ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳು ಹೊಸತೇನೂ ಅಲ್ಲ. ಮಿರ್ಚ್ ಮಸಾಲಾ, ಫೈರ್, ಅಸ್ತಿತ್ವ, ಪಾರ್ಚ್ಡ್ ಮುಂತಾದ ಸಿನಿಮಾಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಇವುಗಳನ್ನು ಸ್ಪರ್ಶಿಸಿವೆ. Lipstick Under My Burkha ಕೂಡ ಇದೇ ಪರಂಪರೆಗೆ ತನ್ನದೇ ಆದ ಧ್ವನಿಯನ್ನು ಸೇರಿಸುತ್ತದೆ. ಆದರೆ ಇದರ ವಿಶೇಷತೆ ದೊಡ್ಡ ಕ್ರಾಂತಿಯ ಕಥೆ ಹೇಳುವುದರಲ್ಲಿ ಇಲ್ಲ.
ಒಬ್ಬ ಮಹಿಳೆ ತನ್ನ ಕೋಣೆಯ ಬಾಗಿಲು ಹಾಕಿಕೊಂಡು ಒಬ್ಬಳೇ ಇದ್ದಾಗ ಏನು ಮಾಡುತ್ತಾಳೆ? ಯಾರಿಗೂ ಹೇಳಿಕೊಳ್ಳಲಾಗದ ತನ್ನ ಆಸೆಗಳ ಬಗ್ಗೆ ಯೋಚಿಸುತ್ತಾಳಾ? ಮನಸ್ಸಿಗೆ ಬಂದಂತೆ ಹಾಡುತ್ತಾಳಾ, ಕುಣಿಯುತ್ತಾಳಾ, ತನ್ನ ದೇಹವನ್ನು ಪ್ರೀತಿಸುತ್ತಾ, ತನಗೆ ಬೇಕಾದ ಬದುಕನ್ನು ಕಲ್ಪಿಸಿಕೊಳ್ಳುತ್ತಾಳಾ?
ಬಹುಶಃ ಇದೆಲ್ಲವನ್ನೂ ಮಾಡುತ್ತಾಳೆ. ಆದರೆ ಅದೇ ಮಹಿಳೆ ಬಾಗಿಲು ತೆರೆದು ಹೊರಬಂದ ತಕ್ಷಣ, ಮನೆಯವರು ಮತ್ತು ಸಮಾಜ ನಿರೀಕ್ಷಿಸುವ ‘ಸೂಕ್ತ’ ಮಹಿಳೆಯಾಗಿ ಬದಲಾಗಬೇಕಾಗುತ್ತದೆ. ಒಳಗೊಂದು ಬದುಕು, ಹೊರಗೊಂದು ಬದುಕು. ಈ ಎರಡರ ನಡುವಿನ ಅಂತರದಲ್ಲೇ ಮಹಿಳೆಯರ ಎಷ್ಟೋ ಕನಸುಗಳು ಉಸಿರುಗಟ್ಟಿ ಹೋಗುತ್ತವೆ.
ಮಹಿಳೆಯರ ಬದುಕಿನ ಇಂತಹ ರಹಸ್ಯ ಜಗತ್ತನ್ನು ತೆರೆದಿಡುವ ಸಿನಿಮಾವೇ ಅಲಂಕೃತಾ ಶ್ರೀವಾಸ್ತವ್ ನಿರ್ದೇಶನದ Lipstick Under My Burkha (2017). ಭೋಪಾಲ್‌ನ ಹಳೆಯ ‘ಹವಾಯಿ ಮಂಜಿಲ್’ನಲ್ಲಿ ವಾಸಿಸುವ ನಾಲ್ವರು ಮಹಿಳೆಯರ ಕಥೆಯಿದು. ವಯಸ್ಸು, ಕುಟುಂಬ, ಆರ್ಥಿಕ ಪರಿಸ್ಥಿತಿ, ಧರ್ಮ ಮತ್ತು ಆಸೆಗಳು ಎಲ್ಲವೂ ಬೇರೆ ಬೇರೆ. ಆದರೆ ತಮ್ಮ ಬದುಕಿನ ನಿರ್ಧಾರಗಳ ಮೇಲೆ ತಮಗೇ ಸಂಪೂರ್ಣ ಹಕ್ಕಿಲ್ಲ ಎಂಬ ಅನುಭವ ಮಾತ್ರ ನಾಲ್ವರನ್ನೂ ಒಂದೇ ಸೂತ್ರದಲ್ಲಿ ಬೆಸೆಯುತ್ತದೆ.
ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳು ಹೊಸತೇನೂ ಅಲ್ಲ. ಮಿರ್ಚ್ ಮಸಾಲಾ, ಫೈರ್, ಅಸ್ತಿತ್ವ, ಪಾರ್ಚ್ಡ್ ಮುಂತಾದ ಸಿನಿಮಾಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ಇವುಗಳನ್ನು ಸ್ಪರ್ಶಿಸಿವೆ. Lipstick Under My Burkha ಕೂಡ ಇದೇ ಪರಂಪರೆಗೆ ತನ್ನದೇ ಆದ ಧ್ವನಿಯನ್ನು ಸೇರಿಸುತ್ತದೆ. ಆದರೆ ಇದರ ವಿಶೇಷತೆ ದೊಡ್ಡ ಕ್ರಾಂತಿಯ ಕಥೆ ಹೇಳುವುದರಲ್ಲಿ ಇಲ್ಲ. ದಿನನಿತ್ಯದ ಬದುಕಿನೊಳಗೆ ತಮಗಿಷ್ಟವಾದ ಒಂದಿಷ್ಟು ಉಸಿರಾಡುವ ಜಾಗವನ್ನು ಹುಡುಕುತ್ತಿರುವ ಸಾಮಾನ್ಯ ಮಹಿಳೆಯರನ್ನು ಇದು ಕೇಂದ್ರಕ್ಕೆ ತರುತ್ತದೆ.
ಐವತ್ತೈದು ವರ್ಷದ ಉಷಾ ಅಲಿಯಾಸ್ ಬುಆಜಿ ಈ ನಾಲ್ವರಲ್ಲಿ ಅತ್ಯಂತ ಸಂಕೀರ್ಣವಾದ ಪಾತ್ರ. ಮನೆಯವರಿಗೆ ಆಕೆ ಗೌರವಾನ್ವಿತ ಹಿರಿಯ ಮಹಿಳೆ. ಇಡೀ ಕುಟುಂಬ ಹಾಗೂ ಕಟ್ಟಡದ ವ್ಯವಹಾರಗಳನ್ನು ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿ. ಆದರೆ ಆಕೆಯೊಳಗೂ ಒಂದು ಖಾಸಗಿ ಜಗತ್ತಿದೆ. ಪ್ರೇಮ ಮತ್ತು ಕಾಮದ ಕಾದಂಬರಿಗಳನ್ನು ರಹಸ್ಯವಾಗಿ ಓದುವ ಬುಆಜಿ, ಅವುಗಳ ನಾಯಕಿ ‘ರೋಸಿ’ ಎಂಬ ಹೆಸರಿನ ಮೂಲಕ ತನ್ನ ಕಲ್ಪನೆಯ ಬದುಕಿನಲ್ಲಿ ಮುಳುಗುತ್ತಾಳೆ. ಈಜು ಕಲಿಯುವಾಗ ಯುವ ತರಬೇತುದಾರನತ್ತ ಆಕರ್ಷಿತಳಾಗುವುದು, ಪ್ರೀತಿಯನ್ನು ಬಯಸುವುದು—ಇವುಗಳನ್ನು ಸಿನಿಮಾ ಆಕೆಯ ವಯಸ್ಸಿನ ಕಾರಣಕ್ಕೆ ಎಲ್ಲೂ ಹಾಸ್ಯಾಸ್ಪದಗೊಳಿಸುವುದಿಲ್ಲ.
ಇಲ್ಲಿಯೇ ರತ್ನಾ ಪಾಠಕ್ ಶಾ ಅವರ ಅಭಿನಯದ ಶಕ್ತಿ ಕಾಣುತ್ತದೆ. ಬುಆಜಿಯ ಹೊರಗಿನ ಕಠಿಣತೆ, ಒಳಗಿನ ಮುಜುಗರ, ಕುತೂಹಲ ಮತ್ತು ಹತ್ತಿಕ್ಕಲ್ಪಟ್ಟ ಆಸೆಗಳು ಎಲ್ಲವೂ ಅವರ ಅಭಿನಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಮೂಡಿಬಂದಿವೆ. ಯುವತಿಯೊಬ್ಬಳ ಪ್ರೇಮದ ಬಗ್ಗೆ ಸಮಾಜ ಸಹಜವಾಗಿ ಮಾತನಾಡಬಹುದು. ಆದರೆ ವಯಸ್ಸಾದ ಮಹಿಳೆ ತನ್ನ ದೇಹ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದರೆ ಅದೇ ಸಮಾಜ ಮುಜುಗರಪಡುತ್ತದೆ, ಇಲ್ಲವೇ ಅಪಹಾಸ್ಯ ಮಾಡುತ್ತದೆ. ಬುಆಜಿ ಆ ದ್ವಿಮುಖ ನೀತಿಯ ಮೇಲೆಯೇ ಪ್ರಶ್ನೆ ಎತ್ತುತ್ತಾರೆ.

ಶಿರೀನ್‌ಳ ಬದುಕಿನಲ್ಲಿ ಆಸೆ ಮತ್ತೊಂದು ರೂಪ ಪಡೆಯುತ್ತದೆ. ಮೂವರು ಮಕ್ಕಳ ತಾಯಿಯಾಗಿರುವ ಆಕೆ ಮನೆಯವರಿಗೆ ತಿಳಿಯದಂತೆ ರಹಸ್ಯವಾಗಿ ಕೆಲಸ ಮಾಡುತ್ತಿರುತ್ತಾಳೆ. ಮಾರಾಟ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸುವಾಗ ಕಾಣುವ ಆತ್ಮವಿಶ್ವಾಸ, ಮನೆಯೊಳಗಿನ ಅವಳ ಸ್ಥಿತಿಗೆ ತದ್ವಿರುದ್ಧ. ಗಂಡನಿಗೆ ಅವಳ ದುಡಿಮೆಯಿಂದ ಬರುವ ಹೆಮ್ಮೆಯಿಗಿಂತ, ಹೆಂಡತಿಯಾಗಿ ತನ್ನ ಸೇವೆ ಮಾಡುವುದು ಮುಖ್ಯ. ಆಕೆಯ ದೇಹದ ಮೇಲೂ ತನಗೇ ಸಂಪೂರ್ಣ ಹಕ್ಕಿದೆ ಎಂಬಂತೆ ಆತ ವರ್ತಿಸುತ್ತಾನೆ.
ಕೊಂಕಣಾ ಸೇನ್ ಶರ್ಮಾ ಶಿರೀನ್ ಪಾತ್ರವನ್ನು ಕೇವಲ ಅಸಹಾಯಕ ಮಹಿಳೆಯಾಗಿ ಕಟ್ಟಿಕೊಡುವುದಿಲ್ಲ. ಆಕೆಯ ಮೌನ, ಕೆಲಸದ ಮೇಲಿನ ಹಿಡಿತ, ಮಕ್ಕಳಿಗಾಗಿ ಪಡುವ ಶ್ರಮ ಮತ್ತು ಗಂಡನ ದೌರ್ಜನ್ಯದ ಎದುರು ತೋರಿಸುವ ಒಳಗಿನ ಪ್ರತಿರೋಧ—ಎಲ್ಲವೂ ಪಾತ್ರಕ್ಕೆ ಜೀವ ತುಂಬುತ್ತವೆ. ಆಕೆ ಸಂಪಾದಿಸುವ ಹಣವನ್ನು ಕೂಡ ಗಂಡನಿಂದ ಮುಚ್ಚಿಡಬೇಕಾದ ಸ್ಥಿತಿ, ಆರ್ಥಿಕ ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ನಿಜವಾದ ಆತ್ಮಸ್ವಾತಂತ್ರ್ಯ ಸಿಗುವುದಿಲ್ಲ ಎಂಬುದನ್ನು ತೋರಿಸುತ್ತದೆ.
ಇನ್ನೊಂದೆಡೆ ಲೀಲಾ ಬ್ಯೂಟಿ ಪಾರ್ಲರ್ ನಡೆಸುವ ಯುವತಿ. ಪ್ರೀತಿ ಇದೆ, ದೈಹಿಕ ಬಯಕೆ ಇದೆ, ತನ್ನಿಷ್ಟದ ಪ್ರೇಮಿಯೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುವ ಕನಸಿದೆ. ಆದರೆ ಕುಟುಂಬ ಆಕೆಗಾಗಿ ಬೇರೆಯದೇ ಮದುವೆಯನ್ನು ನಿಶ್ಚಯಿಸಿದೆ. ಇಲ್ಲಿ ಪ್ರೀತಿ ಮತ್ತು ಮದುವೆ ಒಂದೇ ನಿರ್ಧಾರಗಳಲ್ಲ ಎಂಬ ಸತ್ಯ ಎದುರಾಗುತ್ತದೆ. ಮಹಿಳೆಯೊಬ್ಬಳಿಗೆ ಯಾರನ್ನಾದರೂ ಪ್ರೀತಿಸುವ ಹಕ್ಕು ಇದ್ದರೂ, ಆ ಪ್ರೀತಿಯ ಅಂತಿಮ ಗುರಿ ಮದುವೆಯೇ ಆಗಬೇಕು ಎಂಬ ಸಾಮಾಜಿಕ ನಿಯಮವನ್ನು ಆಕೆ ಪ್ರಶ್ನಿಸುತ್ತಾಳೆ.
ಅಹಾನಾ ಕುಮ್ರಾ ಲೀಲಾಳನ್ನು ಕೇವಲ ಒಬ್ಬ ‘ಬಂಡಾಯಗಾರ್ತಿ’ಯಾಗಿ ತೋರಿಸುವುದಿಲ್ಲ. ತನ್ನ ಬಯಕೆಗಳನ್ನು ಬದುಕಲು ಹೊರಟಾಗ ಆಕೆಯ ನಿರ್ಧಾರಗಳಲ್ಲೂ ಸ್ವಾರ್ಥ, ಭಯ, ಗೊಂದಲ ಮತ್ತು ಲೆಕ್ಕಾಚಾರಗಳಿವೆ. ಅದೇ ಆಕೆಯ ಪಾತ್ರವನ್ನು ನಮಗೆ ಹೆಚ್ಚು ಹತ್ತಿರವಾಗಿಸುತ್ತದೆ. ಪ್ರೀತಿ ಮತ್ತು ದೈಹಿಕ ಆಯ್ಕೆಯನ್ನು ‘ಒಳ್ಳೆಯ ಹುಡುಗಿ–ಕೆಟ್ಟ ಹುಡುಗಿ’ ಎಂಬ ಎರಡು ಅಳತೆಗೋಲುಗಳಲ್ಲಿ ಅಳೆಯುವ ಸಮಾಜದ ಮುಖಕ್ಕೆ ಲೀಲಾ ಕನ್ನಡಿ ಹಿಡಿಯುತ್ತಾಳೆ.
ನಾಲ್ಕನೆಯವಳು ರೆಹಾನಾ. ಈಕೆಯ ಬದುಕು ಎರಡು ವಿಭಿನ್ನ ಮುಖಗಳ ನಡುವೆ ಸಿಲುಕಿದೆ. ಮನೆಯೊಳಗೆ ಸಂಪ್ರದಾಯಸ್ಥ ಬುರ್ಖಾ ಧರಿಸುವ ಆಕೆ, ಕಾಲೇಜಿಗೆ ಹೋದಾಗ ಜೀನ್ಸ್ ಧರಿಸುತ್ತಾಳೆ, ಪಾಪ್ ಸಂಗೀತ ಕೇಳುತ್ತಾಳೆ, ಹಾಡುತ್ತಾಳೆ ಮತ್ತು ತನ್ನದೇ ಆದ ಹೊಸ ಗುರುತನ್ನು ಕಂಡುಕೊಳ್ಳಲು ಯತ್ನಿಸುತ್ತಾಳೆ. ಮನೆಯವರು ಬಯಸುವ ‘ಸಭ್ಯ ಮಗಳು’ ಮತ್ತು ತಾನು ಆಗಬಯಸುವ ‘ಸ್ವತಂತ್ರ ವ್ಯಕ್ತಿ’ಯ ನಡುವಿನ ಸಂಘರ್ಷವೇ ಅವಳ ಕಥೆ.
ಆದರೆ ರೆಹಾನಾಳ ಕಥೆಯನ್ನು ಕೇವಲ ‘ಬುರ್ಖಾ ವಿರುದ್ಧ ಜೀನ್ಸ್’ ಎಂದು ನೋಡುವುದು ತೀರಾ ಸರಳವಾದ ವ್ಯಾಖ್ಯಾನವಾದೀತು. ಬುರ್ಖಾ ದಮನವೇ ಅಥವಾ ಜೀನ್ಸ್ ಸ್ವಾತಂತ್ರ್ಯದ ಸಂಕೇತವೇ ಎಂಬುದಕ್ಕಿಂತ, ಯಾವ ಉಡುಪನ್ನು ಧರಿಸಬೇಕು ಎಂಬ ನಿರ್ಧಾರವನ್ನು ಮಹಿಳೆ ತಾನೇ ತೆಗೆದುಕೊಳ್ಳಬಲ್ಲಳೇ ಎಂಬುದು ಮುಖ್ಯ. ಲಿಪ್‌ಸ್ಟಿಕ್ ಹಚ್ಚುವುದೋ ಬೇಡವೋ, ಬುರ್ಖಾ ಧರಿಸುವುದೋ ಬೇಡವೋ—ಆ ಆಯ್ಕೆಯ ಹಕ್ಕು ಮಹಿಳೆಯ ಕೈಯಲ್ಲಿದೆಯೇ ಎಂಬುದೇ ಅಸಲಿ ಪ್ರಶ್ನೆ. ಪ್ಲಾಬಿತಾ ಬೋರ್ಠಾಕೂರ್ ರೆಹಾನಾಳ ಒಳಗಿನ ಈ ಗೊಂದಲಗಳನ್ನು ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ.
ಚಿತ್ರದ ಶೀರ್ಷಿಕೆಯೇ ಅತ್ಯಂತ ಶಕ್ತಿಶಾಲಿ ರೂಪಕ. Lipstick Under My Burkha—ಬುರ್ಖಾದ ಕೆಳಗೆ ಮರೆಮಾಡಿರುವ ಲಿಪ್‌ಸ್ಟಿಕ್. ಹೊರಗಿನ ಜಗತ್ತಿಗೆ ಕಾಣುವ ಮುಖದ ಹಿಂದೆ ಮತ್ತೊಂದು ಖಾಸಗಿ ಜಗತ್ತು ಇರುವುದನ್ನು ಇದು ಸೂಚಿಸುತ್ತದೆ. ಆದರೆ ಬುರ್ಖಾ ಎಂದರೆ ದಮನ, ಲಿಪ್‌ಸ್ಟಿಕ್ ಎಂದರೆ ಸ್ವಾತಂತ್ರ್ಯ ಎಂಬ ಸರಳ ಸಮೀಕರಣವನ್ನು ಸಿನಿಮಾ ಮಾಡುವುದಿಲ್ಲ. ಲಿಪ್‌ಸ್ಟಿಕ್ ಹಚ್ಚುವುದೋ ಬೇಡವೋ, ಬುರ್ಖಾ ಧರಿಸುವುದೋ ಬೇಡವೋ—ಆ ಆಯ್ಕೆಯ ಹಕ್ಕು ಮಹಿಳೆಯ ಕೈಯಲ್ಲಿದೆಯೇ ಎಂಬುದನ್ನೇ ಅದು ಮುಖ್ಯವಾಗಿಸುತ್ತದೆ.
ಸಿನಿಮಾದ ಹಿನ್ನೆಲೆಯೂ ಈ ಅರ್ಥವನ್ನು ಬಲಪಡಿಸುತ್ತದೆ. ಹಳೆಯ ಭೋಪಾಲ್‌ನ ಇಕ್ಕಟ್ಟಾದ ಗಲ್ಲಿಗಳು, ಸಣ್ಣ ಮನೆಗಳು, ಕಿಟಕಿ-ಬಾಗಿಲುಗಳು—ಇವೆಲ್ಲವೂ ಪಾತ್ರಗಳ ಬದುಕಿನ ಉಸಿರುಗಟ್ಟಿಸುವ ವಾತಾವರಣಕ್ಕೆ ಕನ್ನಡಿ ಹಿಡಿಯುತ್ತವೆ. ಪ್ರತಿಯೊಬ್ಬರಿಗೂ ತಮ್ಮ ಖಾಸಗಿ ಜಗತ್ತನ್ನು ಉಳಿಸಿಕೊಳ್ಳಲು ಒಂದು ಸಣ್ಣ ಜಾಗ ಬೇಕಾಗಿದೆ. ಇಲ್ಲಿ ಕ್ಯಾಮೆರಾ ಕೇವಲ ಹಿನ್ನೆಲೆಯನ್ನು ತೋರಿಸುವುದಿಲ್ಲ; ಅದು ಪಾತ್ರಗಳ ಮನಸ್ಥಿತಿಯ ಭಾಗವಾಗಿಯೇ ಕೆಲಸ ಮಾಡುತ್ತದೆ. ಕನ್ನಡಿಗಳು, ಕಿಟಕಿಗಳು ಮತ್ತು ಬಾಗಿಲುಗಳಂತಹ ದೃಶ್ಯ ಅಂಶಗಳ ಮೂಲಕ ಪಾತ್ರಗಳು ತಮ್ಮನ್ನು ತಾವು ನೋಡುವುದು ಮತ್ತು ಸಮಾಜದ ಕಣ್ಣಿನಿಂದ ತಮ್ಮನ್ನು ಅಳೆಯುವುದು—ಈ ಎರಡರ ನಡುವಿನ ಅಂತರವನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.
ಚಿತ್ರದ ಸಂಗೀತವೂ ಪಾತ್ರಗಳ ಒಳಜಗತ್ತಿಗೆ ಧ್ವನಿಯಾಗುತ್ತದೆ. ಜೆಬುನ್ನಿಸಾ ಬಂಗಾಶ್ ಹಾಡಿರುವ ‘Le Li Jaan’ ಹಾಡಿನಲ್ಲಿನ “12 takke byaaj pe…” ಎಂಬ ಸಾಲುಗಳು ಮಹಿಳೆಯರ ಬದುಕಿನ ಮಾರ್ಮಿಕ ರೂಪಕದಂತೆ ಕೇಳಿಸುತ್ತವೆ. ಅವರು ಅನುಭವಿಸುವ ಪುಟ್ಟ ಸಂತೋಷಕ್ಕೂ ಸಮಾಜ ಎಷ್ಟೊಂದು ದೊಡ್ಡ ಬೆಲೆ ವಸೂಲಿ ಮಾಡುತ್ತದೆ ಎಂಬುದನ್ನು ಅದು ನೆನಪಿಸುತ್ತದೆ. ರೆಹಾನಾಳಿಗೆ ಸಂಗೀತ ಕೇವಲ ಹವ್ಯಾಸವಲ್ಲ, ತನ್ನನ್ನು ತಾನು ಕಂಡುಕೊಳ್ಳುವ ಜಾಗ. ಬುಆಜಿಗೆ ಪ್ರೇಮದ ಕಾದಂಬರಿಗಳು ಹೇಗೆ ವಾಸ್ತವದಾಚೆಯ ಖಾಸಗಿ ಜಗತ್ತನ್ನು ಕಟ್ಟಿಕೊಡುತ್ತವೆಯೋ, ರೆಹಾನಾಳಿಗೆ ಸಂಗೀತವೂ ಹಾಗೆಯೇ. ಇಬ್ಬರ ಮಾಧ್ಯಮ ಬೇರೆಯಿರಬಹುದು. ಆದರೆ ತಮ್ಮ ನಿಜಜಗತ್ತಿನಲ್ಲಿ ಸಿಗದ ಸ್ವಾತಂತ್ರ್ಯವನ್ನು ಕಲ್ಪನೆಯಲ್ಲಾದರೂ ಅನುಭವಿಸುವ ಹಂಬಲ ಒಂದೇ.

ಚಿತ್ರದ ಕೊನೆಯ ಭಾಗದಲ್ಲಿ ನಾಲ್ವರ ರಹಸ್ಯಗಳು ಒಂದೊಂದಾಗಿ ಸಮಾಜದ ಮುಂದೆ ಬಟಾಬಯಲಾಗುತ್ತವೆ. ತಮ್ಮ ಬದುಕಿನ ಮೇಲೆ ಸಂಪೂರ್ಣ ನಿಯಂತ್ರಣವಿದೆ ಎಂದು ಭಾವಿಸುವ ಪುರುಷರಿಂದ ಅವರು ತಿರಸ್ಕಾರ ಮತ್ತು ಶಿಕ್ಷೆಯನ್ನು ಎದುರಿಸುತ್ತಾರೆ. ಆದರೆ ಅದರ ನಂತರ ಬರುವ ದೃಶ್ಯವೇ ಸಿನಿಮಾದ ಆತ್ಮ. ಧ್ವಂಸಗೊಂಡ ವಾತಾವರಣದಲ್ಲಿ ನಾಲ್ವರೂ ಒಟ್ಟಿಗೆ ಕುಳಿತು, ಸಿಗರೇಟ್ ಹಚ್ಚಿಕೊಂಡು, ಬುಆಜಿಯ ಕಾದಂಬರಿಯನ್ನು ಓದುತ್ತಾ ನಗುತ್ತಾರೆ. ಇದು ಅವರ ಅಂತಿಮ ವಿಜಯವಲ್ಲ. ಅವರ ಸಮಸ್ಯೆಗಳು ಮುಗಿದಿಲ್ಲ, ಸಮಾಜವೂ ಬದಲಾಗಿಲ್ಲ. ಆದರೆ ಇಷ್ಟು ದಿನ ತಮ್ಮ ತಮ್ಮ ಇಕ್ಕಟ್ಟಿನಲ್ಲೇ ಪ್ರತ್ಯೇಕವಾಗಿ ನರಳುತ್ತಿದ್ದ ನಾಲ್ವರು ಮಹಿಳೆಯರು ಆ ಕ್ಷಣದಲ್ಲಿ ಪರಸ್ಪರರ ಸಾನ್ನಿಧ್ಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಯಾವುದೇ ದೊಡ್ಡ ಬಂಡಾಯದ ಘೋಷಣೆಯ ಬದಲು, ಸಿನಿಮಾ ಕೊನೆಯಲ್ಲಿ ನೀಡುವುದು ಈ ಮಹಿಳಾ ಸಹೋದರಿತ್ವದ ಶಕ್ತಿ.
ಸಿನಿಮಾ ಸಂಪೂರ್ಣವಾಗಿ ದೋಷರಹಿತವೆಂದೇನೂ ಅಲ್ಲ. ನಾಲ್ಕು ವಿಭಿನ್ನ ಕಥೆಗಳನ್ನು ಒಂದೇ ಚೌಕಟ್ಟಿನಲ್ಲಿ ಹೇಳುವಾಗ ಕೆಲವು ಪಾತ್ರಗಳ ಒಳಜಗತ್ತನ್ನು ಇನ್ನಷ್ಟು ವಿಸ್ತಾರವಾಗಿ ತೋರಿಸಬಹುದಿತ್ತು. ವಿಶೇಷವಾಗಿ ಕೆಲವು ಪುರುಷ ಪಾತ್ರಗಳು ಪಿತೃಪ್ರಧಾನ ವ್ಯವಸ್ಥೆಯ ಮುಖಗಳಾಗಿ ಮಾತ್ರ ಕಾಣುತ್ತವೆಯೇ ಹೊರತು, ಅವರ ವೈಯಕ್ತಿಕ ಸಂಕೀರ್ಣತೆಗಳಿಗೆ ಹೆಚ್ಚಿನ ಜಾಗ ಸಿಗುವುದಿಲ್ಲ. ಕೊನೆಯ ಭಾಗದಲ್ಲಿ ಕೆಲವು ಘಟನೆಗಳು ತೀರಾ ಧಾವಂತವಾಗಿ ಸಾಗುತ್ತವೆ. ಮಹಿಳೆಯರು ತಮ್ಮ ಆಸೆಗಳನ್ನು ವ್ಯಕ್ತಪಡಿಸಿದ ನಂತರದ ಅವರ ಮುಂದಿನ ಹಾದಿ ಏನು ಎಂಬ ಪ್ರಶ್ನೆಗೆ ಸಿನಿಮಾ ಸ್ಪಷ್ಟ ಉತ್ತರ ನೀಡುವುದಿಲ್ಲ.
ಇದನ್ನೂ ಓದಿ ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ
ಆದರೆ ಈ ಮಿತಿಗಳ ನಡುವೆಯೂ ಚಿತ್ರದ ಮುಖ್ಯ ಪ್ರಶ್ನೆ ತನ್ನ ತೀವ್ರತೆಯನ್ನು ಕಳೆದುಕೊಳ್ಳುವುದಿಲ್ಲ. Lipstick Under My Burkha ಬರೀ ‘ಮಹಿಳೆಯರಿಗೆ ಸ್ವಾತಂತ್ರ್ಯ ಕೊಡಿ’ ಎಂದು ವಾದಿಸುವ ಸಿನಿಮಾವಲ್ಲ. ‘ಮಹಿಳೆಯೊಬ್ಬಳಿಗೆ ತನ್ನದೇ ಆದ ಸ್ವತಂತ್ರ ಆಸೆ-ಆಕಾಂಕ್ಷೆಗಳಿರಲು ಸಾಧ್ಯ’ ಎಂಬುದನ್ನು ಮೊದಲು ಒಪ್ಪಿಕೊಳ್ಳಿ ಎಂದು ಸಮಾಜವನ್ನು ಒತ್ತಾಯಿಸುವ ಸಿನಿಮಾ. ಆ ಆಸೆ ಪ್ರೀತಿಯಿರಬಹುದು, ದೇಹದ ಆಯ್ಕೆಯಿರಬಹುದು, ಉದ್ಯೋಗ, ಸಂಗೀತ ಅಥವಾ ಬರವಣಿಗೆಯೂ ಇರಬಹುದು.
ಮಹಿಳೆಯ ಸ್ವಾತಂತ್ರ್ಯವನ್ನು ಆಕೆ ಎಷ್ಟು ನಿಯಮಗಳನ್ನು ಮುರಿದಿದ್ದಾಳೆ ಎಂಬುದರಿಂದ ಅಳೆಯಬೇಕಿಲ್ಲ. ನಿಯಮಗಳನ್ನು ಮುರಿಯದೆಯೂ ತನ್ನಿಷ್ಟದಂತೆ ಬದುಕಲು ಆಕೆಗೆ ಅವಕಾಶವಿದೆಯೇ ಎಂಬುದೇ ಮುಖ್ಯ. ಬುರ್ಖಾ ಧರಿಸಬೇಕೋ ಬೇಡವೋ, ಲಿಪ್‌ಸ್ಟಿಕ್ ಹಚ್ಚಬೇಕೋ ಬೇಡವೋ, ಪ್ರೀತಿಸಬೇಕೋ ಬೇಡವೋ—ಈ ಪ್ರತಿಯೊಂದು ನಿರ್ಧಾರದಲ್ಲೂ ಮಹಿಳೆಯ ಸ್ವಂತ ಧ್ವನಿಗೆ ಎಷ್ಟು ಜಾಗವಿದೆ ಎಂಬುದೇ ಅಸಲಿ ಪ್ರಶ್ನೆ.
ಲಿಪ್‌ಸ್ಟಿಕ್‌ನ ಬಣ್ಣವನ್ನು ಒರೆಸಿ ಅಳಿಸಬಹುದು. ಬುರ್ಖಾವನ್ನು ತೊಡಬಹುದು, ಕಳಚಿಡಬಹುದು. ಆದರೆ ಅವುಗಳ ಆಚೆಗಿರುವ ಮಹಿಳೆಯ ವ್ಯಕ್ತಿತ್ವ, ಅವಳ ಕನಸುಗಳು ಮತ್ತು ಅವಳ ಆಯ್ಕೆಗಳನ್ನು ಅಳಿಸಿಹಾಕಲು ಸಾಧ್ಯವಾಗಬಾರದು.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



