ಮುಂಡಗೋಡ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಭೆಯಲ್ಲಿ ತಾಲೂಕಿನ ರೈತರಿಗಾಗಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿತರಿಸಲಾಯಿತು. ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮಿನಿ ಟ್ರಾಕ್ಟರ್ ಹಾಗೂ ಕೃಷಿ ಹೊಂಡದ ಕಾರ್ಯಾದೇಶ ಪತ್ರಗಳನ್ನು ಶಾಸಕರು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಅಡಿಕೆ ಬೆಳೆಗಾರರಿಗೆ ಉಪಯುಕ್ತವಾಗುವ ದ್ರವ ರೂಪದ ಎಎಂಸಿಯನ್ನು (AMC) ಸಾಂಕೇತಿಕವಾಗಿ ವಿತರಿಸಲಾಯಿತು. ತಾಲೂಕಿನ ಅಡಿಕೆ ಬೆಳೆಗಾರರು ದ್ರವ ರೂಪದ ಎಎಂಸಿಯನ್ನು ಇಲಾಖೆಯಿಂದ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಐವರು ರೌಡಿ ಶೀಟರ್‌ಗಳಿಗೆ 6 ತಿಂಗಳ ಗಡಿಪಾರು ಆದೇಶ
ಆಸಕ್ತ ರೈತರು ತಮ್ಮ ಜಮೀನಿನ ಉತಾರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಮುಂಡಗೋಡಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ) ಕಚೇರಿಗೆ ಭೇಟಿ ನೀಡಿ ಸೌಲಭ್ಯ ಪಡೆಯಬಹುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳಾದ ಕೃಷ್ಣಾ ಟಿ. ಕುಳೂರ ಅವರು ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.




