ಕೊಪ್ಪಳ ಜಿಲ್ಲೆಯ ಬೋಚನಹಳ್ಳಿ ಗ್ರಾಮದಲ್ಲಿ ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕುವ ಮೂಲಕ ಬಲಿತ ಸಮುದಾಯ ಮತ್ತೊಮ್ಮೆ ವಿಕೃತಿ ಮೆರೆದಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ. ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಕರ್ನಾಟಕ ಮಹಿಳಾ ಮುನ್ನಡೆ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಪರಿಶೀಲನೆ ವೇಳೆ, ಗ್ರಾಮದ ಮಾದಿಗ ಸಮುದಾಯದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಿರುವ ಮಾಹಿತಿ ತಿಳಿದುಬಂದ ಹಿನ್ನೆಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಂಘಟನೆಗಳ ವತಿಯಿಂದ ಮಾಹಿತಿ ನೀಡಲಾಯಿತು. ಈ ಮನವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ, ಸಂತ್ರಸ್ತ ಕುಟುಂಬಗಳಿಗೆ ಸುಮಾರು ಒಂದು ತಿಂಗಳಿಗೆ ಅಗತ್ಯವಾಗುವಷ್ಟು ಆಹಾರ ಪದಾರ್ಥಗಳ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಕರಿಯಪ್ಪ ಗುಡಿಮನಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ದುರುಗೇಶ್, ಯಮುನಾ ಚಳ್ಳೂರು, ವಕೀಲ ಯಮನೂರಪ್ಪ (ಈಳಿಗನೂರು) ಹಾಗೂ ಕರ್ನಾಟಕ ಮಹಿಳಾ ಮುನ್ನಡೆಯ ಚನ್ನಮ್ಮ (ಬೆಂಗಳೂರು) ಉಪಸ್ಥಿತರಿದ್ದರು.
ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಹಾಗೂ ನ್ಯಾಯ ದೊರಕುವವರೆಗೆ ನ್ಯಾಯಾಂಗ ಹೋರಾಟ ಮುಂದುವರಿಸುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭ ದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಮಂಜುನಾಥ ಕಾಲೋನಿ ಮುಖಂಡರು ಗಿಡ್ಡಪ್ಪ ಯಲ್ಲಣ್ಣವರು, ರಾಮಪ್ಪ ಯಲ್ಲಣ್ಣವರು, ಶಿಡ್ಲಪ್ಪ ಮಲ್ಲಣ್ಣವರ ಸೇರಿದಂತೆ ಹಲವರು ಇದ್ದರು..




