ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಅಧಿಕಾರಾವಧಿಯನ್ನು ಪ್ರಸ್ತುತ ಐದು ವರ್ಷದಿಂದ ಮತ್ತೆ ಮೂರು ವರ್ಷಕ್ಕೆ ಇಳಿಸಬೇಕು ಎಂದು ಬೆಳಕು ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾದಲ್ಲಿ ತಿದ್ದುಪಡಿ ಮಾಡಿ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಅಧಿಕಾರಾವಧಿಯನ್ನು ಗರಿಷ್ಠ ಮೂರು ವರ್ಷಕ್ಕೆ ಮಾತ್ರ ಸೀಮಿತಗೊಳಿಸಬೇಕು. ಇದರಿಂದ ಸಂಘಟನೆಯಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.
ನಾಡು-ನುಡಿಯ ಸೇವೆಗಾಗಿ ಭಾಷಾ ತಜ್ಞರು, ಸಾಹಿತಿಗಳು ಹಾಗೂ ಸಾಹಿತ್ಯ ಪಂಡಿತರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಪರಿಷತ್ತಿನ ಕೆಲಸಗಳು ಹಾಗೂ ಅಂಗೀಕರಿಸಿದ ನಿರ್ಣಯಗಳು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲು ಆಡಳಿತದಲ್ಲಿ ಹೊಸ ಚಿಂತನೆ ಹಾಗೂ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷಕ್ಕೆ ನಿಗದಿಪಡಿಸುವ ಸಂಪ್ರದಾಯ ಮೈಸೂರು ಅರಸರ ಕಾಲದಿಂದಲೂ ಮುಂದುವರಿದು, ಇತ್ತೀಚಿನವರೆಗೂ ಪಾಲನೆಯಾಗುತ್ತಿತ್ತು. ಆದರೆ 2018ರ ಮಾರ್ಚ್ 15ರಂದು ಉಡುಪಿ ಜಿಲ್ಲೆಯ ಕೋಟಾದಲ್ಲಿ ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಬದಲಾವಣೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ವ್ಯಕ್ತಿಯ ವೈಯಕ್ತಿಕ ಸಂಸ್ಥೆಯಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ, ಸಾಹಿತಿಗಳ ಹಾಗೂ ಕನ್ನಡ ನಾಡು-ನುಡಿಯ ಸೇವೆಗಾಗಿ ಇರುವ ಸಾರ್ವಜನಿಕ ಸಂಸ್ಥೆಯಾಗಿದೆ. ಆದ್ದರಿಂದ ದೀರ್ಘಾವಧಿಯ ಅಧಿಕಾರಕ್ಕಿಂತ ನಿಗದಿತ ಮೂರು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ, ನಂತರ ಹೊಸಬರಿಗೆ ಅವಕಾಶ ನೀಡುವ ಪ್ರಜಾಸತ್ತಾತ್ಮಕ ಹಾಗೂ ಆರೋಗ್ಯಕರ ಸಂಪ್ರದಾಯವನ್ನು ಮುಂದುವರಿಸಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್, ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ ಮೂಲಕ ಪ್ರಸ್ತುತ ಐದು ವರ್ಷಗಳಾಗಿರುವ ಅಧ್ಯಕ್ಷರ ಅಧಿಕಾರಾವಧಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ್ ಅವರು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಅವರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿ ಚಿನ್ನದ ಗಣಿಗೆ ರಾಷ್ಟ್ರೀಯ ಹೆದ್ದಾರಿಗಳಿಂದ ನೇರ ಸಂಪರ್ಕಕ್ಕೆ ಸಂಸದರ ಮನವಿ
ನಾಡು, ನುಡಿ ಹಾಗೂ ಸಾಹಿತ್ಯ ಸೇವೆಗಾಗಿ ಆಯ್ಕೆಯಾಗುವ ಆಡಳಿತ ಮಂಡಳಿಯು ನಿಗದಿತ ಮೂರು ವರ್ಷಗಳ ಅವಧಿಯಲ್ಲಿ ಕಾರ್ಯನಿರ್ವಹಿಸಿ, ನಂತರ ಮತ್ತೊಬ್ಬರಿಗೆ ಅವಕಾಶ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಇದರಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸ ಚಿಂತನೆ, ಹೊಸ ನಾಯಕತ್ವ ಹಾಗೂ ಮತ್ತಷ್ಟು ಪರಿಣಾಮಕಾರಿ ಕನ್ನಡ ಸೇವೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಮಾರುತಿ ಬಡಿಗೇರ್ ತಿಳಿಸಿದರು.




