ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೆ 21 ದಿನಗಳ ‘ಫರ್ಲೋ’ (ರಜೆ) ಮಂಜೂರಾಗಿದೆ. 2017ರ ಆಗಸ್ಟ್‌ನಲ್ಲಿ ಜೈಲು ಸೇರಿದ ಬಳಿಕ ಈತ ಹೀಗೆ ಪರೋಲ್ ಹಾಗೂ ಫರ್ಲೋ ಮೇಲೆ ಬಿಡುಗಡೆಯಾಗುತ್ತಿರುವುದು ಇದು ಬರೋಬ್ಬರಿ 17ನೇ ಬಾರಿಯಾಗಿದೆ.
ಮಂಗಳವಾರ ಮುಂಜಾನೆ ಹರಿಯಾಣದ ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಬಿಡುಗಡೆಯಾದ ರಾಮ್ ರಹೀಮ್, ಬಿಗಿ ಭದ್ರತೆಯಲ್ಲಿ ಹೊರಬಂದಿದ್ದಾರೆ. ಮುಂದಿನ 21 ದಿನಗಳ ಕಾಲ ಅವರು ಸಿರ್ಸಾದಲ್ಲಿರುವ ತಮ್ಮ ಡೇರಾ ಸಚ್ಚಾ ಸೌದಾದ ಕೇಂದ್ರ ಕಚೇರಿಯಲ್ಲಿಯೇ ನೆಲೆಸಲಿದ್ದಾರೆ. ಈ ಹಿಂದಿನ ಕೆಲವು ಬಿಡುಗಡೆಗಳಲ್ಲಿ ಅವರು ಉತ್ತರ ಪ್ರದೇಶದ ಬಾಗ್‌ಪತ್ ಆಶ್ರಮದಲ್ಲಿ ಉಳಿದುಕೊಳ್ಳುತ್ತಿದ್ದರು, ಆದರೆ ಸತತ ಮೂರನೇ ಬಾರಿ ಸಿರ್ಸಾದಲ್ಲೇ ಉಳಿಯಲು ಅನುಮತಿ ನೀಡಲಾಗಿದೆ.
ಈ ತಾತ್ಕಾಲಿಕ ಬಿಡುಗಡೆಯೊಂದಿಗೆ, 2022ರ ‘ಹರಿಯಾಣ ಸನ್ನಡತೆ ಕೈದಿಗಳ ತಾತ್ಕಾಲಿಕ ಬಿಡುಗಡೆ ಕಾಯ್ದೆ’ಯಡಿ ರಾಮ್ ರಹೀಮ್ ಸಿಂಗ್‌ಗೆ ಲಭ್ಯವಿದ್ದ ವಾರ್ಷಿಕ ರಜೆಯ ಮಿತಿ ಸಂಪೂರ್ಣ ಮುಕ್ತಾಯಗೊಂಡಿದೆ. ಕಾರಾಗೃಹದ ನಿಯಮಗಳ ಪ್ರಕಾರ, ಸನ್ನಡತೆಯ ಆಧಾರದ ಮೇಲೆ ಒಬ್ಬ ಕೈದಿಗೆ ವರ್ಷದಲ್ಲಿ ಗರಿಷ್ಠ 10 ವಾರಗಳ ಪರೋಲ್ (ಎರಡು ಭಾಗಗಳಲ್ಲಿ) ಹಾಗೂ 3 ವಾರಗಳ ಫರ್ಲೋ ಪಡೆಯುವ ಕಾನೂನುಬದ್ಧ ಅವಕಾಶವಿರುತ್ತದೆ.
ರಾಮ್ ರಹೀಮ್‌ಗೆ ಪದೇ ಪದೇ ರಜೆ ನೀಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವರ್ಷವೊಂದರಲ್ಲೇ, ಜನವರಿಯಲ್ಲಿ 40 ದಿನಗಳ ಪರೋಲ್, ಮೇ ತಿಂಗಳಲ್ಲಿ 30 ದಿನಗಳ ಪರೋಲ್ ಪಡೆದು ಜೂನ್ 26ರಂದು ಅವರು ಜೈಲಿಗೆ ಮರಳಿದ್ದರು. ಇದೀಗ ಕೇವಲ ಎರಡು ತಿಂಗಳು ಕಳೆಯುವ ಮುನ್ನವೇ, ಮತ್ತೊಮ್ಮೆ 21 ದಿನಗಳ ಮಟ್ಟಿಗೆ ಹೊರಬಂದಿದ್ದಾರೆ.
ಈ ಹಿಂದೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಅನುಮತಿಯಿಲ್ಲದೆ ಈತನಿಗೆ ಪರೋಲ್ ನೀಡುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿತ್ತು. ಆದರೆ 2024ರ ಆಗಸ್ಟ್‌ನಲ್ಲಿ ನೀಡಿದ ತೀರ್ಪಿನಲ್ಲಿ, “ಯಾವುದೇ ಒಲವು ಅಥವಾ ತಾರತಮ್ಯವಿಲ್ಲದೆ” ಹರಿಯಾಣ ಕಾರಾಗೃಹ ಇಲಾಖೆಯೇ ತನ್ನ ವಿವೇಚನೆಗೆ ಅನುಗುಣವಾಗಿ ಫರ್ಲೋ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್ ಆದೇಶಿಸಿತ್ತು.
ತನ್ನಿಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಗಂಭೀರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2017ರಲ್ಲಿ ಗುರ್ಮೀತ್ ರಾಮ್ ರಹೀಮ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆಶ್ರಮದ ಮಾಜಿ ವ್ಯವಸ್ಥಾಪಕನ ಕೊಲೆ ಪ್ರಕರಣದಲ್ಲೂ ಆತನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ, ಇತ್ತೀಚೆಗಷ್ಟೇ 2024ರ ಮೇ ತಿಂಗಳಲ್ಲಿ ಈ ಕೊಲೆ ಪ್ರಕರಣದಿಂದ ಹೈಕೋರ್ಟ್ ಆತನನ್ನು ಖುಲಾಸೆಗೊಳಿಸಿದೆ. ಆದರೂ ಅತ್ಯಾಚಾರ ಪ್ರಕರಣದ ಅಡಿಯಲ್ಲಿ ಆತ ಶಿಕ್ಷೆ ಅನುಭವಿಸುತ್ತಿದ್ದಾನೆ.




