ಲಿಂಗಸೂಗೂರು ತಾಲ್ಲೂಕು ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯಭೀತರಾಗಿ ಜೀವನ ನಡೆಸುವಂತಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಅಧ್ಯಕ್ಷ ಎಸ್.ಎ. ನಯೀಮ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಉಪ ತಹಸೀಲ್ದಾರ್ ತುಳಜಾರಾಮ್ ಸಿಂಗ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೋಗಾರ ಅವರ ಮುಖಾಂತರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದು, ಚಿಕ್ಕ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ಅಲ್ಲದೆ ಕುರಿ ಮತ್ತು ಮೇಕೆಗಳ ಮೇಲೂ ನಾಯಿಗಳು ದಾಳಿ ಮಾಡುತ್ತಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಪ್ರತ್ಯೇಕ ವಾರ್ಡ್‌ಗಳಲ್ಲಿ ಹಾಡಹಗಲೇ ಬೀದಿ ನಾಯಿಗಳ ದಾಳಿಗೆ ಎರಡು ಮೇಕೆಗಳು ಸಾವನ್ನಪ್ಪಿದ್ದು, ಇದರಿಂದ ಜಾನುವಾರು ಮಾಲೀಕರು ಆರ್ಥಿಕ ನಷ್ಟ ಅನುಭವಿಸಿದ್ದಾರೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ರಾತ್ರಿ ವೇಳೆ 15ರಿಂದ 20 ನಾಯಿಗಳು ಗುಂಪಾಗಿ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಸಂಚರಿಸುತ್ತಿದ್ದು, ಬೇರೆ ಊರುಗಳಿಂದ ಪ್ರಯಾಣಿಸಿ ಮನೆಗೆ ಮರಳುವ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸುರಕ್ಷತೆ ಒದಗಿಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಎದುರು ಸಾರ್ವಜನಿಕರನ್ನು ಸೇರಿಸಿಕೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರಣಿ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ, 45.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ಮಹೆಬೂಬ್ ಕಡ್ಡಿಪುಡಿ, ಸಿದ್ದಯ್ಯ ಸಾಲಿಮಠ, ರಹೆಮಾನ್ ದೂಲಿ, ನಾಗರಾಜ ನಾಯಕ, ಜಮೀರ್ ಕಾಲಿಗಾರ, ಜಮಾಲಿ ಸಾಬ್, ಅನೀಫ್ ಖಾನ್, ಮಹಾಂತೇಶ್ ಚಟ್ಟರ್, ವೀರೇಶ್ ಸಜ್ಜನ್, ಅಬ್ದುಲ್ ಮಜೀದ್, ಇಮಾಮ್ ಸಾಬ್, ಬಾಲಪ್ಪ ಉಪ್ಪಾರ, ಭೀಮಣ್ಣ ಉಪ್ಪಾರ, ಚನ್ನಪ್ಪ ಉಪ್ಪಾರ, ರಮೇಶ್ ಕೊಳ್ಳಿ, ಚಾಂದ್ ಬೇಗಂ, ರೇಷ್ಮಾ ಬೇಗಂ, ನೀಲಾಫರ, ಖೈರುನ್ ಬೇಗಂ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



