ದೇವದುರ್ಗ ಪಟ್ಟಣದಲ್ಲಿ ಇತ್ತೀಚಿಗೆ ಮೇಲ್ಛಾವಣಿ ಕುಸಿದು 3 ವಿದ್ಯಾರ್ಥಿಗಳ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಯಚೂರು – ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಕುಮಾರ ನಾಯಕ ತಿಳಿಸಿದರು.
ಪಟ್ಟಣದಲ್ಲಿ ಘಟನಾ ಸ್ಥಳವನ್ನು ಶುಕ್ರವಾರ ವೀಕ್ಷಿಸಿ,ಸುದ್ದಿಗಾರರೊಂದಿಗೆ ಮಾತನಾಡಿದರು. ಘಟನೆ ಕುರಿತಂತೆ ಈಗಾಗಲೇ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆಗೆ ವಸ್ತುಸ್ಥಿತಿ ವರದಿ ನೀಡಲು ಈಗಾಗಲೇ ಸೂಚಿಸಿದ್ದು,ವರದಿ ಆಧರಿಸಿ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಕಟ್ಟಡ ಮಾಲೀಕರ ನಿರ್ಲಕ್ಷ ಕೂಡ ಸಾಬೀತಾಗಿದ್ದು ,ತನಿಖಾ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವದು ಎಂದರು.
ಮೃತ ಪಟ್ಟವರು ವಿದ್ಯಾರ್ಥಿಗಳಾಗಿದ್ದು,ಅದರಲ್ಲೂ ಪ.ಜಾತಿವರಾಗಿರುವದರಿಂದ ಸಂಬಂಧಪಟ್ಟ ಇಲಾಖೆಗಳಿಂದ ಪರಿಹಾರ ಕೊಡಲು ಸಾಧ್ಯತೆ ಇದೆಯೇ ಎಂಬುದರ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು. ಜಿಲ್ಲಾಧಿಕಾರಿಗಳು ಸರಕಾರಕ್ಕೆ ಸಲ್ಲಿಸುವ ವರದಿಯೊಂದಿಗೆ ನಾನೂ ಕೂಡ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಹೆಚ್ಚಿನ ಪರಿಹಾರ ಒದಗಿಸಲು ಪ್ರಯತ್ನಿಸುವೆ ಎಂದು ಸಂಸದ ಜಿ.ಕುಮಾರ ನಾಯಕ ತಿಳಿಸಿದರು.
ಬರಗಾಲ ಸ್ಥಿತಿ-ಗತಿ ಚರ್ಚಿಸಲು ಸಭೆ:ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಬರಗಾಲ ಲಕ್ಷಣಗಳು ಕಂಡುಬಂದಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಭೆ ನಡೆಸಲಿದ್ದಾರೆ.ಸಭೆಯಲ್ಲಿ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಚರ್ಚಿಸಲಾಗುವದು. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವದರಿಂದ ಮುಖ್ಯಮಂತ್ರಿಗಳು ಕೂಡ ರೈತರಿಗೆ ಮನವಿ ಮಾಡಿ,ನೀರಾವರಿ ಜಮೀನುಗಳಲ್ಲಿ ಬಿತ್ತನೆಗೆ ಮುಂದಾಗಬೇಡಿ. ಈಗಾಗಲೇ ರಾಜ್ಯ ಸರಕಾರ ಬರಗಾಲ ಪರಿಸ್ಥಿತಿಯನ್ನು ನಿಭಾಯಿಸಲು ಪೂರ್ವ ತಯಾರಿ ಕ್ರಮಗಳನ್ನು ಸಿದ್ಧತೆ ಮಾಡಿಕೊಂಡಿದ್ದು,ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್ಐಆರ್ ಆರಂಭ: 52,510 ಗಣತಿ ನಮೂನೆಗಳ ವಿತರಣೆ
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಲಕ್ಷ್ಮಣ ಜ್ಯೋತಿ, ಕೆಡಿಪಿ ಸದಸ್ಯ ರಾಮಣ್ಣ ಕರಿಗುಡ್ಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟ, ಮಹಿಳಾ ಘಟಕ ಅಧ್ಯಕ್ಷೆ ಅಮೃತಾ ಪಾಟೀಲ್, ಪುರಸಭೆ ಮಾಜಿ ಸದಸ್ಯ ವೆಂಕಟೇಶ ಮಕ್ತಲ್ ಹಾಗೂ ತಹಸೀಲ್ದಾರ ನಾಗಮ್ಮ ಎಂ.ಕಟ್ಟೀಮನಿ, ಸಿಪಿಐ ಮಂಜುನಾಥ, ಸಮಾಜ ಕಲ್ಯಾಣಧಿಕಾರಿ ಡಾ.ರಾಜಕುಮಾರ ಡೋಣಿ,ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ.ಹಾಗೂ ಇತರರು ಇದ್ದರು.




