ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರವಾಗಿ ಖಂಡಿಸಿದೆ. ‘ಇದು ಒಕ್ಕೂಟ ವ್ಯವಸ್ಥೆಯ ಅಣಕ’ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯಪಾಲರಿಗೆ ಬಹಿರಂಗ ಪತ್ರ ಬರೆದಿರುವ ಅವರು, ರಾಜ್ಯ ಸರ್ಕಾರದ ಆಡಳಿತಾತ್ಮಕ ವಿಚಾರಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರೇ ಹೊರತು, ಜನರಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ರಾಜ್ಯದಲ್ಲಿ ಬಹುಮತದ ಸರ್ಕಾರ ಸುಭದ್ರವಾಗಿ ಕಾರ್ಯನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ರಾಜ್ಯಪಾಲರಿಗೆ ಯಾವುದೇ ನೈತಿಕ ಹಾಗೂ ಸಾಂವಿಧಾನಿಕ ಹಕ್ಕಿಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಅಗತ್ಯ ಬದಲಾವಣೆಗಳನ್ನು ತರುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಹೀಗಿರುವಾಗ ರಾಜ್ಯಪಾಲರ ಈ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ’ ಎಂಬ ಹೆಸರೇ ಕೇಳರಿಯದ ಸಂಘಟನೆಯೊಂದರ ಮನವಿಗೆ ರಾಜ್ಯಪಾಲರು ಅತ್ಯಂತ ತುರ್ತಾಗಿ ಸ್ಪಂದಿಸಿರುವುದರ ಹಿಂದೆ ಕುತಂತ್ರವಿದೆ. ಮರೆಯಲ್ಲಿ ನಿಂತು ಬಾಣ ಬಿಡುವ ಇಂತಹ ಪ್ರಯತ್ನಗಳು ಕರ್ನಾಟಕಕ್ಕೆ ಹೊಸದೇನಲ್ಲ ಎಂದು ನಾರಾಯಣಗೌಡರು ಶಂಕಿಸಿದ್ದಾರೆ.
ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ
ರಾಜ್ಯಪಾಲರು ಹಿಂದಿ ಸಾಮ್ರಾಜ್ಯಶಾಹಿ ಲಾಬಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, “ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರ ಬರೆದಿದ್ದರೆ, ಮೊದಲು ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿಯ ಅನ್ವಯ ಅಲ್ಲಿನ ಮಕ್ಕಳಿಗೆ ‘ಕನ್ನಡ’ವನ್ನು ಮೂರನೇ ಭಾಷೆಯಾಗಿ ಕಲಿಸಲು ಸೂಚಿಸಿ. ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆ ಓದುತ್ತಿದ್ದಾರೆ. ನಿಮ್ಮ ತೃತೀಯ ಭಾಷಾ ಪ್ರೇಮವನ್ನು ಅಲ್ಲಿಯೇ ತೋರಿಸಿ, ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಇಲ್ಲಿ ಮಾತನಾಡಬೇಡಿ” ಎಂದು ಸವಾಲು ಹಾಕಿದ್ದಾರೆ.
ಕನ್ನಡಿಗರ ತೆರಿಗೆ ಹಣದಲ್ಲಿ ರಾಜಭವನದ ಐಷಾರಾಮಿ ವ್ಯವಸ್ಥೆ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ಸರಿಯಲ್ಲ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರವನ್ನು ಕೂಡಲೇ ಹಿಂಪಡೆಯಬೇಕು. ಶಿಕ್ಷಣ ತಜ್ಞರ ಸಲಹೆಯ ಮೇರೆಗೆ ಜಾರಿಗೆ ತರಲಾಗುತ್ತಿರುವ ಗ್ರೇಡಿಂಗ್ ವ್ಯವಸ್ಥೆಯನ್ನು ತಡೆಯಲು ಯತ್ನಿಸಿದರೆ ರಾಜ್ಯಾದ್ಯಂತ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಹಿಂಬಾಗಿಲಿನಿಂದ ಆಡಳಿತ ನಡೆಸುವ ಯತ್ನ ಮುಂದುವರಿಸಿದರೆ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ಹೇಳಬೇಕಾಗುತ್ತದೆ ಎಂದು ಕರವೇ ಅಧ್ಯಕ್ಷರು ರಾಜ್ಯಪಾಲರಿಗೆ ಕಟುವಾಗಿ ಎಚ್ಚರಿಸಿದ್ದಾರೆ.




