ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕುಂಬಾರಗಡಿಗೆ ಗ್ರಾಮದ ಅಪ್ರಾಪ್ತ ಬಾಲಕಿಯ ಬರ್ಬರ ಕೊಲೆ ಪ್ರಕರಣದಲ್ಲಿ ಅಪರಾಧಿ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ (32)ಗೆ ಜಿಲ್ಲಾ ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಹಮ್ಮಿಯಾಲ ಗ್ರಾಮದ ನಿವಾಸಿಯಾದ ಪ್ರಕಾಶ್ ವಿರುದ್ಧದ ಕೊಲೆ ಆರೋಪ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಅವರ 16 ವರ್ಷದ ಪುತ್ರಿ ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಏಕೈಕ ವಿದ್ಯಾರ್ಥಿನಿಯಾಗಿದ್ದು, 2024ರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಈ ಸಂದರ್ಭದಲ್ಲಿ ಬಾಲಕಿ ಹಾಗೂ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ನಡುವೆ ವಿವಾಹ ನಿಶ್ಚಿತಾರ್ಥ ನಡೆದಿತ್ತು.
ಆದರೆ, ಬಾಲಕಿ ಅಪ್ರಾಪ್ತೆಯಾಗಿದ್ದರಿಂದ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಾನೂನುಬಾಹಿರವಾಗುವ ಸಾಧ್ಯತೆಯನ್ನು ಮನಗಂಡ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪೋಷಕರಿಗೆ ತಿಳಿವಳಿಕೆ ನೀಡಿದ್ದರು. ಹೀಗಾಗಿ, ಬಾಲಕಿಗೆ ಕಾನೂನುಬದ್ಧ ವಯಸ್ಸು ಬರುವವರೆಗೆ ವಿವಾಹ ಮುಂದೂಡುವಂತೆ ಕುಟುಂಬದವರು ಪ್ರಕಾಶ್‌ಗೆ ತಿಳಿಸಿದ್ದರು.
ಮದುವೆ ಮುಂದೂಡಿದ ವಿಚಾರಕ್ಕೆ ಕೊಲೆ:
ಇದರಿಂದ ಆಕ್ರೋಶಗೊಂಡಿದ್ದ ಪ್ರಕಾಶ್, 2024ರ ಮೇ 9ರ ರಾತ್ರಿ ಬಾಲಕಿಯ ಮನೆಗೆ ತೆರಳಿ ಆಕೆಯ ತಾಯಿಯೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದ. ಬಳಿಕ ಬಾಲಕಿಯನ್ನು ಮನೆಯಿಂದ ಸುಮಾರು 200 ಮೀಟರ್ ದೂರಕ್ಕೆ ಕರೆದೊಯ್ದು ಕತ್ತಿಯಿಂದ ಶಿರಚ್ಛೇದ ಮಾಡಿ ಹತ್ಯೆಗೈದಿದ್ದ. ನಂತರ ಬಾಲಕಿಯ ತಲೆಯನ್ನು ತೆಗೆದುಕೊಂಡು ಹೋಗಿ ಸಮೀಪದ ಕಾಡಿನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದ.
ಘಟನೆ ನಡೆದ ಎರಡು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆತ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ.
ಈ ತನಿಖಾ ವರದಿ ಓದಿದ್ದೀರಾ? ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಬದಲಾವಣೆ ಸುತ್ತ ರಾಜಕೀಯ: ಆದೇಶವಿಲ್ಲದೆ ನೇಮಕದ ಸುದ್ದಿ ಹರಡಿದ್ದೇಕೆ?
ಸಾಕ್ಷ್ಯಾಧಾರಗಳ ಆಧಾರದಲ್ಲಿ ಶಿಕ್ಷೆ:
ಈ ವಿಶೇಷ ವರದಿ ಓದಿದ್ದೀರಾ? ಬರಗಾಲ | ಮಳೆಯ ಕೊರತೆಗೆ ಬತ್ತಿದ ಕಾಡಿನ ಕೆರೆಗಳು: ನೀರಿಗಾಗಿ ಪರದಾಡುವ ವನ್ಯಜೀವಿಗಳು
ಪ್ರಕರಣದ ತನಿಖಾಧಿಕಾರಿಯಾಗಿ ಅಂದಿನ ಸೋಮವಾರಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ ಕುಮಾರ್ ಕಾರ್ಯನಿರ್ವಹಿಸಿದ್ದರು. ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ವಿಶೇಷ ಲೇಖನ ಓದಿದ್ದೀರಾ? ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯವು, ಲಭ್ಯವಿದ್ದ ಸಾಕ್ಷ್ಯಾಧಾರಗಳು ಹಾಗೂ ವಿಚಾರಣೆಯಲ್ಲಿ ಸಾಬೀತಾದ ಅಂಶಗಳನ್ನು ಪರಿಗಣಿಸಿ 2026ರ ನವೆಂಬರ್ 13ರಂದು ಆರೋಪಿಯನ್ನು ಅಪರಾಧಿ ಎಂದು ಘೋಷಿಸಿತ್ತು. ಇದೀಗ ಅಂತಿಮ ತೀರ್ಪು ಪ್ರಕಟಿಸಿರುವ ನ್ಯಾಯಾಲಯವು ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪನಿಗೆ ಮರಣದಂಡನೆ ವಿಧಿಸಿದೆ.




