ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ “ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ-2026: 80 ತ್ಯಾಜ್ಯಮುಕ್ತ ತಾಣಗಳು” ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ವಿವಿಧ ವಲಯಗಳಲ್ಲಿನ 8 ತ್ಯಾಜ್ಯ ಸುರಿಯುವ ಸ್ಥಳಗಳನ್ನು (GVP) ಸ್ವಚ್ಛಗೊಳಿಸಿ ಸುಂದರ ತಾಣಗಳನ್ನಾಗಿ ಪರಿವರ್ತಿಸಲಾಯಿತು.
ವಲಯ-1ರ ಸಾಂದೀಪನಿ ಪ್ರದೇಶ, ವಲಯ-2ರ ಜೆ.ಪಿ.ನಗರದ 18ನೇ ಅಡ್ಡರಸ್ತೆ, ವಲಯ-6ರ ಸಯ್ಯಾಜಿ ಮಸೀದಿ ಸಮೀಪ ಹಾಗೂ ನಜರ್‌ಬಾದ್ ಮುಖ್ಯರಸ್ತೆ, ವಲಯ-7ರ ನಾಟನಹಳ್ಳಿಯ ಗಣಪತಿ ದೇವಸ್ಥಾನದ ಸಮೀಪ, ವಲಯ-9ರ ಸುಮನಾ ಶಾಲೆಯ ಎದುರು ಹಾಗೂ ಕಲ್ಯಾಣಗಿರಿಯ ಆರ್‌ಜಿಎ ಶಾಲೆಯ ಸಮೀಪ ಮತ್ತು ವಲಯ-8ರ ರಾಜೀವ್‌ನಗರ 2ನೇ ಹಂತದ ಈಡನ್ ಗಾರ್ಡನ್ ಪ್ರದೇಶದಲ್ಲಿರುವ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಪರಿವರ್ತಿಸಲಾಯಿತು.
ಅಭಿಯಾನದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ ಒಟ್ಟು 568 ಜನರು ಭಾಗವಹಿಸಿದರು. 39 ಮಾನವ ಗಂಟೆಗಳ ಕಾರ್ಯಾಚರಣೆಯಲ್ಲಿ 173.66 ಮೆಟ್ರಿಕ್ ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಬಣ್ಣ ಬಳಿಯುವುದು, ಸೌಂದರ್ಯೀಕರಣ, ಗಿಡಗಳನ್ನು ನೆಡುವುದು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಯಿತು.

ಈಡನ್ ಗಾರ್ಡನ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾ ಎಂ.ಕೆ. ಅವರು, ಪರಿವರ್ತಿಸಲಾದ ಸ್ಥಳಗಳಲ್ಲಿ ಪುನಃ ತ್ಯಾಜ್ಯ ಸುರಿಯದಂತೆ ನಿರಂತರ ನಿಗಾ ವಹಿಸಬೇಕು. ಸ್ಥಳೀಯ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳು ಈ ತಾಣಗಳ ಸ್ವಚ್ಛತೆ ಮತ್ತು ಸೌಂದರ್ಯವನ್ನು ಸುಸ್ಥಿರವಾಗಿ ಕಾಪಾಡಲು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸ್ವಚ್ಛತಾ ರಾಯಭಾರಿ ಸೂರಜ್ ಅವರು ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೆ, ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆಯ ಸಂಗ್ರಹಣಾ ವಾಹನಗಳಿಗೆ ಹಸ್ತಾಂತರಿಸುವ ಮೂಲಕ ಸ್ವಚ್ಛ ಮೈಸೂರು ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಭಿಯಾನದಡಿ ಇದುವರೆಗೆ ಒಟ್ಟು 40 ತ್ಯಾಜ್ಯ ಸುರಿಯುವ ಸ್ಥಳಗಳನ್ನು ಪರಿವರ್ತಿಸಲಾಗಿದ್ದು, ಉಳಿದ 40 ಸ್ಥಳಗಳನ್ನು ನಿಗದಿತ ಅವಧಿಯೊಳಗೆ ಪರಿವರ್ತಿಸುವ ಗುರಿಯನ್ನು ಪಾಲಿಕೆ ಹೊಂದಿದೆ. ಪರಿವರ್ತಿತ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ 30 ದಿನಗಳ ಕಾಲ ನಿರಂತರ ಮೇಲ್ವಿಚಾರಣೆ ನಡೆಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಸುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಪ್ರಮಾಣ ಪತ್ರಗಳಿಗಾಗಿ ಪರದಾಟ: ಸರ್ವರ್ ಸಮಸ್ಯೆ, ಸಾಲು ಮತ್ತು ಗೊಂದಲಕ್ಕೆ ಸಿಲುಕಿದ ಮೈಸೂರು-ಮಂಡ್ಯ ಜನತೆ
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾ ಎಂ.ಕೆ., ಸ್ವಚ್ಛತಾ ರಾಯಭಾರಿ ಸೂರಜ್, ಕಂದಾಯ ವಿಭಾಗದ ಉಪ ಆಯುಕ್ತರು, ಮುಖ್ಯ ಲೆಕ್ಕಾಧಿಕಾರಿಗಳು, ಪರಿಷತ್ ಕಾರ್ಯದರ್ಶಿಗಳು, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರರು, ವಲಯ-6 ಮತ್ತು ವಲಯ-8ರ ಸಹಾಯಕ ಆಯುಕ್ತರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.




