ವಿಶ್ವಗುರು ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಹಾಗೂ ವಿಶ್ವೇಶ್ವರ ಭಟ್ ಅವರ ವಿಚಾರಗಳು ಮತ್ತು ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿಕೆ ನೀಡಿರುವ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಹೇಳಿಕೆಗಳನ್ನು ದಲಿತ ಸಂಘರ್ಷ ಸಮಿತಿ (ಸಂಯೋಜಕ) ವಿಜಯಪುರ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹಾಗೂ ಅಸಮಾನತೆ ವಿರುದ್ಧ ಹೋರಾಡಿ ಕಾಯಕ, ದಾಸೋಹ ಮತ್ತು ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಅದೇ ರೀತಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಒಳಗೊಂಡಿದೆ. ಇಂತಹ ಮಹಾನ್ ವ್ಯಕ್ತಿತ್ವಗಳು ಹಾಗೂ ಸಂವಿಧಾನದ ಆಶಯಗಳ ಕುರಿತು ಮಾತನಾಡುವಾಗ ಜವಾಬ್ದಾರಿ ಮತ್ತು ಐತಿಹಾಸಿಕ ಅರಿವು ಅಗತ್ಯ ಎಂದು ಸಮಿತಿ ತಿಳಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇತಿಹಾಸ ತಿರುಚುವ ಹಾಗೂ ಸಂವಿಧಾನದ ಆಶಯಗಳ ಬಗ್ಗೆ ಆಧಾರರಹಿತ ಹೇಳಿಕೆ ನೀಡುವ ಪ್ರವೃತ್ತಿಯನ್ನು ಸಹಿಸುವುದಿಲ್ಲ. ಬಸವಣ್ಣನವರ ಸಮಾನತೆಯ ಹೋರಾಟ ಮತ್ತು ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಹೋರಾಟದ ವಿರುದ್ಧದ ಅಪಪ್ರಚಾರವನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ವೈಚಾರಿಕವಾಗಿ ಎದುರಿಸಲಾಗುವುದು ಎಂದು ಜಿಲ್ಲಾ ಸಂಯೋಜಕ ಮಂಜುನಾಥ್ ಆರ್. ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



