ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ, ಕಬಿನಿ, ತಾರಕ, ನುಗು ಹಾಗೂ ವರುಣ ಅಚ್ಚುಕಟ್ಟು ಪ್ರದೇಶಗಳ ರೈತರ ಜಮೀನುಗಳಿಗೆ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರದ ಗನ್‌ಹೌಸ್ ವೃತ್ತದಿಂದ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಕಾಡಾ ಕಚೇರಿಯತ್ತ ಸಾಗಿದರು. ಕೈಯಲ್ಲಿ ವಿವಿಧ ಬೇಡಿಕೆಗಳ ಫಲಕಗಳನ್ನು ಹಿಡಿದು, ರೈತರ ಜಮೀನುಗಳಿಗೆ ನೀರು ಹರಿಸುವಂತೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಕಬಿನಿ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಕಾಡಾ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ರೈತರು ಮುಂದಾದಾಗ ಪೊಲೀಸರು ಕಚೇರಿಯ ಮುಖ್ಯದ್ವಾರದಲ್ಲೇ ಅವರನ್ನು ತಡೆದರು. ಇದರಿಂದ ಆಕ್ರೋಶಗೊಂಡ ರೈತರು ಕಚೇರಿ ಸಮೀಪದ ವೃತ್ತದ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಕುಳಿತು ಧರಣಿ ನಡೆಸಿದರು. ರೈತರ ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದರು. ಬಳಿಕ ರೈತರಿಗೆ ಕಾಡಾ ಕಚೇರಿ ಆವರಣಕ್ಕೆ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ಟರು.
ಬರದ ಪರಿಸ್ಥಿತಿಯ ನಡುವೆಯೂ ಕಬಿನಿ ಜಲಾಶಯ ಭರ್ತಿಯಾಗಿರುವುದು ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಜಲಾಶಯದ ನೀರನ್ನು ಬಳಸಿಕೊಂಡು ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೆ ನೀರು ಹರಿಸುತ್ತಿರುವುದು ಸ್ವಾಗತಾರ್ಹ. ಆದರೆ, ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ಅಚ್ಚುಕಟ್ಟು ಪ್ರದೇಶಗಳ ಬೆಳೆಗಳಿಗೆ ನೀರು ಹರಿಸುವ ಕುರಿತು ಇದುವರೆಗೂ ಸ್ಪಷ್ಟ ತೀರ್ಮಾನ ಕೈಗೊಳ್ಳದಿರುವುದು ರೈತರಲ್ಲಿ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದೆ ಎಂದು ರೈತರು ಹೇಳಿದರು.
ಕಬಿನಿ ಜಲಾಶಯದ ಒಳಹರಿವು ತೃಪ್ತಿಕರವಾಗಿರುವ ಹಿನ್ನೆಲೆಯಲ್ಲಿ ಜಲಾಶಯದ ಎಲ್ಲಾ ಅಚ್ಚುಕಟ್ಟು ಪ್ರದೇಶಗಳಿಗೂ ಸಮರ್ಪಕವಾಗಿ ನೀರು ಹರಿಸಬೇಕು. ತಾರಕ ಜಲಾಶಯಕ್ಕೆ ನೀರು ತುಂಬಿಸಿ, ಅದರ ಅಚ್ಚುಕಟ್ಟು ಪ್ರದೇಶಗಳಿಗೂ ನೀರು ಒದಗಿಸಬೇಕು. ನುಗು ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೂ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕಾವೇರಿ, ಕಬಿನಿ ಮತ್ತು ವರುಣ ಅಚ್ಚುಕಟ್ಟು ಪ್ರದೇಶಗಳ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ನೀರು ಹಂಚಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರೈತರು ಪ್ರತಿವರ್ಷ ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣದ ಬಗ್ಗೆ ಆತಂಕದಲ್ಲಿಯೇ ಕೃಷಿ ಚಟುವಟಿಕೆ ಆರಂಭಿಸುವ ಪರಿಸ್ಥಿತಿ ಇದೆ. ಈ ವರ್ಷವೂ ಮಳೆಯ ಕೊರತೆಯಿಂದ ಬೆಳೆಗಳಿಗೆ ನೀರಿನ ಅಗತ್ಯ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ರೈತರ ಬೆಳೆಗಳಿಗೂ ಸಮರ್ಪಕವಾಗಿ ಬಳಸಬೇಕು. ನೀರಿನ ಹಂಚಿಕೆ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ಶೀಘ್ರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಬಿನಿ ಜಲಾಶಯ ನಿರ್ಮಿಸಿರುವುದು ತಮಿಳುನಾಡಿಗೆ ನೀರು ಬಿಡುವುದಕ್ಕಲ್ಲ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಪೂರೈಸಲು ಮಾತ್ರವೇ? ರೈತರ ಹಿತರಕ್ಷಣೆಯೂ ಸರ್ಕಾರದ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು.
ಕಬಿನಿ ಜಲಾಶಯದಲ್ಲಿ ನೀರಿನ ಲಭ್ಯತೆ ಇರುವ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸುವ ಕುರಿತು ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಸಭೆ ಕರೆದಿರುವುದರಿಂದ ರೈತರ ಬೆಳೆಗಳಿಗೆ ನೀರು ದೊರೆಯುವ ವಿಶ್ವಾಸವಿದೆ. ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಒಂದು ವೇಳೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸದೆ ನಿರ್ಲಕ್ಷ್ಯ ವಹಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ರಾಜ್ಯದ ಪಾಲಿನ ನೀರನ್ನು ಪಡೆದೇ ತೀರುತ್ತೇವೆ. ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಕುಡಿಯುವ ನೀರು, ಅಂತರರಾಜ್ಯ ನೀರು ಹಂಚಿಕೆ ಹಾಗೂ ಕೃಷಿ ಉದ್ದೇಶಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಕೃಷಿ ಪ್ರದೇಶಗಳಿಗೆ ಅಗತ್ಯವಿರುವ ನೀರನ್ನು ಮುಂಚಿತವಾಗಿ ಯೋಜಿಸಿ ಹಂತ ಹಂತವಾಗಿ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಕೃಷಿ ಚಟುವಟಿಕೆಗಳು ಈಗಾಗಲೇ ನೀರಿನ ಕೊರತೆಯಿಂದ ಸಂಕಷ್ಟದಲ್ಲಿದ್ದು, ಸಮಯಕ್ಕೆ ಸರಿಯಾಗಿ ನೀರು ದೊರೆಯದಿದ್ದರೆ ರೈತರು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶಗಳಲ್ಲಿನ ಬೆಳೆಗಳ ಸ್ಥಿತಿ, ಜಲಾಶಯಗಳ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳ ಮಳೆಯ ಮುನ್ಸೂಚನೆಗಳನ್ನು ಪರಿಗಣಿಸಿ ನೀರು ಬಿಡುಗಡೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?SIR: ಮಠಾಧಿಪತಿಗಳಿಗೂ ದಾಖಲೆಗಳ ಕಗ್ಗಂಟು; ‘ಪೂರ್ವಾಶ್ರಮದ ಹೆಸರೋ, ಪೀಠಾಧ್ಯಕ್ಷರ ಹೆಸರೋ
ಪ್ರತಿಭಟನೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಎ.ಎಲ್. ಕೆಂಪೂಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸಿದ್ದರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಉಪಾಧ್ಯಕ್ಷರಾದ ಪಳನಿಸ್ವಾಮಿ, ಮಲ್ಲೇಶ್, ಪ್ರಕಾಶ್ ರಾಜೇ ಅರಸ್, ಖಜಾಂಚಿ ಈಶ್ವರ್, ಜಿಲ್ಲಾ ಕಾರ್ಯದರ್ಶಿ ಪುಟ್ಟಣ್ಣಯ್ಯ, ಆನಂದೂರು ಪ್ರಭಾಕರ್, ಕೆ.ಆರ್.ಪುರ ಮಹೇಶ್, ಕರೋಟಿ ಕುಮಾರಸ್ವಾಮಿ, ಬೆಂಕಿಪುರ ಚಿಕ್ಕಣ್ಣ, ರವಿಕುಮಾರ್, ಪ್ರೇಮ್ ಕುಮಾರ್, ಮುದ್ದುರಾಜು, ಕಂದೇಗಾಲ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.




