ನಟಿ ಪ್ರೀತಿ ಝಿಂಟಾ ಡೀಪ್‌ಫೇಕ್ ವಿಡಿಯೋಗಳು, ಮಾರ್ಫ್ ಮಾಡಿದ ಚಿತ್ರಗಳು, ನಕಲಿ ವಿಡಿಯೋಗಳು ಮತ್ತು ಇತರ ಅನಧಿಕೃತ ಆನ್‌ಲೈನ್ ಕಂಟೆಂಟ್‌ಗಳನ್ನು ಸಾಮಾಜಿಕ ಜಾಲತಾಣದಿಂದ ತಕ್ಷಣವೇ ತೆಗೆದುಹಾಕಲು ಬಾಂಬೆ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಸುಮಾರು 275ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಹಾಗೂ ಜಾಲತಾಣಗಳಲ್ಲಿ ಪ್ರೀತಿ ಝಿಂಟಾ ಅವರ ನಕಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿತ್ತು ಎಂದು ಪ್ರೀತಿ ಪರ ವಕೀಲರು ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಿದ್ದರು.
ಇದನ್ನೂ ಓದಿ: ಸಾಲ ಮನ್ನಾಕ್ಕಾಗಿ ಸಾಮಾಜಿಕ ಮಾಧ್ಯಮ ಬಿಜೆಪಿ ವಶಕ್ಕೆ ನೀಡಿದ ಆರೋಪ: ಪ್ರೀತಿ ಝಿಂಟಾ, ಕಾಂಗ್ರೆಸ್ ನಡುವೆ ವಾಕ್ಸಮರ
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ಪ್ರಕಟಿಸಿದೆ.
ಅನುಮತಿಯಿಲ್ಲದೆ ನಟಿಯ ಹೆಸರನ್ನು ಹಾಗೂ ಮುಖವನ್ನು ಬಳಸಿ ಸೃಷ್ಟಿಸಲಾದ ಇಂತಹ ಡೀಪ್‌ಫೇಕ್ ವಿಡಿಯೋಗಳು, ಮೀಮ್‌ಗಳು ಮತ್ತು ಚಾಟ್‌ಬಾಟ್‌ಗಳು ಅವರ ವ್ಯಕ್ತಿತ್ವದ ಹಕ್ಕು, ಗೌಪ್ಯತೆ ಮತ್ತು ಘನತೆಯಿಂದ ಬದುಕುವ ಮೂಲಭೂತ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತವೆ ಎಂದು ಕೋರ್ಟ್ ಹೇಳಿದೆ.
ಹಾಗೆಯೇ ಸಾಮಾಜಿಕ ಮಾಧ್ಯಮಗಳು ತಮ್ಮ ಪ್ಲಾಟ್‌ಫಾರ್ಮ್‌ಗಳು ದುರುಪಯೋಗವಾಗದಂತೆ ತಡೆಯುವ ಐಟಿ ನಿಯಮಗಳ ಅಡಿಯಲ್ಲಿನ ಕಟ್ಟುನಿಟ್ಟಾದ ಜವಾಬ್ದಾರಿಯನ್ನು ಹೊಂದಿವೆ ಎಂದು ನ್ಯಾಯಾಲಯ ಎಚ್ಚರಿಸಿದೆ.
“ಈ ಕ್ಷಿಪ್ರ ನ್ಯಾಯ ಜನಸಾಮಾನ್ಯರಿಗೆ ಏಕೆ ಸಿಗುತ್ತಿಲ್ಲ?”
ಈ ನಡುವೆ “ಸೆಲೆಬ್ರಿಟಿಗಳಿಗೆ ಸಿಗುವ ಇಂತಹ ಕ್ಷಿಪ್ರ ನ್ಯಾಯ ಜನಸಾಮಾನ್ಯರಿಗೆ ಏಕೆ ಸಿಗುತ್ತಿಲ್ಲ?” ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಸ್ಟಾರ್ ನಟ-ನಟಿಯರು ಕೋರ್ಟ್‌ಗೆ ಹೋದರೆ ಕೆಲವೇ ದಿನಗಳಲ್ಲಿ ಇಂಟರ್ನೆಟ್‌ನಿಂದ ಕಂಟೆಂಟ್ ತೆಗೆಯಲು ಆದೇಶ ಸಿಗುತ್ತದೆ. ಆದರೆ, ಸಾಮಾನ್ಯ ಹುಡುಗಿ ಅಥವಾ ಮಹಿಳೆಯೊಬ್ಬಳ ಫೋಟೋ ಮಾರ್ಫ್ ಆಗಿ ವೈರಲ್ ಆದರೆ, ಅವಳು ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್‌ಗಳಿಗೆ ವರ್ಷಗಟ್ಟಲೆ ಅಲೆಯಬೇಕಾಗುತ್ತದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.




