ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಸಂಸ್ಥೆಯ ವತಿಯಿಂದ ಎ.ಆರ್. ಗರ್ನಿ ಅವರ ಪ್ರಸಿದ್ಧ ಕೃತಿಯನ್ನು ಆಧರಿಸಿದ ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ನಾಟಕವು ಜುಲೈ 5ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಕನ್ನಡ ಚಲನಚಿತ್ರರಂಗದ ಪ್ರತಿಭಾವಂತ ಕಲಾವಿದರಾದ ಕಿಶೋರ್ ಕುಮಾರ್ ಹಾಗೂ ಸಿರಿ ರವಿಕುಮಾರ್ ಅಭಿನಯಿಸಿರುವ ಈ ನಾಟಕಕ್ಕೆ ವೆಂಕಟೇಶ್ ಪ್ರಸಾದ್ ರೂಪಾಂತರ ಹಾಗೂ ನಿರ್ದೇಶನ ನೀಡಿದ್ದಾರೆ.
ಬಾಲ್ಯದ ಮುಗ್ಧತೆ, ಯೌವನದ ತುಂಟಾಟ, ಪ್ರೌಢಾವಸ್ಥೆಯ ಏಳು-ಬೀಳುಗಳ ನಡುವೆ ಅರಳುವ ಸ್ನೇಹ, ಪ್ರೀತಿ, ನೆನಪು, ಅಗಲಿಕೆ, ಸಂತಸ ಹಾಗೂ ನೋವುಗಳ ಭಾವಲೋಕವನ್ನು ಪತ್ರಗಳ ಮೂಲಕ ಕಟ್ಟಿಕೊಡುವ ವಿಶಿಷ್ಟ ಪ್ರೇಮಕಥೆಯೇ ಈ ನಾಟಕದ ಮುಖ್ಯ ಆಕರ್ಷಣೆ. ಜೀವನದ ವಿವಿಧ ಹಂತಗಳಲ್ಲಿ ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕ ಇಬ್ಬರು ಪ್ರೇಮಿಗಳು ತಮ್ಮ ಅನುಭವಗಳು, ಕನಸುಗಳು, ಗೆಲುವು-ಸೋಲುಗಳು ಹಾಗೂ ಭಾವನೆಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಭಾವನಾತ್ಮಕ ಕಥಾಹಂದರವನ್ನು ನಾಟಕ ಒಳಗೊಂಡಿದೆ.
ಇಬ್ಬರು ಕಲಾವಿದರ ಅಭಿನಯದ ಮೂಲಕವೇ ಇಡೀ ಕಥೆ ಸಾಗುವ ಈ ನಾಟಕವು ರಂಗಾಸಕ್ತರಿಗೆ ವಿಭಿನ್ನ ಅನುಭವ ನೀಡಲಿದ್ದು, ಭಾವನೆಗಳ ಪಯಣವನ್ನು ಅನಾವರಣಗೊಳಿಸಲಿದೆ.
ಜುಲೈ 5ರಂದು ಸಂಜೆ 4 ಗಂಟೆಗೆ ಹಾಗೂ 7 ಗಂಟೆಗೆ ಎರಡು ಪ್ರದರ್ಶನಗಳು ನಡೆಯಲಿವೆ. ಪ್ರವೇಶ ದರ ರೂ.200 ನಿಗದಿಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?ಪಿರಿಯಾಪಟ್ಟಣ | ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಜಮೀನಿಗೆ ಅಕ್ರಮ ಖಾತೆ ಆರೋಪ: ತಹಶೀಲ್ದಾರ್‌ಗೆ ರೈತರ ಮುತ್ತಿಗೆ
ಟಿಕೆಟ್‌ಗಳಿಗಾಗಿ 9900182400 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, BookMyShow ಮೂಲಕವೂ ಟಿಕೆಟ್‌ಗಳು ಲಭ್ಯವಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರಂಗಪ್ರೇಮಿಗಳು ನಾಟಕವನ್ನು ವೀಕ್ಷಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.




