ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ತುಂಗಾ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರನ್ನು ಹರಿಸಲು ಆಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲನ್ನು ನೀಡಿ ನೀರು ತುಂಬಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
“ತುಂಗಾ ಏತ ನೀರಾವರಿ ಯೋಜನೆ ಜಿಲ್ಲೆಯಲ್ಲಿ ರೈತರಿಗೆ ಬಹುಪಯೋಗಿಯಾಗಿದ್ದು, ತಾಲೂಕಿನ ಹಾಯ್‌ಹೊಳೆ, ಬಾರೆಹಳ್ಳ, ಗೌಡನಕೆರೆಗಳ ಮೂಲಕ ಸುಮಾರು 7.5 ಸಾವಿರ ಎಕರೆಗೆ ನೀರು ಹರಿಸಲಾಗುತ್ತದೆ. ಸುಮಾರು 28ಕ್ಕೂ ಹೆಚ್ಚು ಹಳ್ಳಿಗಳು ಇದರ ಪ್ರಯೋಜನ ಪಡೆಯುತ್ತವೆ. ಕಳೆದ 8 ವರ್ಷಗಳಿಂದ ಈ ಯೋಜನೆ ಚಾಲನೆಯಲ್ಲಿದೆ. ಆದರೆ ರಾಜ್ಯ ಸರ್ಕಾರ ಮೆಸ್ಕಾಂ ಇಲಾಖೆಗೆ ಸುಮಾರು 25.22 ಕೋಟಿ ರೂ.ಗಳ ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡಿದೆ. ಆದ್ದರಿಂದ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದೆ” ಎಂದು ದೂರಿದರು.
“ಜೂನ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ 6 ತಿಂಗಳ ಕಾಲ ನೀರು ಎತ್ತಲು ಅವಕಾಶವಿದೆ. ಈಗ ನದಿಯಲ್ಲಿಯೂ ನೀರು ಹರಿಯುತ್ತಿದೆ. ಆದರೆ ಜಾಕ್‌ವೆಲ್‌ನಿಂದ ವಿದ್ಯುತ್ ಸಂಪರ್ಕವಿಲ್ಲದೆ ನೀರನ್ನು ಎತ್ತುವುದು ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ಬಾಕಿ ಬಿಲ್ಲನ್ನು ಪಾವತಿಮಾಡಿ ನೀರು ತುಂಬಲು ಅವಕಾಶಮಾಡಿಕೊಟ್ಟು ಆ ಭಾಗದ ರೈತರ ರಕ್ಷಣೆ ಮಾಡಬೇಕು” ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿದ್ದೀರಾ? ರಾಜ್ಯಾದ್ಯಂತ ಮಳೆ: ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಮನವಿ ನೀಡುವ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಗ್ರಾಮಾಂತರ ಶಾಸಕಿ ಶಾರದಾ ಪರ‍್ಯಾನಾಯ್ಕ, ಪ್ರಮುಖರಾದ ಕೆ.ರಾಘವೇಂದ್ರ, ಭಾಗ್ಯ ರಾಘವೇಂದ್ರ, ಹಿಟ್ಟೂರು ರಾಜು, ಎಂ ಡಿ ನಾಗರಾಜ್, ಕಸೆಟ್ಟಿ ರುದ್ರೇಶ್, ಪಿ ಡಿ ಮಂಜಪ್ಪ, ಇ ವಿ ಜಗದೀಶ್, ಸಿ ಬಿ ಹನುಮಂತಪ್ಪ, ಜಿ ಎನ್ ಪಂಚಾಕ್ಷರಿ, ಸಿ ಪಿ ನಾಗಾರಾಜ್, ಕೆ ಎನ್ ಜ್ಞಾನೇಶ್ ಸೇರಿದಂತೆ ಇತರರು ಇದ್ದರು.





