ರಾಜ್ಯವು ಯಜಮಾನಿಕ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದ ಎಪ್ಪತ್ತರ ದಶಕದಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿ ಮತ್ತು ಅಂಬೇಡ್ಕರ್ ತತ್ವಗಳಿಂದ ಪ್ರೇರಣೆ ಪಡೆದು ಹುಟ್ಟಿದ ದಲಿತ ಚಳವಳಿಗೆ ಪ್ರಸಕ್ತ ಸಾಲಿನಲ್ಲಿ ಐವತ್ತು ವರುಷ ತುಂಬುತ್ತಿದೆ. ಈ ಚಳವಳಿ ಕರ್ನಾಟಕದಲ್ಲಿ ಮಹತ್ತರವಾದ ಬದಲಾವಣೆಗಳಿಗೆ ಕಾರಣವಾಯಿತು ಎಂದು ಪ್ರಗತಿಪರ ಚಿಂತಕ ಬಸವರಾಜ್ ಸೂಳಿಬಾವಿ ಹೇಳಿದರು.
ದಲಿತ ಚಳವಳಿಗೆ ಪ್ರೊ ಬಿ ಕೃಷ್ಣಪ್ಪ ನೀಡಿದ ಕೊಡುಗೆ ಹಾಗೂ ಅವರ ನೆನಪಿನಲ್ಲಿ ದಲಿತ ಚಳವಳಿ 50: ಅವಲೋಕನ-ಮುನ್ನೋಟ ಹೆಸರಿನಡಿ ಎರಡು ದಿನಗಳ ಕಾಲ ರಾಷ್ಟ್ರೀಯ ಸಮಾವೇಶವ ಹಮ್ಮಿಕೊಳ್ಳಲು ಗದಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“ದಲಿತ ಚಳವಳಿ 50: ಅವಲೋಕನ-ಮುನ್ನೋಟ ಚಳವಳಿಯಿಂದಾಗಿಯೇ ರಾಜ್ಯದ ದಲಿತ ಮತ್ತು ನಿಮ್ನ ವರ್ಗಗಳು ಚಾರಿತ್ರಿಕವಾಗಿ ಹಲವಾರು ಹೆಜ್ಜೆ ಮುನ್ನೆಗೆತ ಕಂಡವು. ಇಂಥ ಪರಿವರ್ತನೆಗೆ
ಡಿಎಸ್‌ಎಸ್ ಹೋರಾಟವೇ ಕಾರಣ. ಇಂದು ಡಿಎಸ್‌ಎಸ್ ಬೇರೆ ಬೇರೆ ಕಾರಣಗಳಿಂದ ಒಡೆದು ಹೋಗಿದೆ. ಇಂಥ ಒಡಕು ವೈಯಕ್ತಿಕ ನೆಲೆಯಲ್ಲದ್ದು. ಮತ್ತೆ ಈ ಎಲ್ಲ ಸಂಘಟನೆಗಳನ್ನು ವಿಶಾಲ ವೇದಿಕೆಯಡಿಯಲ್ಲಿ ಒಂದುಗೂಡಬೇಕಿದೆ. ಅದಕ್ಕೊಂದು ಪ್ರೆರಣೆ ಸಿಗಲಿ ಎಂದು ಸಂಘಟನೆಗಳು ಒಂದಾಗಲು ಒಂದು ವೇದಿಕೆಯಾಗಿ ಈ ಸಮಾವೇಶ ನಡೆಯಲಿ” ಎಂದರು.
“ಅಂಬೇಡ್ಕರ್ ಅವರ ವಿಚಾರಗಳನ್ನು ಯಾರೂ ಓದುತ್ತಿಲ್ಲ, ಎದೆಗೆ ಇಳಿಸಿಕೊಳ್ಳಲು ಆಗಿಲ್ಲ. ಅವರ ವಿಚಾರಗಳನ್ನು ಯುವಜನತೆಯ ಎದೆಗಳಿಗೆ ತಲುಪಿಸುವ ಕೆಲಸಗಳು ಇಂದು ಹೆಚ್ಚು ನಡೆಯಬೇಕಿವೆ. ಈ ಸಮಾವೇಶದ ಸಂಘಟನೆಯಲ್ಲಿ ಎಲ್ಲರೂ ಕಾರ್ಯಕರ್ತರೆ. ಸಿದ್ದಾಂತ ಪ್ರಧಾನವಾಗಿ ಹೊಸ ತಲೆಮಾರುಗಳನ್ನು ಸೃಷ್ಟಿಸಬೇಕೆಂದರೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಹೊಸ ನಾಯಕತ್ವ ಬೆಳೆಸಲು ಅವಕಾಶ ಕೊಡಬೇಕು. ಸ್ವಾಭಿಮಾನದ ಚಳವಳಿ ಮತ್ತೆ ಕಟ್ಟಬೇಕು. ಬಿ ಕೃಷ್ಣಪ್ಪ, ಬಿ ಬಸವಲಿಂಗಪ್ಪ ಅವರು ಒಳದಾನಿಯಾಗಿ ನಮ್ಮೊಳಗಿದ್ದಾರೆ. ಅವರ ವಿಚಾರಗಳು ಈ ಕಾಲ ಘಟ್ಟದಲ್ಲಿ ನಮ್ಮೊಳಗೆ ಹೊಸ ಶಕ್ತಿಯಾಗಿ ಹುಟ್ಟಬೇಕು” ಎಂದರು.
ದಲಿತ ಮುಖಂಡ ಕೊಪ್ಪಳದ ಟಿ ರತ್ನಾಕರ ಅವರು ಮಾತಾಡಿ, “ಈ ಸಮಾವೇಶದಲ್ಲಿ ಇಷ್ಟು ದಿನದ ದಲಿತ ಚಳವಳಿಯ ಅವಲೋಕನ ಆಗಬೇಕು. ಮುಂದೆ ಕಟ್ಟಬೇಕಾದ ಚಳವಳಿಯ ಮುನ್ನೋಟದ ಚರ್ಚೆಗಳು ನಡೆಯಬೇಕು. ಸಮಾವೇಶಕ್ಕೆ ಮಾನವ ಬಂಧುತ್ವ ವೇದಿಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ” ಎಂದರು.
“ಬಿ. ಕೃಷ್ಣಪ್ಪ ಅವರ ಕನಸುಗಳನ್ನು ಸಾಕಾರ ಮಾಡಲು ನಾವು ಮುಂದಾಗಬೇಕು. ಅವರು ಕೊನೆಯುಸಿರೆಳೆದ ಗದಗ ನೆಲದಲ್ಲಿ ದಲಿತ ಚಳವಳಿಗೆ ಹೊಸಶಕ್ತಿ ತುಂಬುವ ಕೆಲಸವಾಗಲಿ” ಎಂದು ರಾಯಚೂರಿನ ಎಂ ಆರ್ ಬೇರಿ ಮಾತನಾಡಿದರು.
“ದಲಿತ ಚಳವಳಿಗೆ ಖಚಿತ ರಾಜಕೀಯ ದೃಷ್ಟಿಕೋನವಿದೆ. ಅದನ್ನು ಪ್ರಖರವಾಗಿ ಮುಂದುವರೆಸುವ ಕೆಲಸ ಈ ಸಮಾವೇಶದಿಂದ ಆಗಬೇಕು” ಎಂದು ಸಿಂಧನೂರಿನ ಎಂ ಗಂಗಾಧರ ಅವರು ಹೇಳಿದರು.
ಗದಗ ದಲಿತ ಮುಖಂಡ ಮುತ್ತು ಬಿಳಿಯಲಿ ಮಾತನಾಡಿ, “ಹರಿಹರ ಹಾಗೂ ಭದ್ರಾವತಿಯಲ್ಲಿ ಪ್ರೊ ಬಿ ಕೃಷ್ಣಪ್ಪ ಅವರ ನೆನಪಿನ ಸ್ಮಾರಕಗಳಿವೆ. ಬಿ ಕೃಷ್ಣಪ್ಪ ಅವರು ಕೊನೆಯ ಉಸಿರೆಳೆದ ಗದಗಿನ ನೆಲದಲ್ಲಿ ಅಂಥ ಸ್ಮಾರಕ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಈ ಸಮಾವೇಶದ ಮೂಲಕ ಅದು ನೆರವೇರಲಿ” ಎಂದರು.
ಬಸವರಾಜ್ ಕಡೆಮನಿ ಅವರು ಮಾತನಾಡಿ, “ಜಿಲ್ಲೆಯಲ್ಲಿ ಡಿಎಸ್‌ಎಸ್ ಸಂಘಟನೆಗಳು ಬೇರೆಯಾಗಿ ಮನಸ್ಸುಗಳು ಒಡೆದು ಹೋಗಿವೆ. ಈ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಆಗಬೇಕಿದೆ. ಎಲ್ಲರೂ ಸೇರಿ ಗದಗದಲ್ಲಿಯೇ ಸೇರಿ ಈ ಸಮಾವೇಶ ಮಾಡೋಣ” ಎಂದು ನಿರ್ಧರಿಸಿದರು.
ಪ್ರೊ ಕೆ ಎಚ್ ಬೇಲೂರು ಮಾತನಾಡಿ, “ನಾವು ಇಂದು ಜಾಗೃತರಾಗದಿದ್ದರೆ, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ” ಎಂದರು.
ಎಚ್ ಡಿ ಪೂಜಾರ್ ಮಾತನಾಡಿ, “ಹಿಂದೆ ಚಳುವಳಿಗಳು ಸೈದ್ಧಾಂತಿಕ ವಿಚಾರಗಳ ಮೇಲೆ ನಿಂತಿದ್ದವು. ಕಾರ್ಯಕರ್ತರರಲ್ಲಿ, ಪದಾಧಿಕಾರಿಗಳಲ್ಲಿ ಸಿದ್ದಾಂತವೇ ಪ್ರಧಾನ ಸಂಗತಿಯಾಗಿತ್ತು. ಈಗ ಸೈದ್ದಾಂತಿಕ ವಿಚಾರಗಳು ಅವನತಿಯಾಗಿವೆ ಎನಿಸುತ್ತದೆ. ಸಮಾನತೆ, ಸ್ವಾತಂತ್ರ್ಯ ಪಡೆದುಕೊಂಡು ಮತ್ತೆ ತಲೆ ಎತ್ತಿ ನಿಲ್ಲಲು ಡಿಎಸ್‌ಎಸ್ ಸಂಘಟನೆಗೆ ಮತ್ತು ಚಳವಳಿಗೆ ಸೈದ್ದಾಂತಿಕ ಬದ್ದತೆಯುಳ್ಳ ಹೊಸ ತಲೆಮಾರು ಬರಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಹಿರಿಯ ನಾಯಕರಾದ ವೆಂಕಟೇಶಯ್ಯ, ಶುಕ್ರರಾಜ ತಾಳಕೇರಿ, ಬಸವರಾಜ ಈಳಿಗನೂರ, ವಿಜಯ ಮುಳಗುಂದ, ಬಾಲರಾಜ ಅರಬರ, ಶರಣು ಪೂಜಾರ, ಆನಂದ ಶಿಂಗಾಡಿ , ಭೀಮಣ್ಣ ಹವಳಿ, ಸಂಜಯದಾಸ ಸೇರಿದಂತೆ ಗದಗ, ಕೊಪ್ಪಳ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಾಪುರ ಜಿಲ್ಲೆಗಳ ದಲಿತ ಮುಖಂಡರು ಪಾಲ್ಗೊಂಡು ಸಮಾವೇಶ ತಮ್ಮ ಬೆಂಬಲ ವ್ಯಕ್ತಪಡಿಸಿದರು.
