ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾರಿಗೆ ಸಮಸ್ಯೆಯನ್ನು ತಕ್ಷಣ ಗಮನಕ್ಕೆ ತೆಗೆದುಕೊಂಡು, ಕೋಳೂರು ಗ್ರಾಮಕ್ಕೆ ನೇರ ಬಸ್ ಸಂಪರ್ಕ ಒದಗಿಸುವುದು ಅಗತ್ಯವಾಗಿದೆ. ಇದರಿಂದ ಗ್ರಾಮಸ್ಥರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ವೃದ್ಧರು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಜತೆಗೆ ಗ್ರಾಮದ ಅಭಿವೃದ್ಧಿಗೂ ಸಹಾಯಕವಾಗುತ್ತದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಕೋಳೂರು ಗ್ರಾಮಕ್ಕೆ ದಶಕಗಳಿಂದ ಬಸ್ ಸೌಲಭ್ಯವಿಲ್ಲದೆ ಸ್ಥಳೀತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ನಿತ್ಯವೂ ಸುಮಾರು 4 ಕಿಲೋಮೀಟರ್‌ವರೆಗೆ ನಡೆದುಕೊಂಡು ಕೋಳೂರು ಗ್ರಾಮದಿಂದ ಹೇಮನಾಳ ಗ್ರಾಮಕ್ಕೆ ತೆರಳಿ ಅಲ್ಲಿಂದ ಬಸ್ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಳೂರು ಶಾಲೆ, ಕಾಲೇಜು ಹಾಗೂ ಇತರೆ ಅಗತ್ಯ ಕೆಲಸಗಳಿಗಾಗಿ ಹೊರ ಗ್ರಾಮಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ಬೆಳಗಿನ ಜಾವವೇ ಮನೆಯಿಂದ ಹೊರಡಬೇಕಾಗಿದೆ. ಗ್ರಾಮಕ್ಕೆ ಸಮರ್ಪಕ ರಸ್ತೆ ಸಂಪರ್ಕವಿದ್ದರೂ ಬಸ್ ಸಂಚಾರ ಇಲ್ಲದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‌ಗಾಗಿ ನಿತ್ಯವೂ ಪರದಾಡುವಂತಾಗಿದೆ. ಸಮೀಪದ ಗ್ರಾಮಕ್ಕೆ ನಡೆದುಕೊಂಡು ಹೋಗಿ ಬಸ್ ಹತ್ತಬೇಕಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ಮಳೆ, ಬಿಸಿಲು ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ಇದರಿಂದ ಬಡ ಕುಟುಂಬಗಳ ಮಕ್ಕಳು ಶಿಕ್ಷಣ ಮುಂದುವರಿಸಲು ಹಿಂದೇಟು ಹಾಕುವಂತಾಗಿದ್ದು, ಕೆಲವರು ಶಿಕ್ಷಣದಿಂದ ವಂಚಿತರಾಗುವ ಆತಂಕ ಎದುರಾಗಿದೆ.
ಗ್ರಾಮದಲ್ಲಿ ಬಸ್ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಆಗಮಿಸುವ ಶಾಸಕರು ಹಾಗೂ ರಾಜಕೀಯ ಮುಖಂಡರು, ಚುನಾವಣೆ ಮುಗಿದ ಬಳಿಕ ಗ್ರಾಮದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶವೂ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಗ್ರಾಮದ ಜನರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ಬಸ್ ಸಂಪರ್ಕ ಕಲ್ಪಿಸುವ ವಿಚಾರಕ್ಕೆ ವರ್ಷಗಳಿಂದಲೂ ನಿರ್ಲಕ್ಷ್ಯ ತೋರಲಾಗುತ್ತಿದೆ. ರಸ್ತೆ ಇದ್ದರೂ ಸಾರಿಗೆ ಸೌಲಭ್ಯವಿಲ್ಲದಿರುವುದರಿಂದ ಗ್ರಾಮಸ್ಥರು ತುರ್ತು ಸಂದರ್ಭಗಳಲ್ಲಿಯೂ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪ್ರತಿನಿತ್ಯ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇವಲ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಗ್ರಾಮಸ್ಥರ ಸಂಚಾರದ ಹಿತದೃಷ್ಟಿಯಿಂದ ಕೋಳೂರು ಗ್ರಾಮಕ್ಕೆ ನಿಯಮಿತ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಸಂಬಂಧಪಟ್ಟ ಸಾರಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ʼಬಸ್ ಇಲ್ಲದೆ 4 ಕಿ.ಮೀ ನಡೆದು ಕಾಲೇಜಿಗೆ ಹೋಗಬೇಕು; ರಾತ್ರಿ ವೇಳೆ ಭಯವಾಗುತ್ತದೆʼ
ಈ ಬಗ್ಗೆ ಕೋಳೂರು ಗ್ರಾಮದ ಬಿಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಮಾತನಾಡಿ, “ಬಸ್ ಸಂಪರ್ಕವಿಲ್ಲದ ಕಾರಣ ನಿತ್ಯ ಸುಮಾರು 4 ಕಿ.ಮೀ ನಡೆದುಕೊಂಡು ಮತ್ತೊಂದು ಗ್ರಾಮಕ್ಕೆ ತೆರಳಿ ಅಲ್ಲಿಂದ ಬಸ್ ಹತ್ತಿ ಕಾಲೇಜಿಗೆ ಹೋಗಬೇಕಾಗಿದೆ. ಕೆಲವೊಮ್ಮೆ ಕಾಲೇಜು ಮುಗಿಸಿ ರಾತ್ರಿ ವೇಳೆ ನಡೆದುಕೊಂಡು ಮನೆಗೆ ಮರಳುವಾಗ ಕುಡುಕರ ಹಾವಳಿ ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಾಗಿರುತ್ತದೆ. ಭಯದಲ್ಲೇ ಮನೆಗೆ ಬರಬೇಕಾದ ದುಃಸ್ಥಿತಿ ಎದುರಾಗಿದೆ” ಎಂದು ಅಳಲು ತೋಡಿಕೊಂಡರು.
“ಬಸ್ ಸೌಲಭ್ಯವಿಲ್ಲದ ಕಾರಣ ಮನೆಯಲ್ಲಿಯೂ ತಂದೆ-ತಾಯಿ, ‘ಕಾಲೇಜಿಗೆ ಹೋಗುವುದು ಬೇಡ, ನಮ್ಮೊಂದಿಗೆ ಕೆಲಸಕ್ಕೆ ಬಾ’ ಎಂದು ಹೇಳುತ್ತಾರೆ. ಆದರೆ ನನಗೆ ಶಿಕ್ಷಣ ಪಡೆದು ಮುಂದೆ ಉತ್ತಮ ಸಾಧನೆ ಮಾಡಬೇಕೆಂಬ ಆಸೆ ಇದೆ. ಪಿಯುಸಿಯಲ್ಲಿ ಶೇ.94ರಷ್ಟು ಅಂಕ ಪಡೆದು ತಾಲೂಕಿಗೆ ಹೆಮ್ಮೆ ತಂದಿದ್ದೇನೆ. ಮುಂದೆ ಹೆಚ್ಚಿನ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂಬ ಕನಸು ಇದೆ. ಆದರೆ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದಿರುವುದು ಶಿಕ್ಷಣ ಮುಂದುವರಿಸಲು ದೊಡ್ಡ ಅಡ್ಡಿಯಾಗಿದೆ” ಎಂದು ವಿದ್ಯಾರ್ಥಿನಿ ನೋವು ವ್ಯಕ್ತಪಡಿಸಿದರು.
ಗ್ರಾಮದ ನಿವಾಸಿ ಪತ್ರಕರ್ತ ಮಲ್ಲು ಕೋಳೂರು ಮಾತನಾಡಿ, “ಗ್ರಾಮದ ಬಸ್ ಸಮಸ್ಯೆ ಕುರಿತು ಹಲವು ಬಾರಿ ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಈವರೆಗೆ ಸಮಸ್ಯೆ ಬಗೆಹರಿದಿಲ್ಲ. ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಲು ಬ್ರಿಡ್ಜ್‌ಗೆ ತಡೆಗೋಡೆ ಇಲ್ಲದಿರುವುದು ಅಡ್ಡಿಯಾಗಿದೆ ಎಂದು ಸಾರಿಗೆ ಡಿಪೋ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಸುರಕ್ಷತಾ ಕಾರಣದಿಂದ ಬಸ್ ಸಂಚಾರ ಆರಂಭಿಸಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ವಯಸ್ಸಾದರೂ ಕಾಲ್ನಡಿಗೆಯ ಸಂಕಷ್ಟ ತಪ್ಪಿಲ್ಲ’
“ಹಲವು ವರ್ಷಗಳಿಂದ ಕಾಲ್ನಡಿಗೆಯಲ್ಲೇ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ವಯಸ್ಸಾದ ಮೇಲೂ ಈ ಸಂಕಷ್ಟ ತಪ್ಪಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗಲೂ ನಡೆದುಕೊಂಡು ಹೋಗಿ ಬರುವಷ್ಟರಲ್ಲಿ ಮತ್ತಷ್ಟು ಸುಸ್ತಾಗುತ್ತದೆ. ಹಿಂದೆ ಬ್ರಿಡ್ಜ್ ನಿರ್ಮಾಣವಾಗುವ ಮುನ್ನ ನೀರಿನಲ್ಲೇ ನಡೆದುಕೊಂಡು ಮತ್ತೊಂದು ಗ್ರಾಮಕ್ಕೆ ತೆರಳುತ್ತಿದ್ದೆವು. ಇದೀಗ ಬ್ರಿಡ್ಜ್ ನಿರ್ಮಾಣವಾದರೂ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ನಮ್ಮ ಗ್ರಾಮಕ್ಕೆ ಯಾವಾಗ ಬಸ್ ಬರುತ್ತದೆ ಎಂಬುದೇ ಗೊತ್ತಿಲ್ಲ” ಎಂದು ಅಜ್ಜಿಯೊಬ್ಬರು ಅಳಲು ತೋಡಿಕೊಂಡರು.
ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಮಾತನಾಡಿ, “ಡಿಪೋ ಮ್ಯಾನೇಜರ್ ಜೊತೆ ಮಾತುಕತೆ ಆಗಿದೆ. ಬಸ್ ವ್ಯವಸ್ಥೆ ಮಾಡಲಾಗುವುದು” ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿದ್ದೀರಾ? ತುಮಕೂರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?: ಹೈಕಮಾಂಡ್ ಮುಂದೆ ಬಣ, ಸಾಮಾಜಿಕ ಸಮೀಕರಣದ ಸವಾಲು
ಕೋಳೂರು ಗ್ರಾಮದ ಜನರು ದಶಕಗಳಿಂದ ಬಸ್ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯಸ್ಸಿನ ಗ್ರಾಮಸ್ಥರು ನಿತ್ಯವೂ ಸುಮಾರು 4 ಕಿಲೋಮೀಟರ್ ದೂರ ನಡೆದು ಹೇಮನಾಳ ಗ್ರಾಮಕ್ಕೆ ಹೋಗಿ ಬಸ್ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶೈಕ್ಷಣಿಕ, ಆರೋಗ್ಯ ಮತ್ತು ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾರಿಗೆ ಸಮಸ್ಯೆಯನ್ನು ತಕ್ಷಣ ಗಮನಕ್ಕೆ ತೆಗೆದುಕೊಂಡು, ಕೋಳೂರು ಗ್ರಾಮಕ್ಕೆ ನೇರ ಬಸ್ ಸಂಪರ್ಕ ಒದಗಿಸುವುದು ಅಗತ್ಯವಾಗಿದೆ. ಇದರಿಂದ ಗ್ರಾಮಸ್ಥರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ವೃದ್ಧರು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಜತೆಗೆ ಗ್ರಾಮದ ಅಭಿವೃದ್ಧಿಗೂ ಸಹಾಯಕವಾಗುತ್ತದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




