ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗೋಕುಲ ಗೌಡ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಶಾಲೆಯ ಪ್ರಭಾರಿ ಪ್ರಾಂಶುಪಾಲ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾದ ಜಾವೇದ್ ಎಚ್.ಎಸ್. ಮತ್ತು ಹಿಂದಿ ಶಿಕ್ಷಕ ಹಾಗೂ ಪ್ರಭಾರಿ ನಿಲಯ ಪಾಲಕರಾಗಿದ್ದ ಅಬ್ಬುತಲಹ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಸುಮಾರು ಹದಿನೈದು ದಿನಗಳ ಹಿಂದೆ ವಸತಿ ಶಾಲೆಯ ವಿದ್ಯಾರ್ಥಿ ಗೋಕುಲ ಗೌಡ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಘಟನೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ವಿದ್ಯಾರ್ಥಿಯ ಸಾವಿಗೆ ನ್ಯಾಯ ದೊರಕಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಾಲಕರು ಹಾಗೂ ಸಾರ್ವಜನಿಕರು ಕಾನಸೂರಿನಲ್ಲಿ ಮೃತದೇಹವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸಿದ್ದರು.
ಈ ಸುದ್ದಿ ಓದೀದ್ದಿರಾ ? ಅಂಕೋಲಾ | ವಿಶ್ವಜಿತ್ ನಾಯಕಗೆ ಭಾರತ ವೆಟರನ್ಸ್ ಕ್ರಿಕೆಟ್ ತಂಡದ ನಾಯಕತ್ವ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡಿ.ಎಸ್.ಪಿ. ಗೀತಾ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆ ಇಬ್ಬರು ಸಿಬ್ಬಂದಿಗಳ ವಿರುದ್ಧ ಅಮಾನತು ಕ್ರಮ ಕೈಗೊಂಡಿದೆ.
ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅಮಾನತುಗೊಂಡ ಸಿಬ್ಬಂದಿಗಳ ಸ್ಥಾನಕ್ಕೆ ಶೀಘ್ರದಲ್ಲೇ ಪರ್ಯಾಯ ಸಿಬ್ಬಂದಿಯನ್ನು ನಿಯೋಜಿಸುವ ಸಾಧ್ಯತೆ ಇದ್ದು, ವಸತಿ ಶಾಲೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.




