ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಾಲ್ವರು ಗಾಯಗೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ ಗ್ರಾಮದ ಕೆಂಚಮ್ಮ ಬಾಳೆಕಾಯಿ(35), ಅಮೃತಾ ಕೋಟ್ಯಾಳ (25), ರಮೇಶ್ ಬಳ್ಳಾರಿ(45), ಚಿನ್ಮಯ(16) ಹಾಗೂ ಪ್ರವೀಣ ಶಿವಾಜಿ ಬಾಳೆಕಾಯಿ ಮೃತರು ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಸಮರ್ಥ ಯಾದವ್ ಪರಿಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಯಾಣಿಕರು ಸ್ವಗ್ರಾಮದಿಂದ ಮಂತ್ರಾಲಯಕ್ಕೆ ಕೊಪ್ಪಳ ಮಾರ್ಗವಾಗಿ ಓಮಿನಿ ವಾಹನದಲ್ಲಿ ತೆರಳುತ್ತಿದ್ದರು. ಭಾನಾಪುರ ಬಳಿ ಸರಕು ಸಾಗಣೆ ತುಂಬಿದ ವಾಹನ ರಸ್ತೆ ವಿಭಜಕ ದಾಟಿ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಂಡಿ | ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ಯಶವಂತರಾಯಗೌಡ ಪಾಟೀಲ ಸೂಚನೆ
ಡಿಕ್ಕಿ ರಭಸಕ್ಕೆ ಮೃತದೇಹಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆ್ಯಂಬುಲೆನ್ಸ್ ಸಿಬ್ಬಂದಿಯ ನೆರವಿನಿಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಂಬಂಧಿಕರ ಆಕ್ರಂದನ ಮುಗಿಮುಟ್ಟಿತ್ತು.
ಹಾವೇರಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿ, ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.




