- ಲಾಸ್ ಏಂಜಲೀಸ್‌ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶಾರುಖ್ ಖಾನ್
- ಡಾರ್ಲಿಂಗ್ಸ್ ಚಿತ್ರ ನಿರ್ಮಾಣದ ಜತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದ ನಟ
ಬಾಲಿವುಡ್‌ನ ಜನಪ್ರಿಯ ನಟ ಶಾರುಖ್ ಖಾನ್ ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ಮೂಗಿಗೆ ಗಾಯವಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಇ ಟೈಮ್ಸ್ ಪತ್ರಿಕೆ ಮಂಗಳವಾರ (ಜುಲೈ 4) ವರದಿ ಮಾಡಿದೆ.
ಶಸ್ತ್ರಚಿಕಿತ್ಸೆಯ ನಂತರ ನಟ ಭಾರತಕ್ಕೆ ಹಿಂತಿರುಗಿ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ಶಾರುಖ್ ಖಾನ್ ಅವರು ಲಾಸ್ ಏಂಜಲೀಸ್‌ನಲ್ಲಿ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ಅವರ ಮೂಗಿನ ಭಾಗಕ್ಕೆ ಪೆಟ್ಟಾಗಿದೆ. ಪರಿಣಾಮ ಮೂಗಿನಿಂದ ರಕ್ತ ಸುರಿಯಲಾರಂಭಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಯಾವುದೇ ಭೀತಿ ಪಡುವ ಅಗತ್ಯವಿಲ್ಲ. ರಕ್ತ ಸೋರಿಕೆಯನ್ನು ತಡೆಯಲು ಶಾರುಖ್ ಅವರ ಮೂಗಿಗೆ ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಬ್ಯಾಂಡೇಜ್ ಹಾಕಲಾಗಿದೆ ಎಂದು ವೈದ್ಯರು ಚಿತ್ರತಂಡಕ್ಕೆ ತಿಳಿಸಿದ್ದಾರೆ” ಎಂದು ವರದಿ ಹೇಳಿದೆ.
ವರ್ಷದ ಆರಂಭದಲ್ಲಿ ಬಿಡುಗಡೆಯಾದ ಶಾರುಖ್ ಅವರ ಪಠಾಣ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಶಾರುಖ್ ಅವರು ಅಟ್ಲೀ ಅವರ ಮುಂದಿನ ಚಿತ್ರ ‘ಜವಾನ್’ನಲ್ಲಿ ಅಭಿನಯಿಸುತ್ತಿದ್ದಾರೆ. ನಯನತಾರಾ ಮತ್ತು ವಿಜಯ್ ಸೇತುಪತಿ ತೆರೆ ಹಂಚಿಕೊಳ್ಳಲಿದ್ದಾರೆ.
ಈ ಸುದ್ದಿ ಓದಿದ್ದೀರಾ? 2 ಲೋಕಸಭೆ ಸೀಟಿನ ಮಣಿಪುರದಲ್ಲಿ ನೂರು ಓಟು ಸತ್ತು ಹೋಯ್ತು: ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ
ಶಾರುಖ್ ಅವರು ರಾಜ್‌ಕುಮಾರ್ ಹಿರಾನಿ ಅವರ ದುನ್ಕಿ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇವರ ಜೋಡಿಯಾಗಿ ತಾಪ್ಸೀ ಪನ್ನು ಅಭಿನಯಿಸಲಿದ್ದಾರೆ. ಈ ಚಿತ್ರ ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.
ಶಾರುಖ್ ಖಾನ್ ಅವರು ಚಲನಚಿತ್ರ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದಾರೆ. 2022ರಲ್ಲಿ ಆಲಿಯಾ ಭಟ್ ನಾಯಕಿ ಹಾಗೂ ನಿರ್ಮಾಣ ಹೊಣೆ ಹೊತ್ತ ಡಾರ್ಲಿಂಗ್ಸ್ ಚಿತ್ರಕ್ಕೆ ನಾಯಕ ನಟ ಹಾಗೂ ಸಹ ನಿರ್ಮಾಪಕನಾಗಿ ಶಾರುಖ್ ಕಾರ್ಯನಿರ್ವಹಿಸಿದ್ದರು.