ಕೊಡಗಿನ ನುಡಿ ಉತ್ಸವ ಸಮಿತಿ, ಕೊಡಗು ವಿಶ್ವವಿದ್ಯಾಲಯ ಹಾಗೂ ಕಾವೇರಿ ಕಾಲೇಜು ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಮೇ 26ರಂದು ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ‘ಗಡಿ ಪ್ರದೇಶಗಳ ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಶಿಕ್ಷಣ ಸ್ವರೂಪ, ಭಾಷಾ ನೀತಿ ಹಾಗೂ ಬಹುಭಾಷಾ ವಾಸ್ತವಿಕತೆಗಳ ಮರುಚಿಂತನೆ’ ವಿಷಯದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ ತಿಳಿಸಿದ್ದಾರೆ.
ವಿರಾಜಪೇಟೆ ಪತ್ರಕರ್ತರ ವೇದಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಸಂಕಿರಣವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಲಿದ್ದು, ಕಾವೇರಿ ಎಜುಕೇಷನ್ ಸೊಸೈಟಿ (ರಿ) ಅಧ್ಯಕ್ಷ ಎಂ.ಎಸ್. ಮುತ್ತಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ಕನ್ನಡ ಭಾಷಾ ಬೋಧಕರು, ಭಾಷಾ ತಜ್ಞರು, ಬರಹಗಾರರು, ಕವಿಗಳು, ಸಂಶೋಧನಾ ವಿದ್ಯಾರ್ಥಿಗಳು, ಕನ್ನಡ ಅಧ್ಯಯನ ಕೇಂದ್ರಗಳ ಪ್ರತಿನಿಧಿಗಳು ಹಾಗೂ ಕನ್ನಡ ಪರ ಹೋರಾಟಗಾರರಿಗೆ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ಭಾಗವಹಿಸುವವರಿಗೆ ಆಹಾರ ವ್ಯವಸ್ಥೆ, ಪ್ರಮಾಣ ಪತ್ರ ಹಾಗೂ ಉಚಿತ ಕಿಟ್ ನೀಡಲಾಗುವುದು ಎಂದು ತಿಳಿಸಿದರು.
ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್ ಮೌರ್ಯ ಮಾತನಾಡಿ, ಮೊದಲ ವಿಚಾರಗೋಷ್ಠಿ ಬೆಳಿಗ್ಗೆ 11:40ರಿಂದ 12:40ರವರೆಗೆ ನಡೆಯಲಿದ್ದು, ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಪ್ರೊ. ಬಿ. ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಭಾಷೆ ಮತ್ತು ಸಾಹಿತ್ಯ ವಿಭಾಗದ ನಿರ್ದೇಶಕ ಹಾಗೂ ಖ್ಯಾತ ಬರಹಗಾರ ಡಾ. ಕೆ.ಎಚ್. ಮುಸ್ತಾಫ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎರಡನೇ ವಿಚಾರಗೋಷ್ಠಿ ಮಧ್ಯಾಹ್ನ 12:40ರಿಂದ 1:40ರವರೆಗೆ ನಡೆಯಲಿದ್ದು, ಹಿರಿಯ ಸಹಾಯಕ ಪ್ರಾಧ್ಯಾಪಕ ಪ್ರೊ. ಹುಚ್ಚೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿ ಸದಸ್ಯ ಹಾಗೂ ಬರಹಗಾರ ಡಾ. ರತ್ನಾಕರ ಮಲ್ಲಮೂಲೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಕಳೆದ ಮೂರನೇ ಹಾಗೂ ನಾಲ್ಕನೇ ಸೆಮಿಸ್ಟರ್‌ನಲ್ಲಿ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು.
ಸಮಾರೋಪ ಅಧಿವೇಶನದ ಕುರಿತು ಮಾಹಿತಿ ನೀಡಿದ ನುಡಿ ಉತ್ಸವ ಸಮಿತಿಯ ಸಂಯೋಜಕ ಅಬ್ದುಲ್ ರೆಹಮಾನ್, ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ. ಸುರೇಶ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಹಾಗೂ ಖ್ಯಾತ ಸಾಹಿತಿ ಡಾ. ಮಹಾಲಿಂಗು ಕಲ್ಕುಂದ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು. ಕಾವೇರಿ ಎಜುಕೇಷನ್ ಸೊಸೈಟಿ (ರಿ) ಗೌರವ ಕಾರ್ಯದರ್ಶಿ ಕೆ.ಪಿ. ಬೋಪಣ್ಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಮಂಡ್ಯ | ದೂರದೃಷ್ಟಿಯ ನಾಯಕ ಎಸ್.ಎಂ. ಕೃಷ್ಣ ಸ್ಮರಣೆ: ಕಿಮ್ಮನೆ ರತ್ನಾಕರ್‌ಗೆ ರಾಜಕೀಯ ಪ್ರಶಸ್ತಿ
ವಿಚಾರ ಸಂಕಿರಣಕ್ಕೆ ನೋಂದಾಯಿಸಿಕೊಳ್ಳಲು www.nudiuthsava.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ನುಡಿ ಉತ್ಸವದ ಕಾರ್ಯದರ್ಶಿ ಲಿಖಿತ್ ರೈ-9008150824 ಹಾಗೂ ವಿಚಾರ ಸಂಕಿರಣದ ಸಂಯೋಜಕ ಸುನಿಲ್ ಕುಮಾರ್-9741992917 ಅವರನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?ಕೃಷ್ಣರಾಜನಗರ | ಜನಗಣತಿ ವೇಳೆ ಶಿಕ್ಷಕನಿಗೆ ಹೃದಯಾಘಾತ: ಸ್ಥಳದಲ್ಲೇ ಮೃತ್ಯು
ಪತ್ರಿಕಾಗೋಷ್ಠಿಯಲ್ಲಿ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ಸುನಿಲ್ ಕುಮಾರ್ ಇದ್ದರು.




