ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೊಮ್ಮಕಟ್ಟೆ ವನ್ಯ ವೃಕ್ಷೋದ್ಯಾನವನದ ರಸ್ತೆ ಸಮೀಪ ಕೆ.ಇ.ಬಿ. ಇಲಾಖೆಯಿಂದ ಅಳವಡಿಸಲಾಗಿದ್ದ 2 ಬ್ಯಾಟರಿ ಮತ್ತು ಕಾಪರ್ ವೈರ್‌ಗಳನ್ನು ಕಳವು ಮಾಡಿದ್ದ ಆರೋಪಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ತಿಂಗಳ ಸಜೆಯ ಜೊತೆಗೆ 25,000 ದಂಡ ವಿಧಿಸಿದೆ.
ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಕಟ್ಟೆ ವನ್ಯ ವೃಕ್ಷೋದ್ಯಾನ ರಸ್ತೆ ಪಕ್ಕದಲ್ಲಿದ್ದ ಕೆ.ಇ.ಬಿ. ಆಸ್ತಿಯನ್ನು ಮಂಜುನಾಥ್ (40 ವರ್ಷ) ಎಂಬಾತನು ಕಳವು ಮಾಡಿಕೊಂಡು ಹೋಗಿದ್ದನು. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಆಗಿನ ತನಿಖಾಧಿಕಾರಿ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಯೋಗೇಶ್ ಕೆ.ಎಂ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ವ್ಯಾಜ್ಯದ ಕುರಿತು ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ಅವರು ಸರ್ಕಾರದ ಪರವಾಗಿ ಪ್ರಬಲವಾದ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಎನ್. ಮುನಿರಾಜ್ ಅವರು ಆರೋಪಿ ಮಂಜುನಾಥ್ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, 25,000 ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಪಾವತಿಸಲು ತಪ್ಪಿದಲ್ಲಿ 3 ತಿಂಗಳುಗಳ ಕಾಲ ಸಾದಾ ಕಾರಾಗೃಹವಾಸ ಶಿಕ್ಷೆ ಅನುಭವಿಸಬೇಕೆಂದು ಆದೇಶ ಹೊರಡಿಸಿದ್ದಾರೆ





