ಬಡ ಹಾಗೂ ಮಧ್ಯಮ ವರ್ಗದ ಕನ್ನಡಿಗರಿಗೆ ಸಂಜೀವಿನಿಯಾಗಬೇಕಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಸಿಬ್ಬಂದಿಗಳ ಅಸಡ್ಡೆ ಹಾಗೂ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮದ್ದೂರು ತಾಲೂಕು ಘಟಕದ ವತಿಯಿಂದ ಏಪ್ರಿಲ್ 7 ರಂದು ಆಸ್ಪತ್ರೆಯ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಎದುರು ಜಮಾಯಿಸಿದ ಕೆಂಪು-ಹಳದಿ ಶಾಲು ಧರಿಸಿದ್ದ ಕರವೇ ಕಾರ್ಯಕರ್ತರು, ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಡಳಿತ ವೈದ್ಯಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸುವ ಮೂಲಕ ಆಸ್ಪತ್ರೆಯಲ್ಲಿ ತಕ್ಷಣವೇ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.
ಕರವೇ ಮದ್ದೂರು ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರೇಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, “ಬಡವರು ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲಾಗದೆ, ತಮ್ಮ ಮನೆ-ಮಠಗಳನ್ನು ಮಾರಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಸರ್ಕಾರಿ ಆಸ್ಪತ್ರೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ,
ರೋಗಿಗಳಿಂದ ಪಡೆಯುವ 10 ರೂ. ಚೀಟಿ ಕಳೆದುಹೋಗುವ ಸಾಧ್ಯತೆಗಳಿರುವುದರಿಂದ, ಪದೇ ಪದೇ ಚೀಟಿ ಮಾಡಿಸುವ ಬದಲು ಒಂದು ಪುಸ್ತಕವನ್ನು ಒದಗಿಸಬೇಕು. ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಯಾವ್ಯಾವ ವೈದ್ಯರು ಲಭ್ಯವಿದ್ದರೆ, ಅವರ ವಿಭಾಗ, ಹಾಗೂ ಪಾಳಿಯ ಸಮಯದ ವಿವರಗಳಿರುವ ನಾಮಫಲಕ ಅಳವಡಿಸಬೇಕು” ಎಂದರು.
ಇದನ್ನು ಓದಿ>>ತೃತೀಯ ಭಾಷೆಗೆ ಗ್ರೇಡಿಂಗ್: ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ರಾಜ್ಯಪಾಲರಿಗೆ ಕರವೇ ಎಚ್ಚರಿಕೆ
“ವೈದ್ಯರು ರೋಗಿಗಳಿಗೆ ಹೊರಗಿನ ಮೆಡಿಕಲ್ ಸ್ಟೋರ್‌ಗಳಿಂದ ಔಷಧಿ ತರುವಂತೆ ಚೀಟಿ ಕೊಡಬಾರದು. ಒಂದು ವೇಳೆ ಔಷಧಿ ಲಭ್ಯವಿಲ್ಲದಿದ್ದರೆ, ಹೊರಗೆ ಖರೀದಿಸಿದ ಬಿಲ್ ಆಧಾರದ ಮೇಲೆ ಆಸ್ಪತ್ರೆಯ ನಿಧಿಯಿಂದ ಹಣ ಮರುಪಾವತಿ ಮಾಡಬೇಕು. ವೃದ್ಧಾಪ್ಯ ವೇತನ, ವಿಕಲಚೇತನ ಪ್ರಮಾಣ ಪತ್ರ ಪಡೆಯಲು ಬರುವವರಿಂದ ಹಾಗೂ ಕಣ್ಣು, ಹೃದಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗೆ ಬರುವವರಿಂದ ಲಂಚ ಕೇಳುವ ದಂಧೆ ಕೂಡಲೇ ನಿಲ್ಲಬೇಕು. ಕೆಟ್ಟುಹೋಗಿರುವ ಲ್ಯಾಬ್, ಎಕ್ಸ್-ರೇ ಮತ್ತು ಸ್ಕ್ಯಾನಿಂಗ್ ಯಂತ್ರಗಳ ನೆಪವೊಡ್ಡಿ ರೋಗಿಗಳನ್ನು ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸುವುದನ್ನು ನಿಲ್ಲಿಸಿ, ಯಂತ್ರಗಳನ್ನು ತಕ್ಷಣ ದುರಸ್ತಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ಪ್ರತಿದಿನ ರೋಗಿಗಳಿಂದ ಸಂಗ್ರಹಿಸುವ 10 ರೂ. ಹಣದ ಲೆಕ್ಕಾಚಾರವನ್ನು ಹಾಗೂ ಅದನ್ನು ಯಾವ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ಒದಗಿಸಬೇಕು. ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳಬೇಕಾದ ‘ಆರೋಗ್ಯ ರಕ್ಷಾ ಸಮಿತಿ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಇಲ್ಲವೇ ರಾಜೀನಾಮೆ ನೀಡಬೇಕು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು ಮತ್ತು ರೋಗಿಗಳೊಂದಿಗೆ ಹಾಗೂ ಅವರ ಸಂಬಂಧಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು” ಎಂದು ಆಗ್ರಹಿಸಿದರು.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಆಸ್ಪತ್ರೆಯ ಎದುರು ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹಾಗೂ ನಿರಂತರ ಪ್ರತಿಭಟನೆ ಕೈಗೊಳ್ಳುತ್ತದೆ ಎಂದು ಸಂಘಟನೆಯ ಮುಖಂಡರು ಆಡಳಿತಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.





