- ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಭೇಟಿ ಮಾಡಿ ಮನವಿ ಸಲ್ಲಿಕೆ
- ಬೆಂಗಳೂರಿನಲ್ಲಿ ಸೈನ್ಸ್ ಸಿಟಿ ಸ್ಥಾಪಿಸಲು ಕ್ರಮಕೈಗೊಳ್ಳಿ: ಮನವಿ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ನಗರವಾಗಿ ಹೊರ ಹೊಮ್ಮಿರುವ ಬೆಂಗಳೂರಿನಲ್ಲಿ ವಿಜ್ಞಾನ ನಗರ [ಸೈನ್ಸ್ ಸಿಟಿ] ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಗುರುವಾರ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು.
ಬೆಂಗಳೂರು ಪ್ರಮುಖ ನಗರವಾಗಿದ್ದು, ಭಾರತೀಯ ವಿಜ್ಞಾನ ಮಂದಿರ, ಜೆ.ಎನ್.ಸಿ.ಎ.ಎಸ್.ಆರ್, ರಾಮನ್ ಸಂಶೋಧನಾ ಸಂಸ್ಥೆ, 400 ಕ್ಕೂ ಅಧಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ಐಟಿ-ಬಿಟಿ ಪಾರ್ಕ್ ಗಳಿವೆ. ಇತ್ತೀಚೆಗೆ ವಿಜ್ಞಾನ ಗ್ಯಾಲರಿಯನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗಿದೆ” ಎಂದು ಕೇಂದ್ರದ ಗಮನಕ್ಕೆ ತಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಜೀವಕ್ಕೆ ಕಂಟಕ ತರುತ್ತಿರುವ ಜೀವಜಲ; ಆಡಳಿತಶಾಹಿಯೇ ಹೊಣೆ
ಕರ್ನಾಟಕ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಅದಕ್ಕೆ ಹೊಂದಿಕೊಂಡಿರುವ ರಾಮನಗರದಲ್ಲಿದ್ದು, ಈ ಪ್ರದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಪ್ರಯೋಜನದ ದೃಷ್ಟಿಯಿಂದ ಹಾಗೂ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು, ತಂತ್ರಜ್ಞರು, ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿಗೆ ವಿಜ್ಞಾನ ನಗರ ಮಂಜೂರು ಮಾಡುವಂತೆ ಕೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಟಗರಿ –3 ವಿಜ್ಞಾನ ಕೇಂದ್ರ, 8 ಮೀಟರ್ ಅಗಲದ ಟೈಪ್ – ಬಿ ಡಿಜಿಟಲ್ ಡೋಮ್ ಪ್ಲಾನೇಟೋರಿಯಮ್ ಮತ್ತು ರಾಯಚೂರು ಜಿಲ್ಲೆಯಲ್ಲಿ 22.25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆಟಗರಿ – 2, ಟೈಪ್ ಬಿ ವಿಜ್ಞಾನ ಕೇಂದ್ರ ಸ್ಥಾಪನೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಟೈಪ್ ಬಿ ಕೆಟಗರಿ – 3 ವಿಜ್ಞಾನ ಕೇಂದ್ರ ಸ್ಥಾಪನೆಯ ಪ್ರಸ್ತಾಪಗಳನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಶೀಘ್ರದಲ್ಲಿ ಒಪ್ಪಿಗೆ ನೀಡುವ ಭರವಸೆಯನ್ನ ಕೇಂದ್ರ ಸಚಿವರು ನೀಡಿದ್ದಾರೆ ಎಂದು ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.