ಕೊಪ್ಪಳದ ಅಳವಂಡಿ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ಹಲ್ಲೆಯನ್ನು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ಜನಶಕ್ತಿ ವಿದ್ಯಾರ್ಥಿ ಸಂಘಟನೆ, ಮಹಿಳಾ ಮುನ್ನಡೆ ಹಾಗೂ ಪ್ರಗತಿಪರ ಚಿಂತಕರು ತೀವ್ರವಾಗಿ ಖಂಡಿಸಿದ್ದು, ಹೋರಾಟಕ್ಕೆ ಕರೆ ನೀಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾದಿಗ ರಕ್ಷಣಾ ವೇದಿಕೆ, ಮೊಹರಂ ಹಬ್ಬದ ಸಂದರ್ಭದಲ್ಲಿ ಮಾದಿಗ ಸಮುದಾಯದ ಕಾಲೋನಿಗೆ ನುಗ್ಗಿ ಕೆಲ ಕಿಡಿಗೇಡಿಗಳು ದೌರ್ಜನ್ಯ ನಡೆಸಿರುವ ಘಟನೆ ಖಂಡನೀಯವಾಗಿದೆ. ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವಂತಹ ಜಾತಿವಾದಿ ಮನೋಭಾವದ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
“ಸಂವಿಧಾನ ನೀಡಿರುವ ಸಮಾನತೆ, ಗೌರವ ಮತ್ತು ಬದುಕುವ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಹಾಗೂ ಆಡಳಿತದ ಜವಾಬ್ದಾರಿಯಾಗಿದೆ. ಯಾವುದೇ ಸಮುದಾಯದ ಮೇಲೆ ಅನ್ಯಾಯ ನಡೆದರೆ ಅದನ್ನು ಸಹಿಸಲಸಾಧ್ಯ. ಬೋಚನಹಳ್ಳಿ ಗ್ರಾಮದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು” ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಗ್ರಾಮದಲ್ಲಿ ಶಾಶ್ವತ ಶಾಂತಿ, ಭದ್ರತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಮುಖಂಡರು ಚರ್ಚಿಸಿದರು. ನೊಂದ ಸಮುದಾಯದ ಪರವಾಗಿ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಕರಿಯಪ್ಪ ಗುಡಿಮನಿ ಅವರ ನೇತೃತ್ವದಲ್ಲಿ ಮುಂದಿನ ಹೋರಾಟ ರೂಪಿಸಲು ನಿರ್ಧರಿಸಲಾಯಿತು. ಗ್ರಾಮದ ನೊಂದ ಮಾದಿಗ ಸಮುದಾಯದ ನೂರಾರು ಜನರು ಈ ಸಂದರ್ಭದಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಮುದಕಪ್ಪ ಹೊಸಮನಿ, ಜಿಲ್ಲಾ ಉಪಾಧ್ಯಕ್ಷರಾದ ರಾಣದಪ್ಪ, ಮುಖಂಡರಾದ ನಿಂಗಪ್ಪ ಪೂಜಾರಿ, ಜಿಲ್ಲಾ ಖಜಾಂಚಿ ಗವಿಸಿದ್ದಪ್ಪ ಹಲಗಿ, ತಾಲೂಕು ಕಾರ್ಯದರ್ಶಿ ಯಂಕಪ್ಪ ಬಿಸರಳ್ಳಿ, ತಾಲೂಕು ಸಹ ಕಾರ್ಯದರ್ಶಿ ಹೊಸಳ್ಳಿ ನಾಗರಾಜ್, ಮುಖಂಡರಾದ ಕಾರಿಗನೂರು ಓಬಳೇಶ್, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಪರವಾಗಿ ವಕೀಲರಾದ ಯಮನೂರಪ್ಪ ಈಳಿಗನೂರು, ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




