ಮುಂಗಾರು ಮಳೆಯ ಆಗಮನದಿಂದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಹೊಲಗದ್ದೆಗಳನ್ನು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಲು ರೈತರು ಸಜ್ಜಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ಡೀಸೆಲ್ ಕೊರತೆ ರೈತರ ಕೃಷಿ ಚಟುವಟಿಕೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಟ್ರ್ಯಾಕ್ಟರ್‌ಗಳು ಮತ್ತು ಡೀಸೆಲ್ ಕ್ಯಾನ್‌ಗಳ ಸಾಲು ಕಂಡುಬಂದಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.
ಜಿಲ್ಲೆಯ ವಿವಿಧ ಭಾಗಗಳ ಪೆಟ್ರೋಲ್ ಬಂಕ್‌ಗಳ ಮುಂದೆ ಟ್ರ್ಯಾಕ್ಟರ್‌ಗಳು, ಡೀಸೆಲ್ ಕ್ಯಾನ್‌ಗಳು ಮತ್ತು ವಾಹನಗಳ ಉದ್ದ ಸಾಲುಗಳು ಕಂಡುಬಂದಿವೆ. ಮುಂಜಾನೆಯಿಂದಲೇ ಬಂಕ್‌ಗಳ ಬಳಿ ರೈತರು ಸೇರಿ ಡೀಸೆಲ್‌ಗಾಗಿ ಕಾಯುವ ದೃಶ್ಯ ಸಾಮಾನ್ಯವಾಗಿದ್ದು, ಕೆಲವೆಡೆ ಗದ್ದಲ ಹಾಗೂ ವಾಗ್ವಾದಗಳೂ ನಡೆದಿವೆ ಎನ್ನಲಾಗಿದೆ.
ಕೃಷಿ ಚಟುವಟಿಕೆಗೆ ಡೀಸೆಲ್ ಸಂಕಷ್ಟ
ಮುಂಗಾರು ಹಂಗಾಮಿನ ಕೃಷಿ ಕೆಲಸಗಳಿಗೆ ಟ್ರ್ಯಾಕ್ಟರ್‌ಗಳೇ ಪ್ರಮುಖ ಆಧಾರವಾಗಿವೆ. ರಂಟೆ, ಕುಂಟೆ ಹೊಡೆಯುವುದು, ಹೊಲ ಹದಗೊಳಿಸುವುದು, ಬಿತ್ತನೆ ಸೇರಿದಂತೆ ಬಹುತೇಕ ಕೃಷಿ ಕಾರ್ಯಗಳು ಯಂತ್ರಾಧಾರಿತವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಕೊರತೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಕಳೆದ ಒಂದೆರಡು ವಾರಗಳಿಂದ ಜಿಲ್ಲೆಯ ಹಲವೆಡೆ ಡೀಸೆಲ್ ಲಭ್ಯತೆ ಕಡಿಮೆಯಾಗಿದ್ದು, ಅನೇಕ ಟ್ರ್ಯಾಕ್ಟರ್‌ಗಳು ಖಾಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಫಲಕಗಳು ಕಾಣಿಸಿಕೊಂಡಿವೆ. ಬೆಳಿಗ್ಗೆ ಬಂಕ್ ತೆರೆಯುವ ಮುನ್ನವೇ ನೂರಾರು ರೈತರು ಡೀಸೆಲ್ ಕ್ಯಾನ್‌ಗಳೊಂದಿಗೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಡೀಸೆಲ್ ಖಾಲಿಯಾಗುತ್ತಿದ್ದು, ಹಲವರಿಗೆ ನಿರಾಸೆಯೇ ಉಳಿಯುತ್ತಿದೆ.
ಈ ಕುರಿತು ರೈತ ಮುಖಂಡ ದುರಗಪ್ಪ ತಡಕಲ್ ಮಾತನಾಡಿ, “ಮುಂಗಾರು ಆರಂಭವಾದಾಗ ಕೃಷಿ ಚಟುವಟಿಕೆಗಳು ಗರಿಗೆದರಬೇಕು. ಆದರೆ ಡೀಸೆಲ್ ಸಿಗದೆ ರೈತರು ಪರದಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆ ಹೆಚ್ಚಾಗಿದೆ. ದೊಡ್ಡ ರೈತರಿಗೆ ಟ್ರ್ಯಾಕ್ಟರ್‌ಗಳೇ ಕೃಷಿಯ ಜೀವನಾಡಿಯಾಗಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇ ಪ್ರಮುಖ ಆರ್ಥಿಕ ಚಟುವಟಿಕೆ. ಬಿತ್ತನೆ ಕಾರ್ಯ ವಿಳಂಬವಾದರೆ ಮುಂದಿನ ದಿನಗಳಲ್ಲಿ ಬೆಳೆ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ರೈತರಷ್ಟೇ ಅಲ್ಲದೆ ಕೃಷಿ ಕಾರ್ಮಿಕರು, ಟ್ರ್ಯಾಕ್ಟರ್ ಚಾಲಕರು, ಗೊಬ್ಬರ ಮತ್ತು ಬೀಜ ವ್ಯಾಪಾರಿಗಳ ಮೇಲೂ ಪರಿಣಾಮ ಬೀಳಲಿದೆ” ಎಂದು ಕೃಷಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡ ಶಿವಪುತ್ರ ಜಾಗಿರನಂದಿಹಾಳ ಕೂಡ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ, “ಪ್ರತಿ ವರ್ಷ ಗೊಬ್ಬರಕ್ಕಾಗಿ ಹೋರಾಡುತ್ತಿದ್ದ ರೈತರು ಈ ಬಾರಿ ಡೀಸೆಲ್‌ಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಇದು ಇದೇ ಮೊದಲ ಬಾರಿಗೆ ಎದುರಾಗಿರುವ ದೊಡ್ಡ ಸಮಸ್ಯೆ” ಎಂದು ಹೇಳಿದರು.

ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಮೊದಲು ಕ್ಯಾನ್‌ಗಳಲ್ಲಿ ಡೀಸೆಲ್ ನೀಡಲು ನಿರಾಕರಿಸಲಾಗಿತ್ತು. ನಂತರ ರೈತರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡೀಸೆಲ್ ನೀಡಲು ಅನುಮತಿ ನೀಡಲಾಗಿದೆ ಎನ್ನಲಾಗಿದೆ. ಆದರೂ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಗ್ರಾಮೀಣ ಭಾಗದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಪೆಟ್ರೋಲ್ ಬಂಕ್ ಮಾಲೀಕ ಮಾತನಾಡಿ, “ದಿನಕ್ಕೆ 5000, 10,000 ಲೀಟರ್ ಬಂದರೂ ನಾಲ್ಕೈದು ತಾಸಿನಲ್ಲಿ ಖಾಲಿಯಾಗುತ್ತದೆ. ಸುಮಾರು ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಸಿಗುತ್ತಿಲ್ಲ. ಹಾಗಾಗಿ ಇದ್ದ ಕಡೆ ಜನದಟ್ಟಣೆಯಾಗಿರುತ್ತದೆ” ಎಂದರು.
ಇದನ್ನೂ ಓದಿದ್ದೀರಾ? ಬೆಳಗಾವಿಯಲ್ಲಿ ಸಚಿವ ಸ್ಥಾನದ ಲೆಕ್ಕಾಚಾರ ಜೋರು: ಮಂತ್ರಿಗಿರಿ ಯಾರಿಗೆ?
ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಎಸ್ ಸಭೆಯಲ್ಲಿ ಮಾತನಾಡಿ, “ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್.ಪಿ.ಜಿ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ನೂರಾರು ಟ್ರ್ಯಾಕ್ಟರ್‌ಗಳು ಕೃಷಿ ಕಾರ್ಯಕ್ಕಾಗಿ ಅವಲಂಬಿತವಾಗಿವೆ. ಮುಂಗಾರು ಹಂಗಾಮಿನ ಬಿತ್ತನೆ ಸಮಯದಲ್ಲಿ ಡೀಸೆಲ್ ಕೊರತೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ. ರೈತರು ಹಾಗೂ ರೈತ ಸಂಘಟನೆಗಳು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಡೀಸೆಲ್ ಪೂರೈಕೆಯನ್ನು ಸಮರ್ಪಕವಾಗಿ ಖಚಿತಪಡಿಸಬೇಕೆಂದು ಆಗ್ರಹಿಸಿವೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



