ರಾಜ್ಯದಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಮಾರಾಟವನ್ನು ತಡೆಗಟ್ಟಲು ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಜ್ಞಾವಂತ ನಾಗರಿಕ ವೇದಿಕೆಯ ಪದಾಧಿಕಾರಿಗಳು ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಶಿವಪ್ರಸಾದ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಾಜ್ಯದಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಜಾಲ ವ್ಯಾಪಕವಾಗಿ ಹರಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇತ್ತೀಚಿನ ತನಿಖೆಯಲ್ಲಿ ಸುಮಾರು 3,500 ಔಷಧ ಮಾದರಿಗಳನ್ನು ಪರೀಕ್ಷಿಸಿದಾಗ, ಸುಮಾರು 300 ಔಷಧಗಳು ನಕಲಿ ಅಥವಾ ಗುಣಮಟ್ಟವಿಲ್ಲದವು ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಆಂಟಿಬಯೋಟಿಕ್ಸ್, ಪ್ಯಾರಾಸಿಟಮಾಲ್ ಹಾಗೂ ವಿವಿಧ ಸಿರಪ್‌ಗಳಂತಹ ಅಗತ್ಯ ಔಷಧಿಗಳೇ ನಕಲಿಯಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದೆ. ಇಂತಹ ಕೃತ್ಯಗಳು ನಾಗರಿಕರ ಜೀವದೊಂದಿಗೆ ಚೆಲ್ಲಾಟವಾಡುವ ಅಪರಾಧವಾಗಿದ್ದು, ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೇಳಿದರು.
ಜಿಲ್ಲಾಡಳಿತವು ಔಷಧ ನಿಯಂತ್ರಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯಾದ್ಯಂತ ಔಷಧ ಅಂಗಡಿಗಳು, ಗೋದಾಮುಗಳು ಹಾಗೂ ವಿತರಣಾ ಕೇಂದ್ರಗಳ ಮೇಲೆ ವಿಶೇಷ ತಪಾಸಣೆ ನಡೆಸಬೇಕು. ನಕಲಿ ಔಷಧಿಗಳ ಜಾಲದ ಹಿಂದಿರುವವರನ್ನು ಪತ್ತೆಹಚ್ಚಿ ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರ ಆರೋಗ್ಯ ಹಾಗೂ ಜೀವ ರಕ್ಷಣೆಯ ದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಳೆಯೂ ಇಲ್ಲ, ಬೆಳೆಯೂ ಇಲ್ಲ; ಕಾವೇರಿ ಹರಿದಿದ್ದು ತಮಿಳುನಾಡಿನತ್ತ-ರೈತನ ಬದುಕಿನ ಮುಂದಿನ ದಾರಿ ಏನು?
ಮನವಿ ಸಲ್ಲಿಸುವಾಗ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಆನಂದ್, ಸಂದೇಶ್ ಪವಾರ್, ದಯಾನಂದ ನಾಯಕ್ ಸೇರಿದಂತೆ ಮತ್ತಿತರರು ಇದ್ದರು.




