ಬೆಂಗಳೂರು ನಮ್ಮ ಮೆಟ್ರೋ ಯೋಜನೆಯ ಅನುದಾನ ಮತ್ತು ಪಾಲುದಾರಿಕೆಯ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ರಾಜಕೀಯ ಮತ್ತು ಆರ್ಥಿಕ ತಿಕ್ಕಾಟವು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಮತ್ತೊಮ್ಮೆ ಪ್ರತಿಧ್ವನಿಸಿತು. ಪಿಂಕ್ ಲೈನ್ ಮೆಟ್ರೋ ಉದ್ಘಾಟನಾ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಮೆಟ್ರೋದ ಪ್ರಯೋಜನವನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ; ಹೀಗಿರುವಾಗ ಅದರ ಆರ್ಥಿಕ ಹೊರೆಯನ್ನೂ ನ್ಯಾಯಯುತವಾಗಿ ಹಂಚಿಕೊಳ್ಳಬೇಕು” ಎಂದು ನೇರವಾಗಿ ಪ್ರತಿಪಾದಿಸುವ ಮೂಲಕ ಕೇಂದ್ರದ ನೀತಿಗಳಿಗೆ ಕನ್ನಡಿ ಹಿಡಿದರು.
ನಗರದ ಭಾರತೀಯ ನಿರ್ವಹಣಾ ಸಂಸ್ಥೆ (IIMB)ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ರಾಜ್ಯಪಾಲರಾದ ಸುಧಾ ಯಾದವ್, ಸಚಿವ ಕೃಷ್ಣ ಬೈರೇಗೌಡ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಉಪಸ್ಥಿತಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ದಾಖಲೆಯ 100 ಕಿ.ಮೀ. ಗಡಿ ದಾಟಿದ ನಮ್ಮ ಮೆಟ್ರೋ ಸಂಭ್ರಮದ ನಡುವೆಯೇ ರಾಜ್ಯದ ಮೇಲಿರುವ ಅಸಮಾನ ಆರ್ಥಿಕ ಹೊರೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಮೆಟ್ರೋ ಯೋಜನೆಗಳ ಪಾಲುದಾರಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದ ನಡುವೆ ಇರುವ ಶೀತಲ ಸಮರಕ್ಕೆ ಅಂಕಿ-ಅಂಶಗಳ ಸಮೇತ ಉತ್ತರ ನೀಡಿದ ಮುಖ್ಯಮಂತ್ರಿ, “ಮೇಲ್ನೋಟಕ್ಕೆ ಮೆಟ್ರೋ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಶೇ.50:50ರ ಪಾಲುದಾರಿಕೆಯಲ್ಲಿ ಆರಂಭವಾಗುತ್ತವೆ. ಆದರೆ, ವಾಸ್ತವದಲ್ಲಿ ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಹೊರೆ ಇದಕ್ಕಿಂತ ದುಪ್ಪಟ್ಟಾಗಿದೆ” ಎಂದು ಅಸಮಾಧಾನ ಹೊರಹಾಕಿದರು.
“ಮೆಟ್ರೋದ ಪ್ರಯೋಜನವನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ. ಹೀಗಿರುವಾಗ ಅದರ ಆರ್ಥಿಕ ಹೊಣೆಯನ್ನೂ ನ್ಯಾಯಯುತವಾಗಿ ಹಂಚಿಕೊಳ್ಳಬೇಕು. ದೆಹಲಿ ಮೆಟ್ರೋ ಮಾದರಿಯಲ್ಲಿ ವಿದೇಶಿ ಸಾಲಗಳ ವಿನಿಮಯ ದರದ ಅಪಾಯವನ್ನೂ ಕೇಂದ್ರ ಸರ್ಕಾರ ಹಂಚಿಕೊಳ್ಳಬೇಕು.” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರವು ಭರಿಸುತ್ತಿರುವ ಹೆಚ್ಚುವರಿ ಹೊರೆಗಳನ್ನು ಅವರು ಪ್ರಧಾನಿ ಮುಂದೆ ಪಟ್ಟಿ ಮಾಡಿದರು.
ಸಂಪೂರ್ಣ ಭೂಸ್ವಾಧೀನ ವೆಚ್ಚ ಹಾಗೂ ಉಪಯುಕ್ತ ಸೇವೆಗಳ ಸ್ಥಳಾಂತರದ ವೆಚ್ಚ ರಾಜ್ಯದ್ದೇ ಆಗಿದೆ. ರಾಜ್ಯ ತೆರಿಗೆಗಳ ಶೇ.100ರಷ್ಟು ಹೊರೆಯ ಜೊತೆಗೆ, ಕೇಂದ್ರ ತೆರಿಗೆಗಳಲ್ಲೂ ಶೇ.50ರಷ್ಟು ಪಾಲನ್ನು ರಾಜ್ಯವೇ ಭರಿಸುತ್ತಿದೆ. ಸಂಪೂರ್ಣ ವಿದೇಶಿ ಸಾಲದ ಮರುಪಾವತಿ ಹಾಗೂ ಯೋಜನೆ ವಿಳಂಬದಿಂದಾಗುವ ಬಹುತೇಕ ವೆಚ್ಚ ಹೆಚ್ಚಳದ ಹೊಣೆ ಕರ್ನಾಟಕದ ಹೆಗಲ ಮೇಲೆಯೇ ಬೀಳುತ್ತಿದೆ ಎಂದು ವಿವರಿಸಿದರು.
ಸವಿಸ್ತಾರ ಯೋಜನಾ ವರದಿಗಳು (DPR) ಕೇಂದ್ರದ ಅನುಮೋದನೆ ಪಡೆಯುವಷ್ಟರಲ್ಲಿ ಎರಡು-ಮೂರು ವರ್ಷಗಳಷ್ಟು ಹಳೆಯದಾಗಿರುತ್ತವೆ. ಇದರಿಂದ ಯೋಜನಾ ವೆಚ್ಚ ಗಗನಕ್ಕೇರುತ್ತದೆ. ಆದ್ದರಿಂದ ಪ್ರಸ್ತುತ ಮಾರುಕಟ್ಟೆ ದರಗಳ ಆಧಾರದ ಮೇಲೆ ಅನುಮೋದನೆ ನೀಡಬೇಕು ಹಾಗೂ ಅನುಮೋದನೆಯ ವಿಳಂಬದಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಡಿಕೆಶಿ ಆಗ್ರಹಿಸಿದರು. ಅಲ್ಲದೆ, ಪ್ರಗತಿ (PRAGATI) ವ್ಯವಸ್ಥೆಯಡಿ ಪ್ರಧಾನಿ ನೇರವಾಗಿ ಗಮನಹರಿಸಿ ಕಾಲಮಿತಿಯೊಳಗೆ ಅನುಮೋದನೆ ಕೊಡಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ “ಕನಸು ಕಾಣಿರಿ” ಎಂಬ ಮಾತನ್ನು ಸ್ಮರಿಸಿದ ಅವರು, ಮುಂಬರುವ ವರ್ಷಗಳಲ್ಲಿ ಬೆಂಗಳೂರಿನ ಮೆಟ್ರೋ ಜಾಲವನ್ನು 500 ಕಿ.ಮೀ.ಗೆ ವಿಸ್ತರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಪ್ರಕಟಿಸಿದರು. “ಉತ್ತಮ ಮೆಟ್ರೋ ಜಾಲ ಎಂದರೆ ಸಂಚಾರ ದಟ್ಟಣೆಯಲ್ಲಿ ಕಡಿಮೆ ಸಮಯ ಕಳೆಯುವುದು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು” ಎಂದು ಬಣ್ಣಿಸಿದರು.
ಮೆಟ್ರೋ ಪಾಲಿನ ವಿಚಾರದ ಜೊತೆಗೆ ರಾಜ್ಯದ ರೈತರ ಜ್ವಲಂತ ಸಮಸ್ಯೆಗಳನ್ನೂ ಪ್ರಧಾನಿ ಗಮನಕ್ಕೆ ತಂದ ಶಿವಕುಮಾರ್, ಕಳೆದ 70 ವರ್ಷಗಳಲ್ಲೇ ಎರಡನೇ ಅತಿ ಕಡಿಮೆ ಮಳೆಯಿಂದಾಗಿ ರಾಜ್ಯದ 240 ತಾಲ್ಲೂಕುಗಳ ಪೈಕಿ 226 ತಾಲ್ಲೂಕುಗಳು ಬರಪೀಡಿತವಾಗಿವೆ. ಸುಮಾರು 58 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿ ₹62,482 ಕೋಟಿ ನಷ್ಟ ಸಂಭವಿಸಿದೆ. ಹೀಗಾಗಿ NDRF ಅಡಿಯಲ್ಲಿ ರಾಜ್ಯ ಸಲ್ಲಿಸಿರುವ ₹22,400.58 ಕೋಟಿ ಬರ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಅಂತೆಯೇ, 2026-27ನೇ ಸಾಲಿಗೆ ಕಬ್ಬಿಗೆ ನಿಗದಿಪಡಿಸಿರುವ ₹3,650 FRP ಬದಲಾಗಿ ಪ್ರತಿ ಟನ್‌ಗೆ ₹5,500 ನೀಡಬೇಕೆಂಬ ರೈತರ ಬೇಡಿಕೆ, 2019ರಿಂದ ₹31ರಲ್ಲೇ ಸ್ಥಿರವಾಗಿರುವ ಸಕ್ಕರೆ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆ ಹಾಗೂ ಕರ್ನಾಟಕಕ್ಕೆ ನ್ಯಾಯಯುತ ಎಥೆನಾಲ್ ಹಂಚಿಕೆ ಮಾಡುವಂತೆ ಆಗ್ರಹಿಸಿದರು.
ದೇಶದ ಆರ್ಥಿಕತೆ ಮತ್ತು ತಂತ್ರಜ್ಞಾನಕ್ಕೆ ಕರ್ನಾಟಕದ ಕೊಡುಗೆಯನ್ನು ಒತ್ತಿಹೇಳಿದ ಮುಖ್ಯಮಂತ್ರಿ, 1902ರ ಶಿವನಸಮುದ್ರ ವಿದ್ಯುತ್ ಉತ್ಪಾದನೆ, HAL, ಮೊದಲ ಕೈಗಾರಿಕಾ ಮತ್ತು ಸ್ಟಾರ್ಟ್‌ಅಪ್ ನೀತಿ, ಐಫೋನ್ ಜೋಡಣೆ ಘಟಕ, ವಿಶ್ವದ 2ನೇ ಅತಿ ದೊಡ್ಡ AI-ML ಪ್ರತಿಭಾ ಸಂಪನ್ಮೂಲ ಹಾಗೂ ದೇಶದ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರ ಬೆಂಗಳೂರಿನಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು. ಜಿಎಸ್‌ಟಿ ಸಂಗ್ರಹ ಮತ್ತು ವಿದೇಶಿ ನೇರ ಹೂಡಿಕೆಯಲ್ಲಿ (FDI) ರಾಜ್ಯ 2ನೇ ಸ್ಥಾನದಲ್ಲಿದೆ ಎಂದರು.
ಭಾಷಣದ ಕೊನೆಯಲ್ಲಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ಕುವೆಂಪು ಅವರ “ವಿಶ್ವಮಾನವ” ಸಂದೇಶವನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, “ಮೆಟ್ರೋ ಮಾರ್ಗವು ಎರಡು ಸ್ಥಳಗಳನ್ನು ಸಂಪರ್ಕಿಸುತ್ತದೆ, ಆದರೆ ಸಹಕಾರವು ಸರ್ಕಾರಗಳು ಮತ್ತು ಜನರನ್ನು ಸಂಪರ್ಕಿಸುತ್ತದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಸಾಗಿದಾಗ ಮಾತ್ರ ರಾಷ್ಟ್ರ ಪ್ರಗತಿಯತ್ತ ಮುನ್ನಡೆಯುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.




