ರಾಜಕೀಯ ವ್ಯವಸ್ಥೆ ಸರಿಯಿಲ್ಲ ಎಂದು ದೂರ ಸರಿಯುವ ಬದಲು, ಯುವಜನರು ರಾಜಕೀಯಕ್ಕೆ ಪ್ರವೇಶಿಸಿ ಹೊಸ ಬದಲಾವಣೆಯ ಧ್ವನಿಯಾಗಬೇಕು. ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ ಮತ್ತು ಸಂವಿಧಾನದ ಮೌಲ್ಯಗಳನ್ನು ಮೈಗೂಡಿಸಿಕೊಂಡ ಒಳ್ಳೆಯ ಜನರು ರಾಜಕೀಯಕ್ಕೆ ಬಂದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕರಾದ ಡಾ. ಎಚ್.ವಿ. ವಾಸು ತಿಳಿಸಿದರು.
ಮಂಡ್ಯದ ಕರ್ನಾಟಕ ಸಂಘದಲ್ಲಿ ಜಾಗೃತ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ‘ರಾಜಕೀಯವು ಬದಲಾವಣೆಯ ದೊಡ್ಡ ಅಸ್ತ್ರ: ಒಳ್ಳೆಯ ಜನರು ರಾಜಕೀಯಕ್ಕೆ ಬಂದು ಬದಲಾವಣೆ ತರಬೇಕು’ ಎಂಬ ವಿಷಯದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯವೆಂದರೆ ಕೇವಲ ಅಧಿಕಾರ ಹಿಡಿಯುವ ಸಾಧನವಲ್ಲ. ಅದು ಸಮಾಜವನ್ನು ಬದಲಾಯಿಸುವ ಶಕ್ತಿಶಾಲಿ ಅಸ್ತ್ರವಾಗಿದೆ. ಪ್ರಾಮಾಣಿಕತೆ, ಜನಪರ ಕಾಳಜಿ ಮತ್ತು ಸಾಮಾಜಿಕ ಬದ್ಧತೆಯುಳ್ಳ ಯುವಜನರು ರಾಜಕೀಯ ಪ್ರವೇಶಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಆಶಯವನ್ನು ವಿದ್ಯಾರ್ಥಿ ಮತ್ತು ಯುವಜನರಲ್ಲಿ ಬಿತ್ತುವ ಉದ್ದೇಶದಿಂದ ಜಾಗೃತ ಕರ್ನಾಟಕ ಸಂಘಟನೆ ರಾಜ್ಯದಾದ್ಯಂತ ಇಂತಹ ಭಾಷಣ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ ಎಂದರು.
ದೇಶದಲ್ಲಿ ಈಗಾಗಲೇ ಯುವಜನರ ಧ್ವನಿ ಕಾಕ್ರೋಜ್ ಜನತಾ ಪಾರ್ಟಿಯ ಮೂಲಕ ಮೊಳಗಲು ಆರಂಭಿಸಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಸಾಧ್ಯವಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ಜಾಗೃತ ಕರ್ನಾಟಕದ ಸಂಚಾಲಕ ಸಂತೋಷ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಾದ್ಯಂತ ಯುವಜನರನ್ನು ಸಂಘಟಿಸುವುದು ಮತ್ತು ಅವರ ರಾಜಕೀಯ ಚಿಂತನೆಗಳಿಗೆ ವೇದಿಕೆ ಕಲ್ಪಿಸುವುದು ಸಂಘಟನೆಯ ಉದ್ದೇಶವಾಗಿದೆ. ಯುವಜನರಿಗೆ ಕೇವಲ ಭಾಷಣ ಮಾಡುವ ಅವಕಾಶ ನೀಡುವುದಷ್ಟೇ ಅಲ್ಲದೆ, ಅವರ ವಿಚಾರಗಳು ಮತ್ತು ಅಭಿಪ್ರಾಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಯುವಜನರ ಭಾಷಣದಲ್ಲಿ ಮೊಳಗಿದ ಬದಲಾವಣೆಯ ಧ್ವನಿ
ಯುವಜನರು ಮೊಬೈಲ್‌ಗಳಲ್ಲೇ ಮುಳುಗಿದ್ದಾರೆ, ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂಬ ಸಾಮಾನ್ಯ ಆರೋಪಗಳ ನಡುವೆಯೂ, ಮಂಡ್ಯದಲ್ಲಿ ನಡೆದ ಈ ಸ್ಪರ್ಧೆ ವಿಭಿನ್ನ ಚಿಂತನೆಯ ಯುವ ಸಮೂಹವೊಂದು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಯಿತು.
ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ತಲಾ ಆರು ನಿಮಿಷಗಳ ಕಾಲ ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದರು. ಪ್ರಸ್ತುತ ರಾಜಕೀಯ ವ್ಯವಸ್ಥೆಯ ಲೋಪದೋಷಗಳು, ನಿರುದ್ಯೋಗ, ರೈತರ ಸಮಸ್ಯೆಗಳು, ಜಾತಿ ರಾಜಕಾರಣ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಭವಿಷ್ಯದ ರಾಜಕೀಯದ ಕುರಿತು ಯುವಜನರು ತಮ್ಮದೇ ಆದ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು.
ಕೆಲವು ವಿದ್ಯಾರ್ಥಿಗಳ ಮಾತುಗಳು ಗಮನ ಸೆಳೆಯುವಂತಿದ್ದವು. “ನಮಗೆ ಜಾತಿ ರಾಜಕಾರಣ ಬೇಡ, ಕೆಲಸ ಕೊಡುವ ರಾಜಕಾರಣ ಬೇಕು. ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಳ್ಳುವ ನಾಯಕ ಬೇಡ, ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ನಾಯಕ ಬೇಕು. ನಮ್ಮ ಕಬ್ಬಿಗೆ ನ್ಯಾಯಯುತ ಬೆಲೆ ಸಿಗಬೇಕು, ನಮ್ಮ ಕಾವೇರಿ ನೀರು ಉಳಿಯಬೇಕು. ಇದೇ ನಮ್ಮ ರಾಜಕಾರಣ” ಎಂಬ ಅಭಿಪ್ರಾಯಗಳು ರೈತಪರ ಮತ್ತು ಜನಪರ ರಾಜಕಾರಣದ ಆಶಯವನ್ನು ಪ್ರತಿಬಿಂಬಿಸಿದವು.
“ನಾವು ಯಾರದ್ದೋ ಹಿಂದೆ ನಿಂತು ಕೈ ಎತ್ತುವ ಯುವಕರಲ್ಲ; ನಾವೇ ಮುಂದೆ ನಿಂತು ಪ್ರಶ್ನೆ ಕೇಳುವ ಯುವಕರು. ಈ ಬಾರಿ ನಮ್ಮ ಮತ ಹಣಕ್ಕಾಗಿ ಅಲ್ಲ, ನಮ್ಮ ಭವಿಷ್ಯಕ್ಕಾಗಿ” ಎಂಬ ವಿದ್ಯಾರ್ಥಿಗಳ ಮಾತುಗಳು ಯುವಜನರಲ್ಲಿ ಮೂಡುತ್ತಿರುವ ರಾಜಕೀಯ ಜಾಗೃತಿಗೆ ಸಾಕ್ಷಿಯಾದವು.
ರಾಜಕೀಯದ ಬಗ್ಗೆ ನಿರಾಸೆ ವ್ಯಕ್ತಪಡಿಸಿ ದೂರ ಉಳಿಯುವುದಕ್ಕಿಂತ, ಅದರ ಭಾಗವಾಗಿ ವ್ಯವಸ್ಥೆಯ ಬದಲಾವಣೆಗೆ ಶ್ರಮಿಸಬೇಕು ಎಂಬ ಸಂದೇಶವನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ ಯುವಜನರು ಸಾರಿದರು. ಇತ್ತೀಚಿನ ಝೆನ್ ಜಿ ಚಳವಳಿಯೂ ಯುವಜನರ ರಾಜಕೀಯ ಜಾಗೃತಿ ಮತ್ತು ಬದಲಾವಣೆಯ ಆಶಯಕ್ಕೆ ಉದಾಹರಣೆಯಾಗಿದೆ.
ಈ ವಿಶೇಷ ಲೇಖನ ಓದಿದ್ದೀರಾ? ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ ರಾಜಕಾರಣದ ಆತಂಕ
ವಿಜೇತರಿಗೆ ಬಹುಮಾನ, ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಜಾಗೃತ ಕರ್ನಾಟಕ ವತಿಯಿಂದ ಪ್ರಮಾಣಪತ್ರಗಳನ್ನು ನೀಡಲಾಯಿತು.
ಈ ವಿಶೇಷ ಲೇಖನ ಓದಿದ್ದೀರಾ? ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ
ಕಾರ್ಯಕ್ರಮದಲ್ಲಿ ಎಂ.ವಿ. ಕೃಷ್ಣ, ಜಾಗೃತ ಕರ್ನಾಟಕದ ಸಂಚಾಲಕರಾದ ರಾಜಶೇಖರ್ ಅಕ್ಕಿ, ನಗರಕೆರೆ ಜಗದೀಶ್, ಪೃಥ್ವಿರಾಜ್, ಜಿ.ಕೆ. ಮೋಹನ್, ಅಪೂರ್ವ, ಕಾಗೆಪುರ ಚೇತನ್, ನಾಗೇಶ್, ಮುತ್ತುರಾಜು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.




