ ಮಾಡಿರುವುದು ದುರದೃಷ್ಟಕರ” ಎಂದು ಅಭಿಪ್ರಾಯಿಸಿದ್ದಾರೆ.

ಈ ಕುರಿತು ಈದಿನ.ಕಾಮ್‌ ಜೊತೆಗೆ ಮಾತನಾಡಿದ ಸಾಗರದ ರೈತ ಮುಖಂಡ ಮೇಘರಾಜ್ ಪಡವಗೋಡು, “ಶಿವಮೊಗ್ಗದಲ್ಲಿ ಸಂಚಾರ ದಟ್ಟಣೆಯಾಗದಂತೆ, ವ್ಯಾಪಾರ ವಹಿವಾಟು ಇನ್ನಿತರೇ ಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಹಾಗಾಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತವಾಗಬಾರದು. ಈ ಸಂಬಂಧ ರಾಜಕಾರಣಿಗಳು ಸಂಸದರು ಜಿಲ್ಲೆಯ ಎಲ್ಲಾ ಶಾಸಕರು ಸಚಿವರು ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಈ ಹಿಂದೆ ಕೆಲವೇ ವರ್ಷಗಳಲ್ಲಿ ಮೊಬೈಲ್ ಕ್ರಾಂತಿ ನೋಡಿದ್ದೇವೆ ಅದೇ ರೀತಿ ವಿಮಾನ ಸಹಾ ಕ್ರಾಂತಿ ಆಗಲಿದೆ ತಾಲೂಕಿಗೂ ವಿಮಾನ ಸೇವೆ ನೀಡುವಂತೆ ಪರಿಸ್ಥಿತಿ ಉಂಟಾಗತ್ತೆ. ಮುಂದಾಲೋಚನೆ ಮನಗಂಡು ರಾಜಕಾರಣಿಗಳು ಆರೋಪ ಪ್ರತ್ಯಾರೋಪ ಬಿಟ್ಟು ಅಭಿವೃದ್ಧಿ ಪರ ಹೆಜ್ಜೆ ಹಾಕಬೇಕು” ಎಂದು ತಿಳಿಸಿದ್ದಾರೆ.

WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ ಬೆಳಕಿನಲ್ಲಿ ಮಂಟೇಸ್ವಾಮಿ

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ...

ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಕಡಿವಾಣ

ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಶಿವಮೂರ್ತಿ ಸರ್ಕಲ್ ಸಮೀಪದ ಐತಿಹಾಸಿಕ ನೆಹರು ಕ್ರೀಡಾಂಗಣದ...

35 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ‘ಋತು ತಾರೆ’ ಯೋಜನೆ; ನಟಿ ರಮ್ಯಾ ರಾಯಭಾರಿ!

ರಾಜ್ಯದಲ್ಲಿ 35 ವರ್ಷ ಮೇಲ್ಪಟ್ಟ ಮಧ್ಯವಯಸ್ಸಿನ ಮಹಿಳೆಯರ ಸಮಗ್ರ ಆರೋಗ್ಯ ರಕ್ಷಣೆಗೆ...

ಜನೌಷಧಿ ಕೇಂದ್ರಗಳಿಗೆ ಖಾದರ್ ವಾರ್ನಿಂಗ್; ಬ್ರ್ಯಾಂಡೆಡ್ ಔಷಧ ಮಾರಿದರೆ ಬೀಳುತ್ತೆ ಕೇಸ್!

ನಗರದ ಜನೌಷಧಿ ಕೇಂದ್ರಗಳಲ್ಲಿ ನಿಯಮಬಾಹಿರವಾಗಿ ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ...