ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಚರ್ಚಿಸಲು ಅನುಕೂಲ ಮಾಡಿಕೊಡಲೇಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು, ಮಧ್ಯಾಹ್ನ ಆರಂಭವಾದ ಕಲಾಪದಲ್ಲೂ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ಪ್ರಶೋತ್ತರ ಅವಧಿ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು, ಗಲಾಟೆ ಮಾಡಿದ ಮೇಲೆ ಸಭಾಧ್ಯಕ್ಷರು ಕಲಾಪವನ್ನು 15 ನಿಮಿಷ ಮುಂದೂಡಿದ್ದರು. ಈಗ ಮತ್ತೆ ಬಿಜೆಪಿ ಸದಸ್ಯರು ಗ್ಯಾರಂಟಿ ಚರ್ಚೆಗೆ ಅವಕಾಶ ಬೇಕು ಎಂದು ಹಠ ಹಿಡಿದ ಕಾರಣ ಸಭಾಧ್ಯಕ್ಷರು ಮತ್ತೊಮ್ಮೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದ್ದಾರೆ.
ಬಸವರಾಜ ಬೊಮ್ಮಾಯಿ ಮಾತನಾಡಿ, “ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ವಿಚಾರದಲ್ಲಿ ಮೋಸ ಮಾಡಿದೆ. ಜನರಿಗೆ ದೋಖಾ ಆಗಿದೆ. ಈ ಬಗ್ಗೆ ನಾವು ಬೆಳಗ್ಗೆ ಪ್ರಸ್ತಾಪ ಮಾಡಿದ್ದೆವು. ನಮಗೆ ಅವಕಾಶ ನೀಡಲಿಲ್ಲ. ಮಧ್ಯಾಹ್ನದ ನಂತರವಾದರೂ ಅವಕಾಶ ಮಾಡಿಕೊಡುತ್ತೀರಿ ಎಂದು ಭಾವಿಸಿದ್ದೆವು. ಆದರೆ, ಸಭಾಧ್ಯಕ್ಷರು ಆಡಳಿತ ಪಕ್ಷದ ಕಡೆಯೇ ವಾಲುತ್ತಿದ್ದೀರಿ. ನಮ್ಮ ಕಡೆಯೂ ವಾಲಿ” ಎಂದರು.
ಸಭಾಧ್ಯಕ್ಷ ಯು ಟಿ ಖಾದರ್ ಅವರು ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿ, “ಎರಡು ನಿಲುವಳಿ ಸೂಚನೆಗಳು ನನ್ನೆದುರು ಇವೆ. ಒಂದು ಎಚ್ ಡಿ ರೇವಣ್ಣ ಅವರು ರೈತರ ವಿಚಾರವಾಗಿ ನಿಲುವಳಿ ಸೂಚಿಸಿದ್ದಾರೆ. ಬೊಮ್ಮಾಯಿ ಅವರು ಗ್ಯಾರಂಟಿ ವಿಚಾರವಾಗಿ ನಿಲುವಳಿ ಸೂಚಿಸಿದ್ದಾರೆ. ನಾವು ರಾಜ್ಯಪಾಲರ ಭಾಷಣದ ಮೇಲೆ ಮೊದಲು ಚರ್ಚೆ ಮಾಡಬೇಕಿರುವುದರಿಂದ ರೈತರ ವಿಚಾರವಾಗಿ ನಿಲುವಳಿ ಸೂಚನೆಯನ್ನು 69ಕ್ಕೆ ಕನ್ವರ್ಟ್ ಮಾಡಿ ಅವಕಾಶ ಕೊಟ್ಟಿರುವೆ. ದಿನಕ್ಕೆ ಒಂದು ನಿಲುವಳಿ ಸೂಚನೆ ಚರ್ಚಿಸಲು ಅವಕಾಶ ಇರುವುದರಿಂದ ಮತ್ತೆ ನಿಮಗೆ ಅನುಕೂಲ ಮಾಡಿ ಕೊಡುವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಧಿವೇಶನ 2023 | ಸದನದಲ್ಲಿ ಪ್ರತಿಭಟಿಸಲು ಬಿಜೆಪಿ ಸದಸ್ಯರಿಗೆ ನಾಚಿಕೆಯಾಗಬೇಕು: ಶಿವಲಿಂಗೇಗೌಡ ತರಾಟೆ
ಡಿಸಿಎಂ ಡಿಕೆ ಶಿವಕುಮಾರ್ ಎದ್ದು ನಿಂತು, “ರಾಜ್ಯಪಾಲರ ಭಾಷಣದಲ್ಲೇ ಗ್ಯಾರಂಟಿ ವಿಚಾರಗಳು ಇವೆ. ಆಕಾಶದೆತ್ತರಕ್ಕೆ ಮಾತನಾಡಿ. ಯಾವುದೇ ಕಾರಣಕ್ಕೂ ನಿಯಮ ಮೀರಿ ನಡೆದುಕೊಳ್ಳಬೇಡಿ” ಎಂದು ಸಭಾಧ್ಯಕ್ಷರನ್ನು ಕೋರಿದರು.
ಬೊಮ್ಮಾಯಿ ಉತ್ತರಿಸಿ, “ನಮ್ಮ ನಿಲುವಳಿ ಸೂಚನೆಯನ್ನು 69ಗೆ ಕನ್ವರ್ಟ್ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. ಮೊದಲು ನಿಲುವಳಿ ಕೊಟ್ಟಿದ್ದು ನಾವು. ನಮಗೆ ಅವಕಾಶ ಮಾಡಿ ಕೊಡದೇ ಜೆಡಿಎಸ್‌ನವರಿಗೆ ಮಾಡಿಕೊಟ್ಟರೆ ಹೇಗೆ? ಚರ್ಚೆಗೆ ಅವಕಾಶ ಮಾಡಿಕೊಡಿ. ಈಗಲೇ ಧರಣಿ ಕೈಬಿಡುತ್ತೇವೆ. ಇಲ್ಲದಿದ್ದರೆ ನಾವು ಧರಣಿ ಕೈಬಿಡಲ್ಲ” ಎಂದರು.
ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೊಡುತ್ತಿದ್ದೇನೆ. ನಾನು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾರೆ. ನಿಯಮ ಮೀರಿ ನೀವೂ ನಡೆದುಕೊಳ್ಳಬೇಡಿ” ಎಂದು ವಿನಂತಿಸಿದರು.
ಎಚ್ ಡಿ ರೇವಣ್ಣ ಅವರು ಎದ್ದು ನಿಂತು, “ನಮಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ” ಎಂದು ಚರ್ಚೆಗೆ ಪಟ್ಟು ಹಿಡಿದರು. ಕೊನೆಗೆ ಸಭಾಧ್ಯಕ್ಷರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.