ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳಿಕೆ ನೀಡಿರುವ ಕನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಂಡು, ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಆಗ್ರಹಿಸಿದರು.
ಬೀದರ್ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಮನುಸ್ಮೃತಿ ಕೃತಿಯು ಶೂದ್ರರು, ಮಹಿಳೆಯರ ವಿರೋಧಿಯಾಗಿದ್ದು, ಅದರಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯದ ಆಶಯಗಳಿಲ್ಲ. ಇಂತಹ ಗ್ರಂಥದ ಅಂಶಗಳು ಸಂವಿಧಾನದಲ್ಲಿ ಇರಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದ್ದರು. ಅಂಬೇಡ್ಕರ್ ಅವರೇ ವಿರೋಧಿಸಿ ಸುಟ್ಟುಹಾಕಿದ ಗ್ರಂಥದ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ ಎಂದು ಹೇಳುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ ಅವರು, ದೇಶದ್ರೋಹದ ಹೇಳಿಕೆ ನೀಡಿರುವ ಕನೇರಿ ಅವರು ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿದ್ದರೆ ಬಹಿರಂಗಪಡಿಸಿ, ಬಹಿರಂಗ ಚರ್ಚೆಗೆ ಬರಲಿ” ಎಂದು ಸವಾಲು ಹಾಕಿದರು.
ಹಿರಿಯ ದಲಿತ ಮುಖಂಡ ಶಂಕರರಾವ್ ದೊಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಮನುವಾದಿ ಸಿದ್ಧಾಂತಗಳಿಗೆ ಬೆಂಬಲವಾಗಿ ನಿಂತಿರುವ ಸ್ವಯಂಘೋಷಿತ ಕನೇರಿ ಸ್ವಾಮಿ, ಈ ಹಿಂದೆ ವಚನಗಳನ್ನು ತಿರುಚಿ ಹೇಳುವ ಕೆಲಸ ಮಾಡಿದ್ದಾರೆ. ಇದೀಗ ಸರ್ವಜನಾಂಗದ ಶಾಂತಿಯ ತೋಟವಾಗಿರುವ ರಾಜ್ಯದಲ್ಲಿ ಜನರ ನಡುವೆ ದ್ವೇಷ ಬಿತ್ತುವ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ” ಎಂದರು.
“ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂದು ಹೇಳುವ ಮೂಲಕ ಕಟ್ಟುಕಥೆಗಳನ್ನು ಸೃಷ್ಟಿಸಿ ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಸವಣ್ಣ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳನ್ನು ಅವಹೇಳನ ಮಾಡುವುದರ ಜತೆಗೆ ಸಂವಿಧಾನದ ವಿರುದ್ಧ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಕನೇರಿ ಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು” ಎಂದು ಒತ್ತಾಯಿಸಿದರು.
ಸಾಮಾಜಿಕ ಚಿಂತಕ ಮಹೇಶ ಗೋರನಾಳಕರ್ ಮಾತನಾಡಿ, “ಮನುಸ್ಮೃತಿಯಲ್ಲಿ ಮೌಢ್ಯ, ಜಾತೀಯತೆ ಮತ್ತು ಅಸಮಾನತೆಗಳಿವೆ. ಆದರೆ, ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಇಂತಹ ಶ್ರೇಷ್ಠ ಸಂವಿಧಾನದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕನೇರಿ ಸ್ವಾಮಿ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.
“ಶರಣರ ವಚನಗಳನ್ನು ತಿರುಚಿ, ಬಸವಣ್ಣನವರ ಅನುಯಾಯಿಗಳನ್ನು ಹೀಯಾಳಿಸಿ ತಪ್ಪಿಸಿಕೊಂಡಿರುವ ಕನೇರಿ, ಈಗ ಅಂಬೇಡ್ಕರ್ ಹಾಗೂ ಸಂವಿಧಾನ ಅನುಯಾಯಿಗಳ ತಂಟೆಗೆ ಬಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಮಾಜದಲ್ಲಿ ದ್ವೇಷಭಾವನೆ ಮೂಡಿಸುವಂತಹ ಹೇಳಿಕೆ ನೀಡಿರುವ ಕನೇರಿ ಸ್ವಾಮಿ ಏಳು ದಿನಗಳೊಳಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ದೇಶದ ಅಂಬೇಡ್ಕರ್‌ವಾದಿಗಳು ಹಾಗೂ ಸಂವಿಧಾನ ಪ್ರೇಮಿಗಳು ಅವರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವುದರ ಜತೆಗೆ ಎಲ್ಲೆಡೆ ಘೇರಾವ್ ಹಾಕಲಿದ್ದಾರೆ” ಎಂದು ಎಚ್ಚರಿಸಿದರು.
ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ್ ಮಾತನಾಡಿ, ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ವಿರೋಧಿಸಿ, ಲಿಂಗಾಯತ ಮಠಾಧೀಶರು ಹಾಗೂ ಅನುಯಾಯಿಗಳನ್ನು ಅವಹೇಳನ ಮಾಡಿದ್ದ ಕನೇರಿ ಸ್ವಾಮಿ, ಇದೀಗ ಭಾರತದ ಸಂವಿಧಾನವನ್ನು ಅವಮಾನಿಸುವ ಅತಿರೇಕದ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ ಎಂದರು.
ಸಂವಿಧಾನ ರಚನೆಗೂ ಮುನ್ನವೇ ಮನುಸ್ಮೃತಿಯನ್ನು ದಹಿಸಿದ್ದ ಬಾಬಾಸಾಹೇಬ ಅಂಬೇಡ್ಕರ್ ಅವರು, ಸಂವಿಧಾನದಲ್ಲಿ ಅದರ ಅಂಶಗಳನ್ನು ಸೇರಿಸಲು ಹೇಗೆ ಸಾಧ್ಯ? ಜನರಲ್ಲಿ ಭೇದಭಾವ ಮತ್ತು ದ್ವೇಷದ ಭಾವನೆಗಳನ್ನು ಪ್ರಚೋದಿಸುತ್ತಿರುವ ಕನೇರಿ ಕೂಡಲೇ ಕ್ಷಮೆಯಾಚಿಸಬೇಕು. ಸಮಾನತೆಯನ್ನು ಒಪ್ಪದ ಮನಸ್ಥಿತಿಯಿಂದ ಹೊರಹೊಮ್ಮುವ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಸಾಹಿತ್ಯ ಲೋಕದ ಅರಿವು ವಿಸ್ತರಿಸಿದ ವಿದ್ವಾಂಸ ಕೆವಿಎನ್ : ಶಿವಾಜಿ ಮೇತ್ರೆ
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಚಿಂತಕರಾದ ರಾಜಕುಮಾರ ಪಾಟೀಲ್ ಹಾಗೂ ಪ್ರಕಾಶ ರಾವಣ ಉಪಸ್ಥಿತರಿದ್ದು, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕನೇರಿ ಮಠದ ಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.





