ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಗಳಿಸುವುದರ ಜೊತೆಗೆ ಪ್ರಥಮ ಬಹುಮಾನ ಪಡೆದ ಮಂಡ್ಯ ಜಿಲ್ಲಾ ಪಂಚಾಯತ್ನ ‘ಅಸ್ಮಿತೆ-ಸ್ತ್ರೀ ಶಕ್ತಿಯ ಅನಾವರಣ’ ಸ್ತಬ್ಧಚಿತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಮೆಚ್ಚುಗೆ ವ್ಯಕ್ತಪಡಿಸಿ, ವೈಯಕ್ತಿಕವಾಗಿ ₹1 ಲಕ್ಷ ನಗದು ಬಹುಮಾನ ನೀಡಿದ್ದಾರೆ.
ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಳಿಗೆಯನ್ನು ಉದ್ಘಾಟಿಸಿದ ಬಳಿಕ ಬೆಂಗಳೂರಿಗೆ ಮರಳುವ ಮಾರ್ಗದಲ್ಲಿ ಬುಧವಾರ ರಾತ್ರಿ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಸ್ತಬ್ಧಚಿತ್ರವನ್ನು ವೀಕ್ಷಿಸಿದರು.
ಮಾತೃತ್ವದ ಮೌಲ್ಯವನ್ನು ಸಾರುವ ಹಾಲುಣಿಸುತ್ತಿರುವ ತಾಯಿಯ ಬೃಹತ್ ಪ್ರತಿಕೃತಿಯೊಂದಿಗೆ ರೂಪಿಸಿರುವ ಈ ಸ್ತಬ್ಧಚಿತ್ರವು ಮಹಿಳೆಯರ ಆರೋಗ್ಯ, ಪೋಷಣೆ, ಸ್ವಾವಲಂಬನೆ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ ಹಾಗೂ ಉದ್ಯಮಶೀಲತೆಯ ವಿವಿಧ ಆಯಾಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಶುಗಳ ಆರೋಗ್ಯ ಮತ್ತು ಪೋಷಣೆಗೆ ನೆರವಾಗುವ ‘ಶಿಶು ಸಂಜೀವಿನಿ’ (ಎದೆಹಾಲು ಸಂಗ್ರಹಣಾ ಕೇಂದ್ರ) ಪರಿಕಲ್ಪನೆ ಹಾಗೂ ದುಡಿಯುವ ತಾಯಂದಿರ ಮಕ್ಕಳ ಆರೈಕೆಗಾಗಿ ರೂಪಿಸಿರುವ ‘ವಾತ್ಸಲ್ಯ ಕೇಂದ್ರ’ದ ಕುರಿತು ಮಾಹಿತಿ ನೀಡಿರುವುದು ವಿಶೇಷವಾಗಿದೆ. ಇಂತಹ ಯೋಜನೆಗಳು ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದರು.
ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಅಪಾರ ಅವಕಾಶಗಳು ತೆರೆದುಕೊಂಡಿವೆ. ಮೌಢ್ಯ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು ಸಾಧಿಸುವ ಛಲ ಹೊಂದಿದ್ದರೆ ಮಹಿಳೆಯರು ಯಾವುದೇ ಕ್ಷೇತ್ರದಲ್ಲಾದರೂ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂಬ ಸಂದೇಶವನ್ನು ಸ್ತಬ್ಧಚಿತ್ರ ಸಾರುತ್ತಿದೆ ಎಂದು ಶ್ಲಾಘಿಸಿದರು.
ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಡ್ರೋನ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುತ್ತಿರುವುದು, ಅಕ್ಕ ಕೆಫೆ ಮೂಲಕ ಉದ್ಯಮಶೀಲತೆಗೆ ಹೆಜ್ಜೆಯಿಡುತ್ತಿರುವುದು ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವುದನ್ನು ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಗಿದೆ. ಮಹಿಳೆಯರ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪರಿಚಯಿಸುವ ಈ ಪರಿಕಲ್ಪನೆ ಇತರರಿಗೂ ಪ್ರೇರಣೆಯಾಗಲಿದೆ ಎಂದರು.
2025ರಲ್ಲಿ ನಡೆದ ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ತಂಡದ ಆಟಗಾರ್ತಿಯರ ಪ್ರತಿಕೃತಿಗಳನ್ನೂ ಸ್ತಬ್ಧಚಿತ್ರದಲ್ಲಿ ಅಳವಡಿಸಲಾಗಿದೆ. ಜೊತೆಗೆ ಮಹಿಳೆಯರ ಋತುಸ್ರಾವ ನೈರ್ಮಲ್ಯಕ್ಕಾಗಿ 32 ಸಾವಿರಕ್ಕೂ ಹೆಚ್ಚು ಮುಟ್ಟಿನ ಕಪ್ಗಳನ್ನು ಉಚಿತವಾಗಿ ವಿತರಿಸಿರುವ ಕಾರ್ಯವನ್ನು ಬಿಂಬಿಸಿರುವುದು ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳೆದ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನದಡಿ ಶಿಶು ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಿರುವುದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರನ್ನು ಸಚಿವರು ಅಭಿನಂದಿಸಿದರು. ಇಂತಹ ಮಹತ್ವಾಕಾಂಕ್ಷಿ ಯೋಜನೆಗಳು ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮಹಿಳೆಯರ ಆರೋಗ್ಯ ಮತ್ತು ಋತುಸ್ರಾವ ನೈರ್ಮಲ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ 35 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಮುಟ್ಟಿನ ಕಪ್ಗಳನ್ನು ವಿತರಿಸಿರುವುದು ಸಮುದಾಯ ಆರೋಗ್ಯ ರಕ್ಷಣೆ ಹಾಗೂ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿಬಿಜಿ ರಾಮ್ ಜಿ ಯೋಜನೆಯಡಿ ಮಹಿಳೆಯರ ಜೀವನೋಪಾಯ ಚಟುವಟಿಕೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಮೌಢ್ಯತೆಯೊಳಗೆ ನಾ ಕಂಡ ಭಾರತ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಳಿಕ ಸ್ತಬ್ಧಚಿತ್ರವನ್ನು ಮಂಡ್ಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಪ್ರತಿದಿನ ಸಾವಿರಾರು ಜನರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?
ಕೃಷಿ, ಹೈನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಕುಟುಂಬದ ಲಾಲನೆ-ಪಾಲನೆ ಹಾಗೂ ಉದ್ಯಮ ಸ್ಥಾಪನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ತರ ಸಾಧನೆ ಮಾಡಬಲ್ಲರು ಎಂಬುದನ್ನು ಸ್ತಬ್ಧಚಿತ್ರದ ಮೂಲಕ ತೋರಿಸಲಾಗಿದೆ. ಈಗಾಗಲೇ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನೇಕ ಮಹಿಳೆಯರು ಇತರರಿಗೆ ಮಾದರಿಯಾಗಿದ್ದಾರೆ ಎಂಬ ಸಂದೇಶವನ್ನು ಇದು ಸಾರುತ್ತಿದೆ ಎಂದರು.





