ಪತ್ನಿಯು ಮತ್ತೊಬ್ಬ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಸಂಭಾಷಣೆಗಳ ಪ್ರಿಂಟ್‌ಔಟ್‌ಗಳನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಆಕೆ ‘ವಿವಾಹೇತರ ಸಂಬಂಧ ಹೊಂದಿದ್ದಾಳೆ’ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ. ಈ ಕಾರಣ ನೀಡಿ ಆಕೆಗೆ ಜೀವನಾಂಶ ನಿರಾಕರಿಸಲು ಆಗಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಪತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಜೈ ಕೃಷ್ಣ ಉಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: ಮಹಿಳೆ ಗಂಡನ ಆಸ್ತಿಯಲ್ಲ: ದ್ರೌಪದಿಯನ್ನು ಉಲ್ಲೇಖಿಸಿದ ದೆಹಲಿ ಹೈಕೋರ್ಟ್
ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದಿತ ಪತ್ನಿಗೆ ಮಾಸಿಕ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು. “ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಆಕೆಯ ಇನ್‌ಸ್ಟಾಗ್ರಾಮ್ ಚಾಟ್‌ಗಳು ಇದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಸಿಆರ್‌ಪಿಸಿ ಕಾಯ್ದೆಯಡಿ ಆಕೆಗೆ ಜೀವನಾಂಶ ಪಡೆಯುವ ಹಕ್ಕಿಲ್ಲ” ಎಂದು ವಾದಿಸಿದ್ದರು.
ಆದರೆ ಅಲಹಾಬಾದ್ ಹೈಕೋರ್ಟ್, ಕಾನೂನಿನ ಪ್ರಕಾರ ವಿವಾಹೇತರ ಸಂಬಂಧ ಹೊಂದಿರುವುದು ಎಂದರೆ ಅದು ಒಂದೆರಡು ಪ್ರತ್ಯೇಕ ಘಟನೆಗಳು ಅಥವಾ ಸಂಶಯಗಳಲ್ಲ, ಬದಲಿಗೆ ಸಾಬೀತಾದ ನಿರಂತರ ಮತ್ತು ಅಭ್ಯಾಸಪೂರ್ವಕ ನಡವಳಿಕೆಯಾಗಿರಬೇಕು ಎಂದು ಹೇಳಿದೆ.
ವಿದ್ಯುನ್ಮಾನ ಪುರಾವೆಗಳಾಗಿ ಸಲ್ಲಿಸಲಾಗುವ ಇನ್‌ಸ್ಟಾಗ್ರಾಮ್ ಚಾಟ್ ಪ್ರಿಂಟ್‌ಔಟ್‌ಗಳನ್ನು ಕಾನೂನುಬದ್ಧವಾಗಿ ದೃಢೀಕರಿಸದ ಹೊರತು ಮತ್ತು ಅದರಲ್ಲಿ ಲೈಂಗಿಕ ಸಂಪರ್ಕ ಅಥವಾ ನಿರಂತರ ವಿವಾಹೇತರ ಸಂಬಂಧ ಸಾಬೀತಾಗದ ಹೊರತು ಅದನ್ನು ಸಾಕ್ಷಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪತಿಯು ಮಾಡಿರುವ ಆರೋಪಕ್ಕೆ ಸೂಕ್ತ ಮತ್ತು ಕಾನೂನುಬದ್ಧ ಸಾಕ್ಷ್ಯ ಒದಗಿಸಲು ವಿಫಲರಾಗಿರುವುದರಿಂದ, ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಜೀವನಾಂಶದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.




