ಮತದಾರರ ಪಟ್ಟಿ ನಿಖರವಾಗಿ ಮತ್ತು ಪಾರದರ್ಶಕವಾಗಿರುವುದು ಪ್ರಜಾಪ್ರಭುತ್ವದ ಆಧಾರ. ಆದ್ದರಿಂದ, ಜಿಲ್ಲಾಡಳಿತ, ಚುನಾವಣಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿ, ಯಾರೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಇದು ಕೇವಲ ಪ್ರಕ್ರಿಯೆಯಲ್ಲ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕನ್ನು ರಕ್ಷಿಸುವ ಕಾರ್ಯವಾಗಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸುರಕ್ಷಿತವಾಗಿದೆಯೇ? ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್–2026) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಜಿಲ್ಲೆಯಲ್ಲಿ ಸುಮಾರು 2.54 ಲಕ್ಷ ಮತದಾರರ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ. ನೈಜ ಮತದಾರರು ತಮ್ಮ ಹಕ್ಕು ಉಳಿಸಿಕೊಳ್ಳಲು ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 17,14,559 ಮತದಾರರಿದ್ದಾರೆ. ಎಲ್ಲರಿಗೂ ಎಸ್‌ಐಆರ್ ಪ್ರಕ್ರಿಯೆಯ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಮತದಾರರ ಪಟ್ಟಿಯಿಂದ ಹೊರಗುಳಿಯಲು ಮುಖ್ಯ ಕಾರಣಗಳಲ್ಲಿ ಎಎಸ್‌ಡಿಡಿಒ(ಅಬ್‌ಸೆಂಟ್, ಶಿಫ್ಟೆಡ್, ಡೆಡ್, ಡ್ಯೂಪ್ಲಿಕೇಟ್, ಅದರ್ಸ್) ಎಂಬ ವರ್ಗೀಕರಣ ಪ್ರಧಾನವಾಗಿದೆ. ಈ ವರ್ಗದಲ್ಲಿ ಒಟ್ಟು 2,54,700 ಅಂದರೆ ಶೇ.14.60ರಷ್ಟು ಮಂದಿ ಹೆಸರುಗಳನ್ನು ಪಟ್ಟಿ ಮಾಡಲಾಗಿದ್ದು, ಇವುಗಳು ಕರಡು ಪಟ್ಟಿಯಿಂದ ಅಳಿಸಿಹೋಗುವ ಆತಂಕವಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17,14,559 ಮಂದಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 13,73,126 ನಮೂನೆಗಳನ್ನು ಸ್ವೀಕರಿಸಲಾಗಿದೆ. 2,54,700 ಅರ್ಜಿಗಳನ್ನು ಇನ್ನೂ ಸಂಗ್ರಹಿಸಬೇಕಾಗಿದೆ. ಈವರೆಗೆ ಒಟ್ಟು 13,73,126(ಶೇ 80.09) ಅರ್ಜಿಗಳನ್ನು ಡಿಜಿಟೈಸೇಷನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ 1,18,137 ಅರ್ಜಿ ಡಿಜಿಟೈಸೇಷನ್ ಆಗಬೇಕಿದೆ ಎಂದು ಜುಲೈ 31ರಂದು ಚುನಾವಣಾಧಿಕಾರಿಗಳ ಕಚೇರಿ ಮೂಲದಿಂದ ತಿಳಿದುಬಂದಿದೆ.
This video cannot be played in your browser. Open the video directly
ಜಿಲ್ಲೆಯಲ್ಲಿ 33,346(ಶೇ.1.94) ಮತದಾರರನ್ನು ‘ನೋ ಮ್ಯಾಪಿಂಗ್’ ವಿಭಾಗದಲ್ಲಿ ಗುರುತಿಸಲಾಗಿದೆ. ಇವು ಜುಲೈ 31ರ ಅಂಕಿ-ಅಂಶಗಳಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಎಸ್‌ಐಆರ್ ವಿರೋಧಿ ಮುಖಂಡರು.
ಈ ಬಗ್ಗೆ ಅಲೆಮಾರಿ ಸಮುದಾಯದ ಮುಖಂಡರು ಶಿವರಾಜ ರುದ್ರಾಕ್ಷಿ ಮಾತನಾಡಿ, “ಅಲೆಮಾರಿ ಜೀವನ ನಡೆಸುತ್ತಿರುವ ಬುಡಕಟ್ಟು ಸಮುದಾಯದವರು ಶಾಶ್ವತ ನೆಲೆ ಇಲ್ಲದೆ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾರಣ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ವಿಶೇಷವಾಗಿ ಯಕ್ಷೇಗಾರ, ಗೊಂದಲಗೇರಿ ಸಮುದಾಯ ಸೇರಿದಂತೆ ಅನೇಕ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಲಭ್ಯವಾಗುತ್ತಿಲ್ಲ” ಎಂದು ಆರೋಪಿಸಿದರು.
ಈ ಬಗ್ಗೆ ಎಸ್‌ಐಆರ್ ವಿರೋಧಿ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಮಾತನಾಡಿ, ಎಸ್‌ಐಆರ್ ಜಿಲ್ಲಾ ಮಟ್ಟದ ಪರಿಶೀಲನೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಬುಡಕಟ್ಟು ಜನಾಂಗದ ಸಮುದಾಯದವರು ತಮ್ಮ ಸಮಸ್ಯೆಯನ್ನು ವಿವರಿಸಿದರು. “ಮೊದಲನೇ ಕರಡು ಪಟ್ಟಿಯಲ್ಲಿ ಹೆಸರು ಪ್ರಕಟವಾಗದಿದ್ದರೆ ಮತ್ತೆ ದಾಖಲೆಗಳಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಾವು ಅಲೆಮಾರಿ ಜೀವನ ನಡೆಸುವವರಾಗಿರುವುದರಿಂದ ನಮ್ಮ ಮುತ್ತಜ್ಜರ ಅಥವಾ ಪೂರ್ವಜರ ಮತದಾರರ ದಾಖಲೆಗಳು ಎಲ್ಲಿವೆ ಎಂಬುದೇ ಗೊತ್ತಾಗುತ್ತಿಲ್ಲ” ಎಂದು ಅಳಲು ತೋಡಿಕೊಂಡರು.
ಹೀಗಾಗಿ 2002ರ ಮತದಾರರ ಪಟ್ಟಿ ಲಭ್ಯವಿಲ್ಲದ ಬುಡಕಟ್ಟು ಸಮುದಾಯದವರ ಅರ್ಜಿಗಳನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಿ, ಮೊದಲನೇ ಕರಡು ಮತದಾರರ ಪಟ್ಟಿಯಲ್ಲಿ ನ್ಯಾಯಯುತವಾಗಿ ಹೆಸರು ಸೇರಿಸುವಂತೆ ಸಮುದಾಯದವರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2025ರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಫಾರ್ಮ್ ಭರ್ತಿ ಮಾಡಿ ಸಲ್ಲಿಸಲಾಗಿದ್ದರೂ, ಕೆಲವರಿಗೆ 2002ರ ಮತದಾರರ ಪಟ್ಟಿಯ ಆಧಾರದ ಮೇಲೆ ಮಾತ್ರ ಅರ್ಜಿಗಳನ್ನು ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಇದರಿಂದ ಮೊದಲನೇ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರುತ್ತದೆಯೇ ಎಂಬ ಅನುಮಾನ ಸಮುದಾಯದವರಲ್ಲಿ ಮೂಡಿದೆ.
ಎನ್ಯೂಮರೇಷನ್ ಫಾರ್ಮ್‌ಗಳನ್ನು ವಾಪಸ್ ನೀಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್‌ಒ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕು. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಅಥವಾ ಪೋಷಕರ ಹೆಸರು ಇಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಹಾಕಿ ಬಿಎಲ್‌ಒಗೆ ನೀಡಬಹುದು. ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ(SIR–2026) ಪ್ರಕ್ರಿಯೆ ಈಗ ಅಂತಿಮ ಹಂತವನ್ನು ತಲುಪಿದ್ದು, ಸುಮಾರು 2.54 ಮಂದಿ ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇದು ನೈಜ ಮತದಾರರಿಗೆ ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯವನ್ನು ಉಂಟುಮಾಡಿದೆ.
ಆದ್ದರಿಂದ, ಎಲ್ಲಾ ಅರ್ಹ ಮತದಾರರು ತಕ್ಷಣವೇ ಎಚ್ಚೆತ್ತುಕೊಂಡು ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬೇಕು. ಬೂತ್ ಲೆವೆಲ್ ಅಧಿಕಾರಿ(BLO)ಗಳ ಮೂಲಕ ಅಥವಾ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಗಣತಿ ನಮೂನೆ ಸಲ್ಲಿಸಿ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಕಾಲದಲ್ಲಿ ಸಲ್ಲಿಸುವುದು ಅತ್ಯಗತ್ಯ. ಇಲ್ಲವಾದಲ್ಲಿ, ಅನೇಕ ನೈಜ ಮತದಾರರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಕೃಷಿ ಕೂಲಿಕಾರರ ಸಂಘದಿಂದ ಆಗ್ರಹ
ಮತದಾರರ ಪಟ್ಟಿ ನಿಖರವಾಗಿ ಮತ್ತು ಪಾರದರ್ಶಕವಾಗಿರುವುದು ಪ್ರಜಾಪ್ರಭುತ್ವದ ಆಧಾರ. ಆದ್ದರಿಂದ, ಜಿಲ್ಲಾಡಳಿತ, ಚುನಾವಣಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿ, ಯಾರೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಇದು ಕೇವಲ ಪ್ರಕ್ರಿಯೆಯಲ್ಲ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕನ್ನು ರಕ್ಷಿಸುವ ಕಾರ್ಯವಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




