ಉಡುಪಿ | ಕುಮ್ಕಿ, ಗೇರು ಲೀಸ್ ಭೂಮಿಗೆ ಹಕ್ಕುಪತ್ರ ನೀಡಿ; ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಿ

Date:

ಪಶ್ಚಿಮ ಘಟ್ಟ ಹಾಗೂ ಕರಾವಳಿ ಭಾಗದ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಈ ಪ್ರದೇಶಗಳಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ಜನರ ಬದುಕು, ಕೃಷಿ ಚಟುವಟಿಕೆ ಮತ್ತು ಪರಂಪರಾಗತ ಹಕ್ಕುಗಳಿಗೆ ಧಕ್ಕೆಯಾಗಬಾರದು. ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ಹಾಗೂ ಜನಪರ ನಿರ್ಧಾರ ಕೈಗೊಳ್ಳಬೇಕು ಎಂಬುದು ಮಲೆನಾಡು ಮತ್ತು ಕರಾವಳಿ ಭಾಗದ ಕೃಷಿಕರ ಪ್ರಮುಖ ಆಗ್ರಹವಾಗಿದೆ.

- Advertisement -

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕೃಷಿಕ ಸಮಾಜದ ಸದಸ್ಯರು ಹಾಗೂ ಮಲೆನಾಡು ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಡಾ. ಅತುಲ್ ಕುಮಾರ್ ಶೆಟ್ಟಿ ಅವರು, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಗಳು, ಕುಮ್ಕಿ ಭೂಮಿಯ ಹಕ್ಕು, ಗೇರು ಲೀಸ್ ಭೂಮಿಯ ಮಾಲೀಕತ್ವ ಹಾಗೂ ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ನಾಲ್ಕು ಪ್ರಮುಖ ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಕಸ್ತೂರಿ ರಂಗನ್ ವರದಿ: ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದುಕಿಗೆ ಸಂಕೋಲೆ ಬೇಡ

ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ನೀಡಿದ ವರದಿಯ ಆಧಾರದಲ್ಲಿ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟದ ಹಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಇದಕ್ಕೂ ಮೊದಲು ಮಾಧವ ಗಾಡ್ಗಿಲ್ ಸಮಿತಿಯ ವರದಿಯೂ ಪಶ್ಚಿಮ ಘಟ್ಟದ ಸಂರಕ್ಷಣೆ ವಿಚಾರದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿತ್ತು.

ಇದಲ್ಲದೆ, ಮೂಕಾಂಬಿಕಾ, ಸೋಮೇಶ್ವರ ಸೇರಿದಂತೆ ವಿವಿಧ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಅಧಿಸೂಚನೆಗಳೂ ಜಾರಿಯಲ್ಲಿವೆ. ಇದರಿಂದ ಈಗಾಗಲೇ ಜನವಸತಿ ಮತ್ತು ಕೃಷಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹಲವು ನಿರ್ಬಂಧಗಳನ್ನು ಎದುರಿಸುವಂತಾಗಿದೆ.

ಈ ಕುರಿತು ಮಾತನಾಡಿದ ಡಾ. ಅತುಲ್ ಕುಮಾರ್ ಶೆಟ್ಟಿ, “ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಒಂದು ವರ್ಷದ ಕಾಲಾವಕಾಶ ಪಡೆದು ಬಹುತೇಕ ಪ್ರದೇಶಗಳ ಸರ್ವೇ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಈ ಸಮಸ್ಯೆ ಕೇವಲ ಕಸ್ತೂರಿ ರಂಗನ್ ವರದಿಗೆ ಮಾತ್ರ ಸೀಮಿತವಾಗಿಲ್ಲ. 1994ರಿಂದ ಆರಂಭಗೊಂಡ ಟಿ.ಎನ್. ಗೋದಾವರ್ಮನ್ ಪರಿಸರ ಸಂಬಂಧಿತ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಾರ್ಗದರ್ಶನದಂತೆ ವಿವಿಧ ಹಂತಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವಲಯಗಳ ಘೋಷಣೆ ಪ್ರಕ್ರಿಯೆ ನಡೆದಿದೆ” ಎಂದು ವಿವರಿಸಿದರು.

2017ರಲ್ಲಿ ಮೂಕಾಂಬಿಕಾ, ಕುದುರೆಮುಖ ಹಾಗೂ ಸೋಮೇಶ್ವರ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಅಧಿಸೂಚನೆಗಳು ಹೊರಬಂದಿರುವುದರಿಂದ, ಆ ಭಾಗಗಳಲ್ಲಿ ವಾಸಿಸುವ ಸಾಮಾನ್ಯ ಜನರೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಕಾನೂನು ನಿರ್ಬಂಧಗಳ ವ್ಯಾಪ್ತಿಗೆ ಬರುತ್ತಿದ್ದಾರೆ ಎಂಬುದು ಅವರ ಆತಂಕ.

“ನಾವು ತಲೆತಲಾಂತರಗಳಿಂದ ವಾಸಿಸುತ್ತಿರುವ ಊರುಗಳನ್ನೇ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿದರೆ ನಮ್ಮ ದೈನಂದಿನ ಬದುಕು ಹೇಗೆ ಸಾಗಬೇಕು? ಮನೆ ನಿರ್ಮಿಸಬೇಕಾದರೂ, ಪಾಗಾರ ಹಾಕಬೇಕಾದರೂ, ವಿದ್ಯುತ್ ಬೇಲಿ ಅಳವಡಿಸಬೇಕಾದರೂ, ಪಂಪ್‌ಸೆಟ್ ಅಳವಡಿಸಬೇಕಾದರೂ, ಹೈಬ್ರಿಡ್ ಬೀಜಗಳನ್ನು ಬಳಸಿ ಕೃಷಿ ಮಾಡಬೇಕಾದರೂ ವಿವಿಧ ಇಲಾಖೆಗಳ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಒಂದೊಂದು ಕೆಲಸಕ್ಕೂ ನೂರಾರು ಕಾನೂನು ಹಾಗೂ ಆಡಳಿತಾತ್ಮಕ ಅಡೆತಡೆಗಳು ಎದುರಾಗುತ್ತವೆ. ಇದರಿಂದ ರೈತರ ಕೃಷಿ ಸ್ವಾತಂತ್ರ್ಯ ಮಾತ್ರವಲ್ಲ, ಸಾಮಾನ್ಯ ಜನರ ಬದುಕೂ ಸಂಕಷ್ಟಕ್ಕೆ ಸಿಲುಕುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೆಲವು ಪ್ರದೇಶಗಳಲ್ಲಿ ಜನರ ಸಂಚಾರ ಮತ್ತು ದೈನಂದಿನ ಚಟುವಟಿಕೆಗಳ ಮೇಲೂ ನಿರ್ಬಂಧಗಳು ಎದುರಾಗುವ ಸಾಧ್ಯತೆಯಿದೆ. ಪರಿಸರ ಸೂಕ್ಷ್ಮ ವಲಯದ ನಿಯಮಗಳ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಜನರು ತಮ್ಮ ಊರಿನಲ್ಲೇ ಸ್ವತಂತ್ರವಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ಅವರ ಅಭಿಪ್ರಾಯ.

ಕಸ್ತೂರಿ ರಂಗನ್ ಹಾಗೂ ಅದಕ್ಕೂ ಮೊದಲು ರಚನೆಯಾದ ಮಾಧವ ಗಾಡ್ಗಿಲ್ ಸಮಿತಿಗಳು ಪಶ್ಚಿಮ ಘಟ್ಟದ ಹಲವು ಪ್ರದೇಶಗಳನ್ನು ಸ್ಥಳೀಯವಾಗಿ ಪರಿಶೀಲಿಸದೆ, ಉಪಗ್ರಹ ಚಿತ್ರಗಳ ಆಧಾರದಲ್ಲಿ ಹಸಿರು ಪ್ರದೇಶಗಳನ್ನು ಗುರುತಿಸಿವೆ ಎಂಬ ಆಕ್ಷೇಪವನ್ನೂ ಅವರು ಮುಂದಿಟ್ಟರು.

“ಅಡಿಕೆ, ತೆಂಗು ಸೇರಿದಂತೆ ಕೃಷಿ ತೋಟಗಳು ಕೂಡ ಉಪಗ್ರಹ ಚಿತ್ರಗಳಲ್ಲಿ ಹಸಿರಾಗಿ ಕಾಣಿಸುತ್ತವೆ. ಆದರೆ ಅವು ನೈಸರ್ಗಿಕ ಅರಣ್ಯಗಳಲ್ಲ. ಖಾಸಗಿ ಕೃಷಿ ಭೂಮಿಗಳನ್ನು ಅರಣ್ಯ ಪ್ರದೇಶಗಳೆಂದು ಪರಿಗಣಿಸಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದು ಸರಿಯಲ್ಲ. ಲಕ್ಷಾಂತರ ಹೆಕ್ಟೇರ್ ಖಾಸಗಿ ಭೂಮಿಗಳ ಮೇಲೆ ಇದರಿಂದ ಪರಿಣಾಮ ಉಂಟಾಗಬಹುದು. ಆದ್ದರಿಂದ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವಲಯಗಳ ಭೌತಿಕ ಪರಿಶೀಲನೆ ನಡೆಸಬೇಕು. ನೈಸರ್ಗಿಕ ಅರಣ್ಯ ಪ್ರದೇಶ ಹಾಗೂ ಜನವಸತಿ, ಕೃಷಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಖಾಸಗಿ ಭೂಮಿಗಳನ್ನು ಹೊರಗಿಟ್ಟು ಮರುಸಮೀಕ್ಷೆ ನಡೆಸಬೇಕು. ಹಿಂದಿನ ಅಧಿಸೂಚನೆಗಳನ್ನು ಮರುಪರಿಶೀಲಿಸಿ ಹೊಸ ಅಧಿಸೂಚನೆ ಹೊರಡಿಸಬೇಕು” ಎಂದು ಒತ್ತಾಯಿಸಿದರು.

ಕುಮ್ಕಿ ಹಕ್ಕು: ತಲೆತಲಾಂತರದ ಕೃಷಿಕರಿಗೆ ಅಧಿಕೃತ ಹಕ್ಕುಪತ್ರ ನೀಡಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಅಂದರೆ ಇಂದಿನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕುಮ್ಕಿ ಭೂಮಿಯ ಬಳಕೆಯ ಹಕ್ಕು ಕೃಷಿಕರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಖಾಸಗಿ ಕೃಷಿ ಭೂಮಿಗೆ ಹೊಂದಿಕೊಂಡಿರುವ ಸರ್ಕಾರಿ ಭೂಮಿಯಲ್ಲಿನ ಕೃಷಿ ಉಪಯೋಗಕ್ಕೆ ಅಗತ್ಯವಾದ ಸೊಪ್ಪು, ದರಲೆ, ಮರದ ಉತ್ಪನ್ನಗಳನ್ನು ಬಳಸುವುದು ಹಾಗೂ ಜಾನುವಾರುಗಳಿಗೆ ಮೇವು ಸಂಗ್ರಹಿಸುವ ಸಂಪ್ರದಾಯವಿದೆ.

ಖಾಸಗಿ ಕೃಷಿ ಭೂಮಿಯ ಗಡಿಯಿಂದ 100 ಗಜದವರೆಗಿನ ಸರ್ಕಾರಿ ಭೂಮಿಯಲ್ಲಿ ನಿರ್ದಿಷ್ಟ ಕೃಷಿ ಉಪಯೋಗದ ಹಕ್ಕುಗಳನ್ನು ಹೊಂದಿರುವ ವ್ಯವಸ್ಥೆಗೆ ಮದ್ರಾಸ್ ರೆವಿನ್ಯೂ ಬೋರ್ಡ್ ಆದೇಶಗಳ ಮೂಲಕ ಶಾಸನಬದ್ಧ ಮಾನ್ಯತೆ ದೊರೆತಿತ್ತು. ನಂತರ ಕರ್ನಾಟಕ ಕಂದಾಯ ಅಧಿನಿಯಮ ಮತ್ತು ಅದರಡಿ ರೂಪಿಸಲಾದ ನಿಯಮಗಳಲ್ಲಿಯೂ ಈ ಹಕ್ಕುಗಳಿಗೆ ಮಾನ್ಯತೆ ನೀಡಲಾಗಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳಲ್ಲಿಯೂ ಸ್ಪಷ್ಟನೆಗಳಿವೆ ಎಂಬುದನ್ನು ಡಾ. ಅತುಲ್ ಕುಮಾರ್ ಶೆಟ್ಟಿ ಉಲ್ಲೇಖಿಸಿದರು.

“ಕುಮ್ಕಿ ಭೂಮಿಯನ್ನು ರೈತರು ತಲೆತಲಾಂತರಗಳಿಂದ ಸಂರಕ್ಷಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬಳಸಿಕೊಂಡು ಬಂದಿದ್ದಾರೆ. ರೈತರ ಈ ಬಳಕೆಯ ಹಕ್ಕು ಇಲ್ಲದಿದ್ದರೆ ಇತರ ಸರ್ಕಾರಿ ಭೂಮಿಗಳಂತೆ ಕುಮ್ಕಿ ಭೂಮಿಗಳೂ ಅಕ್ರಮ ಸಕ್ರಮ ಪ್ರಕ್ರಿಯೆಯಲ್ಲಿ ಖಾಸಗಿ ವ್ಯಕ್ತಿಗಳ ಪಾಲಾಗುವ ಸಾಧ್ಯತೆಯಿತ್ತು. ರೈತರ ನಿರಂತರ ಬಳಕೆ ಮತ್ತು ಸಂರಕ್ಷಣೆಯಿಂದಾಗಿ ಈ ಭೂಮಿಗಳು ಉಳಿದಿವೆ” ಎಂದರು.

ಕುಮ್ಕಿ ಭೂಮಿಯ ಮೇಲೆ ಹಕ್ಕು ಹೊಂದಿರುವ ಕೃಷಿಕರಿಗೆ ಮಾರ್ಗಸೂಚಿ ಮೌಲ್ಯವನ್ನು ಪಾವತಿಸಿಕೊಳ್ಳುವ ಮೂಲಕ ಮಾಲೀಕತ್ವ ನೀಡುವ ಕುರಿತು ಹಿಂದೆಯೇ ಸರ್ಕಾರ ನಿಯಮ ರೂಪಿಸಿ ತೀರ್ಮಾನ ಕೈಗೊಂಡಿತ್ತು. ಈ ಪ್ರಸ್ತಾವನೆ ಸಚಿವ ಸಂಪುಟದ ಹಂತದವರೆಗೂ ಸಾಗಿದ್ದರೂ ಇದುವರೆಗೆ ಅನುಷ್ಠಾನಗೊಂಡಿಲ್ಲ ಎಂಬುದು ಅವರ ಬೇಸರ.

“ಈಗಾಗಲೇ ರೈತರು ತಮ್ಮ ವಶದಲ್ಲಿರುವ ಕುಮ್ಕಿ ಭೂಮಿಯನ್ನು ಕೃಷಿ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಅದಕ್ಕೆ ಸರ್ಕಾರ ನಿಗದಿಪಡಿಸುವ ಸೂಕ್ತ ಮೌಲ್ಯವನ್ನು ಪಾವತಿಸಿಕೊಳ್ಳುವ ಮೂಲಕ ರೈತರಿಗೆ ಅಧಿಕೃತ ಮಾಲೀಕತ್ವ ನೀಡಬಹುದು. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ರೈತರಿಗೂ ತಮ್ಮ ಭೂಮಿಯ ಬಗ್ಗೆ ಕಾನೂನುಬದ್ಧ ಭದ್ರತೆ ದೊರೆಯುತ್ತದೆ. ಕೃಷಿಕರು ಯಾವುದೇ ಆತಂಕವಿಲ್ಲದೆ ಕೃಷಿ ಮುಂದುವರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕುಮ್ಕಿ ಭೂಮಿಯ ಹಕ್ಕುದಾರರಿಗೆ ಪಹಣಿ (ಆರ್‌ಟಿಸಿ) ಹಾಗೂ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ತಕ್ಷಣ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.

ಗೇರು ಲೀಸ್ ಭೂಮಿ: 30 ವರ್ಷಗಳ ಅವಧಿ ಮುಗಿದರೂ ಮಾಲೀಕತ್ವ ಸಿಗದಿರುವುದೇಕೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1958-59ನೇ ಸಾಲಿನ ಸುಮಾರಿಗೆ ಗೇರು ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರವು ವಿವಿಧ ಸರ್ಕಾರಿ ಬಂಜರು ಭೂಮಿಗಳನ್ನು ಕೃಷಿಕರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಿತ್ತು. ಗೇರು ಕೃಷಿ ಅಭಿವೃದ್ಧಿಪಡಿಸುವ ಮೂಲಕ ಭೂಮಿಯನ್ನು ಕೃಷಿ ಬಳಕೆಗೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು.

ಆ ಸಂದರ್ಭದಲ್ಲಿ ಹೊರಡಿಸಲಾದ ಗುತ್ತಿಗೆ ಆದೇಶಗಳಲ್ಲಿ 30 ವರ್ಷಗಳ ಅವಧಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ಭೂಮಿಯ ಮಾಲೀಕತ್ವ ಪಡೆಯಲು ಬಯಸಿದರೆ, ನಿಗದಿಪಡಿಸಿದ ಮಾರುಕಟ್ಟೆ ಮೌಲ್ಯವನ್ನು ಪಾವತಿಸಿದ ಬಳಿಕ ಮಾಲೀಕತ್ವ ನೀಡುವ ಷರತ್ತು ವಿಧಿಸಲಾಗಿತ್ತು. ಕೆಲವು ಆದೇಶಗಳಲ್ಲಿ 1958-59ನೇ ಸಾಲಿನಲ್ಲಿಯೇ ಎಕರೆಗೆ 100 ರೂ. ಹಾಗೂ ಇನ್ನು ಕೆಲವು ಆದೇಶಗಳಲ್ಲಿ ಎಕರೆಗೆ 150 ರೂ. ಮೌಲ್ಯವನ್ನು ನಮೂದಿಸಲಾಗಿತ್ತು.

ಆದರೆ ಗುತ್ತಿಗೆ ಅವಧಿ ಮುಗಿದ ನಂತರವೂ ಅನೇಕ ಕೃಷಿಕರಿಗೆ ಭೂಮಿಯ ಮಾಲೀಕತ್ವ ದೊರೆತಿಲ್ಲ. ಈ ಕುರಿತು ರೈತರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಕಂದಾಯ ಅಧಿಕಾರಿಗಳು ಪರಿಶೀಲಿಸಿ ವರದಿಗಳನ್ನೂ ಸಲ್ಲಿಸಿದ್ದಾರೆ. ಆದರೂ ಅನೇಕ ಅರ್ಜಿಗಳು ಇಂದಿಗೂ ವಿಲೇವಾರಿಯಾಗದೆ ಬಾಕಿ ಉಳಿದಿವೆ.

ಈ ಸಮಸ್ಯೆಯನ್ನು ಪ್ರಸ್ತಾಪಿಸಿದ ಡಾ. ಅತುಲ್ ಕುಮಾರ್ ಶೆಟ್ಟಿ, “ಸರ್ಕಾರವೇ ಗೇರು ಕೃಷಿಗಾಗಿ ರೈತರಿಗೆ ಭೂಮಿಯನ್ನು 30 ವರ್ಷಗಳ ಅವಧಿಗೆ ಲೀಸ್ ನೀಡಿತ್ತು. ಆ ಸಂದರ್ಭದಲ್ಲಿ ನಿಗದಿಪಡಿಸಿದ ಷರತ್ತುಗಳ ಪ್ರಕಾರ ಅವಧಿ ಮುಗಿದ ಬಳಿಕ ಮಾರುಕಟ್ಟೆ ಮೌಲ್ಯ ಪಾವತಿಸಿ ಮಾಲೀಕತ್ವ ಪಡೆಯಲು ಅವಕಾಶವಿತ್ತು. ರೈತರು ಸರ್ಕಾರಕ್ಕೆ ಹಣ ಪಾವತಿಸಲು ಸಿದ್ಧರಿದ್ದಾರೆ. ಹಲವು ವರ್ಷಗಳಿಂದ ಅರ್ಜಿಗಳನ್ನೂ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಅಂತಿಮ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.

“ಈಗಾಗಲೇ ರೈತರು ಆ ಭೂಮಿಯಲ್ಲಿ ಗೇರು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಮೌಲ್ಯವನ್ನು ಪಾವತಿಸಿಕೊಂಡು ಅವರಿಗೆ ಅಧಿಕೃತ ಮಾಲೀಕತ್ವ ನೀಡಿದರೆ ರೈತರಿಗೆ ಭದ್ರತೆ ಸಿಗುತ್ತದೆ. ಭೂಮಿಯ ದಾಖಲೆಗಳಲ್ಲಿ ಅವರ ಹೆಸರು ದಾಖಲಾಗುವುದರಿಂದ ಕೃಷಿ ಅಭಿವೃದ್ಧಿಗೂ ಅನುಕೂಲವಾಗುತ್ತದೆ. ಆದ್ದರಿಂದ ಗೇರು ಲೀಸ್ ಭೂಮಿಯ ಮಾಲೀಕತ್ವ ವರ್ಗಾವಣೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.

ಕಾಡುಪ್ರಾಣಿಗಳ ಹಾವಳಿ: ಕೃಷಿ ಉಳಿಸಲು ಅರಣ್ಯಕ್ಕೆ ಬೇಲಿ ನಿರ್ಮಿಸಿ

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಕರಾವಳಿಯವರೆಗೆ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕೃಷಿಕರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶಕ್ಕೂ ಅರಬ್ಬಿ ಸಮುದ್ರಕ್ಕೂ ನಡುವೆ ಕೇವಲ 20ರಿಂದ 30 ಕಿಲೋಮೀಟರ್ ಅಂತರವಿರುವ ಅನೇಕ ಪ್ರದೇಶಗಳಿವೆ. ಈ ಕಾರಣದಿಂದ ಕಾಡುಪ್ರಾಣಿಗಳು ಅರಣ್ಯ ಪ್ರದೇಶದಿಂದ ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ಪ್ರವೇಶಿಸುತ್ತಿದ್ದು, ಕರಾವಳಿಯ ಹಲವು ಭಾಗಗಳಲ್ಲಿ ಬೆಳೆಗಳಿಗೆ ನಿರಂತರ ಹಾನಿ ಉಂಟಾಗುತ್ತಿದೆ.

ಮಂಗಗಳು, ಕಾಡುಕೋಣಗಳು, ನವಿಲುಗಳು, ಕಾಡುಹಂದಿಗಳು, ಕಡವೆ ಹಾಗೂ ಜಿಂಕೆಗಳ ಹಾವಳಿಯಿಂದ ಅಡಿಕೆ, ತೆಂಗು ಸೇರಿದಂತೆ ವಿವಿಧ ಕೃಷಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಕಷ್ಟವಾಗುತ್ತಿದೆ. ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

“ಇಂದು ರೈತರು ಯಾವ ಬೆಳೆಯನ್ನು ಬೆಳೆಸಬೇಕು ಎಂಬುದನ್ನು ನಿರ್ಧರಿಸುವುದಕ್ಕಿಂತ, ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳಿಂದ ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ. ಮಂಗಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ. ಕಾಡುಕೋಣ, ಕಾಡುಹಂದಿ, ನವಿಲು, ಕಡವೆ ಹಾಗೂ ಜಿಂಕೆಗಳು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದರ ಜೊತೆಗೆ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಾಗಿರುವುದರಿಂದ ರೈತರ ಬದುಕು ದುಸ್ತರವಾಗಿದೆ” ಎಂದು ಡಾ. ಅತುಲ್ ಕುಮಾರ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

“ವಿದೇಶಗಳ ಹಲವು ಕಡೆಗಳಲ್ಲಿ ಸರ್ಕಾರಿ ಅರಣ್ಯ ಮತ್ತು ಖಾಸಗಿ ಕೃಷಿ ಭೂಮಿಗಳ ಗಡಿಯಲ್ಲಿ ಸೂಕ್ತ ಬೇಲಿ ನಿರ್ಮಿಸಿ ಕಾಡುಪ್ರಾಣಿಗಳು ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ಕರಾವಳಿ ಭಾಗದಲ್ಲಿಯೂ ರಕ್ಷಿತಾರಣ್ಯ ಮತ್ತು ಖಾಸಗಿ ಭೂಮಿಗಳ ಗಡಿಯಲ್ಲಿ ವೈಜ್ಞಾನಿಕವಾಗಿ ಬೇಲಿ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಇದರಿಂದ ಅರಣ್ಯವೂ ಸಂರಕ್ಷಿತವಾಗುತ್ತದೆ, ರೈತರ ಕೃಷಿಯೂ ಉಳಿಯುತ್ತದೆ” ಎಂದರು.

ಅಲ್ಲದೆ, ಮಂಗಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನ ನಿಯಂತ್ರಣ, ಸೂಕ್ತ ಚಿಕಿತ್ಸಾ ಕ್ರಮಗಳು ಹಾಗೂ ವೈಜ್ಞಾನಿಕ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸುವ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವುದಷ್ಟೇ ಸಾಕಾಗುವುದಿಲ್ಲ. ಕೃಷಿ ನಷ್ಟವಾಗದಂತೆ ತಡೆಯುವ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಬದುಕು ಮತ್ತು ಪರಿಸರ ಸಂರಕ್ಷಣೆ ಎರಡೂ ಉಳಿಯಲಿ

ಪಶ್ಚಿಮ ಘಟ್ಟ ಮತ್ತು ಕರಾವಳಿ ಭಾಗದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದೆಡೆ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವಲಯಗಳ ಅಧಿಸೂಚನೆಗಳಿಂದ ಕೃಷಿ ಹಾಗೂ ಜನವಸತಿ ಪ್ರದೇಶಗಳ ಮೇಲೆ ನಿರ್ಬಂಧಗಳ ಆತಂಕವಿದ್ದರೆ, ಮತ್ತೊಂದೆಡೆ ಕುಮ್ಕಿ ಮತ್ತು ಗೇರು ಲೀಸ್ ಭೂಮಿಗಳ ಮಾಲೀಕತ್ವದ ಅನಿಶ್ಚಿತತೆ ರೈತರನ್ನು ಕಾಡುತ್ತಿದೆ. ಇದರ ನಡುವೆ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿಯೇ ನಷ್ಟದಾಯಕವಾಗುತ್ತಿದೆ.

ಈ ಎಲ್ಲ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಡಾ. ಅತುಲ್ ಕುಮಾರ್ ಶೆಟ್ಟಿ ಪ್ರತಿಪಾದಿಸಿದರು.

“1996ರಿಂದ 2026ರವರೆಗೆ ವಿವಿಧ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಪಶ್ಚಿಮ ಘಟ್ಟ ಹಾಗೂ ಕರಾವಳಿ ಭಾಗದ ರೈತರ ಸಮಸ್ಯೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ದೊರೆತಿಲ್ಲ ಎಂಬುದು ಬೇಸರದ ಸಂಗತಿ. ಸುಪ್ರೀಂ ಕೋರ್ಟ್ ಮಾರ್ಗದರ್ಶನ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶವನ್ನು ಗೌರವಿಸುತ್ತಲೇ ಸ್ಥಳೀಯ ಜನರ ಬದುಕಿನ ವಾಸ್ತವಾಂಶಗಳನ್ನೂ ಸರ್ಕಾರ ಪರಿಗಣಿಸಬೇಕು. ರೈತರನ್ನು ಅರಣ್ಯ ಸಂರಕ್ಷಣೆಯ ವಿರೋಧಿಗಳಂತೆ ನೋಡಬಾರದು. ರೈತರು ಕೂಡ ಪರಿಸರವನ್ನು ಉಳಿಸಿಕೊಂಡು ಬಂದವರೇ ಆಗಿದ್ದಾರೆ” ಎಂದು ಹೇಳಿದರು.

ಪರಿಸರ ಸೂಕ್ಷ್ಮ ಪ್ರದೇಶಗಳ ವೈಜ್ಞಾನಿಕ ಮರುಸರ್ವೇ, ಕುಮ್ಕಿ ಭೂಮಿಗೆ ಅಧಿಕೃತ ಹಕ್ಕುಪತ್ರ, ಗೇರು ಲೀಸ್ ಭೂಮಿಯ ಮಾಲೀಕತ್ವ ವರ್ಗಾವಣೆ ಮತ್ತು ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಈ ನಾಲ್ಕು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರು ನೆಮ್ಮದಿಯಿಂದ ಕೃಷಿ ಮಾಡಿಕೊಂಡು ಬದುಕುವ ವಾತಾವರಣ ನಿರ್ಮಾಣವಾಗಬೇಕು. ಪರಿಸರವೂ ಉಳಿಯಬೇಕು, ಕೃಷಿಕರ ಬದುಕೂ ಉಳಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂಬುದು ಮಲೆನಾಡು ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಡಾ. ಅತುಲ್ ಕುಮಾರ್ ಶೆಟ್ಟಿ ಅವರ ಒತ್ತಾಯವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ: ಗಜಾನನ ಬಾಲೆ

ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ...

ಶಿವಮೊಗ್ಗ | ಪೋಷಕರಾಗಲು ಅಡ್ಡದಾರಿಯಲ್ಲ; ಕಾನೂನು ಬದ್ಧ ದತ್ತು ಸ್ವೀಕಾರವೇ ಸರಿಯಾದ ಮಾರ್ಗ

ಮಕ್ಕಳ ಮಾರಾಟವು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಯಾವುದೇ ಅನಧಿಕೃತವಾಗಿ ಮಗುವನ್ನು ನೀಡುವುದು...

ಹಾವೇರಿ | ರದ್ದಾದ ಮೀಸಲಾತಿಗೆ ರಾಜ್ಯ ಸರ್ಕಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವಂತೆ ಮನವಿ

"ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು...

ಸೊರಬ | ಕುರಿ ಶೆಡ್‌ ಬೆಂಕಿಗಾಹುತಿ; 150ಕ್ಕೂ ಹೆಚ್ಚು ಕೋಳಿ, ಕುರಿಗಳು ಸುಟ್ಟು ಕರಕಲು!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್...