ಉತ್ತರ ಕನ್ನಡ: ಮದ್ಯ ಸೇವಿಸಿ ಟ್ಯಾಂಕರ್ ಚಲಾಯಿಸಿದ್ದಲ್ಲದೆ, ವಾಹನವನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲು ಮುಂದಾದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಿಎಸ್‌ಐ ಮೇಲೆ ರಾಡ್‌ನಿಂದ ಹಲ್ಲೆಗೆ ಯತ್ನಿಸಿ, ಎಎಸ್‌ಐ ಮೇಲೂ ಹಲ್ಲೆ ನಡೆಸಿದ ಆರೋಪದ ಮೇಲೆ ಟ್ಯಾಂಕರ್ ಚಾಲಕನ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಶಬ್ಬೀರ ಮೌಲಾ ಬಾಡಕರ ಆರೋಪಿತ ಚಾಲಕ. ನವೆಂಬರ್ 11ರಂದು ಮಧ್ಯಾಹ್ನ 4.30ರ ಸುಮಾರಿಗೆ ರಾಮನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿಎಸ್‌ಐ ಮಹಾಂತೇಶ ನಾಯಕ ಅವರಿಗೆ, ಕ್ಯಾಸಲ್‌ರಾಕ್ ಕ್ರಾಸ್ ಬಳಿ ಗೋವಾ ಕಡೆಗೆ ತೆರಳುತ್ತಿದ್ದ ಪ್ರವಾಸಿಗರ ಕಾರನ್ನು ಟ್ಯಾಂಕರ್ ಚಾಲಕ ಅಡ್ಡಗಟ್ಟಿ ಗಲಾಟೆ ಮಾಡಿದ್ದಾನೆ.
ಅಲ್ಲದೆ, ಲಿವರ್ ರಾಡ್ ತೆಗೆದುಕೊಂಡು ಕಾರು ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎ-48/ಎ-6386 ನೋಂದಣಿ ಸಂಖ್ಯೆಯ ಟ್ಯಾಂಕರ್‌ನ್ನು ಪರಿಶೀಲಿಸುವಂತೆ ಪಿಎಸ್‌ಐ ಹನುಮಂತ ಕುಡಗುಂಟಿ ಮತ್ತು ಸಿಬ್ಬಂದಿಗೆ ಸೂಚಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಶಿರಸಿ | ಬನವಾಸಿಯಲ್ಲಿ ಸರಣಿ ಮನೆ ಕಳ್ಳತನ: 20 ಗ್ರಾಂ ಚಿನ್ನಾಭರಣ, ₹56 ಸಾವಿರ ನಗದು ಕಳವು
ಪೊಲೀಸರು ರಾಮನಗರದ ಹೆದ್ದಾರಿ ಕ್ರಾಸ್ ಬಳಿ ಟ್ಯಾಂಕರ್ ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ನಿಲ್ಲಿಸದೆ, ಜಾಮೀಯಾ ಮಸೀದಿ ಬಳಿ ವಾಹನ ನಿಲ್ಲಿಸಿದ್ದಾನೆ. ಬಳಿಕ ಪೊಲೀಸರು ಬ್ರೆತ್ ಅನಲೈಸರ್ ಮೂಲಕ ಪರೀಕ್ಷಿಸಿದಾಗ ಚಾಲಕ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದ್ಯ ಸೇವನೆ ಮಾಡಿರುವುದರಿಂದ ಟ್ಯಾಂಕರ್ ಚಲಾಯಿಸಲು ಅವಕಾಶ ನೀಡುವುದಿಲ್ಲ ಹಾಗೂ ವಾಹನವನ್ನು ಠಾಣೆಗೆ ಕೊಂಡೊಯ್ಯುವುದಾಗಿ ಪೊಲೀಸರು ತಿಳಿಸಿದಾಗ ಚಾಲಕ ವಿರೋಧ ವ್ಯಕ್ತಪಡಿಸಿದ್ದಾನೆ. ಅಲ್ಲದೆ, ವಾಹನವನ್ನು ತೆಗೆದುಕೊಂಡು ಹೋಗಲು ಯಾರಾದರೂ ಅಡ್ಡ ಬಂದರೆ ಹಾಯಿಸಿಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ವೇಳೆ ಪಿಎಸ್‌ಐ ಮಹಾಂತೇಶ ನಾಯಕ ಅವರ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಕೈಯಲ್ಲಿದ್ದ ದಪ್ಪನೆಯ ಲಿವರ್ ರಾಡ್‌ನ್ನು ಅವರ ತಲೆಯ ಕಡೆಗೆ ಎಸೆದಿದ್ದಾನೆ. ಆದರೆ ಪಿಎಸ್‌ಐ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ತಡೆಯಲು ಮುಂದಾದ ಎಎಸ್‌ಐ ನಾಗಭೂಷಣ ಅವರ ಎದೆಗೆ ಗುದ್ದಿ ಕೆಳಗೆ ತಳ್ಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಶಬ್ಬೀರ ಮೌಲಾ ಬಾಡಕರ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ 122/2026ನೇ ಸಂಖ್ಯೆಯಲ್ಲಿ ಬಿಎನ್‌ಎಸ್ 2023ರ ಕಲಂ 132, 121(1), 352, 351(2), 109 ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 185ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




