ಹುಬ್ಬಳ್ಳಿಯಿಂದ ಉಡುಪಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕುಮಟಾ ಬಸ್ ನಿಲ್ದಾಣ ತಲುಪುವ ವೇಳೆಗೆ ಮೃತಪಟ್ಟ ಘಟನೆ ನವೆಂಬರ್ 25ರ ಮುಂಜಾನೆ ನಡೆದಿದೆ.
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓಣಿಕೇರಿ ಮೂಲದ, ಪ್ರಸ್ತುತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿ ವಾಸವಾಗಿದ್ದ ಮಂಜುನಾಥ ನಾಗಪ್ಪ ಅಕ್ಕಸಾಲಿ (50) ಎಂದು ಗುರುತಿಸಲಾಗಿದೆ. ಇವರು ಬೆಳ್ಳಿ-ಬಂಗಾರದ ಕೆಲಸ ಮಾಡುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಬೆಳೆ ರಕ್ಷಣೆಗೆ ಅಕ್ರಮ ವಿದ್ಯುತ್ ಬೇಲಿ; ಶಾಕ್ ತಗುಲಿ ಗಂಡಾನೆ ಸಾವು, ತಂದೆ-ಮಗ ಅರಣ್ಯ ಇಲಾಖೆ ವಶಕ್ಕೆ
ನವೆಂಬರ್ 25ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ಉಡುಪಿಗೆ ತೆರಳುವ ಕೆಎ-19 ಎಫ್-3475 ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದ ಮಂಜುನಾಥ ಅವರು ಪ್ರಯಾಣದ ವೇಳೆ ಸೀಟಿನಲ್ಲೇ ಮಲಗಿದ್ದರು. ಮಧ್ಯರಾತ್ರಿ 2.45ರ ಸುಮಾರಿಗೆ ಶಿರಸಿ ಹಳೆ ಬಸ್ ನಿಲ್ದಾಣದಲ್ಲಿ ಎಚ್ಚರಗೊಂಡು ತಮ್ಮ ಬಳಿಯಿದ್ದ ನೀರಿನ ಬಾಟಲಿಯಿಂದ ನೀರು ಕುಡಿದು ಮತ್ತೆ ಅದೇ ಸೀಟಿನಲ್ಲಿ ಮಲಗಿದ್ದರು ಎನ್ನಲಾಗಿದೆ.
ಮುಂಜಾನೆ 4.05ರ ಸುಮಾರಿಗೆ ಬಸ್ ಕುಮಟಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿದಾಗ ಅವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.ಶಿರಸಿ ಮತ್ತು ಕುಮಟಾ ನಡುವಿನ ಪ್ರಯಾಣದ ಅವಧಿಯಲ್ಲಿ ಅನಾರೋಗ್ಯ, ಅತಿಯಾದ ಮದ್ಯಪಾನ ಅಥವಾ ಹೃದಯಾಘಾತದಂತಹ ಕಾರಣದಿಂದ ಸಾವು ಸಂಭವಿಸಿರಬಹುದು ಎಂಬ ಸಾಧ್ಯತೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ನಿದ್ರೆ ಅಥವಾ ಮದ್ಯದ ಅಮಲಿನಲ್ಲಿ ಬಸ್ ಸೀಟಿನಿಂದ ಕೆಳಗೆ ಬಿದ್ದಿರುವ ಸಾಧ್ಯತೆಯ ಬಗ್ಗೆಯೂ ದೂರುದಾರರು ತಿಳಿಸಿದ್ದಾರೆ. ಈ ಸಂಬಂಧ ಬಸ್ ಕಂಡಕ್ಟರ್ ಶ್ರೀಕಾಂತ ರಾಮರಾಯ ಜಾದವ (37) ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.



