SIR ಪ್ರಾರಂಭವಾಗುವ ಜೂ.30ರಂದು ಬಾಯಿಗೆ ಕಪ್ಪು ಬಟ್ಟೆ ತೊಟ್ಟು ಅಥವಾ ಕಪ್ಪು ಪಟ್ಟಿ ಧರಿಸಿ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ, ಕೆಲಸದ, ವಾಸದ ಸ್ಥಳಗಳಲ್ಲಿ ಮತ್ತು ಮನೆಗಳ ಮುಂದೆಯೂ SIR ವಿರೋಧಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಲಾಗುವುದು ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ತಿಳಿಸಿದೆ.
SIR ಎಂಬುದು ಸಂವಿಧಾನಬಾಹಿರ, ಅವೈಜ್ಞಾನಿಕ, ದೋಷಪೂರಿತ, ದುರುದ್ದೇಶಗಳಿಂದ ಕೂಡಿದ ಪ್ರಕ್ರಿಯೆ. ಈ ವಿನಾಶಕಾರಿ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಈ ಹಿನ್ನೆಲೆ ಚುನಾವಣಾ ಆಯೋಗದ ಮುಂದೆ ಈ ಪ್ರಕ್ರಿಯೆಯನ್ನು ಪ್ರಜಾತಾಂತ್ರಿಕಗೊಳಿಸಲು 4 ಪ್ರಮುಖ ಹಕ್ಕೊತ್ತಾಯಗಳನ್ನು ಪರಿಗಣಿಸಿ ಪ್ರತಿಕ್ರಿಯಿಸಬೇಕೆಂದು ಮೇ30ರಂದು ರಾಜ್ಯಾದ್ಯಂತ ಜಿಲ್ಲಾ ತಾಲ್ಲೂಕುಗಳ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿರೋಧವನ್ನು ದಾಖಲಿಸಿ, ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಹಕ್ಕೊತ್ತಾಯ ಪತ್ರ ಕಳುಹಿಸಿತ್ತು.
ಇದನ್ನೂ ಓದಿ: ಎಸ್‌ಐಆರ್ ವಿರೋಧಿ ಒಕ್ಕೂಟದಿಂದ ಜೂ.17ರಂದು ಚಾಮರಾಜನಗರದಲ್ಲಿ ಜನಜಾಗೃತಿ ಜಾಥಾ
ಕರ್ನಾಟಕದ SIR ವಿರೋಧಿ ಒಕ್ಕೂಟದ ವತಿಯಿಂದ ಜೂನ್ 20 ರಂದು ಫ್ರೀಡಂ ಪಾರ್ಕಿನಲ್ಲಿ ನಡೆಯುವ ಬೃಹತ್ ಪ್ರತಿರೋಧ ಸಮಾವೇಶಕ್ಕೆ ಆಗಮಿಸಿ ನಾಗರಿಕ ಸಮಾಜದ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿ ರಾಜ್ಯದ ಚುನಾವಣಾ ಅಧಿಕಾರಿಯಾಗಿರುವ ಅನ್ಬುಕುಮಾರ್ ಅವರಿಗೆ ವಿಶೇಷ ಆಹ್ವಾನವನ್ನು ಮಾಡಲಾಗಿತ್ತು. ಆದರೆ ಚುನಾವಣಾ ಆಯೋಗ ಇಲ್ಲಿಯವರೆಗೂ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಇದನ್ನು ಎಸ್‌ಐಆರ್ ವಿರೋಧಿ ಒಕ್ಕೂಟ ಖಂಡಿಸಿದೆ.
ಈ ಹಿನ್ನೆಲೆಯಲ್ಲಿ ಎಸ್‌ಐಆರ್ ವಿರೋಧಿ ಅಭಿಯಾನದ ಮುಂದಿನ ಹೆಜ್ಜೆಯಾಗಿ SIR ಪ್ರಾರಂಭವಾಗುವ ಜೂ.30 ರಂದು ಬಾಯಿಗೆ ಕಪ್ಪು ಬಟ್ಟೆ ತೊಟ್ಟು ಅಥವಾ ಕಪ್ಪು ಪಟ್ಟಿ ಧರಿಸಿ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೇ ಕೆಲಸದ, ವಾಸದ ಸ್ಥಳಗಳಲ್ಲಿ ಮತ್ತು ಮನೆಗಳ ಮುಂದೆಯೂ SIR ವಿರೋಧಿ ಫಲಕಗಳನ್ನು ಹಿಡಿದು ಪ್ರತಿಭಟಿಸಲು SIR ವಿರೋಧಿ ಒಕ್ಕೂಟ ಮುಂದಾಗಿದೆ.
“ನಮ್ಮ ಗ್ರಾಮ ನಮ್ಮ ಜವಾಬ್ದಾರಿ”, “ನಮ್ಮ ಏರಿಯಾ ನಮ್ಮ ಜವಾಬ್ದಾರಿ” ಘೋಷಣೆಯ ಮೇರೆಗೆ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ “ಮತ ಕಾವಲು ಸಮಿತಿ”ಗಳನ್ನು ರಚಿಸುವ ಅಭಿಯಾನವನ್ನೂ ಇದೇ ಜೂನ್ 30 ರಿಂದ ಪ್ರಾರಂಭಿಸಲಾಗುವುದು ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ತಿಳಿಸಿದೆ.
ಚುನಾವಣಾ ಆಯೋಗಕ್ಕೆ ಪ್ರಮುಖ ನಾಲ್ಕು ಹಕ್ಕೊತ್ತಾಯಗಳು:
- ತಾರ್ಕಿಕ ವ್ಯತ್ಯಾಸ (ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟ್‌ವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು. (ಏಕೆಂದರೆ ಇದು ಚುನಾವಣಾ ಮ್ಯಾನ್ಯುಯಲ್‌ನಲ್ಲಿ ಇಲ್ಲ. ಪ್ರಕಟಿತ SIR ನಿಯಮಗಳಲ್ಲೂ ಇರಲಿಲ್ಲ. ಈ ಸಾಪ್ಟ್‌ವೇರ್ ಯಾವುದೇ ವಿಶ್ವಾಸಾರ್ಹ ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟು, ಅನುಮೋದನೆ ಪಡೆದಿಲ್ಲ. ಪಶ್ಚಿಮ ಬಂಗಾಳದಲ್ಲಿ ಅವಾಂತರ ಸೃಷ್ಟಿಸಿದ್ದೆ ಈ ಸಾಫ್ಟ್ ವೇರ್. 1.33 ಕೋಟಿ ಜನರಿಗೆ ನೋಟಿಸ್, 91 ಲಕ್ಷ ಜನರು ಡಿಲೀಟ್, 27 ಲಕ್ಷ ಜನರ ಬಳಿ ದಾಖಲೆಗಳಿದ್ದರೂ ಓಟು ಹಾಕಲು ಅವಕಾಶ ನೀಡಲಿಲ್ಲ.)
- ಕರಡು ಮತದಾರರ ಪಟ್ಟಿಯನ್ನು ‘ಗ್ರಾಮ/ವಾರ್ಡ್ ಸಭೆ’ಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು. (ಚುನಾವಣಾ ಆಯೋಗದ ಮ್ಯಾನ್ಯೂಯಲ್‌ನಲ್ಲಿ ತಿಳಿಸಿದಂತೆ, ಗ್ರಾಮ/ವಾರ್ಡ್ ಪ್ರದೇಶದ ಸಭೆಗಳನ್ನು ಕರೆದು, ಕರಡು ಮತದಾರರ ಪಟ್ಟಿಯಲ್ಲಿನ ಆ ಪ್ರದೇಶದ ಭಾಗವನ್ನು ಓದಬೇಕು. ಮತದಾರರ ಪಟ್ಟಿಯಲ್ಲಿ ಆಗಿರುವ ಸೇರ್ಪಡೆ ಹಾಗೂ ನಿರಾಕರಣೆಯನ್ನು ಗಮನಕ್ಕೆ ತಂದು ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು.)
- ಮನವಿ/ಆಕ್ಷೇಪಣೆಗಳನ್ನು ಸಲ್ಲಿಸಲು ಕನಿಷ್ಟ 6 ತಿಂಗಳ ಸಮಯವಕಾಶ ಇರಬೇಕು. (ಲಕ್ಷಾಂತರ ಜನರು ಡಿಲೀಟ್ ಆಗಲು ಈ ಪ್ರಕ್ರಿಯೆಯಲ್ಲಿರುವ ಗಡಿಬಿಡಿಯೂ ಒಂದು ಮುಖ್ಯ ಕಾರಣವಾಗಿದೆ. ಜನರ ಬಳಿ ಇರುವ ದಾಖಲೆಗಳನ್ನು ಆಯೋಗ ಒಪ್ಪುತ್ತಿಲ್ಲ. ಆಯೋಗ ಕೇಳುವ ದಾಖಲೆಗಳು ಸಾಮಾನ್ಯವಾಗಿ ಜನರ ಬಳಿ ಇಲ್ಲ. ದಾಖಲೆಗಳನ್ನು ಹೊಂದಿಸಿಕೊಳ್ಳಲು ಸಮಯವಕಾಶ ಬೇಕೇಬೇಕು. ವಲಸೆ ಎಂಬುದು ಇಂದು ಸರ್ವೆಸಾಮಾನ್ಯ ವಿದ್ಯಮಾನ. ದುಡಿಯಲು ಹೋದ ಪ್ರದೇಶಗಳಿಂದ ಮರಳಿ ಬಂದು ದಾಖಲೆ ಸಿದ್ಧಮಾಡಿಕೊಡುವುದು ಸುಲಭವಲ್ಲ. ಅಲ್ಲದೆ ಕರ್ನಾಟಕದ ಚುನಾವಣೆಗಳೂ ತಕ್ಷಣದಲ್ಲೇನೂ ಇಲ್ಲ.)
- ಮತದಾರರ ಕರಡು ಪಟ್ಟಿಯನ್ನು ರೀಡಬಲ್ ಫಾರ್ಮ್ಯಾಟಿನಲ್ಲಿ ನೀಡಬೇಕು. (ಈಗ ಆಯೋಗದ ವೆಬ್ ಸೈಟಿನಲ್ಲಿ ವ್ಯಕ್ತಿ ತನ್ನ ವಿವರ ಹಾಕಿ ವ್ಯಕ್ತಿಗತ ಓಟಿನ ಸ್ಥಿತಿಗತಿ ನೋಡಿಕೊಳ್ಳಬಹುದು. ಆದರೆ ಎಲ್ಲರ ಓಟಿನ ಸ್ಥಿತಿಗತಿಯನ್ನು ಪರಿಶೀಲಿಸಲು ಬರುವುದಿಲ್ಲ. ಇಡೀ ಮತದಾರರ ಪಟ್ಟಿಯನ್ನೇ ಹೊಸದಾಗಿ ನೋಂದಾವಣೆ ಮಾಡುತ್ತಿರುವಾಗ ನಮ್ಮ ನಮ್ಮ ಊರಿನ, ನಮ್ಮ ಸಮುದಾಯಗಳ, ನಮ್ಮ ನಮ್ಮ ಪಕ್ಷದ ಮತದಾರರ ಓಟುಗಳ ಸ್ಥಿತಿ ತಿಳಿದುಕೊಳ್ಳಲು ಅವಕಾಶ ಪ್ರತಿಯೊಬ್ಬರಿಗೂ ಇರಬೇಕು. ಮತದಾರರ ಪಟ್ಟಿ ಎಂಬುದು ಸಾರ್ವಜನಿಕ ದಾಖಲೆ ಅದು ಗೌಪ್ಯ ದಾಖಲೆ ಅಲ್ಲ)




