ದೇವದುರ್ಗ ಪಟ್ಟಣದ ಆನಂದ ಚಿತ್ರಮಂದಿರದ ಪಕ್ಕದಲ್ಲಿರುವ ಮದ್ಯದಂಗಡಿಯನ್ನು ಸಿರವಾರ ಕ್ರಾಸ್ ಸಮೀಪಕ್ಕೆ ಸ್ಥಳಾಂತರಿಸಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮದ್ಯದಂಗಡಿಯನ್ನು ಸಿರವಾರ ಕ್ರಾಸ್ ಸಮೀಪದ ಕೃಷಿ ಜಮೀನುಗಳ ಬಳಿಗೆ ಸ್ಥಳಾಂತರಿಸುವುದರಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಮದ್ಯದಂಗಡಿ ಸ್ಥಳಾಂತರಿಸುವ ನಿರ್ಧಾರವನ್ನು ಅಧಿಕಾರಿಗಳು ಕೈಬಿಡಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂಬಂಧ ಈಗಾಗಲೇ ತಹಶೀಲ್ದಾರ್ ಸೇರಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪ್ರಸ್ತುತ ಇರುವ ಸ್ಥಳದಲ್ಲಿ ಮದ್ಯ ಮಾರಾಟ ಮುಂದುವರಿಸುವುದಕ್ಕೆ ಸಂಘಟನೆಯ ಯಾವುದೇ ಆಕ್ಷೇಪವಿಲ್ಲ. ಆದರೆ ಕೃಷಿಯನ್ನೇ ಅವಲಂಬಿಸಿರುವ ರೈತರ ಜಮೀನುಗಳ ಸಮೀಪಕ್ಕೆ ಮದ್ಯದಂಗಡಿ ಸ್ಥಳಾಂತರಿಸುವ ಕ್ರಮವನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ಮಾನ್ವಿ ತಾಲೂಕಿನಲ್ಲಿ ಅಬಕಾರಿ ಇಲಾಖೆ ಇರುವುದರಿಂದ ಪಟ್ಟಣದಲ್ಲಿ ಅನಧಿಕೃತ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಕೃಷಿ ಜಮೀನು ಅಕ್ಕಪಕ್ಕದಲ್ಲಿ ಮದ್ಯದ ಅಂಗಡಿ ಪರವಾನಿ ನೀಡಿದಲ್ಲಿ, ರೈತರು ನಿತ್ಯ ಹಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಹೀಗಾಗಿ ಸಿರವಾರ ಕ್ರಾಸ್ ಹತ್ತಿರಕ್ಕೆ ಯಾವುದೇ ಕಾರಣಕ್ಕೆ ಅಧಿಕಾರಿಗಳು ಸ್ಥಳಾಂತರಕ್ಕೆ ಅನುಮತಿ ನೀಡಬಾರದು. ಲಕ್ಷಾಂತರ ರೂ. ವೆಚ್ಚದಲ್ಲಿ ಲೀಜ್ ಪಡೆದು ಎಲ್ಲೆಂದರಲ್ಲಿ ಬಾರ್‌ಗಳು ಓಪನ್ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಅಧಿಕಾರಿಗಳೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈಗಾಗಲೇ ಸಿರವಾರ ಕ್ರಾಸ್ ಹತ್ತಿರದಲ್ಲಿ ಅನಧಿಕೃತ ಮದ್ಯ ಮಾರಾಟ ಅಂಗಡಿಗಳು ತೆಲೆ ಎತ್ತಿವೆ. ದಿನ ಬೆಳಕಾದರೂ ಸಾಕು ಒಂದಿಲ್ಲೊಂದು ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಸಾಕಷ್ಟು ಜನರು ಬೇಸತ್ತಿ ಹೋಗಿದ್ದಾರೆ ಎಂದು ದೂರಿದರು.
ನಶೆಯಲ್ಲಿ ಯುವಕರು ಅಲ್ಲಲ್ಲಿ ಮೂತ್ರವಿಸರ್ಜನೆ ಮಾಡುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ ಮಹಿಳೆಯರಿಗೆ ಮುಂಜಗರ ಉಂಟಾಗುತ್ತಿದೆ. ಇಲ್ಲಿನ ಸಮಸ್ಯೆ ಕುರಿತು ಹಲವು ಅಧಿಕಾರಿಗಳು ಗಮನಕ್ಕೆ ತಂದರೂ, ಯಾವುದೇ ಪ್ರಯೋಜನೆವಾಗಿಲ್ಲ. ಮದ್ಯ ಸೇವಿಸಿ ಬಾಟಲ್‌ಗಳು ಜಮೀನಿನಲ್ಲಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವ ಹಿನ್ನೆಲೆ ರೈತರು ಸಮಸ್ಯೆಗಳು ಎದುರಿಸುವಂತಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಮದ್ಯದ ಅಂಗಡಿ ಸ್ಥಳಾಂತರ ವಿರೋಧಿಸಿ ಜಿಲ್ಲಾಧಿಕಾರಿಗೆ ಮತ್ತು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಒಂದೊಮ್ಮೆ ಅನುಮತಿ ನೀಡಿದರೇ ತಾಲೂಕಿನಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆಂದು ಮನವಿ ಪತ್ರದಲ್ಲಿ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೃಷಿ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ
ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಹನುಮಂತ್ರಾಯ ದೊರೆ ಸಿಪತ್ತಗೇರಾ, ತಿಮ್ಮನಗೌಡ ಗೌರಂಪೇಟೆ, ಮಾರುತಿ ನಾಯಕ, ಸೂಗುರೆಡ್ಡಗೌಡ, ಮಹೇಂದ್ರ ಮೇತ್ರೆ, ನಾಗರಾಜ ತಳವಾರದೊಡ್ಡಿ ಸೇರಿದಂತೆ ಇತರರು ಇದ್ದರು.




