ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್‌ನ ಎಎಂಆರ್ ಪ್ರೈವೇಟ್ ಲಿಮಿಟೆಡ್‌ನ ಎ. ಮಹೇಶ್ ರೆಡ್ಡಿ ನೀಡಿದ ದೇಣಿಗೆಯಲ್ಲಿನ ಕವಚಗಳಿಗೆ ಉಪಯೋಗಿಸಿದ ಲೋಹಗಳ ಬಿಲ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ ತಿಳಿಸಿದ್ದಾರೆ.
ದಾನಿಗಳು ಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಕಾಣಿಕೆಗಳನ್ನು ದೇವಸ್ಥಾನ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮೇ 10ರಂದು ಪಂಚನಾಮೆ ನಡೆಸಲಾಗಿದೆ. ಈ ವೇಳೆ ಆಂಜನೇಯ ದೇವಸ್ಥಾನದ ಆಡಳಿತಾಧಿಕಾರಿಗಳು, ಗಂಗಾವತಿ ತಹಶೀಲ್ದಾರ್, ನಿಯೋಜಿತ ಪೊಲೀಸ್ ಸಿಬ್ಬಂದಿ, ದೇವಸ್ಥಾನ ಸಿಬ್ಬಂದಿ, ಹೈದರಾಬಾದ್‌ನ ಎಎಂಆರ್ ಪ್ರೈವೇಟ್ ಲಿಮಿಟೆಡ್‌ನ ಡಾ. ಮಹೇಶ್ ರೆಡ್ಡಿ ಅವರ ಪರವಾಗಿ ಆಂಧ್ರಪ್ರದೇಶದ ಆದೋನಿ ದೇವಸ್ಥಾನದ ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ, ಹುಲಿಗಿ ಗ್ರಾಮದ ಅಕ್ಕಸಾಲಿಗರು ಮತ್ತು ಬ್ಯಾಂಕ್ ಆಭರಣ ಮೌಲ್ಯಮಾಪಕರು ಇದ್ದರು.
ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ನೀಡಲಾದ ಲೋಹಗಳ ವಿವರಗಳನ್ನು ಒದಗಿಸಲಾಗಿದ್ದು, ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದೆ ಎಂದು ತಿಳಿಸಲಾಗಿದೆ. ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ವ್ಯಾಸದ ಬಂಗಾರದ ಹಾಳೆಗಳನ್ನು ಬಳಸಲಾಗಿದೆ. ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಇರುವುದಾಗಿ ದಾನಿಗಳ ಪರವಾಗಿ ಹಾಜರಿದ್ದ ಗುಂಡಾಚಾರಿ ಸ್ಥಪತಿ ಹೇಳಿದ್ದಾರೆ.
ಆದರೆ ಸರ್ಕಾರದ ಪರವಾಗಿ ಹಾಜರಿದ್ದ ಅಕ್ಕಸಾಲಿಗರು ಕವಚಗಳನ್ನು ಪರಿಶೀಲಿಸಿ, ತಾಮ್ರದ ಕವಚಗಳಿಗೆ ಲೇಪನ ಮಾಡಿದ ಬಂಗಾರದ ತೂಕವು ಅಂದಾಜು 250 ರಿಂದ 300 ಗ್ರಾಂ ಮಾತ್ರ ಇರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ>ಕೊಪ್ಪಳ | ವಿದೇಶಿ ಮಹಿಳೆ ಅತ್ಯಾಚಾರ, ಪ್ರವಾಸಿ ಕೊಲೆ ಪ್ರಕರಣ : 3 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ
ದೇವಸ್ಥಾನದ ಕಚೇರಿ ಸಮಿತಿಯ ಸುಪರ್ದಿಗೆ ಬಂಗಾರದ ಲೇಪನವುಳ್ಳ ಎಲ್ಲ ತಾಮ್ರ ಕವಚಗಳನ್ನು ತೆಗೆದುಕೊಳ್ಳಲು ಸರಿಯಾದ ನಿಖರ ಮಾಹಿತಿ ಅಗತ್ಯವಿರುವುದರಿಂದ, ದೇಣಿಗೆ ನೀಡಲಾದ ಎಲ್ಲ ಕವಚಗಳಿಗೆ ಉಪಯೋಗಿಸಲಾದ ಲೋಹಗಳ ವಿವರ, ಸರಕು ಪಟ್ಟಿ ಸೇರಿದಂತೆ ಇತರೆ ದಾಖಲೆಗಳನ್ನು ಮೇ 12ರೊಳಗೆ ನೀಡುವಂತೆ ದಾನಿಗಳ ಪರವಾಗಿ ಹಾಜರಿದ್ದ ಶ್ರೀ ಗುಂಡಾಚಾರಿ ಸ್ಥಪತಿ ಅವರಿಗೆ ಸೂಚಿಸಲಾಗಿತ್ತು.
ಈ ಸೂಚನೆಯ ಮೇರೆಗೆ ಗುಂಡಾಚಾರಿ ಸ್ಥಪತಿ ಮೇ 11ರಂದು ಸರಕು ಪಟ್ಟಿ, ಮಜೂರಿ ವಿವರ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ದಾಖಲೆಗಳನ್ನು ಆಧರಿಸಿ ಪುನಃ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




