ಮುಂಡಗೋಡ: ಜೇನು ಸಾಕಾಣಿಕೆ ಮಾಡುವುದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ. ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಗೆ ಸಹಾಯಧನದ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಮುಂಡಗೋಡ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೃಷ್ಣ ಟಿ. ಕುಳ್ಳೂರ ಹೇಳಿದರು.
ವಿಶ್ವ ಜೇನು ದುಂಬಿ ದಿನದ ಅಂಗವಾಗಿ ತೋಟಗಾರಿಕೆ ಇಲಾಖೆ, ಮುಂಡಗೋಡ ವತಿಯಿಂದ ಜೇನು ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತರಿಗಾಗಿ ಆಯೋಜಿಸಿದ್ದ ‘ವೈಜ್ಞಾನಿಕ ಜೇನು ಬೇಸಾಯ ಪದ್ಧತಿ’ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಭಾಂಗಣದಲ್ಲಿ ಈ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯಲ್ಲಾಪುರದ ಜೇನು ತಜ್ಞ ತಿಮ್ಮಣ್ಣ ಭಟ್ ಅವರು, ವೈಜ್ಞಾನಿಕ ಜೇನು ಕೃಷಿ ವಿಧಾನಗಳು, ಜೇನು ಸಾಕಾಣಿಕೆಯ ನಿರ್ವಹಣೆ ಹಾಗೂ ಉತ್ಪಾದನಾ ತಂತ್ರಜ್ಞಾನ ಕುರಿತು ರೈತರಿಗೆ ಸಮಗ್ರ ತಾಂತ್ರಿಕ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಈದ್ಗಾ ಮೈದಾನದ ಬದಲು ಮಸೀದಿಗಳಲ್ಲೇ ಬಕ್ರೀದ್ ನಮಾಜ್‌ಗೆ ಮುಸ್ಲಿಂ ಸಮುದಾಯ ನಿರ್ಧಾರ
ಅತಿಥಿಯಾಗಿ ಉಪಸ್ಥಿತರಿದ್ದ ನ್ಯಾಯವಾದಿ ಹಾಗೂ ಅನುಭವೀ ಜೇನು ಕೃಷಿಕ ಸಂಗಮೇಶ ಕೋಳ್ಳಾನವರ ಅವರು, ಜೇನು ಕೃಷಿಯಲ್ಲಿ ತಮ್ಮ ಸುದೀರ್ಘ ಅನುಭವ, ಅಧ್ಯಯನ ಹಾಗೂ ಜೇನು ಸಾಕಾಣಿಕೆಯಿಂದ ದೊರೆಯುವ ಲಾಭಗಳ ಕುರಿತು ಪ್ರಾಯೋಗಿಕ ಮಾಹಿತಿ ಹಂಚಿಕೊಂಡರು.
ಜಿಲ್ಲಾ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾದ ಪುಷ್ಪಾ ಗುಲ್ಯಾನವರ ಅವರು ಜೇನು ಕೃಷಿಯಲ್ಲಿ ತಾವು ಕಂಡ ಯಶಸ್ಸು, ಅನುಭವಗಳು ಹಾಗೂ ಸ್ವಾವಲಂಬನೆಯ ಕುರಿತು ರೈತರೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು. ಇನ್ನೊಬ್ಬ ಅತಿಥಿಯಾದ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಕಲ್ಲೋಳ್ಳಿ ಮಾತನಾಡಿ, ಪರಿಶಿಷ್ಟ ಪಂಗಡದ ಅರಣ್ಯ ಭೂಮಿ ಹಕ್ಕುಪತ್ರ ಹೊಂದಿರುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಮೂಲಕ ಜೇನು ಪೆಟ್ಟಿಗೆಗಳನ್ನು ವಿತರಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಕೃಷಿ ಸಖಿಯರು, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಮೇಶ ಜಿ. ಜಮಖಂಡಿ ಹಾಗೂ ರಾಮಪ್ಪ ನಡುವಿನಮನಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ಕ್ಷೇತ್ರಾಧಿಕಾರಿ ಶಾಂತಕುಮಾರ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಜೇನು ಕೃಷಿ ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.




